ನಗರದಲ್ಲಿ ಬೀದಿ ನಾಯಿಗಳ ಎಣಿಕೆಗೆ ಯಾವುದೇ ಶಾಲಾ ಶಿಕ್ಷಕರನ್ನು ನಿಯೋಜಿಸಲಾಗಿಲ್ಲ ಎಂದು ದೆಹಲಿ ಸರ್ಕಾರ ಸ್ಪಷ್ಟಪಡಿಸಿದೆ. ಶಿಕ್ಷಕರಿಗೆ ಜನಗಣತಿ ಸಂಬಂಧಿತ ಕರ್ತವ್ಯಗಳಿಗೆ ಮಾತ್ರ ನಿಯೋಜಿಸಲಾಗಿದೆ.
ಬೀದಿ ನಾಯಿ ಸಂಬಂಧಿತ ವಿಷಯಗಳಿಗೆ ಸಂಬಂಧಿಸಿದಂತೆ ಶಿಕ್ಷಣ ಸಂಸ್ಥೆಗಳಿಗೆ ಇತ್ತೀಚೆಗೆ ನೀಡಲಾದ ನಿರ್ದೇಶನಗಳ ಬಗ್ಗೆ ಗೊಂದಲದ ನಡುವೆ ಈ ಸ್ಪಷ್ಟೀಕರಣ ಬಂದಿದೆ.
ಬೀದಿ ನಾಯಿಗಳ ಎಣಿಕೆಗೆ ಶಿಕ್ಷಕರನ್ನು ನಿಯೋಜಿಸಲಾಗಿಲ್ಲವಾದರೂ, ಈ ಹಿಂದೆ ಶಾಲೆಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳಿಗೆ, ಬೀದಿ ನಾಯಿ ಸಂಬಂಧಿತ ಸಮಸ್ಯೆಗಳ ಕುರಿತು ಸಮನ್ವಯ ಸಾಧಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸುವಂತೆ ಶಿಕ್ಷಣ ನಿರ್ದೇಶನಾಲಯ ನಿರ್ದೇಶಿಸಿತ್ತು.
ಶಿಕ್ಷಣ ಇಲಾಖೆಯ ಆರೈಕೆ ಶಾಖೆ ಹೊರಡಿಸಿದ ಸುತ್ತೋಲೆಯ ಪ್ರಕಾರ, ಜಿಲ್ಲಾ ಶಿಕ್ಷಣ ಅಧಿಕಾರಿಗಳಿಗೆ (ಡಿಇಒ) ತಮ್ಮ ವ್ಯಾಪ್ತಿಯಲ್ಲಿರುವ ಶಾಲೆಗಳು, ಕ್ರೀಡಾಂಗಣಗಳು ಮತ್ತು ಕ್ರೀಡಾ ಸಂಕೀರ್ಣಗಳಿಂದ ನಾಮನಿರ್ದೇಶಿತ ನೋಡಲ್ ಅಧಿಕಾರಿಗಳ ವಿವರಗಳನ್ನು ಸಂಗ್ರಹಿಸಲು ಸೂಚಿಸಲಾಗಿದೆ. ಈ ವಿವರಗಳಲ್ಲಿ ಅಧಿಕಾರಿಯ ಹೆಸರು, ಹುದ್ದೆ, ಸಂಪರ್ಕ ಸಂಖ್ಯೆ ಮತ್ತು ಇಮೇಲ್ ಐಡಿ ಸೇರಿವೆ.
ಶಾಲೆಗಳೇ ಖುದ್ದಾಗಿ ಮಾಹಿತಿ ಸಲ್ಲಿಸುವ ಅಗತ್ಯವಿಲ್ಲ. ಏಕೀಕೃತ ಜಿಲ್ಲಾ ಮಟ್ಟದ ವರದಿಗಳನ್ನು ಮಾತ್ರ ದೆಹಲಿ ಮುಖ್ಯ ಕಾರ್ಯದರ್ಶಿ ಕಚೇರಿಗೆ ಕಳುಹಿಸಬೇಕು ಎಂದು ಇಲಾಖೆ ಸ್ಪಷ್ಟಪಡಿಸಿತ್ತು.
ಪ್ರಕ್ರಿಯೆಯು ಸಾರ್ವಜನಿಕ ಸುರಕ್ಷತಾ ಕಾಳಜಿಗಳಿಗೆ ಸಂಬಂಧಿಸಿದೆ, ನವೆಂಬರ್ 7, 2025 ರ ಸುಪ್ರೀಂ ಕೋರ್ಟ್ ಆದೇಶದ ಅನುಸಾರವಾಗಿ ಇದನ್ನು ನಡೆಸಲಾಗುತ್ತಿದೆ ಎಂದು ಇಲಾಖೆ ಹೇಳಿತ್ತು. ನವೆಂಬರ್ 20 ರಂದು ನಡೆದ ಪರಿಶೀಲನಾ ಸಭೆಯಲ್ಲಿ ಹೊರಡಿಸಲಾದ ನಿರ್ದೇಶನಗಳೊಂದಿಗೆ ಈ ಕ್ರಮ ಸಂಯೋಜಿಸಲಾಗಿದೆ. ಇದನ್ನು ಆದ್ಯತೆಯ ಕಾರ್ಯವೆಂದು ಗುರುತಿಸಲಾಗಿದೆ.
ಶಿಕ್ಷಣ ಇಲಾಖೆ ನಿರ್ದೇಶನದಡಿಯಲ್ಲಿ, ಬೀದಿ ನಾಯಿ ಸಂಬಂಧಿತ ಸಮಸ್ಯೆಗಳಿಗೆ ನೋಡಲ್ ಅಧಿಕಾರಿಗಳು ಸಾರ್ವಜನಿಕರಿಗೆ ಸಂಪರ್ಕವಾಗಿ ಕಾರ್ಯನಿರ್ವಹಿಸಬೇಕಾಗಿತ್ತು. ಶಿಕ್ಷಕರ ವಿವರಗಳನ್ನು ಸಾರ್ವಜನಿಕ ಜಾಗೃತಿ ಮೂಡಿಸಲು ಶಾಲಾ ಆವರಣದ ಹೊರಗೆ ಪ್ರಮುಖವಾಗಿ ಪ್ರದರ್ಶಿಸಬೇಕಾಗಿತ್ತು.
ಕಳವಳ ವ್ಯಕ್ತಪಡಿಸಿದ ಶಿಕ್ಷಕರ ಸಂಘಗಳು
ಈ ಹಿಂದೆ, ಶಿಕ್ಷಕರ ಸಂಘಗಳು ಈ ಕ್ರಮವನ್ನು ವಿರೋಧಿಸಿದ್ದವು. ಶಿಕ್ಷಕರನ್ನು ಶೈಕ್ಷಣಿಕೇತರ ಕರ್ತವ್ಯಗಳ ಕಡೆಗೆ ತಿರುಗಿಸಲಾಗುತ್ತಿದೆ ಎಂಬ ಆತಂಕ ವ್ಯಕ್ತಪಡಿಸಿದ್ದವು. ಪ್ರಾಣಿ ಕಲ್ಯಾಣಕ್ಕೆ ಜವಾಬ್ದಾರರಾಗಿರುವ ಇಲಾಖೆಗಳು ಇಂತಹ ವಿಷಯಗಳನ್ನು ಏಕೆ ನಿರ್ವಹಿಸುತ್ತಿಲ್ಲ ಎಂದು ಅವರು ಪ್ರಶ್ನಿಸಿದ್ದರು. ಹೆಚ್ಚುವರಿ ಜವಾಬ್ದಾರಿಗಳು ಬೋಧನಾ ಕೆಲಸದ ಮೇಲೆ ಪರಿಣಾಮ ಬೀರಬಹುದು. ವೃತ್ತಿಪರ ಘನತೆಯನ್ನು ಹಾಳುಮಾಡಬಹುದು ಎಂದು ಎಚ್ಚರಿಸಿದ್ದರು.
ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ ಮತ್ತು ಛತ್ತೀಸ್‌ಗಢದಂತಹ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಾಣಿ ಸಂಬಂಧಿತ ನಾಗರಿಕ ಸಮನ್ವಯಕ್ಕಾಗಿ ಶೈಕ್ಷಣಿಕ ಸಿಬ್ಬಂದಿಯನ್ನು ಒಳಗೊಂಡ ಇದೇ ರೀತಿಯ ಆಡಳಿತಾತ್ಮಕ ವ್ಯವಸ್ಥೆಗಳನ್ನು ಈ ಹಿಂದೆ ಜಾರಿಗೆ ತರಲಾಗಿದೆ ಎಂದು ಅಧಿಕಾರಿಗಳು ಗಮನಸೆಳೆದಿದ್ದರು.
ಇತ್ತೀಚಿನ ಸ್ಪಷ್ಟೀಕರಣದೊಂದಿಗೆ, ದೆಹಲಿ ಸರ್ಕಾರವು ಕಳವಳಗಳನ್ನು ಹೋಗಲಾಡಿಸಲು ಪ್ರಯತ್ನಿಸಿದೆ. ಶಿಕ್ಷಕರನ್ನು ಬೀದಿ ನಾಯಿ ಎಣಿಕೆಗೆ ನಿಯೋಜಿಸಲಾಗುತ್ತಿಲ್ಲ, ನಿರ್ದೇಶನವು ನಾಮನಿರ್ದೇಶಿತ ನೋಡಲ್ ಅಧಿಕಾರಿಗಳ ಮೂಲಕ ಆಡಳಿತಾತ್ಮಕ ಸಮನ್ವಯಕ್ಕೆ ಸೀಮಿತವಾಗಿದೆ ಎಂದು ಒತ್ತಿಹೇಳಿದೆ.


