‘ಆಪರೇಷನ್ ಸಿಂಧೂರ’ ಕುರಿತ ಫೇಸ್‌ಬುಕ್ ಪೋಸ್ಟ್‌ಗೆ ಸಂಬಂಧಿಸಿದಂತೆ ಹರಿಯಾಣ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಲಿ ಖಾನ್ ಮಹ್ಮುದಾಬಾದ್ ಅವರನ್ನು ಸೋನೆಪತ್ ನ್ಯಾಯಾಲಯ ಮಂಗಳವಾರ (ಮೇ.20) ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಅಲಿ ಖಾನ್ ಅವರನ್ನು ಭಾನುವಾರ ದೆಹಲಿಯಲ್ಲಿ ಬಂಧಿಸಿ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು.
ಇಂದು ಅವರನ್ನು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಆಝಾದ್ ಸಿಂಗ್ ಅವರ ಮುಂದೆ ಹಾಜರುಪಡಿಸಲಾಗಿತ್ತು. ಪೊಲೀಸರು ಇನ್ನೂ ಏಳು ದಿನಗಳ ಕಾಲ ಅಲಿ ಖಾನ್ ಅವರನ್ನು ಕಸ್ಟಡಿಗೆ ಕೇಳಿದ್ದರು. ಆದರೆ, ನ್ಯಾಯಾಧೀಶರು ಪೊಲೀಸರ ಮನವಿಯನ್ನು ತಿರಸ್ಕರಿಸಿ, ಖಾನ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ವರದಿಯಾಗಿದೆ.
ಅಲಿ ಖಾನ್ ಅವರ ಬಂಧನವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ಈ ವಾರ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುವ ಸಾಧ್ಯತೆಯಿದೆ. ಅಲಿ ಖಾನ್ ಅವರ ಬಂಧನವು ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಪೊಲೀಸರ ಕ್ರಮವನ್ನು ‘ವಾಕ್ ಸ್ವಾತಂತ್ರ್ಯದ ಮೇಲಿನ ದಾಳಿ’ ಎಂದು ಹಲವರು ಬಣ್ಣಿಸಿದ್ದಾರೆ.
ಏಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಗೆ ‘ಆಪರೇಷನ್ ಸಿಂಧೂರ’ ಎಂದು ಹೆಸರಿಡಲಾಗಿತ್ತು.
ಫೇಸ್‌ಬುಕ್ ಪೋಸ್ಟ್‌ನಲ್ಲಿ ಅಲಿ ಖಾನ್ ಅವರು “ಆಪರೇಷನ್ ಸಿಂಧೂರ ಮೂಲಕ ಭಾರತವು ಪಾಕಿಸ್ತಾನಕ್ಕೆ ‘ನೀವು ನಿಮ್ಮ ಭಯೋತ್ಪಾದನೆ ಸಮಸ್ಯೆಯನ್ನು ನಿಭಾಯಿಸದಿದ್ದರೆ ನಾವು ಮಾಡುತ್ತೇವೆ!” ಎಂಬ ಸಂದೇಶವನ್ನು ಕಳುಹಿಸಿದೆ” ಎಂದು ಬರೆದುಕೊಂಡಿದ್ದರು.
ಯುದ್ಧವನ್ನು ಕುರುಡಾಗಿ ಪ್ರತಿಪಾದಿಸುವವರನ್ನು ಅವರು ಟೀಕಿಸಿದ್ದರು
ಆಪರೇಷನ್ ಸಿಂಧೂರ ಕುರಿತ ಮಾಧ್ಯಮಗೋಷ್ಠಿಯ ನೇತೃತ್ವ ವಹಿಸಿದ್ದ ಕರ್ನಲ್ ಸೋಫಿಯಾ ಖುರೇಷಿ ಅವರನ್ನು ಹೊಗಳುವ ಬಲಪಂಥೀಯರು ಗುಂಪು ಹಲ್ಲೆ ಮತ್ತು ಆಸ್ತಿಗಳ ಅನಿಯಂತ್ರಿತ ಧ್ವಂಸಕ್ಕೆ ಬಲಿಯಾದವರ ಪರವಾಗಿ ಮಾತನಾಡುವಂತೆ ಅವರು ಕೇಳಿಕೊಂಡಿದ್ದರು.

ಫೇಸ್‌ಬುಕ್ ಪೋಸ್ಟ್ ಸಂಬಂಧ ಅಲಿ ಖಾನ್ ಅವರಿಗೆ ಹರಿಯಾಣ ರಾಜ್ಯ ಮಹಿಳಾ ಆಯೋಗವು ಸಮನ್ಸ್ ಜಾರಿ ಮಾಡಿತ್ತು.
ಆಯೋಗದ ಅಧ್ಯಕ್ಷೆ ರೇಣು ಭಾಟಿಯಾ ಅವರು, ಅಲಿ ಖಾನ್ ಹೇಳಿಕೆಗಳು ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ಸಿಂಗ್ ಸೇರಿದಂತೆ ಸಮವಸ್ತ್ರದಲ್ಲಿರುವ ಮಹಿಳೆಯರನ್ನು ಅವಹೇಳನ ಮಾಡಿದಂತೆ ಮತ್ತು ಭಾರತೀಯ ಸಶಸ್ತ್ರ ಪಡೆಗಳಲ್ಲಿ ವೃತ್ತಿಪರ ಅಧಿಕಾರಿಗಳಾಗಿರುವ ಅವರ ಪಾತ್ರವನ್ನು ದುರ್ಬಲಗೊಳಿಸಿದಂತೆ ಎಂದು ಆರೋಪಿಸಿದ್ದರು.
ತನ್ನ ಪೋಸ್ಟ್ ವಿವಾದಕ್ಕೀಡಾದಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದ ಅಲಿ ಖಾನ್ ಅವರು, ‘ನನ್ನ ಪೋಸ್ಟ್‌ನಲ್ಲಿ ಸ್ವಲ್ಪವೂ ಸ್ತ್ರೀದ್ವೇಷವಿಲ್ಲ’ ಎಂದು ಸ್ಪಷ್ಟನೆ ಕೊಟ್ಟಿದ್ದರು.
My statement re the summons that I received from the Haryana State Women’s Commission.
The posts that were misunderstood and objected to can be accessed on my Facebook page. pic.twitter.com/U4rZrAXhFx
— Ali Khan Mahmudabad (@Mahmudabad) May 14, 2025
ಆದಾಗ್ಯೂ, ಭಾಟಿಯಾ ಅವರ ಹೇಳಿಕೆಯು ಅಲಿ ಖಾನ್ ವಿರುದ್ಧ ಎಫ್‌ಐಆರ್ ದಾಖಲಾಗಲು ಕಾರಣವಾಯಿತು. ನಂತರ ಅವರ ಬಂಧನವಾಯಿತು.
ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ಪ್ರಧಾನ ಕಾರ್ಯದರ್ಶಿ ಮತ್ತು ಜಥೇರಿ ಗ್ರಾಮದ ಸರಪಂಚ್ ಯೋಗೇಶ್ ಜಥೇರಿ ನೀಡಿದ ದೂರಿನ ಮೇರೆಗೆ ಅಲಿ ಖಾಬ್ ವಿರುದ್ಧ ಎರಡನೇ ಎಫ್‌ಐಆರ್ ದಾಖಲಾಗಿದೆ. ಎರಡನೇ ಪ್ರಕರಣದಲ್ಲಿ ಅಲಿಖಾನ್ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ.


