ಬೆಂಗಳೂರು/ದೇವನಹಳ್ಳಿ: ದೇವನಹಳ್ಳಿ ತಾಲ್ಲೂಕಿನ 13 ಗ್ರಾಮಗಳ 1770 ಎಕರೆ ಭೂಮಿಯಲ್ಲಿ, ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ ಅಭಿವೃದ್ಧಿಗಾಗಿ ವಶಪಡಿಸಿಕೊಂಡಿದ್ದ ಮೂರು ಗ್ರಾಮಗಳ 450 ಎಕರೆ ಭೂಮಿಯನ್ನು ಕೈಬಿಡುವುದಾಗಿ ಸರ್ಕಾರ ಘೋಷಿಸಿದ್ದರೂ, ರೈತರ ಹೋರಾಟ ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 4ರ ಶುಕ್ರವಾರದಂದು ಹೋರಾಟಗಾರರೊಂದಿಗೆ ಸಂಧಾನ ಸಭೆ ಕರೆದಿದ್ದಾರೆ. ಅದಕ್ಕೂ ಮುನ್ನ, ಜುಲೈ 3ರ ಗುರುವಾರ ಸಂಜೆ 4 ಗಂಟೆಗೆ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಸಂಬಂಧಿತ ಸಚಿವರು ಹಾಗೂ ಉನ್ನತ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿಗಳು ಪೂರ್ವಭಾವಿ ಸಭೆ ನಡೆಸಲಿದ್ದಾರೆ.
ಸಿಎಂ ಕರೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಲಿರುವ ಗಣ್ಯರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಮಹತ್ವದ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಾನೂನು ಸಚಿವ ಎಚ್.ಕೆ. ಪಾಟೀಲ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಇಂಧನ ಸಚಿವ ಕೆ.ಜೆ. ಜಾರ್ಜ್, ಕಂದಾಯ ಸಚಿವ ಕೃಷ್ಣಬೈರೇ ಗೌಡ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಕೆಐಎಡಿಬಿ (KIADB) ಸಿಇಒ ಸೇರಿದಂತೆ ಹಲವು ಉನ್ನತ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಸರ್ಕಾರದ ಭರವಸೆಗಳ ನಡುವೆಯೂ ಮುಂದುವರಿದ ಪ್ರತಿಭಟನೆ: ದೇವನಹಳ್ಳಿಯ ಚನ್ನರಾಯಪಟ್ಟಣ, ಮೆಟ್ಟಿಬಾರ್ಲು ಹಾಗೂ ಪ್ರೋತ್ರೀಯ ತಲ್ಲೋಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಕೈಗಾರಿಕಾಭಿವೃದ್ಧಿಗಾಗಿ ಒಟ್ಟು 1700 ಎಕರೆ ಭೂಮಿ ವಶಪಡಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಇದರಲ್ಲಿ 495 ಎಕರೆ ಭೂಮಿಯನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವುದಾಗಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಮತ್ತು ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಈ ಹಿಂದೆ ಘೋಷಿಸಿದ್ದರು. ಅಲ್ಲದೆ, 2013ರ ಭೂಸ್ವಾಧೀನ ಕಾಯ್ದೆ ಅನ್ವಯ ಸೂಕ್ತ ಪರಿಹಾರ ನೀಡಲಾಗುವುದು ಮತ್ತು ಪರಿಹಾರ ಬೇಡವೆಂದವರಿಗೆ ಕೆಐಎಡಿಬಿ ಅಭಿವೃದ್ಧಿಪಡಿಸಿದ 10 ಸಾವಿರ ಚದರ ಅಡಿ ಪರ್ಯಾಯ ಭೂಮಿ ನೀಡುವುದಾಗಿಯೂ ಭರವಸೆ ನೀಡಿದ್ದರು. ಆದರೆ, ಈ ಭರವಸೆಗಳ ಹೊರತಾಗಿಯೂ ರೈತರ ಹೋರಾಟ ಮುಂದುವರಿದಿರುವುದು ಸರ್ಕಾರದ ಆತಂಕಕ್ಕೆ ಕಾರಣವಾಗಿದೆ.
ದೇವನಹಳ್ಳಿ ರೈತರ ಕೂಗು: ಭೂಮಿ, ಬದುಕು ಉಳಿಸುವ ಪ್ರಾಮಾಣಿಕ ಪ್ರತಿರೋಧ
ಇದು ಕೇವಲ ಪರಿಹಾರದ ಹಣಕ್ಕಾಗಿ ನಡೆಯುತ್ತಿರುವ ಪ್ರತಿಭಟನೆಯಲ್ಲ, ಬದಲಾಗಿ ತಮ್ಮ ಭೂಮಿ, ಬದುಕು ಮತ್ತು ಪರಿಸರವನ್ನು ಉಳಿಸಿಕೊಳ್ಳುವ ದೇವನಹಳ್ಳಿ ತಾಲ್ಲೂಕಿನ 13 ಹಳ್ಳಿಗಳ ರೈತ ಕುಟುಂಬಗಳ ಪ್ರಾಮಾಣಿಕ ಪ್ರತಿರೋಧ. ಕಳೆದ 1185 ದಿನಗಳಿಂದ ನಿರಂತರವಾಗಿ ಹೋರಾಡುತ್ತಿರುವ ಈ ರೈತರು, ತಮ್ಮ ಭೂಮಿಯನ್ನು ಬಲವಂತವಾಗಿ ಕಸಿದುಕೊಳ್ಳದಂತೆ ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ. ಭೂಮಿಯಿಲ್ಲದ ಬದುಕು ವಿನಾಶಕ್ಕೆ ಸಮಾನ ಎಂಬುದನ್ನು ತಮ್ಮ ಅನುಭವದಿಂದ ಅರಿತಿರುವ ಈ ರೈತರು ಯಾವ ಕಾರಣಕ್ಕೂ ಭೂಮಿ ಬಿಡುವುದಿಲ್ಲ ಎಂದು ದೃಢ ಸಂಕಲ್ಪ ಮಾಡಿದ್ದಾರೆ.
ನೆಲಕ್ಕಾಗಿ ಒಗ್ಗಟ್ಟಾದ ಕರ್ನಾಟಕ: ದೇವನಹಳ್ಳಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ ಈಗ ಇಡೀ ಕರ್ನಾಟಕದ ಆತ್ಮಸಾಕ್ಷಿಯನ್ನು ಬಡಿದೆಬ್ಬಿಸಿದೆ. ರೈತರ ದನಿಯೊಂದಿಗೆ ಇಂದು ಇಡೀ ನಾಡು ದನಿಗೂಡಿಸಿದೆ.
ಭೂಮಿ ಕಳೆದುಕೊಂಡವರ ಬವಣೆ, ಭೂಮಿ ಉಳಿಸುವವರ ಸಂಕಲ್ಪ: ಈ ಹೋರಾಟಕ್ಕೆ ಸಂಬಂಧಿಸಿದ ವೀಡಿಯೊಗಳು ಈಗಾಗಲೇ ಭೂಮಿ ಕಳೆದುಕೊಂಡು ಬೀದಿಗೆ ಬಂದವರ ಕಷ್ಟಗಳನ್ನು ಮತ್ತು ತಮ್ಮ ನೆಲವನ್ನು ಉಳಿಸಿಕೊಳ್ಳಲು ದೃಢಸಂಕಲ್ಪ ಮಾಡಿರುವವರ ಬದುಕಿನ ಚಿತ್ರಣವನ್ನು ಅನಾವರಣಗೊಳಿಸಿವೆ. ಸಂಪೂರ್ಣ ಸಾಕ್ಷ್ಯಚಿತ್ರವಾಗಿ ಹೊರಬರಲಿರುವ ಈ ಪ್ರಯತ್ನದ ಸಣ್ಣ ಭಾಗವನ್ನು ಈ ಹೋರಾಟದ ಸಂದರ್ಭದಲ್ಲಿ ಸಾರ್ವಜನಿಕರಿಗೆ ವಿಷಯ ತಲುಪಿಸುವ ಉದ್ದೇಶದಿಂದ ಬಿಡುಗಡೆ ಮಾಡಲಾಗಿದೆ.

ಹೋರಾಟಕ್ಕೆ ರಾಷ್ಟ್ರೀಯ ನಾಯಕರ ಬೆಂಬಲ: ಇಂದು ಟಿಕಾಯತ್, ದರ್ಶನ್ ಪಾಲ್ ಆಗಮನ
ದೇವನಹಳ್ಳಿ ರೈತರ ಹೋರಾಟಕ್ಕೆ ರಾಷ್ಟ್ರೀಯ ಮಟ್ಟದ ಬೆಂಬಲ ವ್ಯಕ್ತವಾಗಿದ್ದು, ದೆಹಲಿಯ ಸಂಯುಕ್ತ ಕಿಸಾನ್ ಮೋರ್ಚಾದ ಪ್ರಮುಖ ನಾಯಕರಾದ ರಾಕೇಶ್ ಟಿಕಾಯತ್ ಮತ್ತು ದರ್ಶನ್ ಪಾಲ್ ಅವರು ರಾಜ್ಯಕ್ಕೆ ಆಗಮಿಸಲಿದ್ದಾರೆ. ರೈತ ಹೋರಾಟಗಾರರು ನೀಡಿರುವ ಮಾಹಿತಿ ಪ್ರಕಾರ, ಈ ಇಬ್ಬರು ನಾಯಕರು ಬೆಳಿಗ್ಗೆ ದೇವನಹಳ್ಳಿಯ ಸಂತ್ರಸ್ತ ರೈತರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಆಲಿಸಲಿದ್ದಾರೆ. ನಂತರ, ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ, ರೈತರ ಆಗ್ರಹಗಳನ್ನು ಸರ್ಕಾರದ ಮುಂದಿಡಲಿದ್ದಾರೆ. ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ರೈತರ ಪರವಾಗಿ ಸಂಧಾನ ನಡೆಸುವ ಸಾಧ್ಯತೆ ಇದೆ. ರಾಷ್ಟ್ರೀಯ ನಾಯಕರ ಈ ಭೇಟಿ ರೈತರ ಹೋರಾಟಕ್ಕೆ ಹೊಸ ಆಯಾಮ ನೀಡುವ ನಿರೀಕ್ಷೆಯಿದೆ.
ನಾಡಿನ ನಾಗರಿಕರಿಗೆ ಹೋರಾಟಗಾರರ ಮನವಿ: “ಕನ್ನಡನಾಡಿನ ಜೀವಪರ, ಜನಪರ ಚಿಂತನೆಯ ಬಂಧುಗಳೇ,” ಎಂದು ಸಂಬೋಧಿಸಿರುವ ರೈತ ಹೋರಾಟಗಾರರು, “ದಯವಿಟ್ಟು ನೋಡಿ, ನಿಮ್ಮ ಸ್ನೇಹಿತರ ಬಳಗಕ್ಕೂ ಹಂಚಿ…. ಸರ್ಕಾರ ರೈತರ ಆಗ್ರಹವನ್ನು ಒಪ್ಪಿ, ಬಲವಂತದ ಭೂಸ್ವಾಧೀನವನ್ನು ಕೈಬಿಡಬೇಕೆಂದು ನಿಮಗೆ ಸಾಧ್ಯವಿರುವ ರೀತಿಗಳಲ್ಲಿ ಸರ್ಕಾರವನ್ನು ಒತ್ತಾಯಿಸಿ. ಈ ಹೋರಾಟ ನಾಡಿನ ಆತ್ಮಸಾಕ್ಷಿಯನ್ನು ಬಡಿದೆಬ್ಬಿಸಿದೆ, ಈ ರೈತರಿಗೆ ಗೆಲುವು ಸಿಗಲೇಬೇಕು” ಎಂದು ಮನವಿ ಮಾಡಿದ್ದಾರೆ.
ದೇವನಹಳ್ಳಿ ಏರೋಸ್ಪೇಸ್ ಪಾರ್ಕ್‌ನಂತಹ ಬೃಹತ್ ಯೋಜನೆಗಳು ರಾಜ್ಯದ ಅಭಿವೃದ್ಧಿಗೆ ಪೂರಕವಾಗಿದ್ದರೂ, ಸ್ಥಳೀಯ ರೈತರ ಬದುಕು ಮತ್ತು ಭೂಮಿಯ ಹಕ್ಕನ್ನು ಗೌರವಿಸುವುದು ಅತ್ಯಗತ್ಯ ಎಂಬ ಸಂದೇಶ ಈ ಹೋರಾಟದಿಂದ ಹೊರಹೊಮ್ಮಿದೆ. ಸರ್ಕಾರದ ಸಂಧಾನ ಸಭೆಯ ಫಲಿತಾಂಶ ಕುತೂಹಲ ಮೂಡಿಸಿದೆ.
ಸಚಿವ ಸಂಪುಟ ಸಭೆ; ಪತ್ರಿಕಾಗೋಷ್ಠಿಯಲ್ಲಿ ದೇವನಹಳ್ಳಿ ಭೂಸ್ವಾಧೀನ ವಿಚಾರ ಪ್ರಸ್ತಾಪಿಸದ ಸಿಎಂ


