ಒಂದೂವರೆ ತಿಂಗಳಿನಿಂದ ಬಂಧನದಲ್ಲಿರುವ ದಲಿತ, ಕಾರ್ಮಿಕ ಹೋರಾಟಗಾರ್ತಿ ನೊದೀಪ್ ಕೌರ್ ಅವರಿಗೆ ಎರಡು ಪ್ರಕರಣಗಳಲ್ಲಿ ಜಾಮೀನು ಸಿಕ್ಕಿದ್ದು, ಮೂರನೇ ಎಫ್‌ಐಆರ್ ವಿರುದ್ಧ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು ಶೀಘ್ರವೇ ವಿಚಾರಣೆಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.
23 ವರ್ಷದ ಪಂಜಾಬ್ ಮೂಲದ ದಲಿತ ಕಾರ್ಮಿಕ ಹೋರಾಟಗಾರ್ತಿ ನೊದೀಪ್ ಕೌರ್ ಅವರನ್ನು ರೈತರ ಪರವಾಗಿ ದೆಹಲಿಯ ಸಿಂಘು ಗಡಿಯಲ್ಲಿ ಹೋರಾಡುತ್ತಿದ್ದಾಗ ಹರಿಯಾಣ ಪೊಲೀಸರು ಬಂಧಿಸಿದ್ದರು. ಅವರಿಗೆ ಫೆಬ್ರವರಿ 2 ರಂದು ಹರಿಯಾಣದ ಸೋನೆಪತ್‌ನ ಸೆಷನ್ಸ್ ಕೋರ್ಟ್ ಜಾಮೀನು ನಿರಾಕರಿಸಿತ್ತು. ಪ್ರಸ್ತುತ ಹರಿಯಾಣದ ಕರ್ನಾಲ್ ಜೈಲಿನಲ್ಲಿರುವ ಅವರನ್ನು ಹಿಂಸಿಸಲಾಗುತ್ತಿದೆ ಮತ್ತು ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು.
ಇಂದು ನೊದೀಪ್ ಕೌರ್ ವಿರುದ್ಧದ ಎಫ್ಐಆರ್ ನಂ 26 ಕ್ಕೆ ಜಾಮೀನು ನೀಡಲಾಗಿದೆ ಎಂದು ನೊದೀಪ್ ಕೌರ್ ಅವರ ವಕೀಲ ಜತಿಂದರ್ ಕುಮಾರ್ ಹೇಳಿದ್ದಾರೆ. ಆಕೆಗೆ ಈಗಾಗಲೇ ಎಫ್ಐಆರ್ ನಂ 649 ರಲ್ಲಿ ಜಾಮೀನು ಸಿಕ್ಕಿದೆ. ಆದರೆ ಎಫ್‌ಐಆರ್ ನಂ25 ಕ್ಕೆ ಜಾಮೀನು ಅರ್ಜಿಯನ್ನು ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ ಎಂದು ಆಕೆಯ ಸಹೋದರಿ ರಾಜ್‌ವಿರ್ ಕೌರ್ ತಿಳಿಸಿದ್ದಾರೆ.
After the bail in FIR No. 649/28-12-2020 on 11 February, today, bail in FIR No. 26/12-01-2021 has been granted to Nodeep by Session court. Application for the bail in FIR No. 25/12-01-2021 has been initiated in High Court by our Advocates.#ReleaseNodeepKaur #ReleaseShivKumar
— Rajveer Kaur (@Rajveer88724) February 15, 2021
ನೊದೀಪ್ ಕೌರ್ ಬಂಧನದ ನಂತರ ಕೇವಲ ಎರಡು ಎಫ್‌ಐಆರ್ ಹಾಕಲಾಗಿದೆ ಎಂದು ಆಕೆಯ ವಕೀಲರಿಗೆ ತಿಳಿದಿತ್ತು. ಹಾಗಾಗಿ ಆ ಎರಡು ಎಫ್‌ಐಆರ್‌ಗಳ ವಿರುದ್ಧ ಜಾಮೀನಿಗೆ ಅರ್ಜಿ ಹಾಕಿದ್ದರು. ಆದರೆ ಆನಂತರ ಮತ್ತೊಂದು ಎಫ್‌ಐಆರ್ ದಾಖಲಾಗಿದೆ ಎಂದು ತಿಳಿದುಬಂದು ಅದಕ್ಕೂ ಜಾಮೀನಿಗೆ ಅರ್ಜಿ ಸಲ್ಲಿಸಲಾಗಿದೆ.
ನೊದೀಪ್ ಕೌರ್ ಬಿಡುಗಡೆಗೊಳಿಸುವಂತೆ ಅಮೆರಿಕದ ವಕೀಲೆ ಮೀನಾ ಹ್ಯಾರಿಸ್, ನಟ ದಿಲ್ಜಿತ್ ದೋಸಾಂಜ್, ನಟಿ ಸ್ವರ ಭಾಸ್ಕರ್, ರಮ್ಯಾ ದಿವ್ಯಸ್ಪಂದನ ಸೇರಿದಂತೆ ನೂರಾರು ಜನ ದನಿಯೆತ್ತಿದ್ದರು.
ಪಂಜಾಬ್ ಮೂಲದ ಮಜ್ದೂರ್ ಅಧಿಕಾರ ಸಂಘಟನ್ (ಎಂಎಎಸ್) ಕಾರ್ಮಿಕ ಸಂಘದ ಕಾರ್ಯಕರ್ತೆಯಾಗಿರುವ ದಲಿತ ಸಮುದಾಯದ ನೊದೀಪ್ ಕೌರ್ ಡಿಸೆಂಬರ್ 2020 ರಿಂದ ಸಿಂಘು ಗಡಿಯಲ್ಲಿ ರೈತರ ಆಂದೋಲನದಲ್ಲಿ ಭಾಗವಹಿಸುತ್ತಿದ್ದರು.
ರೈತ ಪ್ರತಿಭಟನೆಯನ್ನು ಬೆಂಬಲಿಸಿ ಕುಂಡ್ಲಿ ಕೈಗಾರಿಕಾ ಪ್ರದೇಶದ ಕಾರ್ಖಾನೆಯ ಕಾರ್ಮಿಕರ ಗುಂಪಿನೊಂದಿಗೆ ನೊದೀಪ್ ಕೌರ್ ಸಿಂಘು ಗಡಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರು. ಅವರು, ಕಾರ್ಮಿಕರು ಸಹ ರೈತರಂತೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಕಾರ್ಮಿಕರು ಕಾರ್ಖಾನೆಯ ಮಾಲಿಕರಿಂದ ಶೋಷಣೆಗೆ ಒಳಗಾಗಿದ್ದಾರೆ, ಅವರ ವೇತನವನ್ನು ತಡೆಹಿಡಿಯಲಾಗಿದೆ ಮತ್ತು ಅವರನ್ನು ಉದ್ಯೋಗಗಳಿಂದ ಕಿತ್ತು ಎಸೆಯಲಾಗಿದೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ; ಸಿಂಘು ಗಡಿ: ದಲಿತ ಕಾರ್ಮಿಕ ಹೋರಾಟಗಾರ್ತಿ ನೊದೀಪ್ ಕೌರ್ ಬಂಧನ ಯಾಕಾಗಿದೆ?


