ಕಾರು ಗುದ್ದಿ ಗಿಗ್ ಕಾರ್ಮಿಕನನ್ನು (ಡೆಲಿವರಿ ಬಾಯ್) ಹತ್ಯೆಗೈದು, ಅದನ್ನು ರಸ್ತೆ ಅಪಘಾತ ಎಂದು ಬಿಂಬಿಸಿದ್ದ ಆರೋಪದ ಮೇಲೆ ದಂಪತಿಯನ್ನು ಬೆಂಗಳೂರು ದಕ್ಷಿಣ ಪೊಲೀಸರು ಬಂಧಿಸಿದ್ದಾರೆ.
ಅರೆಕೆರೆ ನಿವಾಸಿಗಳಾದ ಮನೋಜ್ (32) ಮತ್ತು ಆತನ ಪತ್ನಿ ಆರತಿ ಶರ್ಮಾ (29) ಬಂಧಿತರು. ಅ.25ರಂದು ತಡರಾತ್ರಿ ಸುಮಾರು 12 ಗಂಟೆಗೆ ನಗರದ ನಟರಾಜ ಲೇಔಟ್‌ನ ಶ್ರೀರಾಮ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ.
ಕೆಂಬತ್ತಹಳ್ಳಿ ನಿವಾಸಿಯಾದ ದರ್ಶನ್ (22) ಹತ್ಯೆಯಾದ ಡೆಲಿವರಿ ಬಾಯ್. ಈತನ ಸ್ನೇಹಿತ ವರುಣ್ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ದರ್ಶನ್ ಸಹೋದರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಮನೋಜ್ ಕಲರಿಪಯಟ್ಟು ತರಬೇತುದಾರನಾದರೆ, ಪತ್ನಿ ಆರತಿ ಶರ್ಮಾ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ದಂಪತಿ ಕಳೆದ ಎಂಟು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದಾರೆ. ಕೆಂಬತ್ತಹಳ್ಳಿಯ ದರ್ಶನ್ ಮತ್ತು ಉತ್ತರಹಳ್ಳಿಯ ವರುಣ್ ಸ್ನೇಹಿತರಾಗಿದ್ದು, ಆಹಾರ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು.
ಮನೋಜ್ ಮತ್ತು ಆರತಿ ಶರ್ಮಾ ಅಕ್ಟೋಬರ್ 25ರಂದು ತಡರಾತ್ರಿ ತಮ್ಮ ಕಾರಿನಲ್ಲಿ ನಟರಾಜ ಲೇಔಟ್ ಮಾರ್ಗವಾಗಿ ಮನೆ ಕಡೆಗೆ ತೆರಳುತ್ತಿದ್ದರು. ಅದೇ ಮಾರ್ಗದಲ್ಲಿ ಎದುರಿನಿಂದ ದರ್ಶನ್ ಮತ್ತು ವರುಣ್ ದ್ವಿಚಕ್ರ ವಾಹನದ ಮೂಲಕ ಮನೆ ಕಡೆಗೆ ಹೊರಟಿದ್ದರು. ಈ ವೇಳೆ ಆಕಸ್ಮಿಕವಾಗಿ ದರ್ಶನ್ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ಮನೋಜ್ ಅವರ ಕಾರಿನ ಮಿರರ್‌ಗೆ ತಾಕಿದೆ. ಅದಕ್ಕಾಗಿ ದರ್ಶನ್ ಕ್ಷಮೆ ಕೇಳಿ ದ್ವಿಚಕ್ರ ವಾಹನ ನಿಲ್ಲಿಸದೆ ಮುಂದಕ್ಕೆ ಹೊರಟ್ಟಿದ್ದಾರೆ.
ಇದರಿಂದ ರೊಚ್ಚಿಗೆದ್ದ ಮನೋಜ್ ದಂಪತಿ, ಕಾರನ್ನು ಯೂ-ಟರ್ನ್ ತೆಗೆದುಕೊಂಡು ಸುಮಾರು 2 ಕಿ.ಮೀ ಹಿಂಬಾಲಿಸಿ ದರ್ಶನ್ ಮತ್ತು ವರುಣ್ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ರಭಸಕ್ಕೆ ದರ್ಶನ್ ಮತ್ತು ವರುಣ್ ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟಿದ್ದರು. ದರ್ಶನ್ ಗಂಭೀರವಾಗಿ ಗಾಯಗೊಂಡರೆ, ವರುಣ್ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದರು. ಅಪಘಾತದ ಬಳಿಕ ದಂಪತಿ ಕಾರು ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದರು. ಗಂಭೀರ ಗಾಯಗೊಂಡಿದ್ದ ದರ್ಶನ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ತೀವ್ರ ರಕ್ತಸ್ತಾವವಾಗಿ ಚಿಕಿತ್ಸೆ ಫಲಿಸದೆ ದರ್ಶನ್ ಸಾವನ್ನಪ್ಪಿದ್ದರು.
ಈ ಸಂಬಂಧ ದರ್ಶನ್ ಸಹೋದರಿ ನೀಡಿದ ದೂರು ಆಧರಿಸಿ ತನಿಖೆ ಕೈಗೊಂಡ ಜೆ.ಪಿ ನಗರ ಸಂಚಾರಿ ಠಾಣೆ ಪೊಲೀಸರು, ಘಟನಾ ಸ್ಥಳದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮನೋಜ್ ದಂಪತಿ ಉದ್ದೇಶಪೂರ್ವಕವಾಗಿಯೇ ಕಾರು ಗುದ್ದಿ ದರ್ಶನ್ ಸಾವಿಗೆ ಕಾರಣರಾಗಿರುವುದು ಗೊತ್ತಾಗಿದೆ. ಪೊಲೀಸರು ಕಾರಿನ ನೋಂದಣಿ ಸಂಖ್ಯೆ ಮೂಲಕ ದಂಪತಿಯನ್ನು ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ಉದ್ದೇಶಪೂರ್ವಕವಾಗಿ ಕಾರು ಗುದ್ದಿರುವುದನ್ನು ದಂಪತಿ ಒಪ್ಪಿಕೊಂಡಿದ್ದಾರೆ. ಹಾಗಾಗಿ, ಜೆ.ಪಿ ನಗರ ಸಂಚಾರಿ ಪೊಲೀಸರು ಪ್ರಕರಣವನ್ನು ಪುಟ್ಟೇನಹಳ್ಳಿ ಠಾಣೆಗೆ ವರ್ಗಾಯಿಸಿದ್ದು, ಅವರು ದಂಪತಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.
ದಲಿತ ಟೆಕ್ಕಿ ಕೆವಿನ್ ಅಮಾನವೀಯ ಹತ್ಯೆ ಪ್ರಕರಣ; ಆರೋಪಿ ಪೊಲೀಸ್ ಅಧಿಕಾರಿಗೆ ಜಾಮೀನು ನಿರಾಕರಣೆ


