(ಭಾರತದ Dalit Human Rights Defenders Network ಎಂಬ ಸಂಸ್ಥೆಯು ‘No lockdown on Caste Atrocities’ ಎಂಬ ಪುಸ್ತಕದಲ್ಲಿ ನೈಜ ಘಟನೆಗಳನ್ನು ವರದಿ ಮಾಡಿದೆ. ಇದರಲ್ಲಿ ಭಾರತದ ಏಳು ರಾಜ್ಯಗಳಲ್ಲಿ ’ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ದಲಿತರ ಮೇಲೆ ನಡೆದ 60 ದೌರ್ಜನ್ಯಗಳನ್ನು ಪಟ್ಟಿ ಮಾಡಿದೆ. ಒಂದೊಂದೂ ಭೀಕರವಾಗಿದ್ದು, ಹಿಂದೂ ಮೇಲ್ಜಾತಿಗಳು ದಲಿತರ ಮೇಲೆ ನಡೆಸಿರುವ ಕ್ರೂರ ಕೃತ್ಯಗಳನ್ನು ಬಯಲುಗೊಳಿಸುತ್ತದೆ. ಆ ದಲಿತರ ಮೇಲಿನ ದೌರ್ಜನ್ಯಗಳ 10 ಘಟನೆಯಲ್ಲಿ ಇದು ಮೂರನೆಯದ್ದಾಗಿದೆ. ಇದನ್ನು ವರದಿ ಮಾಡುವ ಉದ್ದೇಶ ಖಂಡಿತವಾಗಿಯೂ ಹಿಂದೂ ಮೇಲ್ಜಾತಿಗಳ ಮನ ಪರಿವರ್ತನೆಯಲ್ಲ. ಬದಲಾಗಿ ’ಹಿಂದೂ ನಾವೆಲ್ಲ ಒಂದೂ’ ಎನ್ನುತ್ತಿರುವ ದಲಿತರ ಅಂಧಕಾರವನ್ನು ಕಳಚುವುದಾಗಿದೆ.)
ರಾಜಸ್ತಾನದ ಬಟೋಡ ಎಂಬ ಹಳ್ಳಿಯ ದಲಿತೆ ಪಾರ್ವತಿಗೆ (ಹೆಸರು ಬದಲಿಸಿದೆ) ಒಬ್ಬನೇ ಮಗ. ಅವನನ್ನು ಓದಿಸಿ ಉತ್ತಮ ಹಂತಕ್ಕೆ ಕಳಿಸಬೇಕೆಂಬುದೇ ಆಕೆಯ ಏಕೈಕ ಆಸೆ. ಆ ಕಾರಣಕ್ಕಾಗಿಯೇ ಸುಮಾರು 100 ಕಿಮೀ ದೂರದಲ್ಲಿರುವ ಪಟ್ಟಣ ’ದೌಸಾ’ಗೆ ಕೆಲಸಕ್ಕೆಂದು ದಿನವೂ ಪ್ರಯಾಣಿಸಬೇಕಿತ್ತು. 17 ವರ್ಷದ ಮಗ ರಘು ಇದ್ದಕ್ಕಿದ್ದಂತೆ ಕುಡಿತದ ಚಟವನ್ನು ಮೈಗೂಡಿಸಿಕೊಂಡಾಗ ಇನ್ನಿಲ್ಲದಂತೆ ನೊಂದುಕೊಂಡಿದ್ದ ಪಾರ್ವತಿ ತನ್ನ ಕನಸನ್ನು ಅರ್ಧಕ್ಕೆ ಕೈಬಿಡದೇ ಅವನ ಮನವೊಲಿಸಲು ಪ್ರಾರಂಭಿಸಿದ್ದಳು. ಆದರೇನು ಮಾಡುವುದು; ರಘು ಗಲಭೆಯೊಂದರಲ್ಲಿ ಜೈಲಿಗೂ ಹೋಗಿಬಿಟ್ಟನು. ಆಗಲೂ ಆತನ ಮನಸ್ಸನ್ನು ಹೇಗಾದರೂ ಮಾಡಿ ಬದಲಾಯಿಸಬೇಕೆಂಬ ಹಠಕ್ಕೆ ಬಿದ್ದು ದಿನವೂ ಜೈಲಿಗೆ ಹೋಗುವುದನ್ನೂ ರೂಢಿಸಿಕೊಂಡಿದ್ದಳು. ಇದೇ ಸಮಯದಲ್ಲಿ ಕೋವಿಡ್-19ನಿಂದಾಗಿ ದೇಶವೇ ಲಾಕ್‌ಡೌನ್ ಆಯಿತು. ಆದರೆ ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಏಪ್ರಿಲ್ 21, 2020ರಂದು ಮಗನನ್ನು ನೋಡಲು ಬರಿಗಾಲಲ್ಲಿ ನಡೆದು ದೌಸಾಗೆ ಹೋಗಲು ಅಣಿಯಾದಳು. ಮಧ್ಯ ಅವರಿವರ ಸಹಾಯ ಪಡೆದು ಸಂಜೆಯಷ್ಟೊತ್ತಿಗೆ ಜೈಲಿನ ಬಳಿ ತಲುಪಿದಳಾದರೂ ಅವಳಿಗೆ ಮಗನನ್ನು ಭೇಟಿಯಾಗಲು ಬೆಳಗ್ಗೆಯವರೆಗೆ ಕಾಯಬೇಕಾಯಿತು. ಅಲ್ಲೇ ಜೈಲಿನ ಆವರಣದಲ್ಲಿಯೇ ಮಲಗಿಕೊಂಡು ಬೆಳಗ್ಗೆ ಎದ್ದು ಮಗನನ್ನು ಭೇಟಿಯಾಗಿ ಮತ್ತೆ ಅದೇ ರೀತಿಯಲ್ಲಿ ತನ್ನ ಹಳ್ಳಿ ಬಟೋಡಾಗೆ ಮರಳಿದಾಗ ಹಳ್ಳಿಯವರೆಲ್ಲರೂ ಆಕೆಯನ್ನು ಕ್ವಾರಂಟೈನ್‌ನಲ್ಲಿರಲು ಸೂಚಿಸಿದರು. ಅದೇ ಹಳ್ಳಿಯ ಸರ್ಕಾರಿ ಶಾಲೆಯನ್ನು ಕ್ವಾರಂಟೈನ್ ಕೇಂದ್ರವನ್ನಾಗಿಸಲಾಗಿತ್ತು. ಈ ತೀರ್ಮಾನ ನ್ಯಾಯಯುತವಾದುದೇ ಎಂದರಿತ ಪಾರ್ವತಿ ಕ್ವಾರಂಟೈನ್ ಕೇಂದ್ರಕ್ಕೆ ತೆರಳಿದಳು.
ಇದನ್ನೂ ಓದಿ: ಮಾತು ಮರೆತ ಭಾರತ-28; ಲಾಕ್‌ಡೌನ್ ಫೈಲ್ಸ್ : ದಲಿತರ ಪಾಲಿನ ಕಗ್ಗತ್ತಲ ದೀಪಾವಳಿ
200 ಕಿಮೀ ದೂರದ ಪ್ರಯಾಣ ಮಾಡಿದ್ದ ಪಾರ್ವತಿ ಬಳಲಿದ್ದಳು. ಸರಿಯಾದ ಆಹಾರ ನೀರಿಲ್ಲದೆ ನಿತ್ರಾಣಳಾಗಿದ್ದಳು. ಆ ಕ್ವಾರಂಟೈನ್ ಕೇಂದ್ರದಲ್ಲಿ ಆಕೆಯೊಬ್ಬಳೇ ತಂಗಬೇಕಾಯಿತು. ಪೊಲೀಸರು ಮತ್ತು ಶುಶ್ರೂಷಕ ಸಿಬ್ಬಂದಿ ಮುಂಜಾಗ್ರತೆಯ ಕಾರಣಕ್ಕಾಗಿ ಆಕೆಯೊಂದಿಗೆ ಯಾರನ್ನೂ ತಂಗಲು ಬಿಡಲಿಲ್ಲ. ಆದರೂ ಸುದೀರ್ಘ ಪ್ರಯಾಣದ ಕಾರಣ ಒಂದಷ್ಟು ಆಹಾರ ಹೊಟ್ಟೆಗೆ ಬಿದ್ದೊಡನೆ ಕಣ್ಣು ಎಳೆಯಲು ಆರಂಭಿಸಿದ್ದವು. ಗಾಢ ನಿದ್ರೆಗೆ ಜಾರಿದಳು.
ಇದೇ ಸಮಯದಲ್ಲಿ ಪಾರ್ವತಿ ಕೊಠಡಿಗೆ ಬಂದ ರಿಷಿಕೇಶ್ ಮೀನ, ಲಖನ್ ರಾಮ್ ಮತ್ತು ಕಮಲ್ ಖರ್ವಾಲ್ ಆಕೆಯನ್ನು ಗಟ್ಟಿಯಾಗಿ ಹಿಡಿದುಕೊಂಡರು. ನಿದ್ದೆಯ ಮಂಪರಿನಲ್ಲಿದ್ದ ಪಾರ್ವತಿಗೆ ಅದೇನಾಗುತ್ತಿದೆ ಎಂಬುದು ತಿಳಿಯುವಷ್ಟರಲ್ಲಿ ಆಕೆಯ ಕಾಲುಗಳು ಹಗ್ಗದಿಂದ ಬಿಗಿಯಾಗಿ ಬಂಧಿಯಾಗಿದ್ದವು. ಹಿಂದೂ ಮೇಲ್ಜಾತಿಯ ಆ ಮೂರು ಪ್ರಾಣಿಗಳು ಆಕೆಯ ಮೇಲೆ ಒಬ್ಬರಾದ ಮೇಲೊಬ್ಬರಂತೆ ಅತ್ಯಾಚಾರ ಮಾಡಿದರು. ಪಾರ್ವತಿಯನ್ನು ಕಾಪಾಡಲು ಅಲ್ಲಿ ಒಂದು ನರಪಿಳ್ಳೆಯೂ ಸಹ ಇರಲಿಲ್ಲ. ಪೊಲೀಸ್ ಮತ್ತು ದಾದಿಯರು ಗೌಗತ್ತಲಾಗುತ್ತಿದ್ದಂತೆ ಮನೆಗೆ ತೆರಳಿದ್ದರು. ಹಳ್ಳಿಯ ವ್ಯಕ್ತಿಯೊಬ್ಬನಿಗೆ ಸೆಕ್ಯುರಿಟಿ ಕೆಲಸ ಒಪ್ಪಿಸಿ ಮನೆಯಲ್ಲಿ ಹಾಯಾಗಿ ಮಲಗಲು ತೆರಳಿದ್ದರು.
ಬೆಳಗ್ಗೆ ಈ ವಿಷಯವನ್ನು ಪಾರ್ವತಿ ಪೊಲೀಸರಿಗೆ ತಿಳಿಸಿದಾಗ ಆಕೆಯನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಪರೀಕ್ಷೆಯಿಂದಾಗಿ ಪಾರ್ವತಿಗೆ ಕೋವಿಡ್ ಪಾಸಿಟಿವ್ ಬಂದಿತಲ್ಲದೆ ಅತ್ಯಾಚಾರವಾಗಿರುವುದೂ ಖಾತ್ರಿಯಾಯಿತು. ಕೋವಿಡ್ ಫೋಬಿಯಾವನ್ನು ಮಾಧ್ಯಮಗಳು ಕ್ಷಣಕ್ಷಣಕ್ಕೂ ಬಿತ್ತರಿಸುತ್ತಿದ್ದ ಸಮಯವದು; ಪಾರ್ವತಿ ಕೋವಿಡ್‌ನಿಂದ ಬದುಕುಳಿಯುವುದು ಹೇಗೆ ಎಂದು ಚಿಂತಿಸುತ್ತಿದ್ದಳೋ ಅಥವಾ ತನ್ನ ಮೇಲೆ ನಡೆದಿರುವ ಅತ್ಯಾಚಾರದ ಗಾಯಕ್ಕೆ ಮಾನಸಿಕವಾಗಿ ಮುಲಾಮು ಹಚ್ಚಿಕೊಳ್ಳುತ್ತಿದ್ದಳೋ ಕಾಣೆ.
ಇದನ್ನೂ ಓದಿ: ಮಾತು ಮರೆತ ಭಾರತ-27; ಲಾಕ್‌ಡೌನ್ ಫೈಲ್ಸ್: ನೀರು ಕೇಳಿದ ದಲಿತ ಯುವಕನ ಉಸಿರು ನಿಲ್ಲಿಸಿದರು
ಈ ಪ್ರಕರಣದಿಂದ ಅರಿಯಬೇಕಾದ ಮತ್ತೊಂದು ವಿಚಾರವೇನೆಂದರೆ ಪಾರ್ವತಿ ಎಂಬ ದಲಿತ ಮಹಿಳೆಯ ಜಾಗದಲ್ಲಿ ಹಿಂದೂ ಮೇಲ್ಜಾತಿ ಮಹಿಳೆ ಇದ್ದಿದ್ದರೆ ಅಲ್ಲಿ ಹಳ್ಳಿಗರು ಆಕೆಯನ್ನು ಒಬ್ಬಂಟಿಯಾಗಿ ಇರಲು ಬಿಡುತ್ತಿದ್ದರೆ? ಪೊಲೀಸರು ಕಿಂಚಿತ್ ಮುಂಜಾಗ್ರತೆಯನ್ನೂ ವಹಿಸದೆ ನಿದ್ದೆ ಮಾಡಲು ಮನೆಗೆ ತೆರಳುತ್ತಿದ್ದರೆ? ದಾದಿಯರು ತಮ್ಮ ಕರ್ತವ್ಯವನ್ನು ಮರೆತು ಸ್ವಲ್ಪವೂ ಆಲೋಚಿಸದೇ ಮಹಿಳೆಯೊಬ್ಬಳನ್ನು ಬಿಟ್ಟು ಹೊರಡುತ್ತಿದ್ದರೇ? ಆ ಮೂವರು ಪಾಪಿಗಳು ಅಷ್ಟು ಧೈರ್ಯದಿಂದ ಕೊಠಡಿಗೆ ನುಗ್ಗಿ ಅತ್ಯಾಚಾರಗೈಯ್ಯುತ್ತಿದ್ದರೆ?
ಈ ಮೇಲಿನ ಪ್ರಶ್ನೆಗೆ ಉತ್ತರ ಹುಡುಕುವುದು ಅಷ್ಟು ಕಷ್ಟವಲ್ಲ. ಆದರೆ ಅದಕ್ಕೆ ಪರಿಹಾರ ಹುಡುಕುವುದು ಮಾತ್ರ ಇಂದಿಗೂ ಸಾಧ್ಯವಾಗಿಲ್ಲ. ದಲಿತರೆಂದರೆ ಈ ಸಮಾಜಕ್ಕೆ ಏನು ಬೇಕಾದರೂ ಮಾಡಿ ಬಿಸಾಕಬಹುದಾದ ವಸ್ತುಗಳಿದ್ದಂತೆ.
ಈಗ ಆ ಮೂವರು ಪಾಪಿಗಳು ಜೈಲಿನಲ್ಲಿದ್ದಾರೆ. ಪೊಲೀಸ್ ಒಬ್ಬ ಅಮಾನತುಗೊಂಡಿದ್ದಾನೆ. ಪಾರ್ವತಿಯೂ ಸಹ ಗುಣಮುಖಳಾಗಿ ತನ್ನ ಮಗನ ಭವಿಷ್ಯದ ಕನಸನ್ನು ಕಾಣುತ್ತಿದ್ದಾಳೆ. ಇದರ ನಡುವೆ ಆ ಮೂವರಿಗೆ ಶಿಕ್ಷೆ ಆಗುವುದೇ? ದಲಿತರ ಮೇಲಿನ ದೌರ್ಜನ್ಯಕ್ಕೆ ನ್ಯಾಯಾಲಯದ ನ್ಯಾಯದ ಇತಿಹಾಸ ಇಲ್ಲವೆಂದೇ ಉತ್ತರವನ್ನು ಪದೇಪದೇ ಹೇಳಿದೆ.


