ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆಗಳು ಸಮೀಪಿಸುತ್ತಿರುವ ನಡುವೆಯೇ ತೃಣಮೂಲ ಕಾಂಗ್ರೆಸ್ ಪಕ್ಷ ತೊರೆಯುವ ನಾಯಕರ ಸಂಖ್ಯೆ ಹೆಚ್ಚುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಮಮತ ಬ್ಯಾನರ್ಜಿ, “ಕೇಸರಿ ಪಕ್ಷ ಕೆಲ ಭ್ರಷ್ಟ ನಾಯಕರನ್ನು ಖರೀದಿಸಬಹುದೇ ಹೊರತು, ಪಕ್ಷದ ಕಟಿಬದ್ಧ ಕಾರ್ಯಕರ್ತರನ್ನಲ್ಲ” ಎಂದು ಬಿಜೆಪಿ ಹೆಸರೆತ್ತದೆ ವಾಗ್ದಾಳಿ ನಡೆಸಿದ್ದಾರೆ.
“ತೃಣಮೂಲ ಕಾಂಗ್ರೆಸ್ ನಲ್ಲಿ ಭ್ರಷ್ಟ ನಾಯಕರಿಗೆ ಜಾಗವಿಲ್ಲ. ಪಕ್ಷ ತೊರೆಯುವವರು ಆದಷ್ಟು ಬೇಗ ಹೋಗಲಿ ಎಂದು ಶುಭಹಾರೈಸುತ್ತೇನೆ” ಎಂದು ವ್ಯಂಗ್ಯವಾಡಿದ್ದಾರೆ.
ಡೈಮಂಡ್ ಹಾರ್ಬರ್ ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾಗಿರುವ ಶಾಸಕ ದೀಪಕ್ ಹಲ್ದಾರ್ ಟಿಎಂಸಿ ಪಕ್ಷ ತೊರೆದು ಬಿಜೆಪಿ ಸೇರ್ಪಡೆಗೊಂಡ ಬೆನ್ನ ಹಿಂದೆಯೇ ಮಮತ ಬ್ಯಾನರ್ಜಿ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.
ಇದನ್ನೂ ಓದಿ: ರೈತ ಹೋರಾಟ ಬೆಂಬಲಿಸಿದ ರಿಹಾನ್ನಾ: ಗೌರವಾರ್ಥವಾಗಿ ಹಾಡು ಸಮರ್ಪಿಸಿದ ದಿಲ್ಜಿತ್!
ಇತ್ತೀಚೆಗೆ ಸುವೇಂದು ಅಧಿಕಾರಿ, ರಾಜಿಬ್ ಬ್ಯಾನರ್ಜಿ, ಬೈಶಾಲಿ ದಾಲ್ಮಿಯ, ಪ್ರಬೀರ್ ಘೋಷಲ್, ರತನ್ ಚಕ್ರವರ್ತಿ, ರುದ್ರವಿಲ್ ಘೋಷ್ ಮೊದಲಾದ ನಾಯಕರು ಟಿಎಂಸಿ ಪಕ್ಷವನ್ನು ತೊರೆದು ಬಿಜೆಪಿ ಸೇರ್ಪಡೆ ಆಗಿದ್ದರು.
“ಹಲ್ದಾರ್ ರಾಜಿನಾಮೆ ನೀಡಿದ ಬಳಿಕ, ಮಾಧ್ಯಮಗಳಲ್ಲಿ ಗಾಳಿ ತುಂಬಿದ ಬಲೂನ್ ಗಳು ಜೀವಂತವಾಗಿ ಹಾರಾಡುತ್ತಿವೆ. ಕೆಟ್ಟ ಮಾರ್ಗದಿಂದ ಸಂಪಾದಿಸಿದ ಹಣ ವಾಷಿಂಗ್ ಮಿಷನ್ ನಲ್ಲಿ ಸ್ವಚ್ಛವಾಗುತ್ತದೆ. ಟಿಎಂಸಿ ಬಿಟ್ಟು ಬಿಜೆಪಿ ಸೇರಿರುವ ಕೆಲ ನಾಯಕರು ಡಕಾಯಿತರು ಎಂದು ಮಮತ ಬ್ಯಾನರ್ಜಿ ಹಣೆಪಟ್ಟಿ ಕಟ್ಟಿದ್ದಾರೆ” ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
“ಇದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಮಾ-ಮಾಟಿ-ಮನುಷ್ ಘೋಷಣೆಯಡಿ ಟಿಎಂಸಿ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತದೆ. ಬಿಜೆಪಿಯ ಗಾಳಿತುಂಬಿದ ಬಲೂನ್ ಗಳು ಮಾಧ್ಯಮಗಳಲ್ಲಿ ಮಾತ್ರ ಹಾರಾಡುತ್ತವೆ. ಅವರು ಹಣ ತೆಗೆದುಕೊಂಡಿದ್ದಾರೆ. ಏಜೆನ್ಸಿ ಮೂಲಕ ಅವುಗಳು ಬೀದಿಗಳಲ್ಲಿ ಹಾರಾಡುತ್ತಿವೆ. ಅದಕ್ಕೆ ನೀವು ಕಿವಿಗೊಡಬೇಡಿ, ಟಿಎಂಸಿ ನಿಮ್ಮ ಮನಸ್ಸಿನಲ್ಲಿದೆ. ನೀವು ಖಚಿತ ಭರವಸೆ ನೀಡಿದರೆ ನಾನು ಒಳ್ಳೆಯ ಭವಿಷ್ಯದ ಬಗ್ಗೆ ಖಚಿತಪಡಿಸುತ್ತೇನೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಿಹಾನ್ನಾ ಟ್ವೀಟ್ ಪರಿಣಾಮ-ರೈತ ಹೋರಾಟಕ್ಕೆ ಜಾಗತಿಕ ಮನ್ನಣೆ!


