ಇತ್ತೀಚಿಗಷ್ಟೇ, ಕೆನಡಾದಲ್ಲಿ ಮಾರ್ಕ್ ಕಾರ್ನಿ ಅವರ ಲಿಬರಲ್ ಪಕ್ಷ ಸತತ ನಾಲ್ಕನೇ ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಡೊನಾಲ್ಡ್ ಟ್ರಂಪ್ ಅವರು ಆರ್ಥಿಕ ನೀತಿಗಳನ್ನು ಬಳಸಿ ಒಡ್ಡುವ ಬೆದರಿಕೆಗಳು, ಸಾಮಾನ್ಯವಾಗಿ ಜೀವನವನ್ನ ನಡೆಸಲು ತಗಲುವ ವೆಚ್ಚದಲ್ಲಿನ ಏರಿಕೆಯಿಂದಾಗಿ ಉಂಟಾಗಿರುವ ಬಿಕ್ಕಟ್ಟು ಮತ್ತು ಕೈಗೆಟುಕದಿರುವ ವಸತಿಗಳ ಬಗೆಗಿನ ಚಿಂತೆ ಈ ಗೆಲುವಿಗೆ ಪ್ರಮುಖ ಕಾರಣಗಳಾಗಿವೆ. ಪೆಸಿಫಿಕ್‌ನಾದ್ಯಂತ, ಆಂಥೋನಿ ಅಲ್ಬನೀಸ್ ನೇತೃತ್ವದ ಆಸ್ಟ್ರೇಲಿಯಾದ ಲೇಬರ್ ಪಕ್ಷ ಭರ್ಜರಿ ಜಯಗಳಿಸಿದ್ದು, ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ (ಪ್ರತಿನಿಧಿ ಸಭೆಯಲ್ಲಿ)ನಲ್ಲಿ ದಾಖಲೆ
ಸಂಖ್ಯೆಯ ಸ್ಥಾನಗಳನ್ನು ಪಡೆದುಕೊಂಡಿದೆ. ವಿರೋಧ ಪಕ್ಷದ ನಾಯಕ ಪೀಟರ್ ಡಟ್ಟನ್ ಅವರು ತೆಗೆದುಕೊಂಡ, ಅಪ್ರಿಯ ನಿಲುವುಗಳು ಲಿಬರಲ್ ನ್ಯಾಷನಲ್ ಒಕ್ಕೂಟಕ್ಕೆ ಹೊರೆಯಾಗಿ ಪರಿಣಮಿಸಿತು.
ಈ ಎರಡೂ ಗೆಲುವುಗಳನ್ನು ಟ್ರಂಪ್-ವಿರೋಧಿ ಪಕ್ಷಗಳ ಏರುಗತಿಯ ಸಂಕೇತವೆಂದು ಪರಿಗಣಿಸಲಾಗಿದೆ. ಹಾಗಾಗಿ, ಅಮೆರಿಕದ ಅಧ್ಯಕ್ಷರು ಅಂತಾರಾಷ್ಟ್ರೀಯ ಸಮಸ್ಯೆಯಾಗಿ ಪರಿಣಮಿಸುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ. ಅದು ಸತ್ಯವೇ ಆದರೂ, ಕೆನಡಾ ಮತ್ತು ಆಸ್ಟ್ರೇಲಿಯಾದ ಆಂತರಿಕ ಸಂಕೀರ್ಣತೆಗಳನ್ನೂ ನಾವು ಮರೆಯುವಂತಿಲ್ಲ
ಕೆನಡಾದ ಚುನಾವಣೆಗಳು
ಪ್ರಧಾನಿ ಮಾರ್ಕ್ ಕಾರ್ನಿ ನೇತೃತ್ವದ ಲಿಬರಲ್ ಪಕ್ಷ ರಾಷ್ಟ್ರೀಯ ಚುನಾವಣೆಗಳಲ್ಲಿ ಜಯ ಗಳಿಸಿದೆ. ಪಕ್ಷವು ಸತತ ನಾಲ್ಕನೇ ಅವಧಿಗೆ ಚುನಾಯಿತವಾಗಿದೆ. ಕೆನಡಾದ ಚುನಾವಣೆಯ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೇಂದ್ರ ವಿಷಯವಾಗಿದ್ದರು. ಟ್ರಂಪ್ ಅವರು ಜಾರಿಗೆ ತಂದ ಸುಂಕಗಳು ಮತ್ತು ಕೆನಡಾವನ್ನು ಸ್ವಾಧೀನಪಡಿಸಿಕೊಂಡು ಅಮೆರಿಕಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ಅವರು ಒಡ್ಡಿದ ಬೆದರಿಕೆಗಳು, ಜೀವನ

ಸಾಗಿಸಲು ವೆಚ್ಚಗಳು ಏರಿಕೆ ಕಂಡದ್ದರ ಪರಿಣಾಮವಾಗಿ ಉಂಟಾದ ಬಿಕ್ಕಟ್ಟುಗಳು ಮತ್ತು ವಸತಿಯು ಜನರ ಕೈಗೆಟುಕದಂತಾಗಿದ್ದು? ಈ ಎಲ್ಲಾ ವಿಚಾರಗಳು ಚುನಾವಣಾ ಸಂದರ್ಭದಲ್ಲಿ ಬಹು ಬಾರಿ ಚರ್ಚಿತವಾಗಿದ್ದವು. ಲಿಬರಲ್‌ಗಳು ಸರ್ಕಾರ ರಚಿಸಲು ಬೇಕಿರುವಷ್ಟು ಸ್ಥಾನಗಳನ್ನು ಈಗಾಗಲೇ ಭದ್ರಪಡಿಸಿಕೊಂಡಿದ್ದು, 168 ಸ್ಥಾನಗಳಲ್ಲಿ ಗೆಲ್ಲುವ ಅಥವಾ ಮುನ್ನಡೆ ಸಾಧಿಸುವ ಸಾಧ್ಯತೆಯಿದೆ. ಪಿಯರೆ ಪೊಯ್ಲೀವ್ರೆ ನೇತೃತ್ವದ ಕನ್ಸರ್ವೇಟಿವ್‌ಗಳು 144 ಸ್ಥಾನಗಳಲ್ಲಿ ಗೆದ್ದಿದ್ದಾರೆ ಅಥವಾ ಮುನ್ನಡೆ ಸಾಧಿಸಿದ್ದಾರೆ.
ಕೆನಡಾದ ಮೇಲೆ ಟ್ರಂಪ್ ಅವರ ಪರಿಣಾಮ
ಸುಂಕಗಳು ಮತ್ತು ಕೆನಡಾವನ್ನು ಸ್ವಾಧೀನಪಡಿಸಿಕೊಳ್ಳುತ್ತೇವೆ ಎಂಬ ನಿಲುವನ್ನೂ ಒಳಗೊಂಡಂತೆ, ಕೆನಡಾದ ಬಗ್ಗೆ ಟ್ರಂಪ್ ಹೊಂದಿರುವ ಆಕ್ರಮಣಕಾರಿ ನಿಲುವುಗಳು ಲಿಬರಲ್‌ಗಳ ಗೆಲುವಿಗೆ ಪ್ರಮುಖ ಅಂಶವಾಗಿತ್ತು. ಆದರೂ, ಚುನಾವಣಾ ಸಂದರ್ಭದಲ್ಲಿ ಇತರ ಪ್ರಮುಖ ವಿಚಾರಗಳೂ ಚರ್ಚೆಗೆ ಒಳಗಾದವು. ಅಧಿಕಾರದಲ್ಲಿದ್ದ ಲಿಬರಲ್ ಪಕ್ಷವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಕೋವಿಡ್-19 ಸಾಂಕ್ರಾಮಿಕ ಹರಡಿದ ಸಮಯದಲ್ಲಿ, ಹಣದುಬ್ಬರದಿಂದಾಗಿ ಜೀವನ ವೆಚ್ಚಗಳು ಏರಿಕೆ ಕಂಡು ಉಂಟಾದ ಬಿಕ್ಕಟ್ಟು ಕೆನಡಾದ ಮತದಾರರನ್ನು ಪ್ರಮುಖವಾಗಿ ಕಾಡಿತ್ತು. ವಸತಿ ಕೈಗೆಟುಕದಿರುವುದು ಮತ್ತು ವಲಸೆ ನೀತಿಗಳು ಉಂಟುಮಾಡುವ ಪರಿಣಾಮಗಳು ಸಹ ನಿರ್ಣಾಯಕವಾಗಿದ್ದವು. ಮೈಕ್ ಕಾರ್ನಿ ಅವರ ಪ್ರಚಾರವು ಟ್ರಂಪ್ ಅವರ ಸುಂಕ ನೀತಿಯನ್ನು ವಿರೋಧಿಸಿದರೆ, ಕಾರ್ಮಿಕರನ್ನು ರಕ್ಷಣೆ ಮತ್ತು ಜೀವನ ವೆಚ್ಚದಲ್ಲಿನ ಹೆಚ್ಚಳದಿಂದ ಉಂಟಾಗಿರುವ ಬಿಕ್ಕಟ್ಟನ್ನು ನಿಭಾಯಿಸುವುದರ ಮೇಲೆ ಕೇಂದ್ರೀಕರಿಸಿತ್ತು. ಕಾರ್ನಿ ಹೊಸ ಸರ್ಕಾರ ಮತ್ತು ಕ್ಯಾಬಿನೆಟ್ ಅನ್ನು ರಚಿಸಲಿದ್ದಾರೆ. ಪ್ರತಿನಿಧಿಗಳ ಸಭೆಯು (ಹೌಸ್ ಆಫ್ ಕಾಮನ್ಸ್) ಮೇ 26 ರಂದು ಪುನರಾರಂಭಗೊಳ್ಳಲಿದೆ.
ಚುನಾವಣೆಗಳ ಮೇಲೆ ಟ್ರುಡೋ ಬೀರಿದ ಪರಿಣಾಮ
ಜಸ್ಟಿನ್ ಟ್ರುಡೋ ಅವರ ರಾಜೀನಾಮೆಯಿಂದ ಲಿಬರಲ್‌ಗಳಿಗೆ ಲಾಭವಾದಂತೆ ತೋರುತ್ತದೆ. ಒಂದು ಕಾಲದಲ್ಲಿ ಮಾಧ್ಯಮಗಳಿಗೆ ಅಚ್ಚುಮೆಚ್ಚಿನವರಾಗಿದ್ದ ಟ್ರುಡೋ ಅವರ ಜನಪ್ರಿಯತೆ ಇತ್ತೀಚಿನ ವರ್ಷಗಳಲ್ಲಿ ಕುಂದಿದೆ. ಕೆನಡಾದ ರಾಜಕಾರಣದಲ್ಲಿ ಸುಮಾರು ಒಂದು ದಶಕದಿಂದಲೂ ಸರಣಿ ಹಗರಣಗಳು ಬೆಳಕಿಗೆ ಬಂದಿದ್ದು ಮತ್ತು ರಾಜಕಾರಣದಲ್ಲಿ ತಪ್ಪು ನಡೆಗಳನ್ನಿಟ್ಟ ಜಸ್ಟಿನ್ ಟ್ರುಡೋ ಅವರ ಜನಪ್ರಿಯತೆ ಕುಸಿದಿದೆ. ಡಿಸೆಂಬರ್ 2017ರಲ್ಲಿ ಸ್ವಹಿತಾಸಕ್ತಿಗಳ ಸಂಘರ್ಷವಿತ್ತು ಎಂಬ ತೀರ್ಪಿನಿಂದ ಅವರ ಜನಪ್ರಿಯತೆಯ ಕುಸಿತ ಪ್ರಾರಂಭವಾಯಿತು. ನಂತರ ಫೆಬ್ರವರಿ 2019ರಲ್ಲಿ, ಎಸ್‌ಎನ್‌ಸಿ-ಲಾವಾಲಿನ್ ಹಗರಣ ಬೆಳಕಿಗೆ ಬಂದರೆ, ಸೆಪ್ಟೆಂಬರ್ 2019ರಲ್ಲಿ

ಬ್ಲಾಕ್‌ಫೇಸ್ ಹಗರಣದಲ್ಲಿ ಅವರು ಜನಾಂಗೀಯತೆಯ ಬಗ್ಗೆ ಅಸಂವೇದನಾಶೀಲ ಎಂಬ ಆರೋಪಕ್ಕೆ ಗುರಿಯಾದರು. ಈ ಘಟನೆಗಳಿಂದಾಗಿ ಅವರು ಸಾರ್ವಜನಿಕರ ವಿಶ್ವಾಸವನ್ನು ಕಳೆದುಕೊಂಡರು. ಪರಿಣಾಮವಾಗಿ, ಅಕ್ಟೋಬರ್ 2019ರಲ್ಲಿ ಪ್ರತಿನಿಧಿಗಳ ಸಭೆಯಲ್ಲಿ ಲಿಬರಲ್‌ಗಳು ಅಲ್ಪಸಂಖ್ಯಾತರಾದರು. ಆಗಸ್ಟ್ 2020ರಲ್ಲಿ ಹಣಕಾಸು ಸಚಿವ ಬಿಲ್ ಮೊರ್ನೊ ಅವರ ರಾಜೀನಾಮೆಯಿಂದ ಮತ್ತು ಸೆಪ್ಟೆಂಬರ್ 2021ರಲ್ಲಿ ಬಹುಮತವನ್ನು ಪಡೆದುಕೊಳ್ಳಲು ವಿಫಲವಾಗಿದ್ದು ಕೂಡ ಮತ್ತಷ್ಟು ಹಿನ್ನಡೆಗಳಿಗೆ ಕಾರಣವಾಯಿತು. ಜುಲೈ 2023ರ ವೇಳೆಗೆ, ಲಿಬರಲ್‌ಗಳು ಜನಪ್ರಿಯತೆ ಬಹಳವಾಗಿ ಕುಸಿಯುತ್ತಿದೆ ಎಂಬ ಸಮೀಕ್ಷೆಗಳು ಹೊರಬಿದ್ದವು. ಈ ಇಳಿಜಾರು ಕೊನೆಗಂಡಿದ್ದು ಜೂನ್ 2024ರ ವಿಶೇಷ ಚುನಾವಣೆಯಲ್ಲಿ ಭಾರಿ ಸೋಲಿನಲ್ಲಿ.
ಫಸ್ಟ್ ಪಾಸ್ಟ್ ದಿ ಪೋಸ್ಟ್ (First Past the Post)
ಲಿಬರಲ್‌ಗಳ ನಿರಂತರ ಗೆಲುವಿನ ಹಿಂದಿನ ಮತ್ತೊಂದು ಅಂಶ ಅಡಗಿರುವುದು ಚುನಾವಣಾ ವ್ಯವಸ್ಥೆಯಲ್ಲಿ. ಕೆನಡಾದ ಫಸ್ಟ್-ಪಾಸ್ಟ್-ದಿ-ಪೋಸ್ಟ್ ಚುನಾವಣಾ ವ್ಯವಸ್ಥೆಯು ಹಲವಾರು ಕಾರಣಗಳಿಗಾಗಿ ಲಿಬರಲ್ ಪಕ್ಷಕ್ಕೆ ಲಾಭದಾಯಕವಾಗಿದೆ. ಇದು ದೊಡ್ಡ ಪಕ್ಷಗಳಿಗೆ ಅನುಕೂಲಕರವಾಗಿದೆ. ಫಸ್ಟ್-ಪಾಸ್ಟ್-ದಿ-ಪೋಸ್ಟ್ ವ್ಯವಸ್ಥೆಯಲ್ಲಿ, ಒಟ್ಟು ಮತಗಳ ಅರ್ಧಕ್ಕಿಂತ ಕಡಿಮೆ ಮತಗಳನ್ನು ಪಡೆದರೂ ಸಹ, ಪ್ರತಿ ಕ್ಷೇತ್ರದಲ್ಲೂ ಅತಿಹೆಚ್ಚು ಮತಗಳನ್ನು ಪಡೆದ ಅಭ್ಯರ್ಥಿ ಸ್ಥಾನವನ್ನು ಗೆಲ್ಲುತ್ತಾನೆ. ಇದರರ್ಥ ಲಿಬರಲ್‌ಗಳು ಸಂಪೂರ್ಣ ಬಹುಮತವನ್ನು ಪಡೆದುಕೊಳ್ಳದೆಯೇ ಅನೇಕ ಸ್ಥಾನಗಳನ್ನು ಗೆಲ್ಲಬಹುದು ಎಂಬುದಾಗಿತ್ತು. ಫಸ್ಟ್-ಪಾಸ್ಟ್-ದಿ-ಪೋಸ್ಟ್ ವ್ಯವಸ್ಥೆಯು ತಂತ್ರಗಾರಿಕೆಯೊಂದಿಗೆ ಮತ ಚಲಾಯಿಸುವುದನ್ನು ಪ್ರೋತ್ಸಾಹಿಸುತ್ತದೆ. ಇದರಡಿ ಮತದಾರರು ತಮ್ಮ ಇಚ್ಛೆಯ ಅಭ್ಯರ್ಥಿಗೆ ಮಾತ್ರವೇ ಮತ ಚಲಾಯಿಸದೆ, ಅವರಿಗೆ ಇಷ್ಟವಿಲ್ಲದ ಅಭ್ಯರ್ಥಿಯನ್ನು ಸೋಲಿಸಲು ಸಾಧ್ಯತೆಯಿರುವವರ ಪರ ಮತ ಚಲಾಯಿಸುತ್ತಾರೆ. ಹಾಗಾಗಿ, ಕನ್ಸರ್ವೇಟಿವ್‌ಗಳಿಗೆ ಹೋಲಿಸಿದಲ್ಲಿ ಲಿಬರಲ್‌ಗಳು ಉತ್ತಮರೆಂದು ಜನರಿಗನಿಸುವ ಕಾರಣದಿಂದ, ಲಿಬರಲ್‌ಗಳಿಗೇ ಈ ವ್ಯವಸ್ಥೆ ಹೆಚ್ಚು ಪೂರಕಾವಗಿರುತ್ತದೆ.
ಆಸ್ಟ್ರೇಲಿಯಾದ ಚುನಾವಣೆ
ಆಸ್ಟ್ರೇಲಿಯಾದ ಒಕ್ಕೂಟ ಚುನಾವಣೆಯು ಮೇ 3, 2025ರಂದು ನಡೆಯಿತು. ಆಂಥೋನಿ ಅಲ್ಬನೀಸ್ ನೇತೃತ್ವದ ಲೇಬರ್ ಪಕ್ಷ ಭರ್ಜರಿ ಜಯಗಳಿಸಿದ್ದು, ತನ್ನ ಇತಿಹಾಸದಲ್ಲೇ ಅತಿಹೆಚ್ಚು, ಅಂದರೆ ಒಟ್ಟು 92 ಸ್ಥಾನಗಳನ್ನು ಪಡೆದುಕೊಂಡಿದೆ. ಹೆಚ್ಚಿನ ಸಮೀಕ್ಷೆಗಳು ಲೇಬರ್ ಪಕ್ಷ ಸರಳ ಬಹುಮತವನ್ನು ಪಡೆಯಬಹುದು ಅಥವಾ ಯಾವುದೇ ಪಕ್ಷ ಬಹುಮತ ಪಡೆಯದೆ ಹೋಗಬಹುದೆಂದು ಊಹಿಸಿದ್ದರಿಂದ ಇದು ಆಶ್ಚರ್ಯಕರವಾಗಿದೆ.
ಆಸ್ಟ್ರೇಲಿಯಾವು ಸೆನೆಟ್ ಮತ್ತು ಪ್ರತಿನಿಧಿ ಸಭೆಯನ್ನು ಒಳಗೊಂಡ ಸಂಸದೀಯ ವ್ಯವಸ್ಥೆಯನ್ನು ಹೊಂದಿದೆ. ಈ ಎರಡೂ ಸಂಸ್ಥೆಗಳು ಸಾಮಾನ್ಯವಾಗಿ ಭಿನ್ನ-ಭಿನ್ನವಾದಂತಹ ಅಧಿಕಾರವನ್ನು ಹೊಂದಿರುತ್ತವೆ. ಅಂದರೆ, ಪ್ರತಿನಿಧಿ ಸಭೆಯೊಂದಿಗೆ ಸೆನೆಟ್ ಹೊಂದಿಕೆಯಾಗಲೇಬೇಕೆಂಬುದಿಲ್ಲ. ಆಸ್ಟ್ರೇಲಿಯಾದಲ್ಲಿ ಮತದಾನ ಕಡ್ಡಾಯವಾಗಿದ್ದು, ಎಲ್ಲರೂ ಮತಚಲಾಯಿಸಲೇಬೇಕು.

ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಚುನಾವಣೆಯಲ್ಲಿ ಈ ಬಾರಿ ಅತಿಮುಖ್ಯ ರಾಜಕೀಯ ಸ್ಪರ್ಧಿಗಳಾಗಿ ಪರಿಣಮಿಸಿದ್ದು ಸೆಂಟರ್ ಆಫ್ ಲೆಫ್ಟ್ ಧೋರಣೆಯ ಲೇಬರ್ ಪಕ್ಷ ಮತ್ತು ಬಲಪಂಥೀಯ ಲಿಬರಲ್ ನ್ಯಾಷನಲ್ ಒಕ್ಕೂಟ. ಈ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ ಅಭ್ಯರ್ಥಿಗಳು ಮತ್ತು ಗ್ರೀನ್ಸ್ ಪಕ್ಷಗಳಿಂದಲೂ ಹೆಚ್ಚಿನವರು ಆಯ್ಕೆಯಾಗಿದ್ದಾರೆ.
ಜೀವನ ನಡೆಸುವುದಕ್ಕೆ ತಗಲುವ ವೆಚ್ಚ, ಪರಮಾಣು ಶಕ್ತಿ, ವಸತಿ ಮತ್ತು ರಕ್ಷಣೆಯ ವಿಚಾರಗಳು ಚರ್ಚೆಗೆ ಒಳಗಾದವು. ನ್ಯಾಷನಲ್ ಲಿಬರಲ್ ಒಕ್ಕೂಟವು ಆಸ್ಟ್ರೇಲಿಯಾದಲ್ಲಿ 20 ವರ್ಷಗಳಲ್ಲಿ ಏಳು ಪರಮಾಣು ವಿದ್ಯುತ್ ಸ್ಥಾವರಗಳನ್ನು ನಿರ್ಮಿಸುವುದಾಗಿ ಪ್ರಚಾರ ನಡೆಸಿತು. ಆದರೆ ಲೇಬರ್ ಪಕ್ಷವು 1.2 ಮಿಲಿಯನ್ ಹೊಸ ಮನೆಗಳನ್ನು ನಿರ್ಮಿಸುವುದಾಗಿ ಭರವಸೆ ನೀಡಿತು. ಆದರೆ, ಎರಡೂ ಪಕ್ಷಗಳು ರಕ್ಷಣಾ ವ್ಯವಸ್ಥೆಗೆ ಹೆಚ್ಚಿನ ಹಣಕಾಸನ್ನು ಮೀಸಲಿಡುವುದಾಗಿ ಘೋಷಿಸಿದವು.
ಪಕ್ಷದ ನಾಯಕತ್ವವು ಚುನಾವಣೆಯನ್ನು ಹೇಗೆ ಎದುರಿಸಿತು
ಲಿಬರಲ್ ನ್ಯಾಷನಲ್ ಒಕ್ಕೂಟದ ನಾಯಕ ಪೀಟರ್ ಡಟ್ಟನ್ಗೆ ಹೋಲಿಸಿದಲ್ಲಿ ಅಲ್ಬನೀಸ್ ಮತದಾರರಿಗೆ ಹೆಚ್ಚು ಪ್ರಿಯ ಎಂಬಂತೆ ಕಾಣಿಸಿತು. ಡಟ್ಟನ್ ಟ್ರಂಪ್-ತರಹದ ನೀತಿಗಳ, ಅದರಲ್ಲೂ ವಿಶೇಷವಾಗಿ ವಲಸಿಗರನ್ನು ಗಡಿಪಾರು ಮಾಡುವ ಮತ್ತು ಆಡಳಿತಕ್ಕೆ ಮೀಸಲಿಡುವ ಹಣಕಾಸನ್ನು ಕಡಿತಗೊಳಿಸುವ ಬಗ್ಗೆ ಗಮನ ಹರಿಸಿದರು. ಇದರಿಂದಾಗಿ, ಜನರ ಮನದಲ್ಲಿ ಆ ಬಗ್ಗೆ ಬಹಳಷ್ಟು ಪ್ರಶ್ನೆಗಳು ಎದುರಾದವು. ಪೀಟರ್ ಡಟ್ಟನ್ ಅವರ ಅಪ್ರಿಯತೆ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಿದ ಬಹುಮುಖ್ಯ ಅಂಶವಾಗಿತ್ತು. ಚುನಾವಣಾ ಸಂದರ್ಭದಲ್ಲಿ ಚರ್ಚೆಯಾಗುತ್ತಿದ್ದ ವಿಚಾರಗಳ ಬಗೆಗಿನ ಅವರ ಅಸ್ಥಿರ ನಿಲುವುಗಳಿಂದಾಗಿ ಡಟ್ಟನ್ ವಿವಿಧ ವಿಷಯಗಳ ಬಗ್ಗೆ ಸುಳ್ಳು ಹೇಳುತ್ತಾರೆ ಎಂಬ ಅಪಖ್ಯಾತಿಯನ್ನು ಮುಡಿಗೇರಿಸಿಕೊಂಡರು. ಟ್ರಂಪ್-ತರಹದ ನೀತಿಗಳನ್ನು ಒಪ್ಪುವ ಕಾರಣಕ್ಕೆ ಅವರಿಗೆ “ಟ್ರಂಪ್ ವಿಸ್ಪರರ್” ಎಂಬ ಅಡ್ಡ ಹೆಸರೂ ಅಂಟಿಕೊಂಡು, ವಲಸಿಗರನ್ನು ಗಡಿಪಾರು ಮಾಡುವ ಮತ್ತು ಆಡಳಿತಕ್ಕೆ ಮೀಸಲಿರಿಸುವ ಹಣವನ್ನು ಕಡಿತಗೊಳಿಸುವ ಅವರ ನಿಲುವುಗಳು ಅವರನ್ನು ಮತದಾರರಿಂದ ಮತ್ತಷ್ಟು ದೂರ ಮಾಡಿತು. “ಆಂಕರ್ ಬೇಬಿಗಳು” ಮತ್ತು ಅವರ ಮುಸ್ಲಿಂ ವಿರೋಧಿ ಹೇಳಿಕೆಗಳಿಂದಾಗಿ ಡಟ್ಟನ್ ದ್ವೇಷವನ್ನು ಬಿತ್ತುತ್ತಿದ್ದಾರೆ ಎಂಬ ಮಾತುಗಳೂ ಕೇಳಿಬಂದವು. ಮತದಾರರನ್ನು ಒಡೆದಾಳುವ ಆಲೋಚನೆಗಳನ್ನು ಮತದಾರರು ಒಪ್ಪಲೇ ಇಲ್ಲ.
ಚಿಕ್ಕ-ಪುಟ್ಟ ಪಕ್ಷಗಳಿಗೆ ಮತ್ತು ಸ್ವತಂತ್ರವಾಗಿ ಆಯ್ಕೆಯಾಗುವ ಅಭ್ಯರ್ಥಿಗಳಿಗೂ ಆಡಳಿತದಲ್ಲಿ ಮುಖ್ಯ ಪಾತ್ರವನ್ನು ವಹಿಸಿಕೊಡುವ ಗುಣ ಆಸ್ಟ್ರೇಲಿಯಾದ ಚುನಾವಣಾ ವ್ಯವಸ್ಥೆಯಲ್ಲಿರುವ ಕಾರಣಕ್ಕೆ ಸ್ವತಂತ್ರವಾಗಿ ಸ್ಪರ್ಧಿಸುವವರಿಗೆ ಅದು ವರದಾನವಾಗಿ ಪರಿಣಮಿಸುತ್ತದೆ. ಈ ಕಾರಣದಿಂದಾಗಿ, ಇತರ ಅನೇಕ ಪ್ರಜಾಪ್ರಭುತ್ವಗಳಿಗೆ ಹೋಲಿಸಿದಲ್ಲಿ ಆಸ್ಟ್ರೇಲಿಯಾ ಭಿನ್ನವಾಗಿ ನಿಲ್ಲುತ್ತದೆ. ಈ ಸಂಪ್ರದಾಯವು ಮತದಾರರನ್ನು ಪ್ರಮುಖವಲ್ಲದ ಪಕ್ಷಗಳ ಅಭ್ಯರ್ಥಿಗಳಿಗೂ ಮತ ಚಲಾಯಿಸಲು ಅನುವು ಮಾಡಿಕೊಡುತ್ತದೆ.
ಇತ್ತೀಚಿನ ವರ್ಷಗಳಲ್ಲಿ, ಪ್ರಮುಖ ಪಕ್ಷಗಳು ಪಡೆಯುವ ಮತಸಂಖ್ಯೆಯಲ್ಲಿ ಕುಸಿತ ಉಂಟಾಗಿದ್ದು, ಇದು ಚುನಾವಣಾ ಫಲಿತಾಂಶಗಳನ್ನು ಸೂಕ್ಷ್ಮವಾಗಿ ವಿಶ್ಲೇಷಣೆಗೆ ಒಳಪಡಿಸಬೇಕು ಎಂಬುದನ್ನು ಮನಗಾಣಿಸುತ್ತದೆ. ಈ ಬದಲಾವಣೆಯಿಂದಾಗಿ ಸ್ವತಂತ್ರರು ಮತ್ತು ಸಣ್ಣ ಪಕ್ಷಗಳಿಗೆ ಪ್ರಾಬಲ್ಯ ಸಾಧಿಸಲು ಸಾಧ್ಯವಾಗಿದೆ. ಆಸ್ಟ್ರೇಲಿಯಾದ ಚುನಾವಣಾ ವ್ಯವಸ್ಥೆಯು ಸ್ವತಂತ್ರ ಅಭ್ಯರ್ಥಿಗಳನ್ನು ಪೋಷಿಸಿ, ಭಾರತೀಯ ಅಥವಾ ಅಮೆರಿಕದ ಚುನಾವಣೆಗಳಂತೆ ಕೇಂದ್ರೀಕರಣಕ್ಕೆ ಒಳಗಾಗುವುದರಿಂದ ಕಾಪಿಡುತ್ತದೆ.
2001ರಿಂದಲೂ, ಸ್ವತಂತ್ರರು ಮತ್ತು ಸಣ್ಣ ಪಕ್ಷಗಳು ಪ್ರಮುಖ ಪಕ್ಷದ ಅಭ್ಯರ್ಥಿಗಳಿಗಿಂತಲೂ ಹೆಚ್ಚಿನ ಅಂತರದಲ್ಲಿ ಚುನಾವಣೆಗಳನ್ನು ಗೆದ್ದಿದ್ದಾರೆ. ಆದಕಾರಣ, ಚುನಾವಣೆಯ ಫಲಿತಾಂಶವನ್ನು ಊಹಿಸುವುದಕ್ಕೆ ಅವಕಾಶ ಒದಗಿಸದೆ, ಚಿಕ್ಕ-ಪುಟ್ಟ ಪಾರ್ಟಿಗಳ ಅಭ್ಯರ್ಥಿಗಳಿಗೆ ಹೆಚ್ಚು ಅನುಕೂಲಕರ ವಾತಾವರಣವನ್ನು ನಿರ್ಮಿಸಿದೆ. 2022ರ ಒಕ್ಕೂಟ ಚುನಾವಣೆಯು ಕೂಡಾ ಆಸ್ಟ್ರೇಲಿಯಾದ ರಾಜಕಾರಣದಲ್ಲಿ ಸ್ವತಂತ್ರರು ಮಹತ್ವದ ಪಾತ್ರವನ್ನು ವಹಿಸಿದ್ದಾರೆ ಎಂಬುದನ್ನು ತೋರಿಸುತ್ತದೆ.
ಉಪಸಂಹಾರ
ಕೆನಡಾ ಮತ್ತು ಆಸ್ಟ್ರೇಲಿಯಾ ಎರಡರಲ್ಲೂ, ಮತದಾರರು ಭಾರಿ ಬಹುಮತಗಳೊಂದಿಗೆ ಪಕ್ಷಗಳನ್ನು ಆಯ್ಕೆ ಮಾಡಿದ್ದಾರೆ. ಕೆನಡಾದಲ್ಲಿ, ಮಾರ್ಕ್ ಕಾರ್ನಿ ಅವರ ಲಿಬರಲ್ ಪಕ್ಷವು ಸತತ ನಾಲ್ಕನೇ ಅವಧಿಗೆ ಅಧಿಕಾರವನ್ನು ಭದ್ರಪಡಿಸಿಕೊಂಡಿದೆ. ಕಾರ್ನಿ ಅವರ ವಿಜಯವು ಲಿಬರಲ್ ಪಕ್ಷದ ನಿಲುವುಗಳನ್ನು ಬಲಪಡಿಸಿದರೂ ಕೂಡಾ, ಫಸ್ಟ್-ಪಾಸ್ಟ್-ದಿ-ಪೋಸ್ಟ್ ಮತದಾನದಂತಹ ಚುನಾವಣಾ ವ್ಯವಸ್ಥೆ ಅವರು ನಿರಂತರವಾಗಿ ಪ್ರಾಬಲ್ಯ ಸಾಧಿಸುವುದಕ್ಕೆ ಕಾರಣವಾಗಿದೆ ಎಂಬುದನ್ನು ಸೂಚಿಸುತ್ತಿದೆ.
ಆಸ್ಟ್ರೇಲಿಯಾದಲ್ಲಿ, ಆಂಥೋನಿ ಅಲ್ಬನೀಸ್ ಅವರ ಲೇಬರ್ ಪಕ್ಷವು ಐತಿಹಾಸಿಕ ಭರ್ಜರಿ ಗೆಲುವಿನೊಂದಿಗೆ ಎಲ್ಲಾ ರೀತಿಯ ನಿರೀಕ್ಷೆಗಳನ್ನು ಮೀರಿ ಅತಿಹೆಚ್ಚಿನ ಸ್ಥಾನಗಳನ್ನು ಪಡೆದುಕೊಂಡಿದೆ. ಆರ್ಥಿಕತೆ, ರಕ್ಷಣಾನೀತಿಗಳು ಮತ್ತು ಪರಮಾಣು ಶಕ್ತಿ ಪ್ರಸ್ತಾಪಗಳನ್ನು ಮುಂದಿಟ್ಟ ಕಾರಣಕ್ಕೆ ಮತದಾರರ ಭಾವನೆಗಳು ಬದಲಾಗಿದ್ದು ನಿಜವೇ ಆದರೂ ಪೀಟರ್ ಡಟ್ಟನ್ ಅವರ ನಾಯಕತ್ವ ಆ ಪಕ್ಷದ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಅವರ ಅಪ್ರಿಯತೆಯು ಲಿಬರಲ್ ನ್ಯಾಷನಲ್ ಒಕ್ಕೂಟವನ್ನು ದುರ್ಬಲಗೊಳಿಸಿ ಹೆಚ್ಚಿನ ಮತದಾರರನ್ನು ಲೇಬರ್ ಪಕ್ಷಕ್ಕೆ ಮತ ಚಲಾಯಿಸುವಂತೆ ಒತ್ತಾಯಿಸಿತು.
ಕಿಶೋರ್ ಗೋವಿಂದ
(ಕನ್ನಡಕ್ಕೆ: ಶಶಾಂಕ್ ಎಸ್ ಆರ್)


