ಮಹಾರಾಷ್ಟ್ರದಾದ್ಯಂತ ಕೊರೊನಾ ಉಲ್ಬಣವನ್ನು ನಿಯಂತ್ರಿಸಲು ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಏಪ್ರಿಲ್ 14 ರ ರಾತ್ರಿ 08 ರಿಂದ ಮೇ 1 ರವರೆಗೆ ರಾಜ್ಯದ ಜನರ ಸಂಚಾರಕ್ಕೆ ಕರ್ಫ್ಯೂ ತರಹದ ನಿರ್ಬಂಧಗಳನ್ನು ಮಂಗಳವಾರ ಘೋಷಿಸಿದ್ದಾರೆ. ಆದರೆ ಅದು ಲಾಕ್‌ಡೌನ್ ಅಲ್ಲ ಎಂದು ಅವರು ಹೇಳಿದ್ದಾರೆ.
ರಾಜ್ಯವನ್ನು ಉದ್ದೇಶಿಸಿ ಮಾಡಿದ 38 ನಿಮಿಷಗಳ ಭಾಷಣದಲ್ಲಿ, ಏಪ್ರಿಲ್ 6 ರಿಂದ ಜಾರಿಗೆ ತಂದಿದ್ದ ನಿಯಮಗಳಿಗಿಂತ ಕಠಿಣವಾದ ನಿರ್ಬಂಧಗಳನ್ನು ಠಾಕ್ರೆ ಘೋಷಿಸಿದರು. ಆದರೆ ಅಗತ್ಯ ಸೇವೆಗಳಿಗೆ ಮಾತ್ರ ವಿನಾಯಿತಿ ನೀಡಿದ್ದಾರೆ. ಇದರಿಂದಾಗಿ ಪರಿಣಾಮ ಬೀರುವ ಕ್ಷೇತ್ರಗಳು ಮತ್ತು ಕೆಲವು ವಿಭಾಗಗಳಿಗೆ 5,476 ಕೋಟಿ ರೂ. ಪರಿಹಾರ ಘೋಷಿಸಿದ್ದಾರೆ.
ಆಡಳಿತ ಮಂಡಳಿ ಹೊರಡಿಸಿರುವ ಆದೇಶದ ಪ್ರಕಾರ ಸೆಕ್ಷನ್ 144 ರ ಅಡಿಯಲ್ಲಿ ರಾಜ್ಯದಲ್ಲಿ ಬುಧವಾರ ರಾತ್ರಿಯಿಂದ ನಿಷೇಧಾಜ್ಞೆ ವಿಧಿಸಲಾಗಿದ್ದು, ಮೇ 1 ರವರೆಗೆ ಜಾರಿಯಲ್ಲಿರುತ್ತದೆ.
ಇದನ್ನೂ ಓದಿ: ಸುಗ್ರೀವಾಜ್ಞೆ ಹೊರಡಿಸುವಲ್ಲಿ ಯುಪಿಎಗಿಂತ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವೇ ಮುಂದು!
ನಿರ್ಬಂಧದಂತೆ, ಯಾವುದೇ ವ್ಯಕ್ತಿಯು ಸಕಾರಣವಿಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಓಡಾಡಬಾರದು. ಕೆಲಸದ ದಿನಗಳಲ್ಲಿ ಬೆಳಿಗ್ಗೆ 7 ರಿಂದ ರಾತ್ರಿ 8 ರವರೆಗೆ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಸಂಸ್ಥೆಗಳು, ಸಾರ್ವಜನಿಕ ಸ್ಥಳಗಳು, ಚಟುವಟಿಕೆಗಳು ಮತ್ತು ಸೇವೆಗಳು ಮುಚ್ಚಲ್ಪಡುತ್ತವೆ. ಚಲನಚಿತ್ರಗಳು, ಧಾರಾವಾಹಿಗಳು ಮತ್ತು ಜಾಹೀರಾತುಗಳ ಚಿತ್ರೀಕರಣವು ಮುಚ್ಚಲ್ಪಡುತ್ತದೆ. ಮದುವೆಗಳಲ್ಲಿ ಕೇವಲ 25 ಜನರಿಗೆ ಮಾತ್ರ ಅವಕಾಶವಿರುತ್ತದೆ.
ಆದಾಗ್ಯೂ, ರೈಲುಗಳು ಮತ್ತು ಬಸ್ ಸೇವೆಗಳು ಸೇರಿದಂತೆ ಸಾರ್ವಜನಿಕ ಸಾರಿಗೆ, ದಿನಸಿ, ತರಕಾರಿ ಅಂಗಡಿಗಳು, ಹಣ್ಣು ಮಾರಾಟಗಾರರು, ಡೈರಿಗಳು, ಬೇಕರಿಗಳು, ಮಿಠಾಯಿಗಳು, ಎಲ್ಲಾ ರೀತಿಯ ಆಹಾರ ಮಳಿಗೆಗಳು ಮತ್ತು ಸಾರ್ವಜನಿಕ ಉಪಯುಕ್ತತೆಗಳಂತಹ ಅಗತ್ಯ ಸೇವೆಗಳು ತೆರೆದಿರುತ್ತವೆ.
ಉತ್ಪಾದನಾ ವಲಯಕ್ಕೆ ಸಂಬಂಧಿಸಿದಂತೆ, ಕೈಗಾರಿಕೆಗಳಿಗೆ 50% ಸಾಮರ್ಥ್ಯದಲ್ಲಿ ಕಾರ್ಯಾಚರಣೆ ಮಾಡಲು ಅನುಮತಿ ನೀಡಿದೆ. ಆದರೆ ಈ ಕೈಗಾರಿಕೆಗಳು ತಮ್ಮ ಕಾರ್ಮಿಕರಿಗೆ ಉಳಿದುಕೊಳ್ಳಲು ಕ್ಯಾಂಪಸ್‌ನಲ್ಲೇ ಅಥವಾ ಪ್ರತ್ಯೇಕವಾದ ವ್ಯವಸ್ಥೆ ಮಾಡಬೇಕಾಗುತ್ತದೆ. ಕೈಗಾರಿಕೆಯ ಆವರಣದ ಹೊರಗೆ ಸಿಬ್ಬಂದಿಗಳು ಓಡಾಡುವಂತಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಪಿಣರಾಯಿ ವಿಜಯನ್ ಸಂಪುಟಕ್ಕೆ ಕೇರಳ ಶಿಕ್ಷಣ ಸಚಿವ ಕೆ.ಟಿ. ಜಲೀಲ್ ರಾಜೀನಾಮೆ!


