ಮುಖ್ಯಮಂತ್ರಿ ಯಡಿಯೂರಪ್ಪನವರ ಭವಿಷ್ಯಕ್ಕೆ ಕುತ್ತು ಇದೆ ಎಂಬುದು ಇತ್ತೀಚಿನ ಬಿಜೆಪಿ ಶಾಸಕರ ನಡಾವಳಿಗಳಿಂದ ವ್ಯಕ್ತವಾಗುತ್ತದೆ. ಯಡಿಯೂರಪ್ಪನವರು ಕೊರೊನಾ ತಡೆಗಟ್ಟುವ ಕೆಲಸದಲ್ಲಿ ತನ್ಮಯತೆಯಿಂದ ಕಾರ್ಯನಿರ್ವಹಿಸಿದ್ದಾರೆ, ಅದರಲ್ಲಿ ಎರಡು ಮಾತಿಲ್ಲ. ಕೊರೊನಾ ತಡೆಗೆ ಬಳಸಲಾದ ಅಪಾರ ಹಣದಲ್ಲಿ ದೊಡ್ಡ ಮೊತ್ತದ ಗೋಲ್‍ಮಾಲ್ ಆಗಿದೆ. ತಿನ್ನುವುದಕ್ಕೆ ಅವಕಾಶ ಇರುವ ಎಲ್ಲ ಧನಪಿಶಾಚಿ ಮಂತ್ರಿಗಳು, ಶಾಸಕರು, ಅಧಿಕಾರಿಗಳು ತಿಂದು ಹಾಕಿದ್ದಾರೆ. ಈ ಹಣ ದುರುಪಯೋಗದ ತನಿಖೆಯನ್ನು ಯಡಿಯೂರಪ್ಪನವರು ತಡ ಮಾಡದೆ ಆರಂಭಿಸಬೇಕು. ಈ ಹಗರಣದಲ್ಲಿ ಯಡಿಯೂರಪ್ಪನವರದು ಯಾವ ಪಾತ್ರವೂ ಇಲ್ಲವೆಂದು ನನಗನಿಸುತ್ತದೆ. ಆದ್ದರಿಂದ ಭ್ರಷ್ಟ ಪ್ರಕರಣಗಳನ್ನು ಮುಚ್ಚಿಡುವ ಅಗತ್ಯವಿಲ್ಲ. ಮುಖ್ಯಮಂತ್ರಿಗಳು ಈ ವಿಷಯದಲ್ಲಿ ಆಲಸ್ಯ ತೋರಬಾರದು.
ಬಿಜೆಪಿ ಶಾಸಕರಲ್ಲಿ ಅತೃಪ್ತರು ಬಹಳ ಮಂದಿ ಇದ್ದಾರೆ. ಅವರು ಏನು ಮಾಡಲು ಹೇಸುವುದಿಲ್ಲ. ಅವರಿಗೆ ಸ್ವಾರ್ಥ ಬಿಟ್ಟು ಬೇರೇನೂ ಗೊತ್ತಿಲ್ಲ. ಸಂಸ್ಥೆ ಅವರಿಗೊಂದು ಆಸರೆಯ ನೆಲೆ ಅಷ್ಟೇ. ಅವರಿಗೆ ಪಾವಿತ್ರ್ಯತೆ ಕಾಪಾಡಬೇಕೆಂಬ ಆಸಕ್ತಿ ಲವಲೇಶವೂ ಇಲ್ಲ. ಈ ವ್ಯಾಧಿ ಬಿಜೆಪಿಯಲ್ಲಿ ಮಾತ್ರ ಬೇರೂರಿದೆ ಎಂದೇನಿಲ್ಲ. ಇದು ಇತರ ಪಕ್ಷಗಳಲ್ಲೂ ಇರುವ ವ್ಯಾಧಿಯೇ. ಇಂತಹವರ ಮಧ್ಯೆ ಸರ್ಕಾರವನ್ನು ಸುಗುಮವಾಗಿ ನಡೆಸುವುದು ಸುಲಭ ಸಾಧ್ಯವಲ್ಲ. ಇದು ಯಡಿಯೂರಪ್ಪನವರಿಗೆ ತಿಳಿಯದ ವಿಷಯವೇನಲ್ಲ.

ಯಡಿಯೂರಪ್ಪನವರ ಮುಖ್ಯಮಂತ್ರಿ ಪದವಿ ಕಸಿಯಲು ಈ ಸ್ವಾರ್ಥ ರಾಜಕಾರಣಿಗಳ ಮಸಲತ್ತು ಎಷ್ಟು ಅಪಾಯಕಾರಿಯೋ, ಅಷ್ಟೇ ಆಘಾತಕಾರಿ ಬೆಳವಣಿಗೆ ಕೂಡ. ಆರ್‍ಎಸ್‍ಎಸ್ ವಲಯದಿಂದ ಮತ್ತು ಮೋದಿ, ಷಾದ್ವಯರಿಂದ ಯಡಿಯೂರಪ್ಪನವರಿಗೆ ತೊಂದರೆಯಾಗುವ ಎಲ್ಲ ಲಕ್ಷಣಗಳೂ ನನಗೆ ಕಾಣುತ್ತಿದೆ. ಆರ್‍ಎಸ್‍ಎಸ್‍ನ ಪರಿವಾರದವರಿಬ್ಬರನ್ನು ಯಡಿಯೂರಪ್ಪನವರು ತಮ್ಮ ಸಹಜ ಉತ್ಸಾಹದಿಂದ ಮುನ್ನಡೆಯಲು ಅವಕಾಶವಿಲ್ಲದಂತೆ ಕಡಿವಾಣ ಹಾಕುವುದರಲ್ಲಿ ಯಶಸ್ಸು ಕಂಡಿದ್ದಾರೆ. ಅವರಲ್ಲಿ ಒಬ್ಬರು ಕರ್ನಾಟಕದಲ್ಲೇ ಇದ್ದುಕೊಂಡು ಎಡೆಬಿಡದೆ ಕಾಟ ಕೊಡುತ್ತಿದ್ದಾರೆ. ಇನ್ನೊಬ್ಬರು ದೆಹಲಿಯಲ್ಲಿ ಮೋದಿ ಷಾರವರೊಂದಿಗೆ ಬೆರೆತು ಕಾಟ ಕೊಡುತ್ತಿದ್ದಾರೆ. ಈ ಎರಡೂ ಕಾಟದಿಂದ ಪಾರಾಗಲು ಯಡಿಯೂರಪ್ಪನವರಿಗೆ ಸಾಧ್ಯವೇ ಇಲ್ಲದ ವಾತಾವರಣ ಸೃಷ್ಠಿಯಾಗಿದೆ. ಅಶೋಕ್, ಅಶ್ವತ್ಥನಾರಾಯಣ, ಜಾರಕಿಹೊಳಿಯಂಥ ಮುಂತಾದದವರು ಕೊಚ್ಚಿಕೊಳ್ಳುವಂತೆ ಯಾವರೀತಿಯಲ್ಲೂ ಯಡಿಯೂರಪ್ಪನವರಿಗೆ ಬೆಂಬಲಿಸುವ ಯೋಗ್ಯತೆ ಇವರಿಗೆ ಇವತ್ತಿನ ಪರಿಸ್ಥಿತಿಯಲ್ಲಿ ಸಾಧ್ಯವೇ ಇಲ್ಲ. ಮೋದಿ ಮತ್ತು ಷಾರವರಿಗೆ ಇವರಿಂದ ಆಗಬೇಕಾದದ್ದು ಏನೂ ಇಲ್ಲ. ಇವರೆಲ್ಲ ಅಧಿಕಾರದಾಹ ಉಳ್ಳವರೇ ಹೊರತು ಆಡಳಿತ ಚತುರರೇನಲ್ಲ. ಈ ವಿಚಾರ ಅನುಭವಿ ರಾಜಕಾರಣಿ ಯಡಿಯೂರಪ್ಪನವರಿಗೆ ತಿಳಿಯದೇನಿಲ್ಲ.
ಈ ಸಂದರ್ಭದಲ್ಲಿ ಮಹತ್ವಾಕಾಂಕ್ಷಿಗಳಾದ ಮೋದಿ, ಷಾ ಇವರ ವಿಚಾರ ಸರಣಿ ಏನಿರಬಹುದು? ಕರ್ನಾಟಕದ ಮುಖ್ಯಮಂತ್ರಿ ಸ್ಥಾನದಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿಯಂತಹವರನ್ನು ಕೂಡಿಸುವ ದುರಾಲೋಚನೆ ಇದೆ. ಆ ಛದ್ಮವೇಷದ ಕಾವಿಯ ವಸ್ತ್ರ ಧಾರಿಯಂತಹವರನ್ನು ತಂದು ಕೂಡಿಸುವ ತವಕ ಇದೆ. ಅಷ್ಟೇ ರುತ್‍ಲೆಸ್ ಆದ ವ್ಯಕ್ತಿಯೊಬ್ಬನ ತಲಾಷಿನಲ್ಲಿದ್ದಾರೆ ಅವರು. ಶಾಸಕರಲ್ಲಿ ಈ ಅರ್ಹತೆ ಉಳ್ಳವರು ಯಾರು ಇಲ್ಲ. ಆರ್‍ಎಸ್‍ಎಸ್‍ನಲ್ಲಾದರೂ, ಕರ್ನಾಟಕದಲ್ಲಿ ಇಂತಹ ಧೂರ್ತರು ಇದ್ದಾರೆಯೇ ಎಂದು ತಲಾಷ್ ಮಾಡುತ್ತಿದ್ದಾರೆ. ಪ್ರಹ್ಲಾದ್ ಜೋಷಿ ಮುಖ್ಯಮಂತ್ರಿ ಪದವಿಯ ಆಕಾಂಕ್ಷಿಯೇನೋ ಹೌದು. ಆದರೆ ಉತ್ತರಪ್ರದೇಶದ ಕಾವಿ ಮುಖ್ಯಮಂತ್ರಿಯ Ruthlessnessನ ಸಾವಿರದಲ್ಲಿ ಒಂದು ಅಂಶಕೂಡ ಪ್ರಹ್ಲಾದ್ ಜೋಶಿಯಲಿಲ್ಲ ಎಂಬುದು ಮೋದಿ-ಷಾಗಳಿಗೆ ಗೊತ್ತಿದೆ. ಉತ್ತರ ಪ್ರದೇಶದ ಛದ್ಮವೇಷಾದಾರಿಯಂತಹ ಕಾಠಿಣ್ಯ ಮನುಷ್ಯ ಮೋದಿ ಷಾ ಅವರಿಗೆ ಸಿಗುವವರೆಗೂ ಯಡಿಯೂರಪ್ಪನವರಿಗೆ ಅಧಿಕಾರದ ಜೀವದಾನ ಮುಂದುವರೆಯುತ್ತದೆ ಎಂಬುದರಲ್ಲಿ ಸಂದೇಹವೇ ಇಲ್ಲ.
- ಎಚ್.ಎಸ್ ದೊರೆಸ್ವಾಮಿ.


