Homeಮುಖಪುಟಕೊರೊನಾ ಲಾಕ್‌ಡೌನ್; ಹೆಚ್ಚುತ್ತಿರುವ ಬಡತನ ಮತ್ತು ಬಾಲ್ಯವಿವಾಹದ ರಣನರ್ತನ

ಕೊರೊನಾ ಲಾಕ್‌ಡೌನ್; ಹೆಚ್ಚುತ್ತಿರುವ ಬಡತನ ಮತ್ತು ಬಾಲ್ಯವಿವಾಹದ ರಣನರ್ತನ

- Advertisement -
- Advertisement -

ಕೊರೊನಾ ‘ಲಾಕ್‌ಡೌನ್’ ದೇಶದ ಆರ್ಥಿಕತೆಯನ್ನು ಹಾಳುಗೆಡವಿದೆ. ಅಪಾರ ಪ್ರಮಾಣದಲ್ಲಿ ಉದ್ಯೋಗ ನಷ್ಟವಾಗಿದೆ. ಇವುಗಳಿಗಿಂತಲೂ ಅತಿದೊಡ್ಡ ಅನಾಹತಕ್ಕೆ ಅದು ಎಡೆಮಾಡಿಕೊಟ್ಟಿದೆ. ಗ್ರಾಮೀಣ ಭಾರತದಲ್ಲಿ ‘ಬಾಲ್ಯವಿವಾಹ’ವೆಂಬ ಸೋಂಕು ರೌದ್ರನರ್ತನ ಮಾಡಿದೆ. ಕಂಗೆಟ್ಟ ಪೋಷಕರು ಜವಾಬ್ದಾರಿಯಿಂದ ಪಾರಾಗಲು ‘ಬಾಲ್ಯವಿವಾಹ’ದ ವ್ಯಾಪಾರದಲ್ಲಿ ಮುಳುಗಿದ್ದಾರೆ.

ಅದು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಕೊಣ್ಣುರು ಗ್ರಾಮ. 16 ವರ್ಷದ ಹುಡುಗಿಯನ್ನು ಓದಿಸುವುದಾಗಿ ಸೋದರತ್ತೆ ಮತ್ತು ಮಾವ ಕರೆದೊಯ್ದು 24 ವರ್ಷದ ಯುವಕನಿಗೆ ವಿವಾಹ ಮಾಡಿಸಲು ಮುಂದಾಗಿದ್ದರು. ವಿಚಾರ ಅರಿತ ಹುಡುಗಿಯ ಅಣ್ಣ ಸ್ಥಳೀಯ ಪೊಲೀಸರ ಮತ್ತು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಅಧಿಕಾರಿಗಳ ನೆರವು ಪಡೆದು ತಂಗಿಯನ್ನು ರಕ್ಷಿಸಿದ್ದಾನೆ. ಗೋಕಾಕ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದೇ ರೀತಿಯ ಪ್ರಕರಣ ಉತ್ತರ ಪ್ರದೇಶದ, ಬುಲಹಂದರ್ ಜಿಲ್ಲೆಯ ಅನುಪ್‌ಶಹರ್ ಪಟ್ಟಣದಲ್ಲಿಯೂ ನಡೆದಿದೆ. ಅಲ್ಲಿ ನತದೃಷ್ಟೆ 13 ವಯಸ್ಸಿನ ಬಾಲಕಿ. ಆಕೆಯ ಶಿಕ್ಷಕಿ ಉದ್ವಿಗ್ನತೆಗೆ ಬಿದ್ದು ಕರೆ ಮಾಡದಿದ್ದಲ್ಲಿ ಪರಿಸ್ಥಿತಿ ಕೈಮೀರುತ್ತಿತ್ತು. ನೆರೆಯ ಆಂಧ್ರದ ರಾಜಮಹೇಂದ್ರವರಂ ಪಟ್ಟಣದಲ್ಲಿಯೂ ಅಪ್ರಾಪ್ತ ವಯಸ್ಸಿನ ಬಾಲಕ-ಬಾಲಕಿಯರಿಬ್ಬರು ವಿವಾಹ ಮಾಡಿಕೊಂಡಿದ್ದಾರೆ. ಒಡಿಶಾದ ಭಾವನಿಪಟ್ನಾ ಜಿಲ್ಲೆಯಲ್ಲಿ ತಾಳಿಕಟ್ಟುವ ವೇಳೆ ವಧು ಪರಾರಿಯಾದಳೆಂದು, ವಧುವಿನ 15 ವರ್ಷದ ತಂಗಿಯನ್ನು ಹಸೆಮಣೆಯಲ್ಲಿ ಕೂರಿಸಿ ಮದುವೆ ನೆರವೇರಿಸಿದ್ದಾರೆ. ಇವೆಲ್ಲ ಪ್ರಕರಣಗಳಲ್ಲೂ 2006ರ ಬಾಲ್ಯವಿವಾಹ ತಡೆ ಕಾಯ್ದೆಯಡಿ ಕೇಸು ದಾಖಲಿಸಿ ಕ್ರಮ ಜರುಗಿಸಲಾಗಿದೆ. ಓರ್ವ ಬಾಲಕಿ ವಿವಾಹದ ವಯಸ್ಸಿಗೆ ಬರಲು 18 ವರ್ಷ ಆಗಿರಲೇಬೇಕು.

‘ಬಾಲ್ಯವಿವಾಹ’ವನ್ನು 1929ರ ಬಾಲ್ಯವಿವಾಹ ನಿಷೇಧ ಕಾಯ್ದೆಯು ‘ಅಪರಾಧ’ವನ್ನಾಗಿಸಿದೆ. ಇದು 1930ರ ಜುಲೈ 1ರಿಂದ ನಮ್ಮ ದೇಶದಲ್ಲಿ ಜಾರಿಗೆ ಬಂದಿದೆ. 9 ದಶಕ ಕಳೆದರೂ ಇಂದಿಗೂ ‘ಬಾಲ್ಯವಿವಾಹ’ ನಿರ್ಮೂಲನೆಯಾಗದಿರುವುದು ದುರಂತ. ಕೇಂದ್ರ ಸರ್ಕಾರದ 5ನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಅನ್ವಯ ಕರ್ನಾಟಕದಲ್ಲಿ ಶೇಕಡ 21.3ರಷ್ಟು ಹೆಣ್ಣುಮಕ್ಕಳು 18 ವರ್ಷ ಪೂರ್ಣಗೊಳ್ಳುವ ಮುಂಚೆಯೇ ವಿವಾಹಬಂಧನಕ್ಕೆ ಒಳಗಾಗುತ್ತಿದ್ದಾರೆ. ನಗರ ಪ್ರದೇಶದಲ್ಲಿ ಶೇಕಡ 16.1ರಷ್ಟು ಬಾಲ್ಯವಿವಾಹ ನಡೆದರೆ, ಗ್ರಾಮೀಣ ಭಾಗದಲ್ಲಿ ಶೇಕಡ 24.7ರಷ್ಟು ನಡೆಯುತ್ತಿವೆ. ಕರಾವಳಿ, ಮಲೆನಾಡಿನಲ್ಲಿ ಕಡಿಮೆ ಇದ್ದರೆ, ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿ ನಡೆಯುತ್ತಿವೆ.

ಮೊದಲ ಲಾಕ್‌ಡೌನ್ ತೆರವಾದ ನಂತರ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ 17 ವರ್ಷದ ಬಾಲಕಿ ತನಗೆ ಒಲ್ಲದ ವಿವಾಹ ನೆರವೇರಿಸುತ್ತಿದ್ದಾರೆಂದು 11 ಮೈಲಿ ದೂರ ಓಡಿ ಸರ್ಕಾರಿ ಕಛೇರಿಯೊಂದರಲ್ಲಿ ಆಶ್ರಯ ಪಡೆದಿದ್ದಳು. ಇನ್ನೊಂದು ಪ್ರಕರಣದಲ್ಲಿ ಚಾಮರಾಜನಗರ ತಾಲ್ಲೂಕಿನ ಗ್ರಾಮವೊಂದರಲ್ಲಿ ‘ಬಾಲ್ಯವಿವಾಹ’ ನಿಲ್ಲಿಸಲು ಸರ್ಕಾರಿ ಅಧಿಕಾರಿಗಳು ದಾಳಿ ನಡೆಸುವರೆಂದು ಅರಿತು ಬೇರೆ ಯುವತಿಯನ್ನು ತೋರಿಸಿ, ವಧುವನ್ನು ಮುಚ್ಚಿಟ್ಟಿದ್ದರು. ಸತತ ವಿಚಾರಣೆಗೆ ಹೆದರಿ ಅಧಿಕಾರಿಗಳ ಕಣ್ತಪ್ಪಿಸಲು ವಧುವನ್ನು ಬದಲಾಯಿಸಿ ಮುಚ್ಚಿಟ್ಟಿರುವುದಾಗಿ ಪೋಷಕರು ಒಪ್ಪಿಕೊಂಡಿದ್ದರು. ಕಂಪ್ಲಿ ಸಮೀಪದ ಹರಳಹಳ್ಳಿ ತಾಂಡದ 17 ವರ್ಷದ ಬಾಲಕಿ ಪಿಯುಸಿ ಇಂಗ್ಲಿಷ್ ಪರೀಕ್ಷೆ ಬರೆಯುವಾಗ ಲಾಕ್‌ಡೌನ್ ಆಗಿತ್ತು. ಮನೆಯಲ್ಲಿ ವಿವಾಹಕ್ಕೆ ಸಿದ್ಧತೆ ನಡೆಸಿದ್ದರು. ಚೈಲ್ಡ್ ಲೈನ್ ಸಂಸ್ಥೆಯ ಸಹಕಾರದಿಂದ ಬಾಲ್ಯವಿವಾಹದಿಂದ ಪಾರಾದಳು. ಇದರ ಬೆನ್ನುಹತ್ತಿದ ಮೇಲೆ, ಮಾರ್ಚ್ 20ರಿಂದ ಜೂನ್ 20ರವರೆಗೆ 5584 ಕರೆಗಳು ಇದೇ ಕಾರಣಕ್ಕಾಗಿ ಚೈಲ್ಡ್ ಲೈನ್ 1098ಕ್ಕೆ ಬಂದಿದ್ದು ತಿಳಿದು ನಾನು ಬೆಚ್ಚಿಬಿದ್ದೆ. ಮೊದಲ ಲಾಕ್‌ಡೌನ್‌ಗೂ ಮುಂಚಿನ ವರ್ಷದಲ್ಲಿ 150 ಬಾಲ್ಯವಿವಾಹ ನಡೆದಿದೆ. ಮೊದಲ ಲಾಕ್‌ಡೌನ್‌ನ ನಾಲ್ಕೇ ತಿಂಗಳಲ್ಲಿ 107 ಬಾಲ್ಯವಿವಾಹಗಳು ಜರುಗಿವೆ. 2020 ಮಾರ್ಚ್‌ನಿಂದ ಜೂನ್‌ವರೆಗೆ 550ಕ್ಕೂ ಹೆಚ್ಚು ದೂರುಗಳು ಮಕ್ಕಳ ಆಯೋಗದಲ್ಲಿ ದಾಖಲಾಗಿವೆ. ಅದರಲ್ಲೂ ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಮೈಸೂರು ಜಿಲ್ಲೆಗಳಿಂದ ಹೆಚ್ಚಿನ ದೂರುಗಳು ಸ್ವೀಕೃತಗೊಂಡಿವೆ. ಗಾಬರಿಯಾಗುವ ಅಂಶವೆಂದರೆ, ಬಲವಂತದ ಮದುವೆಯಿಂದ ಕಾಪಾಡಿ ಎಂದು ಅಂಗಲಾಚಿದವರಲ್ಲಿ ಶೇಕಡ 91ರಷ್ಟು ‘ಅಪ್ರಾಪ್ತ ಬಾಲಕಿ’ಯರಿದ್ದಾರೆ. ಇವರುಗಳು ಕರ್ನಾಟಕ, ತಮಿಳುನಾಡು, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ ಮತ್ತು ತೆಲಂಗಾಣಕ್ಕೆ ಸೇರಿದವರಾಗಿದ್ದಾರೆ.

PC : ಮೈಸೂರು ಟುಡೆ

ಈ ಅಂಕಿಸಂಖ್ಯೆಗಳು ವಾಸ್ತವಕ್ಕಿಂತ ಕಡಿಮೆಯೂ ಆಗಿರಬಹುದು. ಅತ್ಯಂತ ನೋವಿನ ವಿಚಾರ ಎಂದರೆ, ಪ್ರತಿ ವರ್ಷ 12 ಮಿಲಿಯನ್ ಅಪ್ರಾಪ್ತ ಬಾಲಕಿಯರಿಗೆ ವಿವಾಹ ಮಾಡಿಸಲಾಗುತ್ತಿದೆ ಎಂಬ ವಿಷಯ.

ಇನ್ನು ನಮ್ಮ ದೇಶದಲ್ಲಿ 2020ರ ಮಾರ್ಚ್‌ನಿಂದ ಜೂನ್ ನಡುವೆ 5584 ‘ಬಾಲ್ಯವಿವಾಹ’ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೇಳಿದೆ. ಅಲ್ಲದೆ ಮಕ್ಕಳ ಸಹಾಯವಾಣಿಗೆ ಬರುವ ತೊಂದರೆ ಕರೆಗಳಲ್ಲಿಯೂ ಶೇಕಡ 17ರಷ್ಟು ಹೆಚ್ಚಾಗಿದೆ. ದೂರುಗಳು ಹೆಚ್ಚಾದ ಮಾತ್ರಕ್ಕೆ ವಿವಾಹಗಳೂ ಜಾಸ್ತಿ ಆಗಿವೆ ಎಂದರ್ಥವಲ್ಲವೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಿಂದಿನ ನಿರ್ದೇಶಕ ಕೆ.ಎ. ದಯಾನಂದ ಅವರು ತಿಳಿಸಿದ್ದರು. ಬಾಲ್ಯವಿವಾಹ ತಡೆಗಟ್ಟಲು ಮೊದಲು ಸಕ್ಷಮ ಪ್ರಾಧಿಕಾರದ ಅಧಿಕಾರಿಗಳ ಸಂಖ್ಯೆ ಕಡಿಮೆ ಇತ್ತು. ಈಗ ನಮ್ಮಲ್ಲಿ 5,800 ಸಕ್ಷಮ ಪ್ರಾಧಿಕಾರದ ಅಧಿಕಾರಿಗಳಿದ್ದಾರೆ. ಒಟ್ಟಾರೆ ನಮ್ಮ ದೇಶದಲ್ಲಿ 10-19 ವರ್ಷ ವಯಸ್ಸಿನ ಹದಿಹರೆಯದವರಲ್ಲಿ 17.26 ಮಿಲಿಯನ್ ವಿವಾಹಿತರಿದ್ದಾರೆ. ಇದು ‘ಮಕ್ಕಳ ಹಕ್ಕುಗಳ ಗುಂಪು CRY’ನ ಅಧ್ಯಯನ ವರದಿ’ಯಾಗಿದೆ. ಇದನ್ನು 2020ರ ಅಕ್ಟೋಬರ್ 11ರಂದು ಆಚರಿಸಿದ ಅಂತಾರಾಷ್ಟ್ರೀಯ ಹೆಣ್ಣುಮಗುವಿನ ದಿನಾಚರಣೆಯಂದು ಬಿಡುಗಡೆಗೊಳಿಸಲಾಗಿದೆ.

‘ಬಾಲ್ಯವಿವಾಹ’ವು ಬಾಲಕಿ ಮತ್ತು ಬಾಲಕರಿಬ್ಬರ ಮೇಲೆಯೂ ಪರಿಣಾಮ ಬೀರುತ್ತದೆ. ಅದರಲ್ಲೂ ಹೆಣ್ಣುಮಕ್ಕಳ ಆರೋಗ್ಯ, ಶಿಕ್ಷಣ ಮತ್ತು ಅವರ ಮೂಲ ಹಕ್ಕುಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ‘ಬಾಲ್ಯವಿವಾಹ’ ನಿರ್ಬಂಧಿತ ಕಾಯ್ದೆ 2006ನ್ನು ತ್ವರಿತ ಮತ್ತು ಪರಿಣಾಮಕಾರಿ ಅನುಷ್ಠಾನಕ್ಕೆ ಮುಂದಾಗಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ. ನಿರ್ದಿಷ್ಟವಾಗಿ ತಳಮಟ್ಟದಲ್ಲಿ, ‘ಬಾಲ್ಯವಿವಾಹ’ದ ವಿರುದ್ಧ ಸುಲಭವಾಗಿ ದೂರು ನೀಡಲು ಸಾಧ್ಯವಾಗುವ ‘ಸಾಮಾಜಿಕ ಪರಿಸ್ಥಿತಿ’ಯನ್ನು ನಿರ್ಮಾಣ ಮಾಡಬೇಕಿದೆ.

‘ಕಡ್ಡಾಯ ಹಕ್ಕು ಶಿಕ್ಷಣ ವೇದಿಕೆ’ಯ ‘ಶಿಕ್ಷಣ ಹಕ್ಕು ಜಾಲ’ ಹೇಳಿದಂತೆ, ನಮ್ಮ ದೇಶದಲ್ಲಿ ಸುಮಾರು ಶೇಕಡ 40ರಷ್ಟು ಹೆಣ್ಣುಮಕ್ಕಳು 15-18 ವರ್ಷದೊಳಗಡೆ ಶಾಲೆಯನ್ನು ಬಿಡುತ್ತಿದ್ದಾರೆ. ಇಂತಹ ಆಘಾತಕಾರಿ ಹಂತವನ್ನು ಅಂತಾರಾಷ್ಟ್ರೀಯ ಶಿಕ್ಷಣ ದಿನಾಚರಣೆ ಮತ್ತು ರಾಷ್ಟ್ರೀಯ ಹೆಣ್ಣುಮಕ್ಕಳ ದಿನ ಜನವರಿ 24ರಂದು ಬಿಡುಗಡೆ ಮಾಡಲಾಗಿದೆ. ಕೊರೊನಾ ಒಂದು ಮತ್ತು ಎರಡನೇ ಅಲೆ ಸದ್ಯದ ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ. ಇದು ಬಾಲಕರಿಗಿಂತ ಬಾಲಕಿಯರ ಮೇಲೆ ಹೆಚ್ಚು ಮತ್ತು ಅಸಮಾನವಾದ ಪರಿಣಾಮ ಬೀರಿದೆ. ಒಂದು ಅಂದಾಜಿನಂತೆ ಸುಮಾರು 10 ಮಿಲಿಯನ್ ಪ್ರೌಢಶಾಲಾ ವಿದ್ಯಾರ್ಥಿನಿಯರು ಕಲಿಕೆಯಿಂದ ವಿಮುಕ್ತರಾಗಿದ್ದಾರೆ. ಇದರಿಂದಾಗಿ ಇವರುಗಳು ಬೇಗನೆ ಮದುವೆಯಾಗುತ್ತಿದ್ದಾರೆ. ಸಾಲದ್ದಕ್ಕೆ ‘ಬಡತನ’, ‘ಮಾನವ ಕಳ್ಳಸಾಗಾಣಿಕೆ’ ಹಾಗೂ ‘ಹಿಂಸಾಚಾರ’ಕ್ಕೂ ಗುರಿಯಾಗುತ್ತಿದ್ದಾರೆ.

ಇದಕ್ಕೆ ಶಾಲೆ ಮುಚ್ಚಿರುವುದೂ ದೊಡ್ಡ ಕಾರಣವಾಗಿದೆ. ಒಂದು ವೇಳೆ ಶಾಲೆಗಳು ತೆರೆದಿದ್ದರೆ ಅವು ಅಪ್ರಾಪ್ತ ಹೆಣ್ಣುಮಕ್ಕಳನ್ನು ಬಹುಮಟ್ಟಿಗೆ ಕಾಪಾಡುತ್ತಿತ್ತು. ಒಂದೊಮ್ಮೆ ಈ ಸಾಲಿಗೂ ಶಾಲೆಗಳು ತೆರೆಯದಿದ್ದರೆ ಬಾಲಕಿಯರಿಗೆ ‘ಬಾಲ್ಯವಿವಾಹ’ ಬೆನ್ನುಹತ್ತುವ ಅಪಾಯ ಇದೆ. ಹೀಗಾಗಿಯೇ ‘ಬಾಲ್ಯವಿವಾಹ’ ಮತ್ತು ‘ಬಲವಂತದ ವಿವಾಹ’ಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಯುನಿಸೆಫ್‌ನ 2020ರ ಜೂನ್‌ನ ವರದಿಯ ಪ್ರಕಾರ ನಮ್ಮ ದೇಶದಲ್ಲಿ ಶಾಲೆಗಳನ್ನು ಮುಚ್ಚಿರುವುದರಿಂದ 247 ಮಿಲಿಯನ್ ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.

ನಮ್ಮ ದೇಶದಲ್ಲಿ ‘ಬಾಲ್ಯವಿವಾಹ’ ನಿರ್ಮೂಲನೆ ಒಂದು ಸಂಕೀರ್ಣ ಸಮಸ್ಯೆಯಾಗಿ ಕೂತಿದೆ.
ಇದಕ್ಕೆ ‘ಬಡತನ’ ಒಂದೇ ಕಾರಣವಲ್ಲ. ಬದಲಿಗೆ ಸಂಕುಚಿತ ಮತ್ತು ಪ್ರತಿಗಾಮಿ ಮನಸ್ಥಿತಿ ಹೊಂದಿರುವ ಬಹುಸಂಖ್ಯಾತ ‘ಪಿತೃಪ್ರಧಾನ ವ್ಯವಸ್ಥೆ’ ಪ್ರಧಾನ ಕಾರಣವಾಗಿದೆ. ಇದು ‘ಲಿಂಗಸಮಾನತೆ’ಯನ್ನು ಹತ್ತಿಕ್ಕುತ್ತಿದೆ. ಉತ್ತರ ಪ್ರದೇಶದ ಪನ್ನಲಾಲ್‌ಗೆ ನಾಲ್ಕು ಹೆಣ್ಣುಮಕ್ಕಳಿದ್ದವು. ಐದನೇ ಮಗು ಹೆರಲು ಈತನ ಹೆಂಡತಿ ಅನಿತಾದೇವಿ ಗರ್ಭವತಿಯಾಗಿದ್ದಳು. 6 ತಿಂಗಳ ಗರ್ಭವತಿಯ ಹೊಟ್ಟೆಯಲ್ಲಿರುವುದು ಗಂಡೋ, ಹೆಣ್ಣೋ ಎಂದು ಪರೀಕ್ಷಿಸಲು ಪತ್ನಿಯ ಹೊಟ್ಟೆಯನ್ನೇ ಸೀಳಿದ್ದ ಪೈಶಾಚಿಕ ಪ್ರಕರಣ ನಡೆದಿತ್ತು. ಅನಿತಾದೇವಿ ಪ್ರಾಣಾಪಾಯದಿಂದ ಪಾರಾದರು. ಗರ್ಭದಲ್ಲಿದ್ದ ಗಂಡು ಉಳಿಯಲಿಲ್ಲ. ಇಂತಹ ಘಟನೆಗಳು ಜರುಗದಂತಹ ರಕ್ಷಣೆಯ ಹೊಣೆಯನ್ನು ನಾವೆಲ್ಲರೂ ಹೊರುವಂತಾಗಬೇಕು. ಇಲ್ಲಿ ಹೆಣ್ಣುಮಗು ಸದಾ ಸಂತ್ರಸ್ಥೆಯೇ ಆಗಿರುತ್ತಾಳೆ. ಹೆಸರಿಗಷ್ಟೆ ಹೆಣ್ಣು ಪಾಲುದಾರಳಾಗಿದ್ದಾಳೆ. ‘ಸಮಾಜ ಆತ್ಮಾವಲೋಕನ’ ಮಾಡಿಕೊಳ್ಳುವ ಅಗತ್ಯವಿದೆ.

ಶಿಕ್ಷಣ ಮತ್ತು ಪ್ರಜಾಪ್ರಭುತ್ವದ ಮಧ್ಯೆ ಸಂಬಂಧವಿದೆ. ಶಾಲೆಗಳು ಎಲ್ಲರನ್ನು ಒಳಗೊಂಡಿದೆಯೇ ಎಂಬುದನ್ನು ನಾವಿಂದು ಕೇಳಿಕೊಳ್ಳಬೇಕಿದೆ ಮತ್ತು ಚಿಂತಿಸಬೇಕಿದೆ. ಇವತ್ತಿಗೂ ದೇಶದ ಬಹುತೇಕ ಕಡೆ ಶಾಲೆಯ ಬೋರ್ಡ್‌ನ್ನು ಗಂಡುಮಕ್ಕಳು ಶುಚಿಗೊಳಿಸಿದರೆ, ಹೆಣ್ಣುಮಕ್ಕಳು ಶಾಲೆಯ ಕಸಗುಡಿಸುತ್ತಾರೆ. ಬಾಲಕರು ಫುಟ್ಬಾಲ್, ಕ್ರಿಕೆಟ್ ಆಡಿದರೆ, ಹೆಣ್ಣುಮಕ್ಕಳು ಖೋ-ಖೋ, ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ. ಇಂತಹ ತಾರತಮ್ಯದ ಆಚರಣೆ ದೇಶಾದ್ಯಂತ ಎಲ್ಲಾ ಶಾಲೆಗಳಲ್ಲಿದ್ದರೂ, ಬಾಲಕಿಯರು ಯಾವುದೇ ಪ್ರತಿರೋಧ ತೋರದೆ ಒಪ್ಪಿಕೊಂಡು ಸಾಗುತ್ತಿದ್ದಾರೆ. ಇದರೊಂದಿಗೆ ಲೈಂಗಿಕ ಕಿರುಕುಳ ಕೂಡಿ ವಿದ್ಯಾರ್ಥಿನಿಯರ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿದೆ.

ಲಾಕ್‌ಡೌನ್ ಕಾಲದ ಸಂಕಷ್ಟಗಳನ್ನು ಮತ್ತು ಪರಿಸ್ಥಿತಿಯನ್ನು ನಿರ್ವಹಿಸುವ ಸಲುವಾಗಿ 2020ರ ಜೂನ್‌ನಲ್ಲಿ ದೆಹಲಿ ಮೂಲದ ‘ಶಕ್ತಿವಾಹಿನಿ’ ಸಹಾಯವಾಣಿ ಪ್ರಾರಂಭಿಸಿತ್ತು. ಇದು ‘ಬಾಲ್ಯವಿವಾಹ’ ಮತ್ತು ‘ಮಾನವ ಕಳ್ಳಸಾಗಾಣಿಕೆ’ ವಿರುದ್ಧವೂ ಕಾರ್ಯನಿರ್ವಹಿಸಿತು. ಲಾಕ್‌ಡೌನ್ ಸಂದರ್ಭದಲ್ಲಿನ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡು ನಿಸ್ಸಹಾಯಕ ಪೋಷಕರಿಂದ ಅಪ್ರಾಪ್ತ ಬಾಲಕಿಯರನ್ನು ಕೊಂಡು ‘ಕಳ್ಳಸಾಗಾಣಿಕೆ’ಯನ್ನು ಮಾಡಲಾಗಿರುವಂತಿದೆ.

ನಮ್ಮ ರಾಜದಲ್ಲಿ ‘ಬಾಲ್ಯವಿವಾಹ’ದ ಬಗ್ಗೆ ಕಟ್ಟುನಿಟ್ಟಾದ ಪರಿವೀಕ್ಷಣೆ ಇದೆ. ಹಲವು ಯೋಜನೆಗಳು ‘ಬಾಲ್ಯವಿವಾಹ’ವನ್ನು ನಿರುತ್ತೇಜನಗೊಳಿಸುತ್ತಿವೆ. ಜೊತೆಗೆ ಅರಿವನ್ನು ಮೂಡಿಸುತ್ತಿವೆ. ಇಂತಹ ಮಹತ್ಕಾರ್ಯದಲ್ಲಿ ಚೈಲ್ಡ್ ರೈಟ್ ಟ್ರಸ್ಟ್ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ. ಇದು ಬಾಲ್ಯವಿವಾಹ ಸಂತ್ರಸ್ಥೆಯರು ಅಧಿಕ ಸಂಖ್ಯೆಯಲ್ಲಿರುವ ಜಿಲ್ಲೆಗಳನ್ನು ಪತ್ತೆಹಚ್ಚಿ, ಅವರ ಜೀವನ ನಿರ್ವಹಣೆಗಾಗಿ ವಿವಿಧ ರೀತಿಯ ತರಬೇತಿ ನೀಡುವ ಮೂಲಕ ಸಬಲೀಕರಿಸುತ್ತಿದೆ. ಹೊಲಿಗೆ, ಕಂಪ್ಯೂಟರ್ ತರಬೇತಿ, ಓದಿಗೆ ನೆರವು, ಕರಕುಶಲ ತರಬೇತಿಗಳನ್ನು ಚೈಲ್ಡ್ ರೈಟ್ ಟ್ರಸ್ಟ್ ನೀಡುತ್ತಿದೆ.

ಇಷ್ಟಕ್ಕೂ, ಆಳವಾಗಿ ಬೇರೂರಿರುವ ಸಾಮಾಜಿಕ-ಧಾರ್ಮಿಕ ಪೂರ್ವಾಗ್ರಹಗಳ ವಿರುದ್ಧ ಕಾನೂನು ಮಾತ್ರವೇ ಮದ್ದಾಗಿ, ಪ್ರತಿರೋಧ ಒಡ್ಡಲು ಸಾಧ್ಯವಿಲ್ಲ.

‘ಬಾಲ್ಯವಿವಾಹ’ ಎಂಬುದು ಗ್ರಾಮೀಣ ಪ್ರದೇಶದ ಬಡಕುಟುಂಬಗಳಲ್ಲಿ ಮಾತ್ರವಲ್ಲದೆ, ನಗರಗಳ ಶ್ರೀಮಂತ ಕುಟುಂಬಗಳಲ್ಲಿಯೂ ನಡೆಯುತ್ತಿವೆ. ಇದಕ್ಕೆ ಪರಿಣಾಮಕಾರಿ ಪರಿಹಾರ ಒದಗಬೇಕೆಂದರೆ, ನಮ್ಮ ‘ಶಿಕ್ಷಣ ವ್ಯವಸ್ಥೆ’ಯನ್ನು ಅಮೂಲಾಗ್ರವಾಗಿ ಬದಲಿಸಬೇಕಿದೆ.

ಇವತ್ತು ಕೊರೊನಾ ಸಾವಿರಾರು ಮಕ್ಕಳನ್ನು ಅದರಲ್ಲೂ ಹೆಣ್ಣುಮಕ್ಕಳನ್ನು ಕಲಿಕೆಯಿಂದ ಹೊರಗೆ ತಳ್ಳುವ ಮೂಲಕ ವಿಷಮ ಪರಿಸ್ಥಿತಿಯನ್ನು ಸೃಷ್ಟಿಸಿದೆ. ‘ಸಾಮಾನ್ಯ ಶಾಲಾ ವ್ಯವಸ್ಥೆ’ ಅತ್ಯಂತ ಪ್ರಮುಖವಾದದ್ದು. ಕಾರಣ ಇಲ್ಲಿ ‘ಅಹಿಂದ’ ಮಕ್ಕಳು ಶಾಲೆ ಕಡೆ ಬರುವಂತೆ ಉತ್ತೇಜಿಸಲಾಗುತ್ತದೆ.

ಓದುಗರೆ ಮರೆಯದಿರಿ, ಚಾಲಕರ, ಸೆಕ್ಯುರಿಟಿ ಗಾರ್ಡ್‌ಗಳ, ಮನೆಗೆಲಸದವರ, ದಿನಗೂಲಿ ಮಾಡುವವರ ಮಕ್ಕಳು ‘ಬಾಲ್ಯವಿವಾಹ’ವೆಂಬ ರಕ್ಕಸ ಆಚರಣೆಗೆ ಬಲಿಯಾದಲ್ಲಿ, ಪಾಪಕೃತ್ಯದ ಪಾಲನ್ನು ನಾವುಗಳೇ ಹೊರಬೇಕಾಗುತ್ತದೆ. ಇಷ್ಟೇ ಅಲ್ಲ, ಅಸಹಾಯಕ ಬಾಲಕಿಯರನ್ನು ವಿವರಿಸಲಾಗದ ಯಾತನೆಯ ಪ್ರಪಂಚಕ್ಕೆ ದೂಡಿದ ಹೊಣೆಯನ್ನು ಹೊರಬೇಕಾಗುತ್ತದೆ. ಅರೆ, ಲೇಖನ ಓದಿದ ಮಾತ್ರಕ್ಕೆ ಅಥವಾ ನೆರೆಹೊರೆಯಲ್ಲಿ ಘಟನೆ ಕೇಳಿದಾಕ್ಷಣ ಅಥವಾ ನೋಡಿದಾಕ್ಷಣ ನಾವು ‘ಭಾದ್ಯಸ್ಥರಲ್ಲ’ ಎಂದು ಮೈಮರೆಯದಿರಿ. ಹಾಗೆಯೇ ಇಂತಹ ‘ಸಾಮಾಜಿಕ ಅನಿಷ್ಠ’ಗಳನ್ನು ಸರ್ಕಾರ ನಿಲ್ಲಿಸಲಿ. ಪೊಲೀಸರು ‘ನಿರ್ಬಂಧಿಸಲಿ’ ಅಥವಾ ಸರ್ಕಾರೇತರ ಸಂಘಟನೆಗಳು ‘ಕೊನೆಗಾಣಿಸಲಿ’ ಎಂಬ ದುರಾಲೋಚನೆಯನ್ನು ಇವತ್ತೇ ಕೈಬಿಡಿ. ಕಾರಣ ನಮಗೂ ‘ಜವಾಬ್ದಾರಿ’ ಇದೆ. ಇಂತಹ ಕ್ರೂರ ಹೊತ್ತಿನಲ್ಲಿ ನಾವಷ್ಟೆ ಅಲ್ಲ, ದೇಶವಾಸಿಗಳು ಮಾತ್ರವಲ್ಲ, ಜಗತ್ತಿನ ಜನತೆ ಬದುಕುಳಿಯಲು ಒಂದು ಸಮಾಜವಾಗಿ ಕಾರ್ಯನಿರ್ವಹಿಸಬೇಕಿದೆ. ಜೊತೆಗೆ ‘ಲಸಿಕೆ’ ಮತ್ತು ‘ಸಂಪನ್ಮೂಲ’ಗಳ ಹಂಚುವಿಕೆಯನ್ನು ಸಮಾನವಾಗಿ ಒಗ್ಗಟ್ಟಿನಿಂದ ಹಂಚಿಕೊಳ್ಳುವುದನ್ನು ಕಲಿಯಬೇಕಿದೆ.

ನನ್ನ ದೇಶ ಮುನ್ನಡೆಸುವವರೇ, ಸ್ವಿಸ್ ಬ್ಯಾಂಕಿನಿಂದ ಹಣ ತರದಿದ್ದರೂ ಪರವಾಗಿಲ್ಲ, ದುಬಾರಿ ತೆರಿಗೆ ವಿಧಿಸುವುದರಿಂದ ವಿಮುಖರಾಗದಿದ್ದರೂ ಪರವಾಗಿಲ್ಲ, ಮೊದಲು ‘ಬಾಲ್ಯವಿವಾಹ’ ತಡೆಯಿರಿ. ಹೆಣ್ಣುಮಕ್ಕಳಿಗೆ ‘ಆರೋಗ್ಯ’ ಮತ್ತು ‘ಪೌಷ್ಠಿಕಾಂಶ’ ಒದಗಿಸಿಕೊಡುವುದನ್ನು ಖಾತ್ರಿಪಡಿಸಿ. ಪ್ರಧಾನವಾಗಿ ಪ್ರತಿಯೊಂದು ಹೆಣ್ಣುಮಗು ಕನಿಷ್ಠ 12 ವರ್ಷದ ವಿದ್ಯಾಭ್ಯಾಸವನ್ನು ಕಡ್ಡಾಯವಾಗಿ ಪೂರೈಸಲು ನೀತಿ ತನ್ನಿ. ಜೀವನ ನಡೆಸಲು ಬೇಕಾದ ‘ಕೌಶಲ್ಯ ಆಧಾರಿತ ಶಿಕ್ಷಣ’ ಮತ್ತು ‘ಉನ್ನತ ಶಿಕ್ಷಣ’ ಕಲಿಕೆಗೂ ಅವಕಾಶ ಕಲ್ಪಿಸಿಕೊಡಿ.

ಡಾ. ಎಂ.ಎಸ್. ಮಣಿ

ಡಾ. ಎಂ.ಎಸ್. ಮಣಿ
ಸಾಮಾಜಿಕ ಮತ್ತು ಸಂಶೋಧನಾತ್ಮಕ ಲೇಖನಗಳನ್ನು ಬರೆಯುವ ಡಾ.ಎಂ.ಎಸ್.ಮಣಿ ಅವರು ಪತ್ರಕರ್ತರ ಸಂಘಟನೆಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಇವರ ತಲ್ಲಣ, ಹರಿವು, ಒಡಲಾಗ್ನಿ, ಭಾವಭಿತ್ತಿ ಪುಸ್ತಕಗಳು ಪ್ರಕಟವಾಗಿದೆ.


ಇದನ್ನೂ ಓದಿ: ಲಾಕ್‌ಡೌ‌ನ್‌ನಲ್ಲಿ ಹೆಚ್ಚಾದ ಬಾಲ್ಯವಿವಾಹ: ವರದಿ ಮುಚ್ಚಿಡಲು ಪ್ರಯತ್ನಿಸುತ್ತಿರುವ ಕೇಂದ್ರ ಸರ್ಕಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...