ಫೆಬ್ರವರಿ 22 ರಂದು ದಾದ್ರಾ ಮತ್ತು ನಗರ್ ಹವೇಲಿಯ ಪಕ್ಷೇತರ ಸಂಸದರೊಬ್ಬರು ಮುಂಬೈನ ಮರೀನ್ ಡ್ರೈವ್ ಪ್ರದೇಶದ ಹೋಟೆಲ್‍ನ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಿಕ್ಕಿರುವ ಡೆತ್‌ನೋಟ್‌ನಲ್ಲಿ ಬಿಜೆಪಿ ಮುಖಂಡನ ಹೆಸರಿದೆ ಎಂದು ಮಹಾರಾಷ್ಟ್ರದ ಗೃಹ ಸಚಿವರು ಆರೋಪಿಸಿದ್ದಾರೆ.
“ಸಂಸದ ಮೋಹನ್ ದೇಲ್ಕರ್ ಅವರ ಸುಸೈಡ್ ನೋಟ್‍ನಲ್ಲಿ ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿ ಬಿಜೆಪಿಯ ಪ್ರಫುಲ್ ಪಟೇಲ್ ಅವರ ಹೆಸರು ಉಲ್ಲೇಖಗೊಂಡಿದೆ. ಪ್ರಫುಲ್ ಪಟೇಲ್ ಅವರು ದೇಲ್ಕರ್ ಮೇಲೆ ಒತ್ತಡ ಹೇರುತ್ತಿದ್ದುದರಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ” ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಹೇಳಿದ್ದಾರೆ.
“ಮುಂಬೈಯಲ್ಲಿ ತಮಗೆ ನ್ಯಾಯ ದೊರಕುವ ಭರವಸೆ ಅವರಿಗಿದ್ದುದರಿಂದ ಅವರು ಇಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿರಬಹುದು” ಎಂದೂ ಅವರು ಹೇಳಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ ಜನವರಿ 26ರ ಟ್ರಾಕ್ಟರ್ ರ್‍ಯಾಲಿಯಲ್ಲಿ ನಿಜವಾಗಿಯೂ ನಡೆದಿದ್ದೇನು? ಪ್ರತ್ಯಕ್ಷ ದರ್ಶಿಯ ವರದಿ
ದೇಲ್ಕರ್ ಅವರನ್ನು ಬಿಜೆಪಿ ಟಾರ್ಗೆಟ್ ಮಾಡಿತ್ತು ಎಂಬುದು ಅವರ 16 ಪುಟಗಳ ಡೆತ್ ನೋಟ್‍ನಿಂದ ತಿಳಿಯುತ್ತದೆ ಎಂದು ದೇಶಮುಖ್ ಅವರನ್ನು ಭೇಟಿಯಾದ ಕಾಂಗ್ರೆಸ್ ನಿಯೋಗದ ನೇತೃತ್ವ ವಹಿಸಿದ್ದ ಸಚಿನ್ ಸಾವಂತ್ ಹೇಳಿದ್ದಾರೆ.
“ಡೆತ್ ನೋಟ್‍ನಲ್ಲಿ ಕೆಲವು ಐಪಿಎಸ್ ಹಾಗೂ ಇತರ ಅಧಿಕಾರಿಗಳ ಹೆಸರುಗಳೂ ಇದ್ದವು. ಅವರ ಆತ್ಮಹತ್ಯೆಯ ಹಿಂದೆ ‘ಬಿಜೆಪಿ ಪಾತ್ರ’ದ ಕುರಿತು ತನಿಖೆ ನಡೆಸುವ ಭರವಸೆ ಸಚಿವರಿಂದ ದೊರಕಿದೆ” ಎಂದು ಅವರು ಹೇಳಿದರು.
ದೇಲ್ಕರ್ ವಿರುದ್ಧ ಹಲವು ಸುಳ್ಳು ಪ್ರಕರಣಗಳು ದಾಖಲಾಗಿದ್ದವು ಹಾಗೂ ಅವರ ಬೆಂಬಲಿಗರಿಗೆ ಕಿರುಕುಳ ನೀಡಲಾಗಿತ್ತು ಎಂದೂ ಸಾವಂತ್ ಆರೋಪಿಸಿದ್ದಾರೆ.
ಇದನ್ನೂ ಓದಿ: ನಾಳೆ ಯುವ ಕಿಸಾನ್ ದಿನ: ದೆಹಲಿಯ ರೈತ ವೇದಿಕೆಗೆಳು ಯುವಜನರಿಗೆ ಮೀಸಲು!


