ಅಧ್ಯಕ್ಷ ನಿಕೊಲಸ್ ಮಡೂರೊ ಮತ್ತು ಅವರ ಪತ್ನಿ ಸಿಲಿಯಾ ಪ್ಲೋರ್ಸ್ ಅವರನ್ನು ಅಮೆರಿಕ ಸೇನೆ ಬಂಧಿಸಿರುವ ಹಿನ್ನೆಲೆ, ಹಂಗಾಮಿ ಅಧ್ಯಕ್ಷೆಯಾಗಿ ಜವಾಬ್ದಾರಿ ವಹಿಸಿಕೊಳ್ಳುವಂತೆ ಉಪಾಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರಿಗೆ ವೆನಿಜುವೆಲಾದ ಸುಪ್ರೀಂ ಕೋರ್ಟ್ ಭಾನುವಾರ (ಜ.4) ಆದೇಶಿಸಿದೆ ಎಂದು ವರದಿಯಾಗಿದೆ.
ಆಡಳಿತಾತ್ಮಕ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ರಾಷ್ಟ್ರದ ಒಟ್ಟಾರೆ ರಕ್ಷಣೆಯನ್ನು ನೋಡಿಕೊಳ್ಳಲು ರೊಡ್ರಿಗಸ್ ಅವರು ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳುತ್ತಾರೆ ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.
56 ವರ್ಷದ ಡೆಲ್ಸಿ ರೊಡ್ರಿಗಸ್ ಅವರು ವೆನಿಜುವೆಲಾದ ಸಮಾಜವಾದಿ ಸರ್ಕಾರದಲ್ಲಿ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳಲ್ಲಿ ಒಬ್ಬರು. ಇವರು ಅಧ್ಯಕ್ಷ ನಿಕೋಲಾಸ್ ಮಡುರೊ ಅವರ ಅತ್ಯಂತ ಹತ್ತಿರದ ಮತ್ತು ನಂಬಿಗಸ್ತ ವ್ಯಕ್ತಿಗಳಲ್ಲಿ ಒಬ್ಬರು. ಮಡುರೊ ಅವರಿಗೆ ಯಾವಾಗಲೂ ಬೆಂಬಲ ನೀಡುವ ವ್ಯಕ್ತಿ ಕೂಡ ಹೌದು.
ಈ ಹಿಂದೆ ಉಪಾಧ್ಯಕ್ಷೆ, ಹಣಕಾಸು ಸಚಿವೆ ಮತ್ತು ತೈಲ ಸಚಿವೆ ಸೇರಿದಂತೆ ಪ್ರಮುಖ ಹುದ್ದೆಗಳನ್ನು ಇವರು ನಿರ್ವಹಿಸಿದ್ದಾರೆ. ವೆನಿಜುವೆಲಾದ ಮೇಲೆ ಅಮೆರಿಕ ತೀವ್ರ ನಿರ್ಬಂಧಗಳನ್ನು ಹೇರಿದ್ದ ಸಮಯದಲ್ಲಿ ಮತ್ತು ಹಣದ ಮೌಲ್ಯ ತೀವ್ರವಾಗಿ ಕುಸಿದು ಹಣದುಬ್ಬರ ತುಂಬಾ ಹೆಚ್ಚಾದ ಸಮಯದಲ್ಲಿ, ದೇಶದ ಆರ್ಥಿಕತೆಯ ಜವಾಬ್ದಾರಿಯನ್ನು ರೊಡ್ರಿಗಸ್ ಹೊತ್ತಿದ್ದರು. ಅಂದರೆ, ಹಣಕಾಸು ಮತ್ತು ತೈಲದಂತಹ ಮುಖ್ಯ ವಿಷಯಗಳ ಮೇಲೆ ಇವರ ನಿಯಂತ್ರಣ ತುಂಬಾ ದೊಡ್ಡದಾಗಿತ್ತು.
ತಮ್ಮ ಆಡಳಿತವನ್ನು ರಕ್ಷಿಸಿಕೊಳ್ಳಲು ತುಂಬಾ ಆಕ್ರಮಣಕಾರಿಯಾಗಿ ಮತ್ತು ಧೈರ್ಯವಾಗಿ ಹೋರಾಡುತ್ತಾರೆ ಎಂಬ ಕಾರಣಕ್ಕಾಗಿ ರೊಡ್ರಿಗಸ್ ಅವರನ್ನು ನಿಕೋಲಾಸ್ ಮಡುರೊ ಹಿಂದೆಯೊಮ್ಮೆ ‘ಹುಲಿ’ ಕೊಂಡಾಡಿದ್ದರು.
ರೊಡ್ರಿಗಸ್ ಅವರು ರಾಜಧಾನಿ ಕಾರಕಸ್ ನಗರದಲ್ಲಿ ಹುಟ್ಟಿದವರು. ಅವರ ತಂದೆ ಜಾರ್ಜ್ ಆಂಟೋನಿಯೋ ರೊಡ್ರಿಗಸ್ ಎಡಪಂಥೀಯ ಗೆರಿಲ್ಲಾ ನಾಯಕರಾಗಿದ್ದರು. ಅವರೇ ‘ಸೋಶಿಯಲಿಸ್ಟ್ ಲೀಗ್’ (Socialist League) ಎಂಬ ಸಂಘಟನೆಯನ್ನು ಸ್ಥಾಪಿಸಿದವರು.
ಡೆಲ್ಸಿ ರೊಡ್ರಿಗಸ್ ಅವರು ಎಡಪಂಥೀಯ ರಾಜಕೀಯದ ಹಿನ್ನೆಲೆಯಿಂದ ಬಂದವರು. ಅದೇ ಎಡಪಂಥೀಯ ಆದರ್ಶಗಳನ್ನು ಅನುಸರಿಸುತ್ತಾ ವೆನಿಜುವೆಲಾದ ಸಮಾಜವಾದಿ ಸರ್ಕಾರದಲ್ಲಿ ದೊಡ್ಡ ಪಾತ್ರ ವಹಿಸಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದಂತೆ ರೋಡ್ರಿಗಸ್ ಅವರು ಅಧಿಕಾರವನ್ನು ವಹಿಸಿಕೊಂಡಿದ್ದಾರೆ. ಆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಂಧಿತ ಅಧ್ಯಕ್ಷ ನಿಕೋಲಸ್ ಮಡರೊ ಮತ್ತು ಅವರ ಪತ್ನಿಯನ್ನು ಬಿಡುಗಡೆ ಮಾಡುವಂತೆ ಅಮೆರಿಕಗೆ ಆಗ್ರಹಿಸಿದ್ದಾರೆ.
ಮುಂಜಾನೆ ಅನಧಿಕೃತವಾಗಿ ದೇಶದೊಳಗೆ ನುಗ್ಗಿ ಅಧ್ಯಕ್ಷರನ್ನು ಬಂಧಿಸಿರುವ ಅಮೆರಿಕದ ಕೃತ್ಯ ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ದವಾದದು ಎಂದು ಅವರು ಹೇಳಿದ್ದಾರೆ. ಅಮೆರಿಕದ ಈ ನಡೆಯನ್ನು ಲ್ಯಾಟಿನ್ ಅಮೆರಿಕದ ಎಲ್ಲಾ ದೇಶಗಳು ಖಂಡಿಸುವಂತೆ ಮನವಿ ಮಾಡಿದ್ದಾರೆ.
ಅಮೆರಿಕ ಬಂಧಿಸಿದರೂ ಮಡುರೊ ಅವರು ವೆನಿಜುವೆಲಾದ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ರೊಡ್ರಿಗಸ್ ಹೇಳಿದ್ದಾರೆ.
ಮಡುರೊ ಅವರನ್ನು ಬಂಧಿಸಿರುವ ಅಮೆರಿಕ ಸೇನೆ ನ್ಯೂಯಾರ್ಕ್‌ಗೆ ಕರೆದೊಯ್ದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವೆನಿಜುವೆಲಾವನ್ನು ಸದ್ಯಕ್ಕೆ ಅಮೆರಿಕ ಆಳಲಿದೆ ಎಂದು ತಿಳಿಸಿದ್ದಾರೆ. ಈ ನಡುವೆ ರೊಡ್ರಿಗಸ್ ಅವರು ಅಧಿಕಾರ ವಹಿಸಿಕೊಂಡಿದ್ದು, ಟ್ರಂಪ್‌ಗೆ ಎಚ್ಚರಿಕೆ ನೀಡಿದ್ದಾರೆ.
ಫ್ರೀಡಂ ಫ್ಲೋಟಿಲ್ಲಾ ಸದಸ್ಯರ ಮೇಲೆ ಇಸ್ರೇಲಿ ಪಡೆಗಳಿಂದ ಲೈಂಗಿಕ ದೌರ್ಜನ್ಯ ಆರೋಪ : ಸ್ವತಂತ್ರ ತನಿಖೆ ಆಗ್ರಹ


