ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅತ್ಯಾಚಾರ, ಸರಣಿ ಹತ್ಯೆ ಪ್ರಕರಣಗಳ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ಬಹುಭಾಷಾ ನಟ ಪ್ರಕಾಶ್ ರಾಜ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿದ್ದಾರೆ.
ಸದ್ಯಕ್ಕೆ ಎಸ್‌ಐಟಿ ರಚಿಸುವುದಿಲ್ಲ. ಪೊಲೀಸರು ಕೊಡುವ ವರದಿ ಮೇಲೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಶುಕ್ರವಾರ ಹೇಳಿದ್ದರು. ಇದೇ ಹೇಳಿಕೆಯನ್ನು ಸಿಎಂ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸಿಎಂ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಪ್ರಕಾಶ್ ರಾಜ್ “ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ನಿಮ್ಮ ಮಾತಿನ ಮೇಲೆ ಭರವಸೆಯಿದೆ. ಆದರೆ, ಈ ದಾರುಣ ಹಂತಕರನ್ನು, ಅವರನ್ನು ಕಾಪಾಡುತ್ತಿರುವ ಹೀನ ರಾಕ್ಷಸರನ್ನು ನಂಬುವ ಹಾಗಿಲ್ಲ. ದಯವಿಟ್ಟು ತನಿಖೆ ವಿಳಂಬವಾಗಿ ಸಾಕ್ಷಾಧಾರಗಳು ನಾಶವಾಗದಂತೆ ತುರ್ತು ಕ್ರಮ ತೆಗೆದುಕೊಳ್ಳಿ. ಎಸ್‌ಐಟಿ ರಚಿಸಿ ಮತ್ತು ಈವರೆಗೆ ದಾರಿ ತಪ್ಪಿಸಿದ ಅಧಿಕಾರಿಗಳ ಮೇಲೆ ತೀವ್ರ ಕ್ರಮ ಕೈಗೊಳ್ಳಿ” ಎಂದು ಎಂದಿದ್ದಾರೆ.
ಮಾನ್ಯ ಮುಖ್ಯ ಮಂತ್ರಿಗಳೆ.. @siddaramaiah ರವರೆ. ನಿಮ್ಮ ಮಾತಿನ ಮೇಲೆ ಭರವಸೆಯಿದೆ… ಆದರೆ ಈ ದಾರುಣ ಹಂತಕರನ್ನು ..ಅವರನ್ನು ಕಾಪಾಡುತ್ತಿರುವ ಹೀನ ರಾಕ್ಷಸರನ್ನುನಂಬುವ ಹಾಗಿಲ್ಲ…ದಯವಿಟ್ಟು ತನಿಖೆ ವಿಳಂಬವಾಗಿ… ಸಾಕ್ಷಾಧಾರಗಳು ನಾಶವಾಗದಂತೆ… ತುರ್ತು ಕ್ರಮ ತೆಗುದುಕೊಳ್ಳಿ. SIT ರಚಿಸಿ ಮತ್ತು ಈ ವರೆಗೆ ದಾರಿ ತಪ್ಪಿಸಿದ ಅಧಿಕಾರಿಗಳ… https://t.co/FMkZd8Fetl
— Prakash Raj (@prakashraaj) July 18, 2025
ಧರ್ಮಸ್ಥಳ ಗ್ರಾಮದಲ್ಲಿ ಸರಣಿ ಅತ್ಯಾಚಾರ, ಹತ್ಯೆಗಳು ನಡೆದಿದ್ದು, ಅವುಗಳಿಗೆ ಸಂಬಂಧಿಸಿದ ಶವಗಳನ್ನು ನಾನೇ ಹೂತು ಹಾಕಿದ್ದೇನೆ ಎಂದು ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ಅಲ್ಲದೆ, ಈ ಬಗ್ಗೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿ ನ್ಯಾಯಾಧೀಶರ ಮುಂದೆ ಹೇಳಿಕೆಯನ್ನೂ ದಾಖಲಿಸಿದ್ದಾರೆ.
ಹಾಗಾಗಿ, ಪೊಲೀಸರು ತಕ್ಷಣ ಆ ವ್ಯಕ್ತಿ ಹೇಳುವ ಜಾಗದಲ್ಲಿ ಪರಿಶೀಲನೆ ನಡೆಸಿ ಹೆಣಗಳನ್ನು ಹೂತು ಹಾಕಿದ್ದರೆ ಅಸ್ತಿಪಂಜರಗಳನ್ನು ಹೊರತೆಗೆದು ಪರೀಕ್ಷೆಗೊಳಪಡಿಸಬೇಕು. ಪ್ರಕರಣ ಹಳ್ಳ ಹಿಡಿಯುವ ಸಾಧ್ಯತೆ ಇರುವ ಹಿನ್ನೆಲೆ, ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಬೇಕು ಎಂದು ದೇಶದಾದ್ಯಂತ ಆಗ್ರಹಗಳು ವ್ಯಕ್ತವಾಗಿದೆ.
ಧರ್ಮಸ್ಥಳ ಪ್ರಕರಣ: ನ್ಯಾಯಕ್ಕಾಗಿ ಹೋರಾಟ, ಸವಾಲುಗಳು ಮತ್ತು ನಿರೀಕ್ಷೆಗಳು – ಸಮಗ್ರ ವಿಶ್ಲೇಷಣೆ


