ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಮಂಗಳವಾರ (ಸೆ.16) ಮುಂಜಾನೆ ಸಂಭವಿಸಿದ, ಧಾರಾಕಾರ ಮಳೆ ಮತ್ತು ವ್ಯಾಪಕ ನಾಶನಷ್ಟಕ್ಕೆ ಕಾರಣವಾದ ಮೇಘಸ್ಫೋಟದಲ್ಲಿ ಕನಿಷ್ಠ ಹತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 8 ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.
ಸಹಸ್ರಧಾರ ಕೇಂದ್ರಿತ ಮೇಘಸ್ಪೋಟದಿಂದ ಹಠಾತ್ ಪ್ರವಾಹ ಉಂಟಾಗಿ ಹೋಟೆಲ್, ಅಂಗಡಿ ಮತ್ತು ಮನೆಗಳು ಕೊಚ್ಚಿ ಹೋಗಿವೆ. ಜಿಲ್ಲೆಯಾದ್ಯಂತ ವಾಣಿಜ್ಯ ಸಂಸ್ಥೆಗಳು ಮತ್ತು ಪ್ರಮುಖ ಮೂಲಸೌಕರ್ಯಗಳಿಗೆ ತೀವ್ರ ಹಾನಿಯಾಗಿದೆ. ಅನೇಕ ಜನರು ಪ್ರವಾಹದಲ್ಲಿ ಕೊಚ್ಚಿ ಹೋಗಿರಬಹುದು ಎಂದು ಶಂಕಿಸಲಾಗಿದೆ.
ಡೆಹ್ರಾಡೂನ್‌ನ ಮಾಲ್ ದೇವ್ತಾ ಮತ್ತು ಮಸ್ಸೂರಿಯಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ ಎಂದು ಸರ್ಕಾರದ ವಿಪತ್ತು ನಿರ್ವಹಣಾ ವಿಭಾಗದ ಕಾರ್ಯದರ್ಶಿ ವಿನೋದ್ ಕುಮಾರ್ ಸುಮನ್ ತಿಳಿಸಿದ್ದಾರೆ.
ಹಾನಿಗೊಳಗಾದ ಪ್ರದೇಶಗಳಲ್ಲಿ ವಿವಿಧ ತಂಡಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಸುಮಾರು 300ರಿಂದ 400 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಸುಮನ್ ಹೇಳಿದ್ದಾರೆ.
ತಪಕೇಶ್ವರದ ಭಗತ್ ಸಿಂಗ್ ಕಾಲೋನಿಯ ಶಿಖರ್ ಜಲಪಾತದ ಬಳಿ ನಾಲ್ವರು ಕೊಚ್ಚಿ ಹೋಗಿದ್ದಾರೆ. ಮಸ್ಸೂರಿಯ ಝರಿಪಾನಿ ಟೋಲ್ ಪ್ಲಾಝಾದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಇಬ್ಬರು ಕಾರ್ಮಿಕರು ಸಮಾಧಿಯಾಗಿದ್ದರು. ಈ ಪೈಕಿ ಒಬ್ಬರು ಸಾವನ್ನಪ್ಪಿದ್ದಾರೆ, ಇನ್ನೊಬ್ಬರು ಗಾಯಗೊಂಡಿದ್ದಾರೆ. ಕಾರ್ಲಿ ಗಾಡ್ ಪ್ರದೇಶದಲ್ಲಿ ಇಬ್ಬರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.
ದೋಯಿವಾಲಾದಲ್ಲಿ ಹಲವಾರು ಮನೆಗಳು ಜಲಾವೃತಗೊಂಡಿದ್ದು, ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ತಂಡಗಳು ಚಂದ್ರಭಾಗ ನದಿಯಲ್ಲಿ ಸಿಲುಕಿದ್ದ ಮೂವರನ್ನು ರಕ್ಷಿಸಿವೆ.
ತೆಹ್ರಿಯಲ್ಲಿ ನೀರು ನಿಂತಿದ್ದರಿಂದ ಗೀತಾ ಭವನದಲ್ಲಿ ಜನರು ಸಿಲುಕಿಕೊಂಡಿದ್ದರು. ಅವರನ್ನು ರಕ್ಷಿಸಲಾಗಿದೆ. ನೈನಿತಾಲ್‌ನಲ್ಲಿ ಭಾರೀ ಮಳೆಯಿಂದ ಭೂಕುಸಿತ ಉಂಟಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ ಎಂದು ಸುಮನ್ ಹೇಳಿದ್ದಾರೆ.
ಮಝರಾ ಎಂಬ ಗ್ರಾಮದಲ್ಲಿ ಭೂಕುಸಿತದಿಂದ ಕೊಚ್ಚಿಕೊಂಡು ಬಂದ ಅಪಾರ ಪ್ರಮಾಣದ ಮಣ್ಣು ಮನೆಗಳನ್ನು ಮುಳುಗಿಸಿತ್ತು. ಜನರು ಪ್ರಾಣ ಉಳಿಸಿಕೊಳ್ಳಲು ರಸ್ತೆಗೆ ಬಂದು ರಾತ್ರಿ ಕಳೆದಿದ್ದಾರೆ. ಕೆಲವರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.
ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ತಂಡಗಳನ್ನು ರಾತ್ರಿಯಿಡೀ ಸಜ್ಜುಗೊಳಿಸಲಾಗಿದೆ. ದುರಂತ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಮಣ್ಣು ಅಗೆಯುವ ಯಂತ್ರಗಳು ಸೇರಿದಂತೆ ಭಾರೀ ಯಂತ್ರೋಪಕರಣಗಳನ್ನು ತರಲಾಗಿದೆ. ಕಾಣೆಯಾದ ವ್ಯಕ್ತಿಗಳ ಹುಡುಕಾಟ ಯುದ್ಧೋಪಾದಿಯಲ್ಲಿ ಮುಂದುವರೆದಿದೆ ಎಂದು ವರದಿಗಳು ವಿವರಿಸಿವೆ.


