ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿಸಿ ರೈತರು ದೇವನಹಳ್ಳಿಯಲ್ಲಿ ಬುಧವಾರ ನಡೆಸಿದ್ದ ಹೋರಾಟವನ್ನು ಪೊಲೀಸ್ ಬಲ ಪ್ರಯೋಗಿಸಿ ಹತ್ತಿಕ್ಕಿದ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆಯನ್ನು ಸಂಯುಕ್ತ ಕಿಸಾನ್ ಮೋರ್ಚಾ ಶುಕ್ರವಾರ ಖಂಡಿಸಿದ್ದು, ನ್ಯಾಯಕ್ಕಾಗಿ ನಡೆಸುತ್ತಿರುವ ರೈತರ ಹೋರಾಟಕ್ಕೆ ಅದು ಬೆಂಬಲ ವ್ಯಕ್ತಪಡಿಸಿದೆ. ದೆಹಲಿ | ಚನ್ನರಾಯಪಟ್ಟಣ
ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ದೇಶದಾದ್ಯಂತ ಇರುವ ಪ್ರಮುಖ ರೈತ ಸಂಘಟನೆಗಳ ಒಕ್ಕೂಟವಾಗಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕರಾಳ ರೈತ ವಿರೋಧಿ ಕಾಯ್ದೆ ವಿರೋಧಿಸಿ ವರ್ಷಗಳ ಕಾಲ ದೆಹಲಿಯ ಸುತ್ತ ನಡೆಸಲಾಗಿದ್ದ ರೈತ ಹೋರಾಟಕ್ಕೆ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವ ನೀಡಿತ್ತು. ಜೊತೆಗೆ ರೈತ ಸಂಘಟನೆಗಳ ಈ ಹೋರಾಟದ ಕಾರಣಕ್ಕೆ ಕೇಂದ್ರದ ಬಿಜೆಪಿ ಸರ್ಕಾರ ಮಣಿದು ಕಾಯ್ದೆಯನ್ನು ವಾಪಾಸು ಪಡೆಯಿತು.
ಶಾಂತಿಯುತವಾಗಿ ಪ್ರತಿಭಟಿಸಿದ ನೂರಾರು ರೈತರನ್ನು ಅಮಾನುಷವಾಗಿ ಎಳೆದಾಡಿ ಬಂಧಿಸಿ ಪೊಲೀಸರಿಂದ ದೌರ್ಜನ್ಯ ನಡೆಸಿದ್ದಕ್ಕಾಗಿ ಕರ್ನಾಟಕದ ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರವನ್ನು ಎಸ್‌ಕೆಎಂ ತೀವ್ರವಾಗಿ ಖಂಡಿಸಿದೆ.
ತಮ್ಮ ಪೂರ್ವಜರ ಭೂಮಿಯಲ್ಲಿ ಕೃಷಿಯನ್ನು ಅವಲಂಭಿಸಿ ಬದುಕುತ್ತಿರುವ ದೇವನಹಳ್ಳಿಯ ಚನ್ನರಾಯಪಟ್ಟಣದ 13 ಹಳ್ಳಿಗಳಿಗೆ ಸೇರಿದ ಸುಮಾರು 800 ಕುಟುಂಬಗಳು ಈಗ 1180 ದಿನಗಳಿಂದ (ಸುಮಾರು 3.5 ವರ್ಷಗಳು) ಅನಿರ್ದಿಷ್ಟ ಹೋರಾಟ ನಡೆಸುತ್ತಿವೆ.
2022ರ ಜನವರಿ ವೇಳೆಗೆ ಆಗಿನ ಬಿಜೆಪಿ ನೇತೃತ್ವದ ಬಸವರಾಜ ಬೊಮ್ಮಾಯಿ ಸರ್ಕಾರವು ಕಾರ್ಪೊರೇಟ್ ಕಂಪೆನಿಗಳ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಅನುಕೂಲವಾಗುವಂತೆ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಈ 13 ಗ್ರಾಮಗಳ ರೈತರ 1777 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿ ಅವರಿಗೆ ನೋಟಿಸ್ ನೀಡಿತ್ತು.
ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಹರಳೂರು ಕೈಗಾರಿಕಾ ಪ್ರದೇಶಕ್ಕಾಗಿ ಸುತ್ತಮುತ್ತಲಿನ ಹಳ್ಳಿಗಳಿಂದ 6000 ಎಕರೆಗಳನ್ನು ಈಗಾಗಲೇ ಸ್ವಾಧೀನಪಡಿಸಿಕೊಂಡಿತ್ತು. ಆ ಹಿಂದಿನ ಸ್ವಾಧೀನಗಳಲ್ಲಿ ಸಾವಿರಾರು ರೈತರು ಮತ್ತು ಗ್ರಾಮಸ್ಥರನ್ನು ಹೊರಹಾಕಲಾಯಿತು ಆದರೆ ಅವರಿಗೆ ಯಾವುದೇ ಸರಿಯಾದ ಪರಿಹಾರವನ್ನು ನೀಡಲಾಗಿಲ್ಲ.
ಈ ಸಂದರ್ಭದಲ್ಲಿ, ‘ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ’ ಅಡಿಯಲ್ಲಿ ರೈತರು 1777 ಎಕರೆಗಳ ಸ್ವಾಧೀನ ಪ್ರಯತ್ನವನ್ನು ದೃಢವಾಗಿ ವಿರೋಧಿಸಿದ್ದರು. ಆಗ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ವಿಧಾನಸಭೆಯಲ್ಲಿ ಈ ಭೂಸ್ವಾಧೀನ ಕ್ರಮವನ್ನು ಪ್ರಶ್ನಿಸಿತ್ತು ಮತ್ತು ಅಂದಿನ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೋರಾಟ ಸ್ಥಳಕ್ಕೆ ಭೇಟಿ ನೀಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಧಿಸೂಚನೆಯನ್ನು ಹಿಂಪಡೆಯಲಾಗುವುದು ಎಂದು ರೈತರಿಗೆ ಭರವಸೆ ನೀಡಿದ್ದರು.
ಅದಾಗ್ಯೂ, 2024ರ ಏಪ್ರಿಲ್ ತಿಂಗಳಲ್ಲಿ ಅಧಿಕಾರಕ್ಕೆ ಬಂದ ನಂತರ, ಸಿದ್ದರಾಮಯ್ಯ ಸರ್ಕಾರವು ಕಾಂಗ್ರೆಸ್ ತೆಗೆದುಕೊಂಡಿದ್ದ ಹಿಂದಿನ ನಿಲುವನ್ನು ಬದಲಾಯಿಸಿ ರೈತರ ಭೂಮಿಯನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಳ್ಳಲು ಬಿಜೆಪಿಯ ನೀತಿಯನ್ನು ಅನುಸರಿಸಿತ್ತು.
“ಇದು ಕಾಂಗ್ರೆಸ್ ನೇತೃತ್ವದ ಯುಪಿಎ 2 ಸರ್ಕಾರ ತಂದ “ಭೂಸ್ವಾಧೀನ ಮತ್ತು ಪುನರ್ವಸತಿ ಕಾಯ್ದೆ -2013″ ರ ಸಂಪೂರ್ಣ ಉಲ್ಲಂಘನೆಯಾಗಿದೆ.” ಎಂದು ಎಸ್‌ಕೆಎಂ ಆಕ್ರೋಶ ವ್ಯಕ್ತಪಡಿಸಿದೆ.
ದೊಡ್ಡ ಕಾರ್ಪೊರೇಟ್ ಶಕ್ತಿಗಳ ವಿರುದ್ಧ ಹೋರಾಟ ನಡೆಸುತ್ತಿರುವ 13 ಹಳ್ಳಿಗಳ ರೈತರ ಹೋರಾಟದ ಮನೋಭಾವಕ್ಕೆ ಹೆಮ್ಮೆ ವ್ಯಕ್ತಪಡಿಸಿರುವ ಎಸ್‌ಕೆಎಂ, ಪ್ರಸ್ತುತ ಹೋರಾಟದಲ್ಲಿ ರೈತರೊಂದಿಗೆ ದೃಢವಾಗಿ ನಿಂತಿದ್ದಕ್ಕಾಗಿ ಎಸ್‌ಕೆಎಂನ ಕರ್ನಾಟಕದ ಘಟಕವಾಗಿರುವ ‘ಸಂಯುಕ್ತ ಹೋರಾಟ ಕರ್ನಾಟಕ’ ಶ್ಲಾಘಿಸಿ, ಅಭಿನಂದನೆ ಸಲ್ಲಿಸಿದೆ. ದೆಹಲಿ | ಚನ್ನರಾಯಪಟ್ಟಣ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಭಯೋತ್ಪಾದನೆಗಿಂತ ಜಾತಿವಾದವೇ ಹೆಚ್ಚು ಅಪಾಯಕಾರಿ: ಎರಡು ಘಟನೆ ಉಲ್ಲೇಖಿಸಿದ ಗಾಯಕಿ ನೇಹಾ ಸಿಂಗ್ ರಾಥೋರ್
ಭಯೋತ್ಪಾದನೆಗಿಂತ ಜಾತಿವಾದವೇ ಹೆಚ್ಚು ಅಪಾಯಕಾರಿ: ಎರಡು ಘಟನೆ ಉಲ್ಲೇಖಿಸಿದ ಗಾಯಕಿ ನೇಹಾ ಸಿಂಗ್ ರಾಥೋರ್

