ತುಮಕೂರು ನಗರದಲ್ಲಿ ಕೊರೊನಾ ಹರಡಿದೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ನಿಟ್ಟುಸಿರು ಬಿಡುವ ಸುದ್ದಿಯೊಂದು ಹೊರಬಿದ್ದಿದ್ದು ಪರೀಕ್ಷೆ ನಡೆಸಿದ 11 ಪ್ರಕರಣಗಳಲ್ಲಿ ನೆಗೆಟಿವ್ ವರದಿ ಬಂದಿದೆ.
ಚಿಕ್ಕಪೇಟೆಯಲ್ಲಿ ಇಬ್ಬರಿಗೆ ಕೊರೊನಾ ತಗುಲಿದೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ ಸ್ಥಳಕ್ಕೆ ತೆರಳಿದ ವೈದ್ಯರ ತಂಡ ಅವರಿಬ್ಬರ ರಕ್ತ ಮತ್ತು ಕಫಾ ಮಾದಿರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಿತ್ತು. ಪರೀಕ್ಷೆಯ ನಂತರ ಅವರಲ್ಲಿ ಯಾವುದೇ ಸೋಂಕು ಇಲ್ಲವೆಂಬುದು ದೃಢಪಟ್ಟಿದೆ.
ವಿದೇಶದಿಂದ ನಗರಕ್ಕೆ ಆಗಮಿಸಿರುವವರ ಮೇಲೆ ತೀವ್ರ ನಿಗಾ ಇಡಲಾಗಿದೆ. ಎಲ್ಲರ ಆರೋಗ್ಯದ ಬಗ್ಗೆ ವೈದ್ಯರ ತಂಡ ನಿಗಾ ವಹಿಸಿದೆ. ಕೊರೊನಾ ವೈರಸ್ ಹರಡದಂತೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಶಂಕಿತ ವೈರಸ್ ಸೋಂಕಿತರು ಇಲ್ಲವೇ ವೈರಸ್ ಸೋಂಕು ತಗುಲಿರುವವರನ್ನು ನೋಡಿಕೊಳ್ಳಲು ಆಸ್ಪತ್ರೆಯಲ್ಲಿ ಹಾಸಿಗೆಗಳನ್ನು ಸಜ್ಜುಗೊಳಿಸಲಾಗಿದೆ.
ನಾನುಗೌರಿ.ಕಾಂ ಜೊತೆ ಮಾತನಾಡಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವೀರಭದ್ರಯ್ಯ ತುಮಕೂರಿನಲ್ಲಿ ಕೊರೊನಾ ವೈರಸ್ ಹರಡದಂತೆ ವ್ಯಾಪಕ ಕ್ರಮ ಕೈಗೊಂಡಿದ್ದೇವೆ. ಜಿಲ್ಲಾಸ್ಪತ್ರೆಯಲ್ಲಿ 14, ಶ್ರೀದೇವಿ, ಸಿದ್ದಾರ್ಥ ಮೆಡಿಕಲ್ ಕಾಲೇಜು ಮತ್ತು ಸಿದ್ದಗಂಗಾ ಆಸ್ಪತ್ರೆಯಲ್ಲಿ ನಿಗಾ ಘಟಕಗಳನ್ನು ಸ್ಥಾಪಿಸಲಾಗಿದೆ. ಕೊರೋನ ಶಂಕಿತ 11 ಮಂದಿಯ ರಕ್ತ ಮತ್ತು ಕಫಾ ಮಾದರಿಗಳನ್ನು ಸಂಗ್ರಹಿಸಿ ಬೆಂಗಳೂರಿಗೆ ಕಳಿಸಲಾಗಿತ್ತು. ಎಲ್ಲಾ 11 ಪ್ರಕರಣಗಳು ನೆಗೆಟಿವ್ ಬಂದಿವೆ. ನಗರದಲ್ಲಿ ಸೋಂಕಿತರು ಇಲ್ಲ ಎಂದು ಸ್ಪಷ್ಟಪಡಿಸಿದರು.
ಮುನ್ನೆಚ್ಚರಿಕೆ ಕ್ರಮವಾಗಿ ತುಮಕೂರು ನಗರದಲ್ಲಿ ಮಾರ್ಚ್ 21ರಿಂದ ನಿಷೇಧಾಜ್ಞೆ ಜಾರಿಗೊಳಿಸಿದೆ. ನಾಲ್ವರಿಗಿಂತ ಹೆಚ್ಚು ಮಂದಿ ಒಂದೆಡೆ ಸೇರಬಾರದೆಂದು ನಿಷೇಧಿಸಲಾಗಿದೆ. ವಿದೇಶದಿಂದ ಬಂದಿರುವ 90ಕ್ಕೂ ಹೆಚ್ಚು ಜನರ ಮೇಲೆ ತೀವ್ರ ನಿಗಾ ಇಟ್ಟಿದ್ದು, ದಿನಕ್ಕೆ ಮೂರು ಬಾರಿ ದೂರವಾಣಿ ಇಲ್ಲವೇ ಮನೆಗೆ ತೆರಳಿ ವೈದ್ಯರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಎಲ್ಲಾ 90 ಜನರನ್ನು ಗೃಹಬಂಧನದಲ್ಲಿಡಲಾಗಿದೆ. ಆದರೆ ವಿದೇಶದಿಂದ ಬಂದ ಕೆಲವರು ನಗರದಲ್ಲಿ ಓಡಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಅವರನ್ನು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ ಎಂದರು.
ಇದನ್ನೂ ಓದಿ: ಕೊರೊನಾ ಕುರಿತು ಸುಳ್ಳು ಸುದ್ದಿ ಹರಡಿದ ಹಿನ್ನೆಲೆ : ಸೈಬರ್ ಕ್ರೈಂಗೆ ಎರಡು ದೂರು ದಾಖಲು
ಕೊರೊನಾ ಕುರಿತು ಸುಳ್ಳು ಸುದ್ದಿ ಹರಡುತ್ತಿರುವವರು ಬಗ್ಗೆ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ ಡ್ಯಾಮೇಜ್ ಕಂಟ್ರೋಲ್ ಮಾಡಲು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಹರಡುವುದರ ವಿರುದ್ಧ ಸೈಬರ್ ಕ್ರೈಂ ಡಿಪಾರ್ಟ್‌ಮೆಂಟ್‌ಗೆ ದೂರು ನೀಡಿದೆ. ತುಮಕೂರು ನಗರದಲ್ಲಿ ಇದುವರೆಗೆ ಯಾವುದೇ ಕೊರೋನಾ ವೈರಸ್ ಪ್ರಕರಣ ಪತ್ತೆಯಾಗಿಲ್ಲ. ಆದರೆ ಜನರ ಭೀತಿ ನಿವಾರಣೆಯಾಗಿಲ್ಲ. ಸುಳ್ಳು ಸುದ್ದಿಗಳಿಂದ ನಿತ್ಯವೂ ಜನ ಕನಲಿ ಹೋಗುತ್ತಿದ್ದಾರೆ. ಕರೆ ಮಾಡಿ ಸ್ಪಷ್ಟ ಮಾಹಿತಿ ಪಡೆಯುತ್ತಿರುವುದು ಸಾಮಾನ್ಯವಾಗಿದೆ.


