ದೇವನಹಳ್ಳಿಯ 13 ಗ್ರಾಮಗಳ 1,777 ಎಕರೆ ಭೂಸ್ವಾಧೀನ ಪ್ರಕ್ರಿಯೆಗೆ ರೈತರು ಮತ್ತು ಸಂಘಟನೆಗಳ ತೀವ್ರ ಪ್ರತಿರೋಧದ ನಂತರ ಸರ್ಕಾರವು ಜುಲೈ, 15, 2025 ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭೂಸ್ವಾಧೀನವನ್ನು ಸಂಪೂರ್ಣವಾಗಿ ಕೈಬಿಡಲಾಗುವುದು, ರೈತರ ಇಚ್ಛೆಯಂತೆ ಕೃಷಿ ಭೂಮಿಯನ್ನಾಗಿ ಮುಂದುವರೆಸಲಾಗುವುದು ಎಂದು ಘೋಷಿಸಿರುವುದರಿಂದ ಯಾವುದೇ ಷರತ್ತುಗಳಿಲ್ಲದೆ ಭೂ ಸ್ವಾಧೀನವನ್ನು ರದ್ದುಪಡಿಸಬೇಕೆಂದು ರೈತರು ಸರ್ಕಾರವನ್ನು ಒತ್ತಾಯಿಸಿದರು
ಚನ್ನರಾಯಪಟ್ಟಣದ ಧರಣಿ ಸ್ಥಳದಲ್ಲಿ ಇಂದು ನಡೆದ ಸಭೆಯಲ್ಲಿ ನೂರಾರು ರೈತರು ಮತ್ತು ಹೋರಾಟಗಾರರು ಭಾಗವಹಿಸಿದ್ದರು.
ಈ ಬಗ್ಗೆ ಕಳೆದ 1339 ದಿನಗಳಿಂದ ನಡೆಯುತ್ತಿರುವ ಧರಣಿ ಸ್ಥಳದಲ್ಲಿ ಸಭೆ ನಡೆಸಿದ ರೈತರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಶಿಫಾರಾಸ್ಸಿನ ಪತ್ರದ ಬಗ್ಗೆ ಚರ್ಚಿಸಿದ್ದು ಶಾಶ್ವತ ವಿಶೇಷ ಕೃಷಿ ವಲಯ ( permanent special agricultural zone ) ಎಂದು ಘೋಷಿಸುವ ಮತ್ತು ಪಹಣಿಯಲ್ಲಿ ದಾಖಲಿಸುವ, ನಿಯಮಗಳನ್ನು ರೂಪಿಸಲು ಸಮಿತಿಯನ್ನು ರಚಿಸಲು ಸಲ್ಲಿಸಿರುವ ಪ್ರಸ್ತಾವನೆಗಳನ್ನು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯು ತೀವ್ರವಾಗಿ ವಿರೋಧಿಸುತ್ತದೆ ಎಂದರು.
ಸರ್ಕಾರದ ನಿರ್ಧಾರವನ್ನು ಹೋರಾಟ ಸಮಿತಿ ಪ್ರಬಲವಾಗಿ ಖಂಡಿಸುತ್ತದೆ. ಆದ್ದರಿಂದ, ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಘೋಷಿಸಿದ ರೀತಿಯಲ್ಲಿಯೇ ಕೃಷಿ ಭೂಮಿಯನ್ನು ಯಾವುದೇ ಷರತ್ತುಗಳಿಲ್ಲದೆ ರೈತರಿಗೆ ಉಳಿಸಬೇಕೆಂದು ಒತ್ತಾಯಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಹೋರಾಟಗಾರ್ತಿ ಪ್ರಭಾ ಬೆಳವಂಗಲ,”ಇದು ರೈತರ ಹಿತರಕ್ಷಣೆಯಲ್ಲ, ಬದಲಿಗೆ ಭೂಮಿ ನೀಡದ ರೈತರ ಮೇಲೆ ಸೇಡು ತೀರಿಸಿಕೊಳ್ಳುವ ತಂತ್ರವಾಗಿದೆ. ‘ಶಾಶ್ವತ ವಿಶೇಷ ಕೃಷಿ ವಲಯ’ದ ಹೆಸರಿನಲ್ಲಿ ರೈತರ ಕೃಷಿ ಭೂಮಿಯ ಮೌಲ್ಯವನ್ನು ಕುಗ್ಗಿಸಿ, ಅವರ ಮೇಲೆ ಒತ್ತಡ ಹೇರಿ ಭೂಮಿಯನ್ನು ಕಸಿಯುವ ಹುನ್ನಾರ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಸಂಚಾಲಕ ಕಾರಳ್ಳಿ ಶ್ರೀನಿವಾಸ್ ಮಾತನಾಡಿ, “ಸರ್ಕಾರವು ಯಾವುದೇ ರೀತಿಯ ನಿರ್ಬಂಧಗಳನ್ನು ಹೇರದೆ, 13 ಗ್ರಾಮಗಳ 1,777 ಎಕರೆ ಭೂಮಿಯನ್ನು ಪ್ರಸ್ತುತ ಇರುವಂತೆ ಕೃಷಿ ವಲಯವನ್ನಾಗಿ ಮುಂದುವರಿಸಿ, ಕೂಡಲೇ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಡುವ ಅಧಿಕೃತ ಆದೇಶವನ್ನು ಹೊರಡಿಸಬೇಕು” ಎಂದು ಒತ್ತಾಯಿಸಿದರು.
ಹೋರಾಟ ಸಮಿತಿಯ ಮುಖಂಡ ನಲ್ಲಪನಹಳ್ಳಿ ನಂಜಪ್ಪ ಮಾತನಾಡಿ, “ಶಾಶ್ವತ ವಿಶೇಷ ಕೃಷಿ ವಲಯ’ದ ನಿರ್ಧಾರದಿಂದ ಸರ್ಕಾರ ಹಿಂದೆ ಸರಿದು ಅನಗತ್ಯವಾಗಿ ರೈತರಿಗೆ ಹಿಂಸೆ ಮತ್ತು ಕಿರುಕುಳ ನೀಡುವುದನ್ನು ಬಿಟ್ಟು ಕಳೆದ ಮೂರುವರೆ ವರ್ಷಗಳಿಂದ ಅತಂತ್ರವಾಗಿ ಬದುಕುತ್ತಿರುವ ನಮ್ಮಗಳಿಗೆ ಈ ಭೂಸ್ವಾಧೀನವನ್ನು ರದ್ದುಪಡಿಸಿ ನೆಮ್ಮದಿಯಿಂದ ಕೃಷಿ ಚಟುವಟಿಕೆ ನಡೆಸಲು ಅವಕಾಶ ಕಲ್ಪಿಸಬೇಕು” ಎಂದರು.
ರೈತ ಮಹಿಳೆ ವೆಂಕಟಮ್ಮ ಮಾತನಾಡಿ, ಒಂದುವೇಳೆ ಶಾಶ್ವತ ಕೃಷಿ ವಲಯ ಎಂದು ಘೋಷಿಸಿದ್ದೆ ಆದರೆ, ನಾವುಗಳು ತೀವ್ರ ತರವಾದ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಸಿದರು.
ಸಭೆಯಲ್ಲಿ ಅಶ್ಥತಪ್ಪ, ತಿಮ್ಮರಾಯಪ್ಪ, ಗೋಪಿನಾಥ್, ವೆಂಕಟರಮಣಪ್ಪ, ದೇವರಾಜು, ಲೋಕೇಶ್, ನಂಜೇಗೌಡ, ಮುನಿರಾಜು, ಮುನಿಷಾಮಪ್ಪ ಮುಕುಂದ, ಶ್ರೀನಿವಾಸ್, ಪ್ರಮೋದ್, ಗೋಪಾಲಗೌಡ, ಕೃಷ್ಣಪ್ಪ, ನಾರಾಯಣಮ್ಮ, ಲಕ್ಷ್ಮಮ್ಮ, ಮಂಜುನಾಥ್, ವೆಂಕಟೇಶ್ ಮುನಿವೆಂಕಟಮ್ಮ, ಪಿಳ್ಳಪ್ಪ, ಕೃಷ್ಣಪ್ಪ, ಸೇರಿದಂತೆ 13 ಹಳ್ಳಿಗಳ ರೈತ ಮುಖಂಡರು ಭಾಗವಹಿಸಿದ್ದರು.


