ಮುಂಬೈನ ದಾದ್ರಾ ಮತ್ತು ನಗರ ಹವೇಲಿಯ ಸಂಸದ ಮೋಹನ್ ಡೆಲ್ಕರ್ ಅವರ ಮರಣದ ಎರಡು ವಾರಗಳ ನಂತರ, ಮೆರಿನ್ ಡ್ರೈವ್ ಪೊಲೀಸರು ಮಂಗಳವಾರ ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಮತ್ತು ಇತರ ಆರು ಜನರ ವಿರುದ್ಧ ಆತ್ಮಹತ್ಯೆ ಪ್ರಚೋದನೆ ಪ್ರಕರಣವನ್ನು ದಾಖಲಿಸಿದ್ದಾರೆ.
ಫೆಬ್ರವರಿ 22 ರಂದು ಮೆರಿನ್ ಡ್ರೈವ್‌ನ ಹೋಟೆಲ್ ಸೀ ಗ್ರೀನ್ ಸೌತ್ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಡೆಲ್ಕರ್ ಪತ್ತೆಯಾಗಿದ್ದರು.
ಅವರು 15 ಪುಟಗಳಷ್ಟು ಡೆತ್ ನೋಟ್ ಅನ್ನು ಬರೆದಿದ್ದರು, ಇದರಲ್ಲಿ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಹೆಸರನ್ನು ಉಲ್ಲೇಖಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಇದರ ಜೊತೆಗೆ ಪತ್ರದಲ್ಲಿ ಕಲೆಕ್ಟರ್ ಮತ್ತು ಪೊಲೀಸ್ ಅಧೀಕ್ಷಕರನ್ನು ಸಹ ಹೆಸರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಪಕ್ಷೇತರ ಸಂಸದನ ಅಸಹಜ ಸಾವು: ಡೆತ್‌ನೋಟ್‌ನಲ್ಲಿ ಬಿಜೆಪಿ ನಾಯಕನ ಹೆಸರಿದೆಯೇ?
ಡೆಲ್ಕರ್ ಅವರ ಮಗ ಅಭಿನವ್ ಅವರು ಪೊಲೀಸರಿಗೆ ಹೇಳಿಕೆ ನೀಡಿದ ನಂತರ ಈ ಪ್ರಕರಣ ದಾಖಲಿಸಲಾಗಿದೆ.
“ಮುಂಬೈಗೆ ಬಂದು ಮಹಾರಾಷ್ಟ್ರದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವರನ್ನು ಭೇಟಿ ಮಾಡಿದ್ದು, ನನ್ನ ಕುಟುಂಬಕ್ಕೆ ನ್ಯಾಯ ಒದಗಿಸಲು ಅವರು ಸಹಾಯ ಮಾಡುತ್ತಾರೆ ಎಂದು ಅವರು ನನಗೆ ಭರವಸೆ ನೀಡಿದ್ದಾರೆ” ಎಂದು ಅಭಿನವ್ ಹೇಳಿಕೆಯನ್ನು ಉಲ್ಲೇಖಿಸಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಇದಾಗಿ ಮಂಗಳವಾರ ಸಂಜೆ 5 ಗಂಟೆಗೆ ಮೆರಿನ್ ಡ್ರೈವ್ ಪೊಲೀಸ್ ಠಾಣೆಗೆ ಹೋಗಿ, ಅಲ್ಲಿ ಅವರ ಹೇಳಿಕೆಯನ್ನು ರಾತ್ರಿ 10 ರವರೆಗೆ ಸಹಾಯಕ ಪೊಲೀಸ್ ಆಯುಕ್ತ ಪಾಂಡುರಂಗ್ ಶಿಂಧೆ ದಾಖಲಿಸಿದ್ದಾರೆ ಮತ್ತು ಅಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಸಂಸದನ ಆತ್ಮಹತ್ಯೆಯ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸುವುದಾಗಿ ಮಹಾರಾಷ್ಟ್ರ ಸರ್ಕಾರ ರಾಜ್ಯ ವಿಧಾನಸಭೆಯಲ್ಲಿ ಘೋಷಿಸಿದ ಕೆಲವೇ ಗಂಟೆಗಳ ನಂತರ ಎಫ್‌ಐಆರ್ ದಾಖಲಾಗಿದೆ.
ಇದನ್ನೂ ಓದಿ: ಒಬ್ಬನೇ ಒಬ್ಬ ಪ್ರೇಕ್ಷಕನಿಗೆ ಐವರು ಭಾಷಣಕಾರರು!: ಬಿಜೆಪಿ ಕಾಲೆಳೆದ ಸಂಸದ ಶಶಿ ತರೂರ್


