ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ 2019-20 ಮತ್ತು 2022-23ರ ನಡುವೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಲಾಗಿತ್ತು. ಈ ಕುರಿತು ತನಿಖೆ ನಡೆಸಿರುವ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನ್ ದಾಸ್ ಅವರ ಆಯೋಗವು ಶನಿವಾರ (ಆ.30) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು 2023ರ ಜುಲೈ 13ರಂದು ಮನವಿ ಸಲ್ಲಿಸಿದ್ದರು. ಅವರ ಮನವಿಗೆ ಸ್ಪಂದಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಆರಂಭದಲ್ಲಿ ತನಿಖೆಗಾಗಿ ನಾಲ್ಕು ವಿಶೇಷ ಸಮಿತಿಗಳನ್ನು ರಚಿಸಿದ್ದರು. ಬಳಿಕ, 2023ರ ಡಿಸೆಂಬರ್ 15ರಂದು ಆ ಸಮಿತಿಗಳನ್ನು ಹಿಂಪಡೆದು, ತನಿಖೆಯನ್ನು ನಾಗಮೋಹನ್ ದಾಸ್ ನೇತೃತ್ವದ ವಿಚಾರಣಾ ಆಯೋಗಕ್ಕೆ ವರ್ಗಾಯಿಸಿದ್ದರು.
ಆಪಾದಿತ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಿರುವ ಆಯೋಗವು, ಒಟ್ಟು 8,900 ಪುಟಗಳ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ತನಿಖೆ ವೇಳೆ ಕಾಮಗಾರಿಗಳ ಕಡತ, ಕಾಮಗಾರಿ ನಡೆದ ಸ್ಥಳ ಹಾಗೂ ಕಾಮಗಾರಿಗಳ ಲೆಕ್ಕಪತ್ರಗಳನ್ನು ಪರಿಶೀಲನೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ರ‍್ಯಾಂಡಮ್ ಆಯ್ಕೆ ಮೂಲಕ 528 ಮತ್ತು ಇತರೆ 233 ಒಟ್ಟು 761 ಪೂರ್ಣಗೊಂಡ ಕಾಮಗಾರಿಗಳ ತನಿಖೆ ನಡೆಸಲಾಗಿದೆ. ಈ ವೇಳೆ, ಕಾಮಗಾರಿಯಲ್ಲಿ ಹಲವು ನ್ಯೂನತೆಗಳನ್ನು ಪತ್ತೆ ಮಾಡಲಾಗಿದೆ ಎಂದು ವರದಿಯಾಗಿದೆ.
ತನಿಖಾ ವರದಿಯಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನಿನ ಅಡಿಯಲ್ಲಿ ಕ್ರಮಕೈಗೊಳ್ಳಲು ಆಯೋಗವು ಶಿಫಾರಸು ಮಾಡಿದೆ. ಮಾತ್ರವಲ್ಲದೆ, ಕಳಪೆ ಕಾಮಗಾರಿ ನಡೆದಿರುವಲ್ಲಿ ಸುಧಾರಣಾ ಕ್ರಮಕೈಗೊಳ್ಳಲು ತಿಳಿಸಿದೆ.
ಬಿಜೆಪಿಯೊಂದಿಗೆ ಅಂತರ ಕಾಯ್ದುಕೊಳ್ಳುವಂತೆ ಕಾಂಗ್ರೆಸ್ ಮಾದಿಗ ನಾಯಕರಿಗೆ ಸುಧಾಮ್ ದಾಸ್ ಮನವಿ