Homeಕರ್ನಾಟಕಮುಖ್ಯಮಂತ್ರಿ ಬದಲಾವಣೆ ಚರ್ಚೆ; ಬಿಜೆಪಿಯ ರಾಜಕೀಯ ಲೆಕ್ಕಾಚಾರಗಳೇನು?

ಮುಖ್ಯಮಂತ್ರಿ ಬದಲಾವಣೆ ಚರ್ಚೆ; ಬಿಜೆಪಿಯ ರಾಜಕೀಯ ಲೆಕ್ಕಾಚಾರಗಳೇನು?

- Advertisement -
- Advertisement -

ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮುಖ್ಯಮಂತ್ರಿ ಬದಲಾವಣೆ ಎಂಬುದು ಸಾಮಾನ್ಯ ಸಂಗತಿಯಾಗಿಬಿಟ್ಟಿದೆ. ಉತ್ತರಾಖಂಡ ರಾಜ್ಯದಲ್ಲಿ ಈ ಒಂದೇ ವರ್ಷದಲ್ಲಿ ಮೂವರು ಮುಖ್ಯಮಂತ್ರಿಗಳು ಬಂದು ಹೋಗಿದ್ದಾರೆ. ಗುಜರಾತ್‌ನಲ್ಲಿ ಸಿಎಂ ಬದಲಾವಣೆ ಆಗಿದೆ. ಕರ್ನಾಟಕದಲ್ಲಿಯೂ ಬಿಜೆಪಿ ಆಡಳಿತದ ಎರಡು ವರ್ಷಗಳಲ್ಲಿ ಇಬ್ಬರು ಮುಖ್ಯಮಂತ್ರಿಗಳಾಗಿದ್ದು, ಇನ್ನೂ 6 ತಿಂಗಳು ಕೂಡ ಅಧಿಕಾರ ಪೂರೈಸದ ನೂತನ ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಸಹ ಬದಲಿಸಲಾಗುತ್ತದೆ ಎಂಬ ಚರ್ಚೆಗಳು ಆರಂಭವಾಗಿವೆ.

ಇದೆಲ್ಲಾ ಆರಂಭವಾಗಿದ್ದು ಹೀಗೆ.. ನವೆಂಬರ್ 29ರಂದು ಬಾಗಲಕೋಟೆಯ ಬೀಳಗಿಯಲ್ಲಿನ ಸಾರ್ವಜನಿಕ ಕಾರ್ಯಕ್ರಮದಲ್ಲಿ “ನಮ್ಮ ನಾಯಕರಾದ ಮುರುಗೇಶ ನಿರಾಣಿಯವರು ಆದಷ್ಟು ಬೇಗ ಮುಖ್ಯಮಂತ್ರಿಯಾಗುತ್ತಾರೆ” ಎಂದು ಸಚಿವ ಈಶ್ವರಪ್ಪನವರು ಹೇಳಿಕೆ ನೀಡಿದರು. ಆದಾದ ನಂತರ ಡಿಸೆಂಬರ್ 18ರಂದು ಬೆಂಗಳೂರಿನ ಸಾವರ್ಕರ್ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಬಿ.ಎಲ್ ಸಂತೋಷ್, “ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಸಿಎಂ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಿದ್ದಾರೆ ಎಂದು ಚರ್ಚೆಯಾಗ್ತಿದೆ. ಕೆಲವು ಪತ್ರಕರ್ತರು ಸಹ ಹಾಗೆಯೇ ಭಾವಿಸಿರಬಹುದು. ಆದರೆ ವೀರ ಸಾವರ್ಕರ್ ಬಗ್ಗೆ ಸಿಎಂ ಮಾತುಗಳನ್ನು ಕೇಳಿದರೆ ಅದ್ಯಾವುದು ಇಲ್ಲ ಎಂಬುದು ಎಲ್ಲರಿಗೂ ಸ್ಪಷ್ಟವಾಗುತ್ತದೆ” ಎಂದು ಹೇಳಿದರು. ಆ ವೇದಿಕೆಯಲ್ಲಿ ಆ ಮಾತುಗಳು ಬೇಕಿರಲಿಲ್ಲ. ಆದರೂ ಉದ್ದೇಶಪೂರ್ವಕವಾಗಿ ಹೇಳಿದರು. ಡಿಸೆಂಬರ್ 19 ಭಾನುವಾರದಂದು ಬೊಮ್ಮಾಯಿ ತಮ್ಮ ತವರು ಕ್ಷೇತ್ರವಾದ ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಮಾತಾಡುತ್ತಾ ಭಾವುಕರಾಗಿ, ’ಅಧಿಕಾರದ ಎಲ್ಲಾ ಸ್ಥಾನಗಳು ತಾತ್ಕಾಲಿಕ, ಯಾವುದು ಶಾಶ್ವತವಲ್ಲ’ ಎಂದಿದ್ದಾರೆ. ಆದರೆ ಅದಕ್ಕಿಂತ ಮುಖ್ಯವಾದುದೆಂದರೆ ಅದೇ ಕಾರ್ಯಕ್ರಮದಲ್ಲಿ ಬೊಮ್ಮಾಯಿ ಭಾಷಣದ ನಂತರ ಮಾತನಾಡಿದ ಮುರುಗೇಶ ನಿರಾಣಿ, “ಬೊಮ್ಮಾಯಿಯವರು ಕೇಂದ್ರ ಸಂಪುಟದಲ್ಲಿ ಮಂತ್ರಿಯಾಗಲಿದ್ದಾರೆ” ಎಂದರು. ಈ ಎಲ್ಲಾ ಹೇಳಿಕೆಗಳು ಮುಖ್ಯಮಂತ್ರಿ ಬದಲಾವಣೆ ಎಂಬುದು ಕೇವಲ ಊಹಾಪೋಹವಲ್ಲ ಎಂಬುದನ್ನು ಒತ್ತಿ ಹೇಳುತ್ತಿವೆ. ಇದಿಷ್ಟೇ ಅಲ್ಲದೆ, ಶಿಗ್ಗಾಂವಿ ಸಾರ್ವಜನಿಕ ಸಭೆಗೂ ಮುಂಚಿತವಾಗಿ ಬೊಮ್ಮಾಯಿಯವರಿಗೆ ಬಂದ ಕರೆಯ ನಂತರ ಅವರ ಮುಖಚರ್ಯೆ ಬದಲಾಗಿ ಸಪ್ಪಗಾಗಿ ಹೋದರು ಎಂಬ ಗಾಳಿಮಾತುಗಳು ಕೂಡ ಇದಕ್ಕೆ ಪುಷ್ಟಿ ನೀಡುತ್ತಿವೆ. ಹೈಕಮಾಂಡ್‌ನಿಂದ ಬಂದ ಕರೆಯ ಬಗ್ಗೆ ಹಲವು ಬಗೆಯ ರೀತಿಯ ಮಾತುಗಳಿದ್ದರೂ, ಸಿಎಂ ಬದಲಾವಣೆಯ ಬಗ್ಗೆ ವಿವಿಧ ಬಣಗಳು ಆಕ್ಟಿವ್ ಆಗಿರುವುದಂತೂ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಕಾರಣವೇನಿರಬಹುದು?

ಈ ಹಿಂದೆ ಯಡಿಯೂರಪ್ಪ ಪಟ್ಟು ಹಿಡಿದ ಆಪರೇಷನ್ ಕಮಲ ನಡೆಸಿ, 75 ವರ್ಷ ದಾಟಿದ್ದರೂ ಸಹ ಪಕ್ಷದ ಅಘೋಷಿತ ಷರತ್ತನ್ನು ಧಿಕ್ಕರಿಸಿ ಮುಖ್ಯಮಂತ್ರಿಯಾದವರು. ಅದು ಬಿಜೆಪಿ ಹೈಕಮಾಂಡ್‌ಗೆ ನುಂಗಲಾರದ ತುತ್ತಾಗಿತ್ತು. ಅವರ ಮೇಲಿದ್ದ ಭ್ರಷ್ಟಾಚಾರದ ಪ್ರಕರಣಗಳು, ಆಡಳಿತದಲ್ಲಿ ಮಗ ವಿಜಯೇಂದ್ರನ ಹಸ್ತಕ್ಷೇಪ ಮತ್ತು ಭ್ರಷ್ಟಾಚಾರದ ಆರೋಪಗಳಿಂದಾಗಿ ಸರ್ಕಾರದ ಕುರಿತು ಜನರಲ್ಲಿ ನೆಗೆಟಿವ್ ಇಮೇಜ್ ಕಟ್ಟಿಕೊಟ್ಟಿದ್ದವು. ಹಾಗಾಗಿ 2023ರ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ದೊಡ್ಡ ರಿಸ್ಕ್ ತೆಗೆದುಕೊಂಡು ಅಂತೂಇಂತೂ ಅವರನ್ನು ಕೆಳಗಿಳಿಸಲಾಗಿತ್ತು. ಆ ಸಮಯದಲ್ಲಿ ಬೊಮ್ಮಾಯಿಯವರಿಗೆ ಕೆಲ ಸೂಚನೆಗಳನ್ನು ನೀಡಿ ಸರ್ಕಾರದ ಆ ಇಮೇಜ್ ಬದಲಿಸುವ ಟಾಸ್ಕ್‌ನೊಂದಿಗೆ ಅಧಿಕಾರ ನೀಡಲಾಗಿತ್ತು. ಅದು ಕೂಡ ಹೈಕಮಾಂಡ್ ಆಯ್ಕೆಯಾಗಿರದೆ ಯಡಿಯೂರಪ್ಪನವರ ಆಯ್ಕೆಯೇ ಆಗಿತ್ತು ಎಂಬುದು ಕೂಡ ಬಣ್ಣಿಸಲಾಗಿತ್ತು. ಆದರೆ ಹೈಕಮಾಂಡ್ ಬಯಸಿದ ಹೊಸ ಇಮೇಜ್ ಕೊಡುವಲ್ಲಿ ವಿಫಲವಾಗಿರುವ ಬೊಮ್ಮಾಯಿಯವರು ಹಳೇ ಹಾದಿಯಲ್ಲಿಯೆ ನಡೆಯುತ್ತಿದ್ದಾರೆ ಎನ್ನುತ್ತವೆ ಮೂಲಗಳು.

ಚುನಾವಣಾ ಸೋಲುಗಳು

ಇನ್ನು ಬೊಮ್ಮಾಯಿಯವರು ಮುಖ್ಯಮಂತ್ರಿ ಆದ ನಂತರ ನಡೆದ ಎರಡು ವಿಧಾನಸಭಾ ಉಪಚುನಾವಣೆಗಳಲ್ಲಿ ಅವರ ತವರು ಕ್ಷೇತ್ರ ಹಾನಗಲ್‌ನಲ್ಲಿಯೇ ಬಿಜೆಪಿ ಹೀನಾಯ ಸೋಲು ಅನುಭವಿಸಿತು. ತದನಂತರ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಕೇವಲ 11 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಪ್ರತಿಪಕ್ಷ ಕಾಂಗ್ರೆಸ್ ಸಹ 11 ಸ್ಥಾನ ಗೆದ್ದು ಪ್ರಬಲ ಪೈಪೋಟಿ ನೀಡಿತು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ 14 ಸ್ಥಾನ ಗೆದ್ದರೆ, ಪ್ರತಿಪಕ್ಷ ಬಿಜೆಪಿ 06 ಸ್ಥಾನ ಗೆದ್ದಿತ್ತು. ಈಗ ಬಿಜೆಪಿ ಅಧಿಕಾರದಲ್ಲಿರುವಾಗ ಆಡಳಿತ ಮತ್ತು ಪ್ರತಿಪಕ್ಷಗಳೆರಡು ತಲಾ 11 ಸ್ಥಾನ ಗೆದ್ದದ್ದು ಬೊಮ್ಮಾಯಿಯವರ ವಿಫಲತೆಯೆಂದೇ ಹೇಳಲಾಗುತ್ತಿದೆ.

ದ್ವಿಸದಸ್ಯ ಕ್ಷೇತ್ರಗಳಾದ ಬೆಳಗಾವಿಯಲ್ಲಿ ಬಿಜೆಪಿ 13 ಶಾಸಕರು, 3 ಸಂಸದರು ಮತ್ತು ಇಬ್ಬರು ಸಚಿವರಿದ್ದರೂ ಬಿಜೆಪಿ ಹೀನಾಯ ಸೋಲು ಕಂಡಿತು. ಮೈಸೂರಿನಲ್ಲಿ ಬಿಜೆಪಿ ಖಾತೆ ತೆರೆಯಲಾಗಲಿಲ್ಲ. ಬೀದರ್‌ನಲ್ಲಿ ಸೋಲು, ಚಿಕ್ಕಮಗಳೂರಿಲ್ಲಿ ಕೇವಲ 6 ಮತಗಳ ಗೆಲುವು, ಕೊಡಗಿನಲ್ಲಿ ಕಡಿಮೆ ಅಂತರದ ಜಯ ಬಿಜೆಪಿಯನ್ನು ಕಂಗಾಲಾಗಿಸಿದೆ. ಈ ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಸರ್ಕಾರದ ಇಮೇಜ್ ಏನೇ ಇದ್ದರೂ ಕನಿಷ್ಟ ಎಲೆಕ್ಷನ್ ಗೆಲ್ಲುತ್ತಿದ್ದದ್ದು ಕೂಡ ಈಗ ಇಲ್ಲವಾಗಿದೆ.

ಬಿಟ್‌ಕಾಯಿನ್ ಹಗರಣ

ಬಿಟ್‌ಕಾಯಿನ್ ಹಗರಣದಲ್ಲಿ ಸಿಎಂ ಬಸವರಾಜ ಬೊಮ್ಮಾಯಿಯವರ ಹೆಸರು ಆಗಾಗ ಕೇಳಿಬಂದಿದೆ. ಪ್ರಿಯಾಂಕ ಖರ್ಗೆಯವರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿಯೂ ಬೊಮ್ಮಾಯಿಯವರ ವಿರುದ್ಧ ಪರೋಕ್ಷವಾಗಿ ಆರೋಪ ಮಾಡಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ, ಅವರಿಗಿಂತಲೂ ಅವರ ಮಗನ ಮೇಲೆ ಹೆಚ್ಚು ಆರೋಪಗಳು ಕೇಳಿಬರುತ್ತಿದ್ದವು. ಆದರೆ ಬಿಟ್‌ಕಾಯಿನ್ ಭ್ರಷ್ಟಾಚಾರದಲ್ಲಿ ಈಗ ಸಿಎಂ ಬೊಮ್ಮಾಯಿಯವರ ಹೆಸರು ಕೂಡ ಕೇಳಿಬರುತ್ತಿದೆ. ಇದು ಬಿಜೆಪಿ ಅನಿವಾರ್ಯವಾಗಿ ನಾಯಕತ್ವ ಬದಲಾವಣೆಗೆ ಕೈ ಹಾಕುವಂತೆ ಮಾಡಿದೆ ಎನ್ನಲಾಗುತ್ತಿದೆ.

ಇನ್ನೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೂಡ ಪ್ರಭಾವಿ ನಾಯಕರೇನಲ್ಲ. ಗೆಲ್ಲಿಸಿಕೊಂಡು ಬರುವ ಶಕ್ತಿ ಅವರಿಗಿಲ್ಲ. ಇನ್ನು ಬೊಮ್ಮಾಯಿಯವರು ಈಗಾಗಲೇ ಬಿಜೆಪಿ ಗೆಲ್ಲಿಸಲು ವಿಫಲರಾಗಿರುವ ಹಿನ್ನೆಲೆಯಲ್ಲಿ 2023ರ ಚುನಾವಣೆಗೆ ಇವರಿಬ್ಬರನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗುವುದು ಬೇಡ ಎಂದು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ ಎನ್ನಲಾಗುತ್ತಿದೆ. ಕಟೀಲ್ ಅವರು ಕೆಲವು ತಿಂಗಳುಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಇರುವುದು ಕೂಡ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅವರ ಬದಲಾವಣೆಯೂ ನಿಶ್ಚಿತ ಎನ್ನಲಾಗುತ್ತಿದೆ.

ಸಿಎಂ ರೇಸ್‌ಗೆ ಮತ್ತೊಂದು ಹೆಸರು ಸೇರ್ಪಡೆ

ಮುಖ್ಯಮಂತ್ರಿ ಬದಲಾವಣೆ ಚರ್ಚೆ ಆರಂಭವಾದೊಡನೆ ಎಲ್ಲರ ಪ್ರಶ್ನೆ ಮುಂದಿನ ಸಿಎಂ ಯಾರಾಗಬಹುದು ಎನ್ನುವುದಾಗಿದೆ. ಈ ಹಿಂದೆ ಯಡಿಯೂರಪ್ಪನವರನ್ನು ಕೆಳಗಿಳಿಸಿದಾಗ ಜೋರಾಗಿ ಕೇಳಿಬಂದ ಹೆಸರು ಮುರುಗೇಶ ನಿರಾಣಿ. ಸಿಎಂ ರೇಸ್‌ನ ಅಂತಿಮ ಹಂತದವರೆಗೂ ಅವರಿದ್ದರು. ಬಿಜೆಪಿಯ ವರಿಷ್ಠರನ್ನೆಲ್ಲಾ ಭೇಟಿಯಾಗಿದ್ದರು. ಆದರೂ ಅವರಿಗೆ ಅಧಿಕಾರ ದಕ್ಕಿರಲಿಲ್ಲ. ಈ ಬಾರಿ ಪಡೆದೇ ತೀರುವುದಾಗಿ ಪಣ ತೊಟ್ಟಿದ್ದಾರೆ. ಪ್ರಬಲ ಲಿಂಗಾಯಿತ ಮಠಗಳ ಬೆಂಬಲ ಅವರಿಗಿದೆ.

ಶೋಭಾ ಕರಂದ್ಲಾಜೆ ಎಂಟ್ರಿ

ಇದು ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿರುವ ಹೆಸರಾಗಿದೆ. ಶೋಭಾರವರು ಸಿಎಂ ಆದರೆ ಯಡಿಯೂರಪ್ಪನವರ ಸಮ್ಮತಿ ಇದ್ದೆ ಇರುತ್ತದೆ, ಲಿಂಗಾಯಿತರಲ್ಲದವರು ಸಿಎಂ ಆಗುವುದರಿಂದ ಒಕ್ಕಲಿಗ ಸೇರಿ ಇತರ ಹಿಂದುಳಿದ ಮತಗಳ ಮೇಲೆ ಕಣ್ಣಿಡುವುದರ ಜೊತೆಗೆ ಲಿಂಗಾಯಿತ ಸರ್ಕಾರ ಎಂಬ ಆರೋಪದಿಂದ ಹೊರಬಂದು ಹಳೇ ಮೈಸೂರು ಪ್ರಾಂತ್ಯದಲ್ಲಿ ಪಕ್ಷದ ಪ್ರಾಬಲ್ಯವನ್ನು ಹೆಚ್ಚಿಸಬಹುದು ಎಂಬುದು ಪಕ್ಷದ ಲೆಕ್ಕಾಚಾರ. ಕರ್ನಾಟಕದ ಮೊದಲ ಮಹಿಳಾ ಮುಖ್ಯಮಂತ್ರಿ ಎಂಬ ಅಡ್ವಂಟೇಜ್ ಪಡೆದುಕೊಳ್ಳುವುದರ ಜೊತೆಗೆ ಬೊಮ್ಮಾಯಿಯಷ್ಟು ಪೇಲವ ಅಲ್ಲದ ಶೋಭಾರವರು ಡೈನಾಮಿಕ್ ಆಗಿದ್ದು ಪಕ್ಷಕ್ಕೆ ಹೊಸ ಇಮೇಜ್ ತರಬಲ್ಲರು ಎಂಬ ಆಸೆ ಬಿಜೆಪಿಯದು. ಜೊತೆಗೆ ಹಿಂದುತ್ವದ ಫೈರ್‌ಬ್ರಾಂಡ್ ಆಗಿಯೂ ಶೋಭಾ ಕೆಲಸ ಮಾಡಬಲ್ಲರು ಎಂಬುದು ಅವರ ಹೆಸರು ಮುನ್ನಲೆಗೆ ಬರಲು ಕಾರಣವಾಗಿದೆ. ಅಲ್ಲದೆ ಶೋಭಾ ಕರಂದ್ಲಾಜೆಯವರು ಸದ್ಯಕ್ಕೆ ಯಡಿಯೂರಪ್ಪ ಬಣದಲ್ಲಿ ಮಾತ್ರ ಗುರುತಿಸಿಕೊಂಡವರಲ್ಲ. ಬಿ.ಎಲ್ ಸಂತೋಷ್ ಸೇರಿದಂತೆ ಇತರರಿಗೂ ಹತ್ತಿರವಾಗಿರುವ ಅವರು ಕೇಂದ್ರ ಮಂತ್ರಿಯಾದರಲ್ಲದೆ ಉತ್ತರ ಪ್ರದೇಶ ಚುನಾವಣೆಯ ಒಂದಿಷ್ಟು ಜವಾಬ್ದಾರಿ ಸಹ ಹೊತ್ತಿದ್ದಾರೆ.

ಇದಲ್ಲದೆ ಈ ಹಿಂದೆ ಕೇಳಿಬಂದಂತೆ ಸಿ.ಟಿ ರವಿ, ಅಶ್ವಥ್ ನಾರಾಯಣ ಮತ್ತು ಜಗದೀಶ್ ಶೆಟ್ಟರ್‌ರವರು ಹೆಸರುಗಳು ಸಿಎಂ ರೇಸ್‌ನಲ್ಲಿವೆ.

ಬಿಜೆಪಿಯ ದೂರಾಲೋಚನೆಯೇನು?

ಯಾವುದೇ ರಾಜ್ಯದಲ್ಲಿ ಮಾಸ್ ಲೀಡರ್ ಆಗಿರುವವರು ಸಿಎಂ ಆಗುವುದು ಬಿಜೆಪಿಗೆ ಬೇಕಾಗಿಲ್ಲ, ಹೈಕಮಾಂಡ್ ಹೇಳಿದಂತೆ ಕೇಳುವವರು ಬೇಕು. ಇದನ್ನು ಯಡಿಯೂರಪ್ಪನವರನ್ನು ಇಳಿಸಿದ ಪ್ರಕರಣ ಸೇರಿದಂತೆ ಮಹಾರಾಷ್ಟ್ರ, ಗುಜರಾತ್‌ನಲ್ಲಿ ಕೂಡ ಕಾಣಬಹುದು. ಹಾಗೆಯೇ ಯಾವುದಾದರೂ ಪ್ರಬಲ ಸಮುದಾಯದ ನಾಯಕರಿಗಿಂತ ಅಲ್ಪಸಂಖ್ಯಾತ ಸಮುದಾಯದ, ಹೈಕಮಾಂಡ್ ಹಂಗಿನಲ್ಲಿರುವವರು ಸಿಎಂ ಇರಬೇಕೆಂದು ಮೋದಿ, ಶಾ ಬಯಸುತ್ತಾರೆ ಎಂಬುದಕ್ಕೆ ಹಲವಾರು ಉದಾಹರಣೆಗಳಿವೆ. ಆ ಮೂಲಕ ಕೇಂದ್ರ ಬಿಜೆಪಿ ನಾಯಕರ ವರ್ಚಸ್ಸು ಮತ್ತು ಹಿಂದುತ್ವದ ಮೂಲಕ ಚುನಾವಣೆಗಳನ್ನು ಗೆಲ್ಲಬೇಕೆಂದು ಬಿಜೆಪಿ ಬಯಸುತ್ತದೆ. ಈಗಾಗಲೇ ಕೆಲವು ರಾಜ್ಯಗಳಲ್ಲಿ ಅದನ್ನು ಸಾಧಿಸಲಾಗಿದೆ. ಅದರ ಭಾಗವಾಗಿ ಕರ್ನಾಟಕದಲ್ಲಿಯೂ ಸಹ ಲಿಂಗಾಯತ ಸಮುದಾಯವೊಂದನ್ನೇ ಅವಲಂಬಿಸುವುದನ್ನು ಬಿಟ್ಟು ಹಿಂದುತ್ವದ ಮೂಲಕ ಅಧಿಕಾರಕ್ಕೇರಲು ಅದು ಹವಣಿಸುತ್ತಿದೆ. ಈ ಆರು ತಿಂಗಳಿನಲ್ಲಿ ಮತೀಯ ಗೂಂಡಾಗಿರಿ ಪ್ರಕರಣಗಳು, ಚರ್ಚ್‌ಗಳ ಮೇಲೆ ದಾಳಿಗಳು, ಗೋ ರಕ್ಷಕರ ಹಾವಳಿ ಹೆಚ್ಚಾಗಿರುವುದು ಅದನ್ನೇ ಸೂಚಿಸುತ್ತದೆ. ಮತಾಂತರ ನಿಷೇಧ ಮಸೂದೆಯಂತಹ ವಿವಾದಾತ್ಮಕ ಹಾಗೂ ಸಂವಿಧಾನ ವಿರೋಧಿ ಎನ್ನಲಾಗಿರುವ ಕಾನೂನನ್ನು ಕೂಡ ವಿಧಾನಸಭೆಯಲ್ಲಿ ಮಂಡಿಸಲು ಸರ್ಕಾರ ಸಿದ್ಧವಾಗಿದೆ.

ಹಿಂದೆಯೆಲ್ಲ ನಾಯಕತ್ವ ಬದಲಾವಣೆ ವಿಷಯ ಬಂದಾಗ ಇಲ್ಲಇಲ್ಲ ಎನ್ನುತ್ತಲೇ ಬದಲಾವಣೆ ಮಾಡಿರುವ ಬಿಜೆಪಿ ಸಂಕ್ರಾಂತಿ ನಂತರ ಬೊಮ್ಮಾಯಿಯವರನ್ನು ಇಳಿಸಲು ನೋಡುತ್ತಿದೆ. ಅನಾರೋಗ್ಯವೋ ಮತ್ತೊಂದೊ ಕಾರಣ ನೀಡಿ ಬಿಜೆಪಿ ರಾಜಕೀಯಕ್ಕೆ ಸಹಾಯ ಮಾಡುವಂತಹ ಡೈನಾಮಿಕ್ ಆದವರೊಬ್ಬರನ್ನು ತಂದು ಒಂದು ವರ್ಷದ ನಂತರ ಚುನಾವಣೆಗೆ ಹೋಗಬೇಕು ಎಂಬುದು ಬಿಜೆಪಿಯ ಹಂಬಲ. ಇದರಲ್ಲಿ ಬಿಜೆಪಿ ಯಶಸ್ವಿಯಾಗಲಿದೆಯೇ? ಇಲ್ಲ ಇದು ಬಿಜೆಪಿಗೆ ತಿರುಗುಬಾಣವಾಗಲಿದೆಯೇ?

  • ಮುತ್ತುರಾಜು

ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಸಿಎಂ ಬದಲಾವಣೆ ಚರ್ಚೆ: ಅಧಿಕಾರ ಶಾಶ್ವತವಲ್ಲ ಎಂದ ಬಸವರಾಜ ಬೊಮ್ಮಾಯಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಆದಷ್ಟು ಬೇಗ ಈ ರಾಕ್ಷಸ ಪ್ರವೃತ್ತಿಯ ದರಿದ್ರ ಸರ್ಕಾರ ಅಧಿಕಾರ ಕಳೆದುಕೊಳ್ಳಲೆಂದು ಬಯಸುವೆವು. ಅದರಂತೆಯೇ ಈ ರಾಕ್ಷಸ ಸಂತತಿ ಸಂಘ ಹಾಗೂ ಅದರ ಕೋಮುವಾದಿ ಅಂಗಸಂಸ್ಥೆಗಳೂ ಕೂಡ ನಾಶವಾಗಿ ರಾಜ್ಯದಲ್ಲಿ ಹಾಗೂ ದೇಶದೆಲ್ಲೆಡೆ ಕೋಮುಸೌಹಾರ್ದ ಭಾವನೆ ಮೂಡಿ ನಮ್ಮ ನೆಲೆ ಸರ್ವ ಜನಾಂಗದ ಶಾಂತಿಯ ಬೀಡು ಆಗಬೇಕೆಂದು ಬಯಸುತ್ತೇವೆ

  2. ಆದಷ್ಟು ಬೇಗ ಈ ರಾಕ್ಷಸ ಪ್ರವೃತ್ತಿಯ ದರಿದ್ರ ಸರ್ಕಾರ ಅಧಿಕಾರ ಕಳೆದುಕೊಳ್ಳಲೆಂದು ಬಯಸುವೆವು. ಅದರಂತೆಯೇ ಈ ರಾಕ್ಷಸ ಸಂತತಿ ಸಂಘ ಹಾಗೂ ಅದರ ಕೋಮುವಾದಿ ಅಂಗಸಂಸ್ಥೆಗಳೂ ಕೂಡ ನಾಶವಾಗಿ ರಾಜ್ಯದಲ್ಲಿ ಹಾಗೂ ದೇಶದೆಲ್ಲೆಡೆ ಕೋಮುಸೌಹಾರ್ದ ಭಾವನೆ ಮೂಡಿ ನಮ್ಮ ನೆಲೆ ಸರ್ವ ಜನಾಂಗದ ಶಾಂತಿಯ ಬೀಡು ಆಗಬೇಕೆಂದು ಬಯಸುತ್ತೇವೆ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...