ತನ್ನ ದೀರ್ಘಕಾಲದ ಸೈದ್ಧಾಂತಿಕ ನಿಲುವಿಗಿಂತ ಭಿನ್ನಾಭಿಪ್ರಾಯ ವ್ಯಕ್ತಪಡಿಸಿರುವ ಸಿಪಿಐ(ಎಂ), ಪಕ್ಷದ ದಂತಕಥೆ ಮತ್ತು ಕೇರಳದ ಮಾಜಿ ಮುಖ್ಯಮಂತ್ರಿ ವಿ.ಎಸ್ ಅಚ್ಯುತಾನಂದನ್ ಅವರಿಗೆ ಮರಣೋತ್ತರವಾಗಿ ನೀಡಲಾಗುವ ಪದ್ಮವಿಭೂಷಣ ಪ್ರಶಸ್ತಿಯನ್ನು ಸ್ವೀಕರಿಸಲು ನಿರ್ಧರಿಸಿದೆ.
ಕಮ್ಯುನಿಸ್ಟರು ಆಡಳಿತ ಅಥವಾ ಸರ್ಕಾರ ನೀಡುವ ಪ್ರಶಸ್ತಿಗಳನ್ನು ಸ್ವೀಕರಿಸುವುದಿಲ್ಲ ಅಥವಾ ಬಯಸುವುದಿಲ್ಲ ಎಂದು ವಾದಿಸಿ, ಐತಿಹಾಸಿಕವಾಗಿ ಸರ್ಕಾರದ ಗೌರವಗಳನ್ನು ತಿರಸ್ಕರಿಸುತ್ತಾ ಬಂದಿರುವ ಸಿಪಿಐ(ಎಂ)ನ ಈ ನಿರ್ಧಾರವು ಪಕ್ಷದಲ್ಲಿ ಅಪರೂಪದ ಬದಲಾವಣೆಯನ್ನು ಸೂಚಿಸುತ್ತದೆ.
ಭಾನುವಾರ ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಈ ವರ್ಷದ ಪ್ರತಿಷ್ಠಿತ ನಾಗರಿಕ ಪ್ರಶಸ್ತಿಗಳಿಗೆ ಆಯ್ಕೆಯಾದ ಎಂಟು ಮಲಯಾಳಿಗಳಲ್ಲಿ ವಿ.ಎಸ್. ಅಚ್ಯುತಾನಂದನ್ ಕೂಡ ಸೇರಿದ್ದಾರೆ. ಪ್ರಶಸ್ತಿ ಘೋಷಣೆಯಾದ ಕೂಡಲೇ, ಅಚ್ಯುತಾನಂದನ್ ಅವರ ಕುಟುಂಬವು ಅದನ್ನು ಸ್ವಾಗತಿಸಿದೆ.
“ಈ ಪ್ರಶಸ್ತಿಯು ನಮ್ಮ ತಂದೆಯ ದಶಕಗಳ ಸಾರ್ವಜನಿಕ ಸೇವೆ ಗುರುತಿಸಿ ಕೊಟ್ಟ ದೊಡ್ಡ ಗೌರವವಾಗಿದೆ. ಕೇರಳ ಮತ್ತು ಭಾರತದ ರಾಜಕೀಯಕ್ಕೆ ಅವರು ನೀಡಿದ ಕೊಡುಗೆಗಳಿಗೆ ರಾಷ್ಟ್ರೀಯ ಮನ್ನಣೆಯನ್ನು ಇದು ಪ್ರತಿಬಿಂಬಿಸುತ್ತದೆ” ಎಂದು ಅಚ್ಯುತಾನಂದನ್ ಅವರ ಮಗ ಅರುಣ್ ಕುಮಾರ್ ಹೇಳಿದ್ದಾರೆ.
ಸಿಪಿಐ(ಎಂ) ಇಂತಹ ಪ್ರಶಸ್ತಿಗಳನ್ನು ತಿರಸ್ಕರಿಸುವ ತನ್ನ ದೀರ್ಘಕಾಲದ ಸಂಪ್ರದಾಯವನ್ನು ಮುಂದುವರಿಸುತ್ತದಾ? ಇಲ್ಲ ಪ್ರಶಸ್ತಿಯ ಮರಣೋತ್ತರ ಸ್ವರೂಪವನ್ನು ಗಮನಿಸಿ ತನ್ನ ನಿಲುವನ್ನು ಬದಲಿಸುತ್ತದಾ? ಎಂಬ ಬಗ್ಗೆ ಚರ್ಚೆಗಳು ವಿಎಸ್ ಅವರಿಗೆ ಪ್ರಶಸ್ತಿ ಘೋಷಣೆಯ ನಂತರ ಶುರುವಾಗಿತ್ತು.
ಸೋಮವಾರ (ಜ.26) ಸಿಪಿಐ(ಎಂ) ಕೇರಳ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಮಾಸ್ಟರ್ ಅವರು ಅಚ್ಯುತಾನಂದನ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಘೋಷಣೆಯಾಗಿರುವುದನ್ನು ಅವರ ಕುಟುಂಬ ಸ್ವಾಗತಿಸಿದೆ. ಹಾಗಿರುವಾಗ, ಪಕ್ಷ ಕೂಡ ಸ್ವೀಕರಿಸಲಿದೆ ಎಂದು ದೃಢಪಡಿಸಿದ್ದಾರೆ. ಪಕ್ಷದ ಈ ಹಿಂದಿನ ನಿಲುವು ಇದರಿಂದ ಬದಲಾಗಲಿದೆ. ಹಾಗಾಗಿ, ಇದು ಗಮನಾರ್ಹ ವಿಷಯವಾಗಿದೆ.
ನರಸಿಂಹರಾವ್ ಸರ್ಕಾರದ ಅವಧಿಯಲ್ಲಿ, ಹಿರಿಯ ಕಮ್ಯುನಿಸ್ಟ್ ನಾಯಕ ಇ.ಎಂ.ಎಸ್ ನಂಬೂದಿರಿಪಾಡ್ ಅವರು ಪಕ್ಷದ ನೀತಿಗೆ ಅನುಗುಣವಾಗಿ ಪದ್ಮವಿಭೂಷಣ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ್ದರು.
1996ರಲ್ಲಿ, ಯುನೈಟೆಡ್ ಫ್ರಂಟ್ ಸರ್ಕಾರವು ಆಗಿನ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಜ್ಯೋತಿ ಬಸು ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಲು ಮುಂದಾಗಿತ್ತು. ಬಸು ಮತ್ತು ಸಿಪಿಐ(ಎಂ) ಇಬ್ಬರೂ ಈ ಗೌರವವನ್ನು ಸ್ವೀಕರಿಸುವುದಿಲ್ಲ ಎಂದು ಮುಂಚಿತವಾಗಿ ತಿಳಿಸಿದ್ದರಿಂದ, ಸರ್ಕಾರ ಯೋಜನೆಯನ್ನು ಕೈಬಿಟ್ಟಿತ್ತು.
2022ರಲ್ಲಿ ಪದ್ಮಭೂಷಣವನ್ನು ತಿರಸ್ಕರಿಸಿದ ಹರ್ಕಿಶನ್ ಸಿಂಗ್ ಸುರ್ಜೀತ್ ಮತ್ತು ಇತ್ತೀಚೆಗೆ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಜಿ ಅವರ ಪ್ರಕರಣಗಳಲ್ಲೂ ಇದೇ ರೀತಿಯ ನಿಲುವುಗಳನ್ನು ತೆಗೆದುಕೊಳ್ಳಲಾಗಿತ್ತು.
“ಕಮ್ಯುನಿಸ್ಟರು ಸಮಾಜದಲ್ಲಿ ಬದಲಾವಣೆ ತರುವುದಕ್ಕಾಗಿ ಕೆಲಸ ಮಾಡುತ್ತಾರೆ, ಪ್ರಶಸ್ತಿಗಳಿಗಾಗಿ ಅಲ್ಲ ಎಂಬ ನಂಬಿಕೆ. ಇದಲ್ಲದೆ, ಆಡಳಿತದಿಂದ ನೀಡಲ್ಪಡುವ ಗೌರವಗಳು ಅಥವಾ ಸರ್ಕಾರಿ ಪ್ರಶಸ್ತಿಗಳು ಆಡಳಿತ ನಡೆಸುತ್ತಿರುವ ಸ್ಥಾಪಿತ ವ್ಯವಸ್ಥೆಯ (ರೂಲಿಂಗ್ ಎಸ್ಟಾಬ್ಲಿಷ್‌ಮೆಂಟ್) ಮನ್ನಣೆಯನ್ನು ಸೂಚಿಸುತ್ತವೆ ಎಂಬ ದೃಷ್ಟಿಕೋನವೂ ಇತ್ತು. ಆದ್ದರಿಂದ ಅಂತಹ ಗೌರವಗಳನ್ನು ಸ್ವೀಕರಿಸುವುದು ತಮ್ಮ ತತ್ವಸಿದ್ಧಾಂತಗಳಿಗೆ ವಿರುದ್ಧ ಎಂದು ಪರಿಗಣಿಸಿದ್ದರಿಂದ ಈ ಹಿಂದೆ ಕಮ್ಯುನಿಸ್ಟರು ನಾಯಕರು ಸರ್ಕಾರದ ಪ್ರಶಸ್ತಿಗಳನ್ನು ಸ್ವೀಕರಿಸಿಲ್ಲ” ಎನ್ನಲಾಗಿದೆ.
ಆದಾಗ್ಯೂ, ಕೇರಳ ರಾಜಕೀಯದಲ್ಲಿ ಅಚ್ಯುತಾನಂದನ್ ಅವರ ಅತ್ಯುನ್ನತ ಸ್ಥಾನ ಮತ್ತು ಈ ಗೌರವವು ಮರಣೋತ್ತರವಾಗಿ ನೀಡಲ್ಪಡುವುದನ್ನು ಪರಿಗಣಿಸಿ, ನಾಯಕತ್ವವು ಅವರ ಪ್ರಕರಣವನ್ನು ವಿಭಿನ್ನವಾಗಿ ನೋಡಿದೆ ಎಂದು ತೋರುತ್ತದೆ.
ಸಿಪಿಐ(ಎಂ)ನ ಅತ್ಯಂತ ಗುರುತಿಸಬಹುದಾದ ಜನನಾಯಕರಲ್ಲಿ ಒಬ್ಬರಾದ ವಿ.ಎಸ್. ಅಚ್ಯುತಾನಂದನ್ ಅವರು, ಕೇವಲ ಕಮ್ಯುನಿಸ್ಟ್ ನಾಯಕ ಅಥವಾ ಮಾಜಿ ಸಿಎಂ ಮಾತ್ರ ಅಲ್ಲ. ಅವರು ಎಲ್ಲೆಗಳನ್ನು ಮೀರಿದ ವ್ಯಕ್ತಿಯಾಗಿ ಉಳಿದಿದ್ದಾರೆ.
ಪದ್ಮವಿಭೂಷಣವನ್ನು ಸ್ವೀಕರಿಸುವ ನಿರ್ಧಾರವನ್ನು ಅವರ ನಿರಂತರ ಪರಂಪರೆಯ ಅಂಗೀಕಾರ ಮತ್ತು ರಾಜ್ಯ ಗೌರವಗಳ ಬಗ್ಗೆ ಪಕ್ಷದ ವಿಧಾನವನ್ನು ಮರು ವ್ಯಾಖ್ಯಾನಿಸಬಹುದಾದ ಕ್ಷಣವೆಂದು ನೋಡಲಾಗುತ್ತಿದೆ.
ಪದ್ಮ ವಿಭೂಷಣ ಪ್ರಶಸ್ತಿಯನ್ನು ಸ್ವೀಕರಿಸುವ ನಿರ್ಣಯವನ್ನು ವಿ.ಎಸ್. ಅಚ್ಯುತಾನಂದನ್ ಅವರ ದೀರ್ಘಕಾಲೀನ ಪರಂಪರೆಯನ್ನು ಅಂಗೀಕರಿಸುವ ಮತ್ತು ಗೌರವಿಸುವ ಸಂಕೇತವಾಗಿ ನೋಡಲಾಗುತ್ತಿದೆ. ಇದು ಕಮ್ಯುನಿಸ್ಟ್ ಪಾರ್ಟಿ (ವಿಶೇಷವಾಗಿ ಸಿಪಿಐ(ಎಂ))ಯ ಸರ್ಕಾರಿ ಗೌರವಗಳು ಅಥವಾ ಆಡಳಿತದಿಂದ ನೀಡಲ್ಪಡುವ ಪ್ರಶಸ್ತಿಗಳ ಬಗ್ಗೆ ಇದ್ದ ಸಾಂಪ್ರದಾಯಿಕ ನಿಲುವನ್ನು ಮರುಪರಿಶೀಲಿಸುವ ಅಥವಾ ಮರುವ್ಯಾಖ್ಯಾನಿಸುವ ಒಂದು ಮಹತ್ವದ ಕ್ಷಣವಾಗಿ ಪರಿಗಣಿಸಲಾಗುತ್ತಿದೆ.
ಅಚ್ಯುತಾನಂದನ್ ಅವರು ಜುಲೈ 21, 2025 ರಂದು ತಮ್ಮ 101 ನೇ ವಯಸ್ಸಿನಲ್ಲಿ ನಿಧನರಾದರು.


