ಮಹಾರಾಷ್ಟ್ರದ ಅಕೋಲಾದಲ್ಲಿ ನವೆಂಬರ್ 2022ರಲ್ಲಿ ನಡೆದ ‘ಭಾರತ್ ಜೋಡೋ ಯಾತ್ರೆ’ಯ ಸಂದರ್ಭದಲ್ಲಿ ವಿ.ಡಿ ಸಾವರ್ಕರ್ ವಿರುದ್ಧ ‘ಅವಹೇಳನಕಾರಿ’ ಹೇಳಿಕೆ ನೀಡಿದ ಆರೋಪ ಪ್ರಕರಣ ಸಂಬಂಧ ವಿಚಾರಣೆಗೆ ಗೈರಾಗಿದ್ದಕ್ಕೆ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಗೆ ಉತ್ತರ ಪ್ರದೇಶದ ಲಕ್ನೋ ಜಿಲ್ಲಾ ನ್ಯಾಯಾಲಯ 200 ರೂಪಾಯಿ ದಂಡ ವಿಧಿಸಿದೆ ಎಂದು ವರದಿಯಾಗಿದೆ.
ವಿಚಾರಣೆಗೆ ಹಾಜರಾಗುವುದರಿಂದ ವಿನಾಯಿತಿ ಕೋರಿ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡುವಾಗ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅಲೋಕ್ ವರ್ಮಾ ಅವರು ದಂಡ ವಿಧಿಸಿದ್ದಾರೆ.
ತಮ್ಮ ಭಾಷಣದ ಮೂಲಕ ಮತ್ತು ಭಾಷಣಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಕರಪತ್ರಗಳನ್ನು ಬಿಡುಗಡೆ ಮಾಡುವ ಮೂಲಕ ಸಮಾಜದಲ್ಲಿ ದ್ವೇಷ ಹರಡಿದ್ದಾರೆ ಎಂದು ಆರೋಪಿಸಿ ವಕೀಲ ನೃಪೇಂದ್ರ ಪಾಂಡೆ ಎಂಬವರು ರಾಹುಲ್ ಗಾಂಧಿ ವಿರುದ್ಧ ದಾಖಲಿಸಿದ್ದ ಪ್ರಕರಣ ಸಂಬಂಧ ನ್ಯಾಯಾಲಯ ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಮನ್ಸ್ ಜಾರಿ ಮಾಡಿತ್ತು.
ರಾಹುಲ್ ಗಾಂಧಿ ಬಿಡುಗಡೆ ಮಾಡಿದ್ದ ಕರಪತ್ರಗಳಲ್ಲಿ “ಸಾವರ್ಕರ್ ಬ್ರಿಟಿಷರ ಸೇವಕರಾಗಿದ್ದರು ಮತ್ತು ಅವರು ಬ್ರಿಟಿಷರಿಂದ ಪಿಂಚಣಿ ಪಡೆದಿದ್ದರು” ಎಂದು ಹೇಳಲಾಗಿತ್ತು.
ಜೂನ್ 2023ರಲ್ಲಿ ವಕೀಲ ನೃಪೇಂದ್ರ ಪಾಂಡೆ ಅವರ ದೂರನ್ನು ವಜಾಗೊಳಿಸಲಾಗಿತ್ತು. ಸದರಿ ಆದೇಶವನ್ನು ಪ್ರಶ್ನಿಸಿ ಪಾಂಡೆ ಅವರು ಸೆಷನ್ಸ್ ನ್ಯಾಯಾಲಯದಲ್ಲಿ ಪರಿಷ್ಕರಣಾ ಅರ್ಜಿಯನ್ನು ಸಲ್ಲಿಸಿದ್ದರು. ಕಾನೂನು ಮತ್ತು ವಾಸ್ತವದ ಪ್ರಶ್ನೆಗಳನ್ನು ಒಳಗೊಂಡಿರುವುದರಿಂದ ಪರಿಷ್ಕರಣೆಯನ್ನು ಒಪ್ಪಿಕೊಳ್ಳಲು ಅರ್ಹವಾಗಿದೆ ಎಂದಿದ್ದ ಜನಪ್ರತಿನಿಧಿಗಳ ನ್ಯಾಯಾಲ ಪರಿಷ್ಕರಣೆಗೆ ಅವಕಾಶ ನೀಡಿತ್ತು. ನಂತರ ಪ್ರಕರಣವನ್ನು ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು.
ಸನಾತನ ವಿವಾದ: ಉದಯನಿಧಿ ವಿರುದ್ಧ ಹೊಸ ಎಫ್‌ಐಆರ್ ದಾಖಲಿಸುವಂತಿಲ್ಲ ಎಂದ ಸುಪ್ರೀಂ ಕೋರ್ಟ್


