ಭಾನುವಾರ (ಮೇ.25) ಕೇರಳ ಕರಾವಳಿಯಲ್ಲಿ ಮುಳುಗಿದ ಲೈಬೀರಿಯನ್ ಸರಕು ಸಾಗಣೆ ಹಡಗಿನ ಕಂಟೇನರ್‌ಗಳು ಇಂದು (ಸೋಮವಾರ) ಸಮುದ್ರ ತೀರಕ್ಕೆ ತೇಲಿ ಬರಲು ಪ್ರಾರಂಭಿಸಿವೆ. ಹಾಗಾಗಿ, ಸಂಭಾವ್ಯ ತೈಲ ಸೋರಿಕೆ ಅಥವಾ ರಾಸಾಯನಿಕ ಸೋರಿಕೆ ಅಪಾಯಗಳನ್ನು ತಡೆಗಟ್ಟಲು ರಾಜ್ಯ ಸರ್ಕಾರ ಕರಾವಳಿಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದೆ.
ಭಾರತೀಯ ಕರಾವಳಿ ರಕ್ಷಣಾ ಪಡೆ ಮತ್ತು ನೌಕಾಪಡೆ ಕಟ್ಟೆಚ್ಚರ ವಹಿಸಿರುವುದರಿಂದ, ಸರ್ಕಾರ ಗಂಭೀರ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿರುವುದರಿಂದ, ಸಾರ್ವಜನಿಕರು ಸಮುದ್ರ ತೀರದಿಂದ ದೂರವಿರಲು ಮತ್ತು ವಿದೇಶಿ ವಸ್ತುಗಳನ್ನು ಮುಟ್ಟದಂತೆ ಕೇಳಿಕೊಳ್ಳಲಾಗಿದೆ.
ಶನಿವಾರ ಹಡಗು ಸಂಪೂರ್ಣ ವಾಲಿತ್ತು, ಮುಳುಗುವ ಎಲ್ಲಾ ಮುನ್ಸೂಚನೆ ನೀಡಿತ್ತು. ಈ ಹಿನ್ನೆಲೆ ಹಡಗಿನಲ್ಲಿದ್ದ ಒಬ್ಬ ರಷ್ಯನ್, 20 ಫಿಲಿಪಿನೋಗಳು, ಇಬ್ಬರು ಉಕ್ರೇನಿಯನ್ನರು ಮತ್ತು ಒಬ್ಬ ಜಾರ್ಜಿಯನ್ ಸೇರಿದಂತೆ ಎಲ್ಲಾ 24 ಮಂದಿಯನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ ಮತ್ತು ನೌಕಾಪಡೆ ರಕ್ಷಿಸಿದೆ.

ಸುಧಾರಿತ ತೈಲ ಸೋರಿಕೆ ಪತ್ತೆ ವ್ಯವಸ್ಥೆಗಳನ್ನು ಹೊಂದಿದ ಐಸಿಜಿ ವಿಮಾನಗಳು ವೈಮಾನಿಕ ಕಣ್ಗಾವಲು ನಡೆಸುತ್ತಿವೆ ಮತ್ತು ಮಾಲಿನ್ಯ ಪ್ರತಿಕ್ರಿಯೆ ಸಾಧನಗಳನ್ನು ಹೊತ್ತ ಐಸಿಜಿ ಹಡಗು ಸಕ್ಷಾಮ್ ಅನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ ಎಂದು ಭಾರತೀಯ ಕರಾವಳಿ ಕಾವಲು ಪಡೆಯ ಅಧಿಕೃತ ಪ್ರಕಟಣೆ ಹೇಳಿದೆ.
ಅಧಿಕಾರಿಗಳ ಹೇಳಿಕೆಯ ಪ್ರಕಾರ, ಮೆಡಿಟರೇನಿಯನ್ ಶಿಪ್ಪಿಂಗ್ ಕಂಪನಿ (ಎಂಎಸ್‌ಸಿ) ಒಡೆತನದ ಹಡಗು 84.44 ಮೆಟ್ರಿಕ್ ಟನ್ ಡೀಸೆಲ್ ಮತ್ತು 367.1 ಮೆಟ್ರಿಕ್ ಟನ್ ಫರ್ನೇಸ್ ಆಯಿಲ್ ಸಾಗಿಸುತ್ತಿತ್ತು. ಇದರ ಜೊತೆಗೆ, ಹಡಗಿನಲ್ಲಿ ಅಪಾಯಕಾರಿ ಸರಕು ಮತ್ತು ಕ್ಯಾಲ್ಸಿಯಂ ಕಾರ್ಬೈಡ್ ಕೂಡ ಇತ್ತು. ಇದು ಸಮುದ್ರದ ನೀರಿನೊಂದಿಗೆ ಸೇರಿದರೆ ಪರಿಸರಕ್ಕೆ ಗಂಭೀರ ಹಾನಿ ಮತ್ತು ಜನರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಪಿಟಿಐ ವರದಿಯ ಪ್ರಕಾರ, ಶನಿವಾರ ವಾಲಿದ್ದ ಹಡಗು ಭಾನುವಾರ ಸಂಪೂರ್ಣ ಮುಳುಗಡೆ ಆಗಿದೆ. ಇಂದು ಸೋಮವಾರ ಹಡಗಿನಲ್ಲಿದ್ದ ಕಂಟೈನರ್‌ಗಳು ಸಮುದ್ರಕ್ಕೆ ಬಿದ್ದು ಅಲೆಗಳ ಜೊತೆ ದಡಕ್ಕೆ ಬರಲು ಪ್ರಾರಂಭಿಸಿವೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಕೊಲ್ಲಂನ ದಕ್ಷಿಣ ಕರಾವಳಿಯಲ್ಲಿ ಕಂಟೈನರ್‌ಗಳು ಪತ್ತೆಯಾಗಿವೆ. ದಡಕ್ಕೆ ಒಟ್ಟು ಎಷ್ಟು ಕಂಟೈನರ್‌ಗಳು ಬಂದಿವೆ ಎಂದು ಇನ್ನೂ ಗೊತ್ತಾಗಿಲ್ಲ. ಆದರೂ, ಕನಿಷ್ಠ ನಾಲ್ಕು ಕಂಟೈನರ್‌ಗಳು ಪತ್ತೆಯಾಗಿವೆ ಎಂದು ಹೇಳಲಾಗ್ತಿದೆ.
ದಾಖಲೆರಹಿತ ವಲಸಿಗರೆಂದು ನೂರಾರು ನಿವಾಸಿಗಳ ವಶಕ್ಕೆ ಪಡೆದ ಅಸ್ಸಾಂ ಪೊಲೀಸರು


