ಕೊರೊನಾ ವೈರಸ್ ಹರಡದಂತೆ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರುವುದು ಶ್ಲಾಘನೀಯ ಸಂಗತಿ. ಇದೇ ಉದ್ದೇಶದಿಂದ ನೂರಾರು, ಸಾವಿರಾರು ಮಂದಿ ಸೇರುವ ಸಭೆ-ಸಮಾರಂಭಗಳನ್ನು ರದ್ದುಪಡಿಸಿದೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದೆ. ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನಕ್ಕೆ ನಿರ್ಬಂಧಿಸಿದೆ ಹೇರಿದೆ. ಫುಡ್ ಜಂಕ್ಷನ್‌ಗಳನ್ನು ನಿಷೇಧಿಸಿದೆ. ಬೀದಿಬದಿ ವ್ಯಾಪಾರಿಗಳನ್ನು ಖಾಲಿ ಮಾಡಿಸಿದ್ದು ಆಗಿದೆ. ಅದ್ದೂರಿ ಮದುವೆಗಳಿಗೂ ಬ್ರೇಕ್ ಬಿದ್ದಿದೆ. ಹೋಟೆಲ್‌ಗಳಿಗೂ ಮುಚ್ಚುವಂತೆ ಆದೇಶಿಸಲಾಗಿದೆ. ಹಣವಂತರು ವ್ಯಾಪಾರ ವಹಿವಾಟು ನಡೆಸುತ್ತಿದ್ದರೆ ಬಡವರು ಕೆಲಸವಿಲ್ಲದೆ ಮನೆಯಲ್ಲಿ ಕೂರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಹುತೇಕರಿಗೆ ನಿಯಮ ಅನ್ವಯ ಆದರೆ ಬಹುತೇಕರಿಗೆ ಅದು ಲೆಕ್ಕಕ್ಕಿಲ್ಲ. ಸರ್ಕಾರದ ಅದೇಶ ಗಾರ್ಮೆಂಟ್ಸ್ ಮತ್ತು ದೊಡ್ಡದೊಡ್ಡ ಕಂಪನಿಗಳಿಗೆ ಅನ್ವಯವಾಗುವುದಿಲ್ಲ ಏಕೆ ಎಂಬ ಆಕ್ರೋಶ ವ್ಯಕ್ತವಾಗಿದೆ.
ಬೆಂಗಳೂರಿನ ಐಟಿ-ಬಿಟಿ ಕ್ಷೇತ್ರದ ಕಂಪನಿಗಳು ತಮ್ಮ ಕಾರ್ಮಿಕರನ್ನು ಮನೆಯಲ್ಲಿಯೇ ಕುಳಿತು ಕೆಲಸ ಮಾಡುವಂತೆ ಸೂಚನೆ ನೀಡಿವೆ. ಪೀಣ್ಯ ಇಂಡಸ್ಟ್ರಿಯಲ್ ಏರಿಯಾ, ಬಿಡದಿ, ಬೊಮ್ಮಸಂದ್ರ, ಅತ್ತಿಬೆಲೆ, ವೀರಸಂದ್ರ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಹಲವು ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ದೊಡ್ಡದೊಡ್ಡ ಕಂಪನಿಗಳು, ಕಾರ್ಖಾನೆಗಳು ಮತ್ತು ಗಾರ್ಮೆಂಟ್ ಗಳಿಗೆ ಸರ್ಕಾರದ ಆದೇಶ ಅನ್ವಯವಾಗುತ್ತಿಲ್ಲ. ನೂರಾರು ಮಂದಿ ಕಾರ್ಮಿಕರು ಅಕ್ಕ- ಪಕ್ಕದಲ್ಲಿಯೇ ನಿಂತು ಕೆಲಸ ಮಾಡುವ ಜಾಗದಲ್ಲಿ ಕೊರೊನಾ ಹರಡುವುದಿಲ್ಲವೇ ಎಂಬ ಪ್ರಶ್ನೆ ಎದ್ದಿದೆ. ಗಾರ್ಮೆಂಟ್ಸ್‌ಗಳಲ್ಲಿ ಮಹಿಳಾ ಕಾರ್ಮಿಕರು ಸಾಮೂಹಿಕವಾಗಿಯೇ ಕುಳಿತು ಒಬ್ಬರನ್ನೊಬ್ಬರು ಮುಟ್ಟುತ್ತ ಕೆಲಸ ಮಾಡುವಂತಹ ಪರಿಸ್ಥಿತಿ ಇದೆ. ಒಂದು ಅಂದಾಜಿನ ಪ್ರಕಾರ 10 ಲಕ್ಷ ಮಹಿಳಾ ಕಾರ್ಮಿಕರು ಗಾರ್ಮೆಂಟ್ಸ್‌ನಲ್ಲಿ ದುಡಿಯುತ್ತಿದ್ದಾರೆ. ಆ ಕಾರ್ಮಿಕರೆಲ್ಲ ಬೇರೆಬೇರೆ ಪ್ರದೇಶದಿಂದ ಬರುತ್ತಾರೆ. ಹಾಗಿದ್ದಾಗ ಅವರಿಗೂ ಕೊರೊನಾ ವೈರಸ್ ಹರಡುತ್ತದಲ್ಲವೇ? ಸರ್ಕಾರ ಒಬ್ಬರಿಗೆ ಒಂದು ನೀತಿ ಮತ್ತೊಬ್ಬರಿಗೆ ಒಂದು ನೀತಿ ಅನುಸರಿಸುತ್ತಿರುವುದು ತಪ್ಪಲ್ಲವೇ?
ಬೆಂಗಳೂರಿನ ಉಪನಗರವೆಂದೇ ಬಿಂಬಿಸಲಾಗುತ್ತಿರುವ ತುಮಕೂರಿನಲ್ಲೂ ಕೂಡ ಹಲವು ಕಾರ್ಖಾನೆಗಳು, ಕಂಪನಿಗಳು ಮತ್ತು ಗಾರ್ಮೆಂಟ್ಸ್‌ಗಳು ಇವೆ. ಡಾಬಸ್‌ಪೇಟೆಯ ಬಳಿ ಸೋಂಪುರ ಕೈಗಾರಿಕಾ ಪ್ರದೇಶವಿದೆ. ತುಮಕೂರಿನ ವಸಂತ ನರಸಾಪುರದಲ್ಲಿ ಖಾಸಗಿ ಸಹಭಾಗಿತ್ವದ ಫುಡ್ ಪಾರ್ಕಿನಲ್ಲಿ ಕಾಯಂ, ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ 800 ಕಾರ್ಮಿಕರಿದ್ದಾರೆ. ಅಲ್ಲಿಯೂ ಹಲವು ಕಾರ್ಖಾನೆಗಳು ಇವೆ. ಅಂತರಸನಹಳ್ಳಿಯ ಕೈಗಾರಿಕಾ ವಲಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಪ್ತ ಮುಖೇಶ್ ಕುಮಾರ್ ಗಾರ್ಗ್ ಒಡೆತನದ VS ಪ್ರಾಡಕ್ಟ್ (ತಂಬಾಕು), VSN ಪ್ರಾಡಕ್ಟ್ (ಪಾನ್ ಮಸಾಲ), VSN ಪಾನ್ ಪ್ರಾಡಕ್ಟ್ ಪ್ರೈ.ಲಿಮಿಟೆಡ್ ಕಂಪನಿಯಲ್ಲಿ 800 ಮಂದಿ ಏಕಕಾಲದಲ್ಲಿ ಪಾನ್ ಮಸಾಲ, ತಂಬಾಕು ತಯಾರಿಕೆಯಲ್ಲಿ ತೊಡಗಿರುತ್ತಾರೆ. ಸಾಮಾನ್ಯ ಜನರಿಗೆ ಇರುವ ಈ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ರಜೆ ಇಲ್ಲವೇ?

ನಾನುಗೌರಿ.ಕಾಂ ಜೊತೆ ಮಾತನಾಡಿದ ಕಾರ್ಮಿಕ ಮುಖಂಡ ಸೈಯದ್ ಮುಜೀಬ್, ತುಮಕೂರು ನಗರ ವ್ಯಾಪ್ತಿಯಲ್ಲಿ ಸುಮಾರು 400 ಕಾರ್ಖಾನೆಗಳಿವೆ. ನಿತ್ಯವೂ ಬೆಳಗ್ಗೆಯಿಂದ ಸಂಜೆಯವರೆಗೆ ಸಾವಿರಾರು ಬಗೆ ಬಗೆಯ ಕಾರ್ಮಿಕರು ಜೀವ ಪಣಕ್ಕಿಟ್ಟು ದುಡಿಯುತ್ತಿದ್ದಾರೆ. ನಗರದಲ್ಲಿರುವ ಜನರಿಗೆ ಕೊರೊನಾ ವೈರಸ್ ಹರಡುವುದಾದರೆ ಕೈಗಾರಿಕಾ ಕಾರ್ಮಿಕರಿಗೆ ಹರಡುವುದಿಲ್ಲವೇ? ಅವರದ್ದು ಜೀವವಲ್ಲವೇ? ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಒಂದೆಡೆ ಸೇರಿದರೆ ರೋಗ ಹರಡುವ ಬೀತಿ ಇದ್ದರೆ ಒಟ್ಟಾಗಿ ದುಡಿಯುವ ಕಾರ್ಮಿಕರಿಗೆ ಬರುವುದಿಲ್ಲವೇ? ಇಂತಹ ತಾರತಮ್ಯವನ್ನು ಸರ್ಕಾರ ಬಿಡಬೇಕು. ಈ ನಾಡು ಕಟ್ಟುವಲ್ಲಿ, ಆರ್ಥಿಕತೆ ಸೃಷ್ಟಿಸುವಲ್ಲಿ ಮಹಿಳೆಯರ ಪಾಲು ಹೆಚ್ಚಿದೆ. ಅಂಥವರ ಬಗ್ಗೆ ಸರ್ಕಾರ ತಾರತಮ್ಯ ಧೋರಣೆ ಅನುಸರಿಸುತ್ತಿದೆ. ಅವರಿಗೂ ರಜೆ ಕೊಡಬೇಕು ಎಂದು ಒತ್ತಾಯಿಸಿದರು.
ಟಿಎಂಇಐಸಿ ಕಂಪನಿಯಲ್ಲಿ ಸುಮಾರು 800 ಕಾರ್ಮಿಕರು ದುಡಿಯುತ್ತಾರೆ. ಗುಬ್ಬಿ ಗೇಟ್ ಭಾಗದಲ್ಲಿರುವ ಗೋಕುಲ್ ದಾಸ್ ಗಾರ್ಮೆಂಟ್ಸ್ , ಶಾಯಿ ಗಾರ್ಮೆಂಟ್ಸ್‌ನಲ್ಲಿ ಒಬ್ಬರಿಗೊಬ್ಬರು ಅಂತರವಿಲ್ಲದೆ ದುಡಿಯುವ ಪರಿಸ್ಥಿತಿ ಇದೆ. ಎರಡು ಗಾರ್ಮೆಂಟ್ಸ್‌ಗಳಿಂದಲೂ 10 ಸಾವಿರ ಮಂದಿ ಮಹಿಳೆಯರು ದುಡಿಯುತ್ತಿದ್ದಾರೆ. ಅವರಿಗೆ ಯಾವುದೇ ಸುರಕ್ಷತೆ ಇಲ್ಲ. ಮಾಸ್ಕ್ ಕೂಡ ಹಾಕಿಕೊಳ್ಳುತ್ತಿಲ್ಲ. ಪ್ರತಿಯೊಬ್ಬರೂ ಸ್ಪರ್ಶಿಸಿಕೊಂಡೇ ಕೆಲಸ ಮಾಡಬೇಕು. 100ಕ್ಕೂ ಹೆಚ್ಚು ಮಂದಿ ಸೇರುವ ಸಭೆ ಸಮಾಂಭಗಳು, ಮದುವೆಗಳು, ಪುಡ್ ಜಂಕ್ಷನ್ ಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಮುಚ್ಚುವುದಾದರೆ ಇಲ್ಲೂ ಹಾಗೆ ಮಾಡಬೇಕಲ್ಲವೇ? ಕಾರ್ಮಿಕರು ಕೆಲಸ ಮಾಡಲು ಸರ್ಕಾರ ಅವಕಾಶ ನೀಡಿ ಕೇವಲ ನಗರದಲ್ಲಿರುವವರನ್ನು ಮಾತ್ರ ರಕ್ಷಿಸಲು ಹೊರಟಿದೆಯೇ? ಈ ಪ್ರಶ್ನೆಗೆ ಉತ್ತರವಿಲ್ಲ.
ಬಡವರು ಕೆಲಸ ಮಾಡುವ ಕಂಪನಿಗಳಲ್ಲಿ ರಜೆ ನೀಡುತ್ತಿಲ್ಲ. ರಜೆ ನೀಡಿದರೆ ಸಂಬಳ ಸಹಿತ ರಜೆ ನೀಡಬೇಕಾಗುತ್ತದೆ ಎಂಬುದು ಕಂಪನಿಗಳ ಅಂಬೋಣ. ಅಂದರೆ ಇಷ್ಟು ದಿನ ಆ ಕಂಪನಿಗಾಗಿ ದುಡಿದವರಿಗೆ ಕಷ್ಟಕಾಲದಲ್ಲಿ ರಜೆ ಕೊಡಲು ಈ ಕಂಪನಿಗಳು ಹಿಂದೆ ಮುಂದೆ ನೋಡುತ್ತಿವೆ. ಸರ್ಕಾರಗಳು ಸಹ ಇವರನ್ನು ಮಾತಾಡಿಸುವುದಿಲ್ಲ. ದಿನ ದಿನದ ಲಾಭವಷ್ಟೇ ಮುಖ್ಯ ಹೊರತು ಬಡವರ ಪ್ರಾಣಗಳಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.


