ಗುಜರಾತ್, ಪಂಜಾಬ್, ಕೇರಳ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಒಟ್ಟು ಐದು ವಿಧಾನಸಭಾ ಸ್ಥಾನಗಳಿಗೆ ನಡೆದ ಉಪಚುನಾವಣೆಯ ಮತ ಎಣಿಕೆ ಇಂದು(ಜೂ.23) ನಡೆಯುತ್ತಿದೆ.
ಗುಜರಾತ್‌ನ ಎರಡು ವಿಧಾನಸಭಾ ಸ್ಥಾನಗಳಾದ ವಿಸಾವದರ್ ಮತ್ತು ಕಾಡಿ, ಪಂಜಾಬ್‌ನ ಲುಧಿಯಾನ ಪಶ್ಚಿಮ, ಪಶ್ಚಿಮ ಬಂಗಾಳದ ಕಾಳಿಗಂಜ್ ಮತ್ತು ಕೇರಳದ ನಿಲಂಬೂರ್ ವಿಧಾನಸಭಾ ಕ್ಷೇತ್ರಗಳಿಗೆ ಜೂನ್ 19ರಂದು ಮತದಾನ ನಡೆದಿತ್ತು.
ಈ ಸುದ್ದಿ ಬರೆಯುವ ಹೊತ್ತಿಗೆ (ಮಧ್ಯಾಹ್ನ 12 ಗಂಟೆ) ಭಾರತೀಯ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಗೊಂಡ ಮಾಹಿತಿ ಪ್ರಕಾರ, ಗುಜರಾತ್‌ನ ಕಾಡಿಯಲ್ಲಿ ಬಿಜೆಪಿ, ವಿಸಾವದರ್‌ನಲ್ಲಿ ಎಎಪಿ. ಕೇರಳದ ನಿಲಂಬೂರ್‌ನಲ್ಲಿ ಯುಡಿಎಫ್, ಪಶ್ಚಿಮ ಬಂಗಾಳದ ಕಾಳಿಗಂಜ್‌ನಲ್ಲಿ ಟಿಎಂಸಿ, ಲುದಿಯಾನ ಪಶ್ವಿಮದಲ್ಲಿ ಎಎಪಿ ಮುನ್ನಡೆ ಸಾಧಿಸಿದೆ ಎಂದು ತಿಳಿದು ಬಂದಿದೆ.
ಗುಜರಾತ್‌ನ ವಿಸಾವದರ್ ಕ್ಷೇತ್ರದಲ್ಲಿ ಶೇ. 56.89 ಮತ್ತು ಕಾಡಿ ಕ್ಷೇತ್ರದಲ್ಲಿ ಶೇ. 57.90 ರಷ್ಟು ಮತದಾನವಾಗಿದೆ.
ಕೇರಳದ ನಿಲಂಬೂರ್‌ನಲ್ಲಿ ಶೇ. 75.27, ಪಶ್ಚಿಮ ಬಂಗಾಳದ ಕಾಳಿಗಂಜ್‌ನಲ್ಲಿ ಶೇ. 69.85 ಮತ್ತು ಪಂಜಾಬ್‌ನ ಲುಧಿಯಾನ ಪಶ್ಚಿಮ ಕ್ಷೇತ್ರದಲ್ಲಿ ಶೇ. 51.33 ರಷ್ಟು ಮತ ಚಲಾವಣೆಯಾಗಿದೆ.
ಹಾಲಿ ಶಾಸಕರ ನಿಧನದಿಂದಾಗಿ ಗುಜರಾತ್, ಪಶ್ಚಿಮ ಬಂಗಾಳ ಮತ್ತು ಪಂಜಾಬ್‌ನ ತಲಾ ಒಂದು ಸ್ಥಾನಕ್ಕೆ ಉಪಚುನಾವಣೆ ನಡೆಸಬೇಕಾಗಿತ್ತು. ಶಾಸಕರ ರಾಜೀನಾಮೆಯಿಂದಾಗಿ ಕೇರಳ ಮತ್ತು ಗುಜರಾತ್‌ನ ತಲಾ ಒಂದೊಂದು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿದೆ.
ಗುಜರಾತ್‌ನ ಕಾಡಿಯಲ್ಲಿ ಬಿಜೆಪಿ ರಾಜೇಂದ್ರ ಚಾವ್ಡಾ, ಕಾಂಗ್ರೆಸ್ ಮಾಜಿ ಶಾಸಕ ರಮೇಶ್ ಚಾವ್ಡಾ ಮತ್ತು ಎಎಪಿ ಜಗದೀಶ್ ಚಾವ್ಡಾ ಅವರನ್ನು ಕಣಕ್ಕಿಳಿಸಿದೆ.
ವಿಸಾವದರ್‌ನಲ್ಲಿ ಎಎಪಿಯ ಗೋಪಾಲ್ ಇಟಾಲಿಯಾ ಮತ್ತು ಕಾಂಗ್ರೆಸ್‌ನ ನಿತಿನ್ ರಾನ್‌ಪಾರಿಯಾ ವಿರುದ್ಧ ಬಿಜೆಪಿ ಮಾಜಿ ಜುನಾಗಡ್ ಜಿಲ್ಲಾ ಅಧ್ಯಕ್ಷ ಕಿರಿತ್ ಪಟೇಲ್ ಅವರಿಗೆ ಟಿಕೆಟ್ ಕೊಟ್ಟಿದೆ.
ಪಶ್ಚಿಮ ಬಂಗಾಳದ ಕಾಳಿಗಂಜ್‌ನಲ್ಲಿ ಎಡಪಕ್ಷಗಳ ಬೆಂಬಲದೊಂದಿಗೆ ಕಾಂಗ್ರೆಸ್ ಅಭ್ಯರ್ಥಿ ಕಬಿಲ್ ಉದ್ದೀನ್ ಶೇಖ್, ತೃಣಮೂಲ ಕಾಂಗ್ರೆಸ್‌ನ ಅಲಿಫಾ ಅಹ್ಮದ್ ಮತ್ತು ಬಿಜೆಪಿಯ ಆಶಿಶ್ ಘೋಷ್ ಸ್ಪರ್ಧೆಯಲ್ಲಿದ್ದಾರೆ.
ಕೇರಳದ ನಿಲಂಬೂರ್‌ನಲ್ಲಿ ಆಡಳಿತಾರೂಢ ಎಲ್‌ಡಿಎಫ್ ಎಂ. ಸ್ವರಾಜ್ ಅವರನ್ನು ಕಣಕ್ಕಿಳಿಸಿದರೆ, ಕಾಂಗ್ರೆಸ್ ನೇತೃತ್ವದ ಯುಡಿಎಫ್‌ನಿಂದ ಆರ್ಯದನ್ ಶೌಕತ್, ತೃಣಮೂಲ ಕಾಂಗ್ರೆಸ್‌ನಿಂದ ಪಿ.ವಿ. ಅನ್ವರ್ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎಯಿಂದ ಮೋಹನ್ ಜಾರ್ಜ್ ಕಣದಲ್ಲಿದ್ದಾರೆ.
ನಿಲಂಬೂರ್‌ನಲ್ಲಿ ಒಟ್ಟು ಹತ್ತು ಮಂದಿ ಈ ಚುನಾವಣೆಗೆ ಸ್ಪರ್ಧಿಸಿದ್ದು, ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವ ಕಾರಣ, ಆಡಳಿತಾರೂಢ ಎಲ್‌ಡಿಎಫ್‌ಗೆ ತನ್ನ ಭವಿಷ್ಯದ ದೃಷ್ಠಿಯಿಂದ ಅಗ್ನಿ ಪರೀಕ್ಷೆಯಾಗಿದೆ.
ಲುಧಿಯಾನ ಪಶ್ಚಿಮ ಉಪಚುನಾವಣೆಯಲ್ಲಿ ಎಎಪಿಯಿಂದ ಸಂಜೀವ್ ಅರೋರಾ, ಕಾಂಗ್ರೆಸ್‌ನಿಂದ ಭರತ್ ಭೂಷಣ್ ಆಶು, ಬಿಜೆಪಿಯಿಂದ ಜೀವನ್ ಗುಪ್ತಾ ಮತ್ತು ಶಿರೋಮಣಿ ಅಕಾಲಿದಳ (ಎಸ್‌ಎಡಿ) ನಿಂದ ಪರುಪ್ಕರ್ ಸಿಂಗ್ ಘುಮ್ಮನ್ ನಡುವೆ ಚತುಷ್ಕೋನ ಸ್ಪರ್ಧೆ ಏರ್ಪಟ್ಟಿದೆ.
ಅರೋರಾ ಎಎಪಿಯ ರಾಜ್ಯಸಭಾ ಅಭ್ಯರ್ಥಿಯಾಗಿದ್ದು, ಅರೋರಾ ಗೆದ್ದರೆ ವಿಧಾನಸಭೆಗೆ ಆಯ್ಕೆಯಾದರೆ ಅರವಿಂದ್ ಕೇಜ್ರಿವಾಲ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡುವ ಯೋಚನೆಯಲ್ಲಿ ಎಎಪಿ ಇದೆ. ಆದರೆ, ಎಎಪಿ ನಾಯಕರು ಆ ರೀತಿಯ ಲೆಕ್ಕಾಚಾರ ಇಲ್ಲ ಎಂದಿದ್ದಾರೆ. ಲುಧಿಯಾನ ಪಶ್ಚಿಮ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಖಾಲ್ಸಾ ಮಹಿಳಾ ಕಾಲೇಜಿನಲ್ಲಿ ನಡೆಯುತ್ತಿದೆ.


