ಭೂ ಒಪ್ಪಂದದಲ್ಲಿ ವಂಚನೆ ಮತ್ತು ದೂರುದಾರರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಕೀರ್ತಿವರ್ಧನ್ ಸಿಂಗ್, ಅವರ ಆಪ್ತ ಕಾರ್ಯದರ್ಶಿ ರಾಜೇಶ್ ಸಿಂಗ್ ಮತ್ತು ಇತರ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲು ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ನ್ಯಾಯಾಲಯ ಆದೇಶಿಸಿದೆ.
ಸಂಸದರ-ಶಾಸಕರ ನ್ಯಾಯಾಲಯದ ವಿಶೇಷ ನ್ಯಾಯಾಧೀಶೆ (ಸಿವಿಲ್ ನ್ಯಾಯಾಧೀಶೆ, ಹಿರಿಯ ವಿಭಾಗ) ಅಪೇಕ್ಷಾ ಸಿಂಗ್ ಅವರು ಸಚಿವ ಕೀರ್ತಿ ವರ್ಧನ್ ಸಿಂಗ್, ಅವರ ಆಪ್ತ ಕಾರ್ಯದರ್ಶಿ ರಾಜೇಶ್ ಸಿಂಗ್, ಪಿಂಕು ಸಿಂಗ್, ಸಹದೇವ್ ಯಾದವ್ ಮತ್ತು ಕಾಂತಿ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮಂಕಾಪುರ ಪೊಲೀಸ್ ಠಾಣೆಗೆ ಸೂಚಿಸಿದ್ದಾರೆ.
ಮಂಕಾಪುರ ಪ್ರದೇಶದ ಭಿತೌರಾ ನಿವಾಸಿ ಅಜಯ್ ಸಿಂಗ್ ಎಂಬವರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ. ಮಾರಾಟಗಾರರಾದ ಬಿಟ್ಟನ್ ದೇವಿ ಅವರಿಗೆ ಆಮಿಷವೊಡ್ಡಿ ಅಜಯ್ ಸಿಂಗ್ ಅವರ ಪತ್ನಿ ಮನೀಷಾ ಸಿಂಗ್ ಅವರ ಹೆಸರಿನಲ್ಲಿ ನೋಂದಾಯಿಸಲಾದ ಭೂಮಿಯನ್ನು, ಮಿಥಲೇಶ್ ರಸ್ತೋಗಿ ಮತ್ತು ಕಾಂತಿ ಸಿಂಗ್ ಅವರಿಗೆ ಮಾರಾಟ ಮಾಡಿರುವುದಾಗಿ ಬಿಂಬಿಸಲಾಗಿದೆ. ಇದಕ್ಕಾಗಿ ಮೂರು ವರ್ಷಗಳ ಹಳೆಯ ಸ್ಟಾಂಪ್ ಪೇಪರ್ ಬಳಸಲಾಗಿದೆ. ಆಸ್ತಿಯನ್ನು ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂದು ಆರೋಪಿಸಲಾಗಿದೆ.
ದೂರು ನೀಡಿದಾಗ ಪೊಲೀಸ್ ವರಿಷ್ಠಾಧಿಕಾರಿ ತನಿಖೆಗೆ ಆದೇಶಿಸಿದ್ದರು. ಆರೋಪವೂ ದೃಢಪಟ್ಟಿತ್ತು. ಎಸ್‌ಪಿ ನಿರ್ದೇಶನಗಳ ಆಧಾರದ ಮೇಲೆ, 2024ರಲ್ಲಿ ಪೊಲೀಸರು ಮಾರಾಟಗಾರ ಮತ್ತು ಖರೀದಿದಾರರ ವಿರುದ್ಧ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ, ನಂತರ ಈ ಪ್ರಕರಣವನ್ನು ಕೈಬಿಟ್ಟು ಅಂತಿಮ ವರದಿಯನ್ನು ಸಲ್ಲಿಸಿದ್ದರು ಎಂದು ದೂರಲಾಗಿದೆ.
ಅಜಯ್ ಸಿಂಗ್ ಅವರು ಪ್ರಕರಣವನ್ನು ಕೈಬಿಡುವುದನ್ನು ವಿರೋಧಿಸಿದ್ದರು. 2025ರ ಮಾರ್ಚ್‌ನಲ್ಲಿ ನ್ಯಾಯಾಲಯವು ಅಂತಿಮ ವರದಿಯನ್ನು ಬದಿಗಿಟ್ಟು ಹೆಚ್ಚಿನ ತನಿಖೆಗೆ ಆದೇಶಿಸಿತ್ತು. ಈ ಮಧ್ಯೆ ಸಚಿವರ ಆಪ್ತ ರಾಜೇಶ್ ಸಿಂಗ್ ಅವರು 2024ರಲ್ಲಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಅಜಯ್ ಸಿಂಗ್ ಮತ್ತು ಅವರ ಪತ್ನಿ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಲಾಗಿದೆ.
ನ್ಯಾಯಾಲಯ ಹೆಚ್ಚಿನ ತನಿಖೆಗೆ ಆದೇಶಿಸಿದ ನಂತರ, ರಾಜೇಶ್ ಸಿಂಗ್ ರಾಜಕೀಯ ಪ್ರಭಾವ ಬಳಸಿ ದಂಪತಿಗೆ ಕಿರುಕುಳ ನೀಡಿದ್ದಾರೆ. ತನ್ನ ಚಾಲಕ ರಿಂಕು ಸಿಂಗ್ ಮೂಲಕ ದಂಪತಿ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯ ಇತರ ವಿಭಾಗಗಳ ಅಡಿಯಲ್ಲಿ ಮತ್ತೊಂದು ಪ್ರಕರಣವನ್ನು ದಾಖಲಿಸಿದ್ದಾರೆಂದು ಹೇಳಲಾಗಿದೆ. ಹಾಗೆಯೇ ಪ್ರಕರಣ ಕೈಬಿಡಲು ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.
ಉತ್ತರ ಪ್ರದೇಶ: ವಿಶೇಷ ಚೇತನ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ; ಇಬ್ಬರು ಆರೋಪಿಗಳ ಬಂಧನ


