ನಬಾಟಿಯೆಹ್, ಲೆಬನಾನ್: ಶುಕ್ರವಾರ ಇಸ್ರೇಲ್‌ನ ವಾಯುಪಡೆಯು ಲೆಬನಾನ್‌ನ ದಕ್ಷಿಣ ಭಾಗದಲ್ಲಿರುವ ಪರ್ವತಗಳ ಮೇಲೆ ಭಾರಿ ವೈಮಾನಿಕ ದಾಳಿಗಳನ್ನು ನಡೆಸಿದೆ.
ಈ ದಾಳಿಗಳು ಹಿಜ್ಬುಲ್ಲಾ ಗುಂಪಿನ ಭೂಗತ ನೆಲೆಗಳನ್ನು ಗುರಿಯಾಗಿಸಿಕೊಂಡಿದ್ದವು ಎಂದು ಇಸ್ರೇಲಿ ಸೇನೆ ಹೇಳಿದೆ.
ಈ ದಾಳಿಯ ನಂತರ, ನಬಾಟಿಯೆಹ್ ನಗರದ ಸಮೀಪದ ಅಪಾರ್ಟ್‌ಮೆಂಟ್ ಕಟ್ಟಡವೊಂದಕ್ಕೆ ಹಾನಿಯಾಗಿದೆ. ಈ ದಾಳಿಯಲ್ಲಿ ಒಬ್ಬ ಮಹಿಳೆ ಸಾವನ್ನಪ್ಪಿದ್ದು, 11 ಜನರು ಗಾಯಗೊಂಡಿದ್ದಾರೆ. ಕಟ್ಟಡದ ಮೇಲಿನ ಮಹಡಿ ಸಂಪೂರ್ಣವಾಗಿ ನಾಶವಾಗಿದೆ ಎಂದು ಲೆಬನಾನ್‌ನ ಸರ್ಕಾರಿ ಸುದ್ದಿ ಸಂಸ್ಥೆ ತಿಳಿಸಿದೆ.
ಸಾವನ್ನಪ್ಪಿದ ಮಹಿಳೆಯು ಜರ್ಮನಿಯಲ್ಲಿ ವಾಸಿಸುತ್ತಿದ್ದರು. ಅವರು ಕೇವಲ ಒಂದು ತಿಂಗಳ ಹಿಂದೆಯಷ್ಟೇ ಕುಟುಂಬವನ್ನು ಭೇಟಿ ಮಾಡಲು ಲೆಬನಾನ್‌ಗೆ ಮರಳಿದ್ದರು ಎಂದು ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಸುದ್ದಿ ಸಂಸ್ಥೆ (NNA) ತಿಳಿಸಿದೆ. ಅವರು ಜರ್ಮನ್ ಪ್ರಜೆಯಾಗಿದ್ದಾರೆಯೇ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಮಹಿಳೆಯ ಇದ್ದ ಅಪಾರ್ಟ್‌ಮೆಂಟ್ ಇಸ್ರೇಲಿ ಡ್ರೋನ್ ದಾಳಿಗೆ ತುತ್ತಾಗಿದೆ ಎಂದು ವರದಿ ಹೇಳಿದೆ.
ಇಸ್ರೇಲಿ ಸೇನೆಯು ‘ಎಕ್ಸ್’ (ಹಿಂದಿನ ಟ್ವಿಟರ್) ನಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದು, ತಾವು ನಾಗರಿಕ ಕಟ್ಟಡವನ್ನು ಗುರಿಯಾಗಿಸಿದ್ದನ್ನು ನಿರಾಕರಿಸಿದೆ. ಬದಲಾಗಿ, ವಾಯುದಾಳಿಗೆ ಒಳಗಾದ ಸ್ಥಳದಲ್ಲಿ ಹಿಜ್ಬುಲ್ಲಾ ರಾಕೆಟ್‌ಗಳನ್ನು ಸಂಗ್ರಹಿಸಿಟ್ಟಿತ್ತು. ಇವು ಸ್ಫೋಟಗೊಂಡ ಕಾರಣ ಕಟ್ಟಡಕ್ಕೆ ಹಾನಿಯಾಗಿದೆ ಎಂದು ಸೇನೆ ಹೇಳಿದೆ. ವಸತಿ ಪ್ರದೇಶಗಳ ಬಳಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದ್ದಕ್ಕಾಗಿ ಹಿಜ್ಬುಲ್ಲಾವನ್ನೇ ದೂಷಿಸಿದೆ.
14 ತಿಂಗಳ ಇಸ್ರೇಲ್-ಹಿಜ್ಬುಲ್ಲಾ ಯುದ್ಧಕ್ಕೆ ಅಮೆರಿಕದ ಮಧ್ಯಸ್ಥಿಕೆಯಲ್ಲಿ ನವೆಂಬರ್‌ನಲ್ಲಿ ಕದನವಿರಾಮ ಘೋಷಿಸಲಾಯಿತು. ಹೀಗಿದ್ದೂ, ಇಸ್ರೇಲ್ ದಕ್ಷಿಣ ಲೆಬನಾನ್ ಮೇಲೆ ಬಹುತೇಕ ಪ್ರತಿದಿನವೂ ವೈಮಾನಿಕ ದಾಳಿಗಳನ್ನು ನಡೆಸುತ್ತಿದೆ. ಶುಕ್ರವಾರದ ದಾಳಿಗಳು ಸಾಮಾನ್ಯಕ್ಕಿಂತ ಹೆಚ್ಚು ತೀವ್ರವಾಗಿದ್ದವು.
ಇಸ್ರೇಲಿನ ಯುದ್ಧ ವಿಮಾನಗಳು ಮತ್ತು ಡ್ರೋನ್‌ಗಳಿಂದ ನಮ್ಮ ಮೇಲೆ ಎಷ್ಟೇ ಬಾಂಬ್ ದಾಳಿ ನಡೆಸಿದರೂ, ನಾವು ದೃಢವಾಗಿ ನಿಲ್ಲುತ್ತೇವೆ ಎಂದು ನಬಾಟಿಯೆಹ್‌ನ ಶಿಯಾ ಧರ್ಮಗುರು ಹಸನ್ ಗಂದೂರ್ ಅವರು ಘಟನಾ ಸ್ಥಳದಲ್ಲಿ ಅಸೋಸಿಯೇಟೆಡ್ ಪ್ರೆಸ್ (AP) ಗೆ ತಿಳಿಸಿದರು.
ದಕ್ಷಿಣ ಲೆಬನಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಗಳು ಕದನವಿರಾಮ ಒಪ್ಪಂದವನ್ನು ಉಲ್ಲಂಘಿಸಿವೆ ಎಂದು ಲೆಬನಾನ್‌ನ ಅಧ್ಯಕ್ಷರು ಮತ್ತು ಪ್ರಧಾನ ಮಂತ್ರಿಗಳು ಖಂಡಿಸಿದ್ದಾರೆ.
ನಬಾಟಿಯೆಹ್‌ನ ಮೇಲಿರುವ ಪರ್ವತಗಳ ಮೇಲೆ ವೈಮಾನಿಕ ದಾಳಿಗಳು ಎರಡು ಹಂತಗಳಲ್ಲಿ ನಡೆದಿದ್ದು, ಬಂಕರ್ ಬಸ್ಟರ್‌ಗಳನ್ನು ಬಳಸಲಾಗಿದೆ ಎಂದು ಲೆಬನಾನ್‌ನ ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಸುದ್ದಿ ಸಂಸ್ಥೆ (NNA) ವರದಿ ಮಾಡಿದೆ. ನಗರದ ಹೊರಗಿನ ಈ ವೈಮಾನಿಕ ದಾಳಿಗಳಲ್ಲಿ ನಾಲ್ವರು ಅಲ್ಪಸ್ವಲ್ಪ ಗಾಯಗೊಂಡಿದ್ದಾರೆ ಎಂದು ಎನ್‌ಎನ್‌ಎ ತಿಳಿಸಿದೆ.
ಹಿಜ್ಬುಲ್ಲಾವು ದಾಳಿ ಮತ್ತು ರಕ್ಷಣಾ ವ್ಯವಸ್ಥೆಯನ್ನು ನಿರ್ವಹಿಸಲು ಬಳಸುತ್ತಿದ್ದ ಸ್ಥಳವನ್ನು ಗುರಿಯಾಗಿಸಿ ತಮ್ಮ ಯುದ್ಧ ವಿಮಾನಗಳು ದಾಳಿ ನಡೆಸಿವೆ ಎಂದು ಇಸ್ರೇಲಿ ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ. ಈ ಸ್ಥಳವು ಹಿಜ್ಬುಲ್ಲಾದ ಮಹತ್ವದ ಭೂಗತ ಯೋಜನೆಯ ಭಾಗವಾಗಿದ್ದು, ಅದನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಲಾಗಿದೆ. ಆ ಪ್ರದೇಶದಲ್ಲಿ ಹಿಜ್ಬುಲ್ಲಾ ಮರುನಿರ್ಮಾಣದ ಪ್ರಯತ್ನಗಳನ್ನು ನಡೆಸುತ್ತಿದೆ ಎಂದು ಮೊದಲೇ ಗುರುತಿಸಿದ್ದೇವೆ ಮತ್ತು ಹಾಗಾಗಿ ಅದರ ಮಿಲಿಟರಿ ಮೂಲಸೌಕರ್ಯ ತಾಣಗಳ ಮೇಲೆ ದಾಳಿ ನಡೆಸಿದ್ದೇವೆ ಎಂದು ಇಸ್ರೇಲಿ ಸೇನೆ ಹೇಳಿದೆ.
ಈ ದಾಳಿ ಕುರಿತು ಹಿಜ್ಬುಲ್ಲಾದಿಂದ ತಕ್ಷಣದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ಈ ಹಿಂದೆ ನಡೆದ ಯುದ್ಧದಲ್ಲಿ, ಹಿಜ್ಬುಲ್ಲಾ ಯುದ್ಧಭೂಮಿಯಲ್ಲಿ ಭಾರಿ ನಷ್ಟವನ್ನು ಅನುಭವಿಸಿತ್ತು. ಆ ಯುದ್ಧದಲ್ಲಿ ಲೆಬನಾನ್‌ನಲ್ಲಿ 4,000 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು. ಲೆಬನಾನ್‌ಗೆ ಸುಮಾರು 11 ಶತಕೋಟಿ ಡಾಲರ್‌ಗಳಷ್ಟು ಹಾನಿಯಾಗಿತ್ತು. ಇಸ್ರೇಲ್‌ನಲ್ಲಿ 80 ಸೈನಿಕರು ಸೇರಿದಂತೆ 127 ಜನರು ಸಾವನ್ನಪ್ಪಿದ್ದರು.
ಕದನವಿರಾಮ ಒಪ್ಪಂದದ ಭಾಗವಾಗಿ, ಹಿಜ್ಬುಲ್ಲಾವನ್ನು ದಕ್ಷಿಣ ಲೆಬನಾನ್‌ನಲ್ಲಿರುವ ಇಸ್ರೇಲ್ ಗಡಿಯಿಂದ ಅಟ್ಟಲಾಗಿದೆ. ಲಿಟಾನಿ ನದಿಯ ದಕ್ಷಿಣಕ್ಕೆ ಶಸ್ತ್ರಾಸ್ತ್ರಗಳೊಂದಿಗೆ ಇರಲು ಅವರಿಗೆ ಅವಕಾಶ ನೀಡಲಾಗಿಲ್ಲ. ಆದರೆ, ಶುಕ್ರವಾರದ ವೈಮಾನಿಕ ದಾಳಿಗಳು ನದಿಯ ಉತ್ತರ ಭಾಗದಲ್ಲಿ ನಡೆದಿವೆ.


