ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ ಅವರನ್ನು ಬೆಂಗಳೂರಿನಲ್ಲಿ ಇಂದು ಬೆಳಿಗ್ಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಧ್ಯಪ್ರದೇಶದ 22 ಬಂಡಾಯ ಶಾಸಕನ್ನು ಭೇಟಿಯಾಗಲು ಪ್ರಯತ್ನಿಸಿದಾಗ ಪೊಲೀಸರು ಅವರನ್ನು ವಶಕ್ಕೆ ಪಡೆದರು.
ಕಳೆದ ವಾರ ಕಾಂಗ್ರೆಸ್ ತ್ಯಜಿಸಿ ಬಿಜೆಪಿಗೆ ಸೇರ್ಪಡೆಗೊಂಡಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಪರವಾಗಿರುವ ಶಾಸಕರು ರಾಜೀನಾಮೆ ನೀಡಿದ್ದರಿಂದ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರ ಕುಸಿಯುವ ಸಾಧ್ಯತೆಯಲ್ಲಿದೆ. ಶಾಸಕರನ್ನು ಬೆಂಗಳೂರಿನಲ್ಲಿ ಸೆರೆಯಲ್ಲಿಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಇಂದು ಮುಂಜಾನೆ ಬೆಂಗಳೂರಿಗೆ ಬಂದಿಳಿದ ದಿಗ್ವಿಜಯ ಸಿಂಗ್ ಅವರನ್ನು ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ನಂತರ ನೇರವಾಗಿ ಉತ್ತರ ಬೆಂಗಳೂರಿನ ಯಲಹಂಕಾದ ರಾಮದಾ ಹೋಟೆಲ್ ಗೆ ತೆರಳಿದ್ದರು.
“ಅವರು ಹಿಂತಿರುಗಬೇಕೆಂದು ನಾವು ನಿರೀಕ್ಷಿಸುತ್ತಿದ್ದೇವೆ. ನಾನು ವೈಯಕ್ತಿಕವಾಗಿ ಐದು ಶಾಸಕರೊಂದಿಗೆ ಮಾತನಾಡಿದ್ದೇನೆ. ಅವರು ಸೆರೆಯಾಳುಗಳಾಗಿದ್ದಾರೆ ಹಾಗೂ ಅವರ ಫೋನ್‌ಗಳನ್ನು ಕಸಿದುಕೊಳ್ಳಲಾಗಿದೆ” ಎಂದು ದಿಗ್ವಿಜಯ ಸಿಂಗ್ ಆರೋಪಿಸಿದ್ದಾರೆ.
“ಪ್ರತಿ ಕೋಣೆಯ ಮುಂದೆ ಪೊಲೀಸರು ಕಾಯುತ್ತಿದ್ದಾರೆ, ಅವರಲ್ಲಿ ಕೆಲವರು ತಮ್ಮ ಇಚ್ಛೆಗೆ ವಿರುದ್ಧವಾಗಿ ಬೆಂಗಳೂರಿನಲ್ಲಿದ್ದೇವೆ ಎಂದು ಹೇಳಿದ್ದಾರೆ” ಎಂದು ದಿಗ್ವಿಜಯ ಸಿಂಗ್ ಹೇಳಿದರು.
“ಬಿಜೆಪಿಯ ಪ್ರಜಾಪ್ರಭುತ್ವದ ಮಾದರಿ: ಶಾಸಕರು ಸಿಎಂ ಜೊತೆ ಮಾತನಾಡಲು ಸಾಧ್ಯವಿಲ್ಲ, ಶಾಸಕರು ತಮ್ಮ ಕುಟುಂಬ ಸದಸ್ಯರೊಂದಿಗೆ ಮಾತನಾಡಲು ಸಾಧ್ಯವಿಲ್ಲ, ಶಾಸಕರು ಸ್ಪೀಕರ್ ಜೊತೆ ಮಾತನಾಡಲು ಸಾಧ್ಯವಿಲ್ಲ, ಶಾಸಕರು ಪಕ್ಷದ ಮುಖಂಡರೊಂದಿಗೆ ಮಾತನಾಡಲು ಸಾಧ್ಯವಿಲ್ಲ. ಶಾಸಕರು ನಿಯಂತ್ರಿತ ಸನ್ನಿವೇಶಗಳಲ್ಲಿ ಮತ್ತು ವಿರೋಧ ಪಕ್ಷಗಳು ನಿಯೋಜಿಸಿರುವ ಗೂಂಡಾಗಳ ಕಣ್ಣಿನಡಿಯಲ್ಲಿ ಮಾತ್ರ ಮಾತನಾಡುತ್ತಾರೆ”ಎಂದು ದಿಗ್ವಿಜಯ ಸಿಂಗ್ ಟ್ವೀಟ್ ಮಾಡಿದ್ದಾರೆ.
“ಬಿಜೆಪಿಯ ಸೆರೆಯಲ್ಲಿರುವ ನಮ್ಮ ಶಾಸಕರನ್ನು ಭೇಟಿ ಮಾಡಲು ನಮಗೆ ಅವಕಾಶ ನೀಡಬೇಕು ಎಂದು ನಾನು ಒತ್ತಾಯಿಸುತ್ತೇನೆ. ನಮ್ಮ ಶಾಸಕರನ್ನು ಭೇಟಿ ಮಾಡಲು ನಮಗೆ ಅವಕಾಶ ನೀಡುವವರೆಗೂ ನಾನು ಉಪವಾಸ ಸತ್ಯಾಗ್ರಹವನ್ನು ಘೋಷಿಸುತ್ತೇನೆ. ನಾವು ಪ್ರಜಾಪ್ರಭುತ್ವದಲ್ಲಿ ಇದ್ದೇವೆ, ಸರ್ವಾಧಿಕಾರ ದೇಶದಲ್ಲಿ ಅಲ್ಲ” ಎಂದು ದಿಗ್ವಿಜಯ ಸಿಂಗ್ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ನ 22 ಶಾಸಕರು ರಾಜೀನಾಮೆ ನೀಡಿ, ಕಮಲ್ ನಾಥ್ ಸರ್ಕಾರವನ್ನು ಕುಸಿಯುವ ಅಪಾಯಕ್ಕೆ ತಳ್ಳಿದ್ದಾರೆ. ಆರು ಕಾಂಗ್ರೆಸ್ ಶಾಸಕರ ರಾಜಿನಾಮೆಯನ್ನು ಸ್ಪೀಕರ್ ಶನಿವಾರ ಅಂಗೀಕರಿಸಿದ ನಂತರ, ಪಕ್ಷವು ಈಗ 108 ಶಾಸಕರನ್ನು ಹೊಂದಿದೆ.


