ಅತ್ಯಾಚಾರ ಆರೋಪ ಹೊತ್ತಿರುವ ನಟ, ರಾಜಕಾರಣಿ ಎಂ. ಮುಖೇಶ್ ಅವರ ವಿರುದ್ಧದ ಪ್ರಕರಣದಲ್ಲಿ ನ್ಯಾಯಾಲಯವು ತೀರ್ಪು ನೀಡುವವರೆಗೆ ಕೇರಳದಲ್ಲಿ ಶಾಸಕರಾಗಿ ಸೇವೆ ಸಲ್ಲಿಸಲಿದ್ದಾರೆ ಎಂದು ಆಡಳಿತರೂಢ ಸಿಪಿಐ(ಎಂ) ಭಾನುವಾರ ತಿಳಿಸಿದೆ ಎಂದು ಪಿಟಿಐ ವರದಿ ಮಾಡಿದೆ. ನ್ಯಾಯಾಲಯ ತೀರ್ಪು
ಅತ್ಯಾಚಾರ ಪ್ರಕರಣದಲ್ಲಿ ಮುಖೇಶ್ ವಿರುದ್ಧ ಆರೋಪಪಟ್ಟಿ ಸಲ್ಲಿಸಿರುವುದನ್ನು ವಿಶೇಷ ತನಿಖಾ ತಂಡ ದೃಢಪಡಿಸಿದ ಕೂಡಲೇ ಪಕ್ಷದ ಈ ಹೇಳಿಕೆ ನೀಡಿದೆ. ಎರ್ನಾಕುಲಂ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಮುಖೇಶ್ ವಿರುದ್ಧ ಡಿಜಿಟಲ್ ಸಾಕ್ಷ್ಯಗಳನ್ನು ಪ್ರಸ್ತುತಪಡಿಸಿರುವುದಾಗಿ ಎಸ್‌ಐಟಿ ತಿಳಿಸಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ನ್ಯಾಯಾಲಯ ತೀರ್ಪು
ಮುಖೇಶ್ ಮತ್ತು ದೂರುದಾರರ ನಡುವಿನ ವಾಟ್ಸಾಪ್ ಚಾಟ್‌ಗಳು, ಇಮೇಲ್‌ಗಳು ಮತ್ತು ಸಾಂದರ್ಭಿಕ ಸಾಕ್ಷ್ಯಗಳು ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಮುಖೇಶ್ ಶಾಸಕರಾಗಿ ಅಧಿಕಾರದಲ್ಲಿ ಮುಂದುವರಿಯುತ್ತಾರೆ ಮತ್ತು ನ್ಯಾಯಾಲಯವು ಪ್ರಕರಣದಲ್ಲಿ ತೀರ್ಪು ನೀಡಿದ ನಂತರವೇ ಅವರ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಪಿಟಿಐಗೆ ತಿಳಿಸಿದ್ದಾರೆ.
“ಆರೋಪಪಟ್ಟಿ ಸಲ್ಲಿಸಲಾಗಿದ್ದು ಮತ್ತು ನ್ಯಾಯಾಲಯವು ಈ ಬಗ್ಗೆ ನಿಲುವು ತೆಗೆದುಕೊಂಡಾಗ ನಾವು ಈ ವಿಷಯವನ್ನು ತಿಳಿಸುತ್ತೇವೆ. ಅಲ್ಲಿವರೆಗೆ ರಾಜೀನಾಮೆ ನೀಡುವ ಅಗತ್ಯವಿಲ್ಲ, ಏಕೆಂದರೆ ಇದು ಪಕ್ಷದ ನಿಲುವು.” ಎಂದು ಅವರು ಹೇಳಿದ್ದಾರೆ.
ಮುಖೇಶ್ ವಿರುದ್ಧ ಮಹಿಳಾ ನಟರೊಬ್ಬರು ನೀಡಿದ ದೂರಿನ ಆಧಾರದಲ್ಲಿ ಕೇರಳದ ಮರಡು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಅವರ ವಿರುದ್ಧ ಅತ್ಯಾಚಾರ, ಮಹಿಳೆಯ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಮಾಡಲಾಗುವ ಪದ, ಹಲ್ಲೆ, ಧ್ವನಿ, ಸನ್ನೆ ಅಥವಾ ವಸ್ತುವಿನಿಂದ ಅವಮಾನಿಸಿದ ಆರೋಪ ಹೊರಿಸಲಾಗಿದೆ.
ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ಸದಸ್ಯರನ್ನಾಗಿ ಮಾಡುವುದಾಗಿ ಭರವಸೆ ನೀಡುವ ನೆಪದಲ್ಲಿ ಮುಖೇಶ್ ಅವರು 2010 ರಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ದೂರುದಾರರು ಹೇಳಿಕೊಂಡಿದ್ದಾರೆ. ಮುಖೇಶ್ ವಿರುದ್ಧ ಎಫ್‌ಐಆರ್ ಅನ್ನು ಆಗಸ್ಟ್‌ನಲ್ಲಿ ದಾಖಲಿಸಲಾಗಿದೆ.
ಅದಾಗ್ಯೂ, ಮುಖೇಸ್ ಅವರು ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದು, ತಾನು ಬ್ಲ್ಯಾಕ್‌ಮೇಲ್‌ಗೆ ಮಣಿಯಲು ನಿರಾಕರಿಸಿದ್ದರಿಂದ ಈ ಆರೋಪಗಳನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ.
ಕಳೆದ ವರ್ಷ, ಕೇರಳ ಸರ್ಕಾರವು ನ್ಯಾಯಮೂರ್ತಿ ಕೆ. ಹೇಮಾ ಸಮಿತಿ ವರದಿ ಸ್ವೀಕರಿಸಿದ ನಂತರ ಮಲಯಾಳಂ ಚಲನಚಿತ್ರೋದ್ಯಮದ ಪ್ರಸಿದ್ಧ ವ್ಯಕ್ತಿಗಳ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳು ಹೊರಬಿದ್ದಿತ್ತು. ಅದರ ನಂತರ ಹಲವಾರು ನಟರುಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿತ್ತು.
ನಟ ದಿಲೀಪ್ ಒಳಗೊಂಡ 2017 ರ ಲೈಂಗಿಕ ದೌರ್ಜನ್ಯ ಪ್ರಕರಣದಿಂದ ಉಂಟಾದ ಆಕ್ರೋಶಕ್ಕೆ ಪ್ರತಿಕ್ರಿಯೆಯಾಗಿ ಕೇರಳ ಸರ್ಕಾರ ಈ ಸಮಿತಿಯನ್ನು ಸ್ಥಾಪಿಸಿತ್ತು. ಹೇಮಾ ವರದಿಯು ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಮಹಿಳೆಯರ ಮೇಲಿನ ಕಿರುಕುಳ ಮತ್ತು ಶೋಷಣೆಯ ನಿದರ್ಶನಗಳನ್ನು ಎತ್ತಿ ತೋರಿಸಿದೆ.
ಆಗಸ್ಟ್ 19 ರಂದು, ವರದಿಯ ಪ್ರಕಟಣೆಗೆ ತಡೆ ನೀಡುವಂತೆ ನಟಿ ರಂಜಿನಿ ಸಲ್ಲಿಸಿದ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದ ನಂತರ ವರದಿಯ ಪರಿಷ್ಕೃತ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು. ಮಲಯಾಳಂ ಸಿನಿಮಾಗಳಲ್ಲಿ ಮಹಿಳೆಯರಿಗೆ ಕೆಲಸ ಬೇಕೆಂದರೆ, “ರಾಜಿ ಮತ್ತು ಹೊಂದಾಣಿಕೆ” ಮಾಡಿಕೊಳ್ಳಲು ಹೇಳಲಾಗುತ್ತದೆ ಎಂದು ವರದಿ ಹೇಳಿದೆ.


