ಸಂಸದೀಯ ಕ್ಷೇತ್ರಗಳ ಪ್ರಸ್ತಾವಿತ ಪುನರ್‌ವಿಂಗಡನೆಯ ಕುರಿತು ಚರ್ಚಿಸಲು ಇಂದು (ಮಾ.5) ರಾಜ್ಯ ಸಚಿವಾಲಯದಲ್ಲಿ ಆಯೋಜಿಸಿದ್ದ ಸರ್ವಪಕ್ಷಗಳ ಸಭೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಕೇಂದ್ರ ಸರ್ಕಾರದ ಪುನರ್‌ವಿಂಗಡಣಾ ಯೋಜನೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ.
ಜನಗಣತಿಯ ಪ್ರಕಾರ ಪುನರ್‌ವಿಂಗಡನೆ ಮಾಡಿದರೆ, ಅದು ತಮಿಳುನಾಡಿನ ರಾಜಕೀಯ ಪ್ರಭಾವವನ್ನು ದುರ್ಬಲಗೊಳಿಸುತ್ತದೆ. ತಮಿಳುನಾಡು ಪ್ರಸ್ತುತ ಸಂಸತ್ತಿನಲ್ಲಿ 39 ಸಂಸದರನ್ನು ಹೊಂದಿದ್ದರೂ, ರಾಜ್ಯದ ಸಮಸ್ಯೆಗಳನ್ನು ಕೇಂದ್ರ ಪರಿಹರಿಸುತ್ತಿಲ್ಲ ಎಂದಿರುವ ಸ್ಟಾಲಿನ್, ಜನಸಂಖ್ಯಾ ಬೆಳವಣಿಗೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿದ ರಾಜ್ಯಗಳಿಗೆ ನ್ಯಾಯ ಒದಗಿಸಲು, ಪ್ರಸ್ತುತ ಇರುವ ಗಡಿ ನಿರ್ಣಯ ಪದ್ದತಿಯನ್ನು ಮುಂದಿನ 30 ವರ್ಷಗಳವರೆಗೆ ಮುಂದುವರಿಸಬೇಕೆಂದು ಆಗ್ರಹಿಸಿದ್ದಾರೆ.
ಕೇಂದ್ರದ ಕ್ಷೇತ್ರ ಪುನರ್‌ವಿಂಗಡಣೆಯ ಪರಿಣಾಮದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸರ್ವ ಪಕ್ಷಗಳ ಸಮಿತಿಯನ್ನು ರಚಿಸುವುದಾಗಿ ಸ್ಟಾಲಿನ್ ಘೋಷಿಸಿದ್ದಾರೆ. ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ಪಕ್ಷಗಳು ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಬೇಕು ಮತ್ತು ಕೇಂದ್ರದ ಕ್ಷೇತ್ರ ವಿಂಗಡಣೆ ಯೋಜನೆಯನ್ನು ವಿರೋಧಿಸುವಲ್ಲಿ ಒಗ್ಗಟ್ಟಿನಿಂದ ಮುಂದುವರಿಯಬೇಕು ಎಂದು ಸ್ಟಾಲಿನ್ ಮನವಿ ಮಾಡಿದ್ದಾರೆ.
ದಕ್ಷಿಣ ಭಾರತದ ಸರ್ವಪಕ್ಷ ಪ್ರತಿನಿಧಿಗಳ ಜಂಟಿ ಸಮಿತಿಗೆ ಪ್ರತಿನಿಧಿಗಳನ್ನು ಹುಡುಕಲು ಇತರ ರಾಜ್ಯಗಳಿಗೆ ಭೇಟಿ ನೀಡಬೇಕೆಂದು ಪಟ್ಟಾಳಿ ಮಕ್ಕಳ್ ಕಚ್ಚಿ (ಪಿಎಂಕೆ) ಅಧ್ಯಕ್ಷ ಅನ್ಬುಮಣಿ ರಾಮದಾಸ್ ಅವರನ್ನು ಸ್ಟಾಲಿನ್ ಕೋರಿದ್ದಾರೆ.
ಹಲವಾರು ರಾಜಕೀಯ ಪಕ್ಷಗಳು ಭಾಗವಹಿಸಿದ್ದ ಸಭೆಯಲ್ಲಿ, ಜನಸಂಖ್ಯೆಯ ಅಂಕಿ ಅಂಶಗಳನ್ನು ಆಧರಿಸಿದ ಕ್ಷೇತ್ರ ಪುನರ್‌ವಿಂಗಡಣೆ ಮಾಡುವುದು ಸಂಸತ್ತಿನಲ್ಲಿ ತಮಿಳುನಾಡಿನ ಪ್ರಾತಿನಿಧ್ಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಎಂಬ ಕಳವಳಗಳ ಮೇಲೆ ಕೇಂದ್ರೀಕರಿಸಿ ಚರ್ಚೆ ನಡೆದಿದೆ. ಬಿಜೆಪಿ, ನಾಮ್ ತಮಿಳರ್ ಕಚ್ಚಿ (ಎನ್‌ಟಿಕೆ) ಮತ್ತು ತಮಿಳು ಮಾನಿಲ ಕಾಂಗ್ರೆಸ್ ಸಭೆಯನ್ನು ಬಹಿಷ್ಕರಿಸಿದ್ದವು.
ಜನ ಸಂಖ್ಯೆಯ ಆಧಾರದ ಮೇಲಿನ ಕ್ಷೇತ್ರ ವಿಂಗಡಣೆಯಿಂದ ಸಂಸತ್‌ನಲ್ಲಿ ದಕ್ಷಿಣ ಭಾರತದ ಪ್ರಾತಿನಿಧ್ಯ ಕುಸಿಯಬಹುದು. ಹೆಚ್ಚಿನ ಸ್ಥಾನಗಳು ಉತ್ತರ ಭಾರತದ ರಾಜ್ಯಗಳಿಗೆ ಹೋಗಬಹುದು ಎಂಬ ಕಳವಳ ಶುರುವಾಗಿದೆ. ಏಕೆಂದರೆ, ದಕ್ಷಿಣ ಭಾರತದ ರಾಜ್ಯಗಳು ಅಭಿವೃದ್ದಿ ದೃಷ್ಠಿಯಿಂದ ಪರಿಣಾಕಾರಿಯಾಗಿ ಜನಸಂಖ್ಯಾ ನಿಯಂತ್ರಣ ಯೋಜನೆಗಳನ್ನು ಅಳವಡಿಸಿಕೊಂಡು ಜನಸಂಖ್ಯೆ ನಿಯಂತ್ರಿಸಿವೆ.
ಕೆಲ ದಿನಗಳ ಹಿಂದೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದ ಸಿಎಂ ಸ್ಟಾಲಿನ್, “ತಮಿಳುನಾಡಿನ ಜನರು ಮದುವೆಯಾದ ತಕ್ಷಣ ಮಕ್ಕಳನ್ನು ಹೊಂದುವಂತೆ ಕರೆ ನೀಡಿದ್ದರು. ನಾವು ಜನಸಂಖ್ಯೆ ನಿಯಂತ್ರಣಕ್ಕೆ ಅಳವಡಿಸಿಕೊಂಡಿದ್ದ ಯೋಜನೆಗಳೇ ಈಗ ನಮಗೆ ಮುಳುವಾಗಿದೆ. ಕೇಂದ್ರ ಸರ್ಕಾರ ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಪುನರ್‌ವಿಂಗಡಣೆ ಮಾಡಿದರೆ ತಮಿಳುನಾಡು ಎಂಟು ಲೋಕಸಭಾ ಕ್ಷೇತ್ರಗಳನ್ನು ಕಳೆದುಕೊಳ್ಳಲಿದೆ ಎಂದಿದ್ದರು.
ಇದು ಕೇವಲ ತಮಿಳುನಾಡಿ ಹೋರಾಟವಲ್ಲ. ಜನಸಂಖ್ಯೆಯನ್ನು ನಿಯಂತ್ರಣ ಮಾಡಿಕೊಂಡಿರುವ ದಕ್ಷಿಣದ ಎಲ್ಲಾ ರಾಜ್ಯಗಳ ಹೋರಾಟವಾಗಿದೆ. ಕೇಂದ್ರದ ಕ್ಷೇತ್ರ ಪುನರ್‌ವಿಂಗಡಣೆಯ ಶಿಕ್ಷೆಗೆ ದಕ್ಷಿಣದ ರಾಜ್ಯಗಳು ಒಳಗಾಗಬಾರದು ಎಂಬ ಹೋರಾಟವಾಗಿದೆ ಎಂದಿದ್ದರು.
ಬಿಜೆಪಿ ಆರ್‌ಆರ್‌ಎಸ್‌ನ ಗುಲಾಮ
ಕೇಂದ್ರದ ಸಂಸದೀಯ ಕ್ಷೇತ್ರಗಳ ಪುನರ್‌ವಿಂಗಡಣೆ ಯೋಜನೆಯ ಪರಿಣಾಮಗಳ ಕುರಿತ ಸಭೆಗೆ ಗೈರಾದ ತಮಿಳುನಾಡು ಬಿಜೆಪಿ ವಿರುದ್ದ ಡಿಎಂಕೆ ನಾಯಕ ಟಿಕೆಎಸ್ ಎಳಂಗೋವನ್ ಕಿಡಿಕಾರಿದ್ದು, ‘ಬಿಜೆಪಿ ಆರ್‌ಎಸ್‌ಎಸ್‌ನ ಗುಲಾಮ’ ಎಂದಿದ್ದಾರೆ.
“ಸರ್ವಪಕ್ಷ ಸಭೆಗೆ ಹಾಜರಾಗದ ಪಕ್ಷಗಳು ತಮಿಳುನಾಡಿನ ಕಲ್ಯಾಣದ ಪರವಾಗಿಲ್ಲ. ಅವರು ಈ ಸಭೆ ಹೇಗೆ ಹಾಜರಾಗುತ್ತಾರೆ? ಏಕೆಂದರೆ ಈ ಸಭೆ ಅವರಿಗೆ ವಿರುದ್ದವಾಗಿದೆ. ಬಿಜೆಪಿ ಯಾವ ಸಭೆಗೆ ಹಾಜರಾಗಬೇಕೆಂದು ನಿರ್ಧರಿಸುವುದು ಆರ್‌ಎಸ್‌ಎಸ್. ಈ ಸಭೆಗೆ ಹಾಜರಾಗದ ಪಕ್ಷಗಳಿಗೆ ರಾಜ್ಯದ ಕಲ್ಯಾಣದಲ್ಲಿ ಆಸಕ್ತಿ ಇಲ್ಲ ಎಂದರ್ಥ” ಎಂದು ಎಳಂಗೋವನ್ ವಾಗ್ದಾಳಿ ನಡೆಸಿದ್ದಾರೆ.
ಉತ್ತರ ಭಾರತದಲ್ಲಿ ತಮಿಳು ಪ್ರಚಾರ ಸಭಾ ಏಕಿಲ್ಲ? ಕೇಂದ್ರ ಸರ್ಕಾರಕ್ಕೆ ಸಿಎಂ ಸ್ಟಾಲಿನ್ ಪ್ರಶ್ನೆ


