ಕೇಂದ್ರದ ವಿವಾದಾತ್ಮಕ ಕೃಷಿ ಮಸೂದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿಯ ಗಡಿಗಳಲ್ಲಿ ಹೋರಾಡುತ್ತಿರುವ ರೈತರ ಪ್ರತಿಭಟನೆ 25ನೇ ದಿನಕ್ಕೆ ಕಾಲಿಟ್ಟಿದೆ. ರೈತರ ಹೋರಾಟಕ್ಕೆ ಹಲವೆಡೆಯಿಂದ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಆದರೆ ತಮ್ಮ ದಿಟ್ಟ ಹೋರಾಟವನ್ನು ಕೆಲ ಮಾಧ್ಯಮಗಳು ತೋರಿಸುತ್ತಿಲ್ಲ ಎಂದು ಅವನ್ನು ಗೋದಿ ಮೀಡಿಯಾ ಆರೋಪಿಸಿರುವ ರೈತರು ಅವುಗಳಿಗೆ ಸೆಡ್ಡು ಹೊಡೆದು ಸ್ವಂತ ಚಾನೆಲ್ ಆರಂಭಿಸಿದ್ದಾರೆ.
ಸದ್ಯಕ್ಕೆ ಯೂಟ್ಯೂಬ್‌ನಲ್ಲಿ Kisan Ekta Morcha ಹೆಸರಿನಲ್ಲಿ ಚಾನೆಲ್ ಆರಂಭವಾಗಿದ್ದು ಕೇವಲ 4 ದಿನಗಳಲ್ಲಿಯೇ 5.87 ಲಕ್ಷ ಚಂದಾದಾರರನ್ನು ಪಡೆದಿದ್ದಾರೆ. ಅದೇ ಹೆಸರಿನ ಫೇಸ್‌ಬುಕ್, ಟ್ವಿಟ್ಟರ್ ಅಕೌಂಟ್‌ಗಳನ್ನು ಸಹ ತೆರೆಯಲಾಗಿದ್ದು ತಲಾ ಒಂದು ಲಕ್ಷಕ್ಕೂ ಮೀರಿ ಫಾಲೋವರ್ಸ್ ಪಡೆದಿವೆ. ಹೋರಾಟದ ಎಲ್ಲಾ ವಿವರಗಳನ್ನು ಈ ಚಾನೆಲ್‌ಗಳ ಮೂಲಕ ನೀಡಲಾಗುತ್ತಿದೆ.
ಹೋರಾಟನಿರತ ರೈತರನ್ನು ಖಲಿಸ್ತಾನಿಗಳು, ಭಯೋತ್ಪಾದಕರೆಂಬಂತೆ ಕೆಲ ಮಾಧ್ಯಮಗಳು ಚಿತ್ರಿಸುತ್ತಿವೆ. ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ‘ಕೇವಲ 1 ಲಕ್ಷ ರೈತರಷ್ಟೇ ಹೋರಾಡುತ್ತಿದ್ದಾರೆ’ ಎಂದು ಹೇಳಿಕೆ ನೀಡಿದ್ದಾರೆ. ಅವುಗಳಿಗೆ ತಿರುಗೇಟು ನೀಡಲು ಮತ್ತು ಹೋರಾಟವನ್ನು ದೇಶಕ್ಕೆ ತಲುಪಿಸಲು ನಾವು ಈ ಚಾನೆಲ್‌ಗಳನ್ನು ಆರಂಭಿಸಿದ್ದೇವೆ. ಹಾಗಾಗಿ ಡಿಸೆಂಬರ್ 25 ರೊಳಗೆ ಒಂದು ಕೋಟಿ ಚಂದಾದಾರರಾಗುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ನಮ್ಮ ತಾಕತ್ತು ತೋರಿಸಬೇಕು. ದಯವಿಟ್ಟು ಚಂದಾದಾರರಾಗಿ ಎಂದು ಹೋರಾಟ ನಿರತ ರೈತರು ಕರೆ ನೀಡಿದ್ದಾರೆ.
ಟ್ವಿಟ್ಟರ್ ಮೂಲಕ ಪ್ರತಿ ಕ್ಷಣವೂ ಹೋರಾಟದಲ್ಲಿ ಏನಾಗುತ್ತಿದೆ ಎಂಬ ಮಾಹಿತಿ ನೀಡಲಾಗುತ್ತಿದೆ. ಯೂಟ್ಯೂಬ್ ಚಾನೆಲ್‌ನಲ್ಲಿ 21 ವಿಡಿಯೋಗಳನ್ನು ಅಪ್‌ಲೋಡ್ ಮಾಡಲಾಗಿದೆ. ನಂತರ ಪೂರ್ಣಪ್ರಮಾಣದಲ್ಲಿ ಚಾನೆಲ್ ಮಾಡಬೇಕೆಂದು ರೈತ ಹೋರಾಟಗಾರರು ಯೋಚಿಸಿತ್ತಿದ್ದಾರೆ.
ಇದನ್ನೂ ಓದಿ: ರೈತ ಹೋರಾಟದ ಚರ್ಚೆಯಿಂದ ತಪ್ಪಿಸಿಕೊಳ್ಳಲು ಅಧಿವೇಶನ ರದ್ದು: ಕೇಂದ್ರದ ವಿರುದ್ಧ ರಾವತ್ ವಾಗ್ದಾಳಿ


