ಕೋವಿಶೀಲ್ಡ್ ಲಸಿಕೆ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಪ್ಲೇಟ್‌ಲೆಟ್ ಕಡಿಮೆಯಂತಹ ಅಡ್ಡಪರಿಣಾಮಕ್ಕೆ ಕಾರಣವಾಗುತ್ತದೆ ಎಂದು ವಿಶ್ವದ ಅತಿದೊಡ್ಡ ಲಸಿಕೆ ತಯಾರಕ ಟಿಷ್ ಫಾರ್ಮಾ ದೈತ್ಯ ‘ಅಸ್ಟ್ರಾಜೆನೆಕಾ’ ಯುಕೆ ಕೋರ್ಟ್‌ನಲ್ಲಿ ಒಪ್ಪಿಕೊಂಡ ಬೆನ್ನಲ್ಲಿ ಕೋವಿಶೀಲ್ಡ್ ತೆಗೆದುಕೊಂಡ ಬಳಿಕ ಇಬ್ಬರು ಯುವತಿಯರು ಮೃತಪಟ್ಟಿರುವ ಬಗ್ಗೆ ಅವರ ಪೋಷಕರು ಆರೋಪಿಸಿದ್ದಾರೆ.
ಅಸ್ಟ್ರಾಜೆನೆಕಾ ಲಸಿಕೆಯನ್ನು ಭಾರತದಲ್ಲಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ‘ಕೋವಿಶೀಲ್ಡ್’ ಎಂಬ ಹೆಸರಿನಲ್ಲಿ ತಯಾರಿಸಿದೆ ಮತ್ತು ಇಲ್ಲಿ ವ್ಯಾಪಕವಾಗಿ ಜನರಿಗೆ ಈ ಲಸಿಕೆಯನ್ನು ನೀಡಲಾಗಿದೆ.
ವೇಣುಗೋಪಾಲನ್ ಗೋವಿಂದನ್ 2021ರಲ್ಲಿ ತನ್ನ 20 ವರ್ಷದ ಮಗಳು ಕಾರುಣ್ಯಳನ್ನು ಕಳೆದುಕೊಂಡಿದ್ದರು, ಹಲವು ಜೀವಗಳನ್ನು ಕಳೆದುಕೊಂಡ ನಂತರ ಕಂಪೆನಿ ಈಗ ವಾಸ್ತವ ಒಪ್ಪಿಕೊಂಡಿದೆ ಎಂದು ವೇಣುಗೋಪಾಲನ್ ಹೇಳಿದ್ದಾರೆ. 15 ಯುರೋಪಿಯನ್ ದೇಶಗಳು ರಕ್ತ ಹೆಪ್ಪುಗಟ್ಟುವಿಕೆಯಿಂದ ಉಂಟಾಗುವ ಸಾವುಗಳ ಹಿನ್ನೆಲೆ ಅದರ ಬಳಕೆಯನ್ನು ನಿರ್ಬಂಧಿಸಿದ ನಂತರ ಸೀರಮ್ ಇನ್‌ಸ್ಟಿಟ್ಯೂಟ್ ಲಸಿಕೆ ಪೂರೈಕೆಯನ್ನು ನಿಲ್ಲಿಸಬೇಕಿತ್ತು. ನೊಂದ ಪೋಷಕರು ನ್ಯಾಯಕ್ಕಾಗಿ ವಿವಿಧ ನ್ಯಾಯಾಲಯಗಳಲ್ಲಿ ಹೋರಾಟ ನಡೆಸುತ್ತಿದ್ದರೂ ವಿಚಾರಣೆ ನಡೆಯುತ್ತಿಲ್ಲ. ನ್ಯಾಯಕ್ಕಾಗಿ ಮತ್ತು ಸಾರ್ವಜನಿಕ ಆರೋಗ್ಯದ ಹೆಸರಿನಲ್ಲಿ ನಡೆಸಲಾದ ಈ ದುಷ್ಕೃತ್ಯವು ಮರುಕಳಿಸುವುದನ್ನು ತಡೆಯಲು, ನಾವು ಎಲ್ಲಾ ಅಪರಾಧಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸುತ್ತೇವೆ ಎಂದು ವೇಣುಗೋಪಾಲನ್ ಹೇಳಿದ್ದಾರೆ.
ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಅಡಾರ್ ಪೂನಾವಾಲ್ಲಾ ಅವರು ಈ ಪಾಪಗಳಿಗೆ ಉತ್ತರಿಸಬೇಕಾಗುತ್ತದೆ. ಇದಲ್ಲದೆ ಲಸಿಕೆಗೆ ಅನುಮೋದಿಸಿದ್ದಕ್ಕಾಗಿ ಸರ್ಕಾರವನ್ನು ಅವರು ದೂಷಿಸಿದ್ದಾರೆ.
2021ರಲ್ಲಿ ರಿಥೈಕಾ (18)ಎಂಬ ಮಗಳನ್ನು ಕಳೆದುಕೊಂಡ ರಚನಾ ಗಂಗೂ ಮತ್ತು 20 ವರ್ಷದ ಮಗಳು ಕಾರುಣ್ಯಳನ್ನು ಕಳೆದುಕೊಂಡ ಗೋವಿಂದನ್ ಅವರು ತಮ್ಮ ಮಕ್ಕಳ ಸಾವಿನ ಬಗ್ಗೆ ತನಿಖೆ ನಡೆಸಲು ವೈದ್ಯಕೀಯ ಮಂಡಳಿಯನ್ನು ನೇಮಿಸುವಂತೆ ಈ ಹಿಂದೆ ಸುಪ್ರೀಂ ಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.
‘ಅಸ್ಟ್ರಾಜೆನೆಕಾ’ ಕಂಪನಿಯು ಈ ಕುರಿತ 51 ಮೊಕದ್ದಮೆಗಳನ್ನು ಎದುರಿಸುತ್ತಿದೆ, ಕೋವಿಶೀಲ್ಡ್ ಲಸಿಕೆಯು ಡಜನ್‌ಗಟ್ಟಲೆ ಪ್ರಕರಣಗಳಲ್ಲಿ ಸಾವು ಮತ್ತು ಗಂಭೀರವಾದ ಗಾಯವನ್ನು ಉಂಟುಮಾಡಿದೆ. ಯುಕೆ ಹೈಕೋರ್ಟ್‌ನಲ್ಲಿ 51 ಪ್ರಕರಣಗಳಲ್ಲಿ ಸಂತ್ರಸ್ತರು 100 ಮಿಲಿಯನ್ ಪೌಂಡ್‌ಗಳವರೆಗೆ ಪರಿಹಾರವನ್ನು ಬಯಸುತ್ತಿದ್ದಾರೆ. ಈ ಸುದ್ದಿಯು ಭಾರತದ ಜನರನ್ನು ಒಳಗೊಂಡಂತೆ ವಿಶ್ವದಾದ್ಯಂತ ಕೋಟ್ಯಾಂತರ ಜನರ ಮೇಲೆ ಪರಿಣಾಮ ಬೀರಿದೆ.
ಕೋವಿಡ್ -19 ವಿರುದ್ಧದ ‘ಕೋವಿಶೀಲ್ಡ್’ ಲಸಿಕೆಯು ರಕ್ತ ಹೆಪ್ಪುಗಟ್ಟುವಿಕೆಗೆ ಸಂಬಂಧಿಸಿದ ಅಪರೂಪದ ಅಡ್ಡ ಪರಿಣಾಮದ ಸಾಮರ್ಥ್ಯವನ್ನು ಹೊಂದಿದೆ ಎಂದು ಬ್ರಿಟಿಷ್ ಫಾರ್ಮಾ ದೈತ್ಯ ‘ಅಸ್ಟ್ರಾಜೆನೆಕಾ’ ನ್ಯಾಯಾಲಯದಲ್ಲಿ ಮೊದಲ ಬಾರಿಗೆ ಒಪ್ಪಿಕೊಂಡಿತ್ತು. TTS ಅಥವಾ ಥ್ರಂಬೋಸಿಸ್ ಜೊತೆಗೆ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗುತ್ತದೆ ಮತ್ತು ರಕ್ತದಲ್ಲಿ ಪ್ಲೇಟ್ಲೆಟ್ ಅಂಶಗಳು ಕಡಿಮೆಯಾಗಲು ಕಾರಣವಾಗುತ್ತದೆ ಎನ್ನುವುದು ಬಹಿರಂಗವಾಗಿತ್ತು.
ಇದನ್ನು ಓದಿ: ರೋಹಿತ್ ವೇಮುಲಾ ‘ಪರಿಶಿಷ್ಟ ಜಾತಿ’ಗೆ ಸೇರಿದವರಲ್ಲ: ಪ್ರಕರಣದ ಫೈಲ್ ಕ್ಲೋಸ್ ಮಾಡಿದ ಪೊಲೀಸರು


