ರೋಮ್ ಮೂಲದ ಕ್ಯಾಥೋಲಿಕ್ ಸಂತ ಇಗಿಡಿಯೋ ಸಮುದಾಯ ಇಟಲಿಯಲ್ಲಿ ಆಯೋಜಿಸಿರುವ ವಿಶ್ವ ಶಾಂತಿ ಸಭೆಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಭಾಗವಹಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ.
ವಿದೇಶಾಂಗ ಸಚಿವಾಲಯ ಅವಕಾಶ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ದೀದಿ, ‘ನಿಮ್ಮ ಮಟ್ಟಕ್ಕೆ ಅನುಗುಣವಾಗಿಲ್ಲ ಎಂದು ಸರ್ಕಾರ ಹೇಳಿದೆ. ಇದು ಕೇಂದ್ರದ ಅಸೂಯೆ ಪ್ರವೃತ್ತಿಯಾಗಿದೆ’ ಎಂದು ಆರೋಪಿಸಿದ್ದಾರೆ.
ಜರ್ಮನ್ ಛಾನ್ಸುಲರ್ ಆಂಜೆಲಾ ಮಾರ್ಕೆಲ್, ಇಟಲಿಯ ಪ್ರಧಾನಿ ಮರಿಕೊ ಡ್ರಾಘಿ, ಪೋಪ್ ಫ್ರಾನ್ಸಿಸ್ ಸೇರಿದಂತೆ ವಿವಿಧ ಧರ್ಮ ಹಾಗೂ ರಾಜಕೀಯ ಹಿನ್ನೆಲೆಯ ಐದು ನೂರಕ್ಕೂ ಹೆಚ್ಚು ಮುಖಂಡರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
“ವಿಶ್ವ ಶಾಂತಿ ಸಂಬಂಧಿಸಿದಂತೆ ರೋಮ್ನಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ನನ್ನನ್ನೂ ಆಹ್ವಾನಿಸಲಾಗಿದೆ. ಜರ್ಮನ್ ಛಾನ್ಸಲರ್, ಪೋಪ್ (ಫ್ರಾನ್ಸಿಸ್) ಅವರೂ ಭಾಗಿಯಾಗಲಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವಿಶೇಷ ಅವಕಾಶವನ್ನು ಇಟಲಿ ನಮಗೆ ನೀಡಿದೆ. ಆದರೆ ಇಟಲಿಗೆ ತೆರಳಲು ಕೇಂದ್ರ ಸರ್ಕಾರ ಅನುಮತಿ ನೀಡುತ್ತಿಲ್ಲ. ಇದು ಮುಖ್ಯಮಂತ್ರಿಗಳಿಗೆ ಸೂಕ್ತವಾದ ಕಾರ್ಯಕ್ರಮವಲ್ಲ ಎಂದು ಸಬೂಬು ಹೇಳುತ್ತಿದೆ” ಎಂದು ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿದ್ದಾರೆ.
“ನನ್ನನ್ನು ನೀವು ತಡೆಯಲು ಸಾಧ್ಯವಿಲ್ಲ. ವಿದೇಶಗಳಿಗೆ ತೆರಳಲು ನಾನೇನು ಉತ್ಸುಕಳಲ್ಲ. ಆದರೆ ಇದು ದೇಶದ ಗೌರವಕ್ಕೆ ಸಂಬಂಧಿಸಿದ ವಿಷಯ. ನೀವು (ಪ್ರಧಾನಿ ನರೇಂದ್ರ ಮೋದಿ) ಹಿಂದೂಗಳ ಬಗ್ಗೆ ಮಾತನಾಡುತ್ತೀರಿ. ನಾನು ಕೂಡ ಹಿಂದೂ ಮಹಿಳೆ. ಏಕೆ ನೀವು ನನಗೆ ಅನುಮತಿ ನೀಡುತ್ತಿಲ್ಲ. ಒಟ್ಟಾರೆಯಾಗಿ ನಿಮಗೆ ಹೊಟ್ಟೆಕಿಚ್ಚು/ಅಸೂಯೆ” ಎಂದು ಬ್ಯಾನರ್ಜಿ ಟೀಕಿಸಿದ್ದಾರೆ.
“ನಾವು ನಮ್ಮ ಸ್ವತಂತ್ರವನ್ನು ರಕ್ಷಿಸಿಕೊಳ್ಳಬೇಕು. ತಾಲಿಬಾನಿ ಬಿಜೆಪಿ ಭಾರತದಲ್ಲಿ ನಿಲ್ಲಲು ಸಾಧ್ಯವಿಲ್ಲ. ಬಿಜೆಪಿಯನ್ನು ಸೋಲಿಸಲು ತೃಣಮೂಲ ಕಾಂಗ್ರೆಸ್ ಸಾಕು. ಭಬನಿಪುರ್ ವಿಧಾನಸಭಾ ಕ್ಷೇತ್ರದಿಂದ ಆಟ ಶುರುವಾಗಿದೆ. ಇಡೀ ದೇಶವನ್ನು ಗೆಲ್ಲುವ ಮೂಲಕ ಆಟವನ್ನು ಮುಕ್ತಾಯ ಮಾಡುತ್ತೇವೆ” ಎಂದು ಸಾರ್ವಜನಿಕ ಸಭೆಯಲ್ಲಿ ಮಮತಾ ಗುಡುಗಿದ್ದಾರೆ.
ಇದನ್ನೂ ಓದಿ: ಭಾರತವನ್ನು ತಾಲಿಬಾನ್, ಪಾಕಿಸ್ತಾನ ಆಗಲು ಬಿಡುವುದಿಲ್ಲ- ಮಮತಾ ಬ್ಯಾನರ್ಜಿ


