ಖಾಸಗಿ ಟಿವಿ ಚಾನೆಲ್‌ಗಳು ತನ್ನ ವಾಟ್ಸಾಪ್ ಸಂಭಾಷಣೆಯ ವಿಷಯಗಳನ್ನು ಪ್ರಕಟಿಸುವುದನ್ನು ನಿಷೇಧಿಸಬೇಕೆಂದು ಕೋರಿದ್ದ ಪರಿಸರ ಕಾರ್ಯಕರ್ತೆ ದಿಶಾರವರ ಮನವಿಯ ವಿಚಾರಣೆಯನ್ನು ಇಂದು ನಡೆಸಿದ ದೆಹಲಿ ಹೈಕೋರ್ಟ್ ಹಲವಾರು ಚಾನೆಲ್‌ಗಳಿಗೆ ನೋಟಿಸ್ ಜಾರಿ ಮಾಡಿದ್ದು, ನಾಳೆ ವಿಚಾರಣೆ ಮುಂದುವರೆಯಲಿದೆ.
ಬೆಂಗಳೂರು ಪರಿಸರ ಕಾರ್ಯಕರ್ತೆ ದಿಶಾ ರವಿ ಅವರು ತಮ್ಮ ಖಾಸಗಿ ಚಾಟ್‌ಗಳ ವಿಷಯಗಳು ಸೇರಿದಂತೆ ತನಿಖಾ ಸಾಮಗ್ರಿಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡದಂತೆ ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ರೈತರ ಪ್ರತಿಭಟನೆಯ ಮಧ್ಯೆ “ಟೂಲ್‌ಕಿಟ್ ಪ್ರಕರಣ”ಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ ಅವರು, ಖಾಸಗಿ ಟಿವಿ ಚಾನೆಲ್‌ಗಳು ತನ್ನ ವಾಟ್ಸಾಪ್ ಸಂಭಾಷಣೆಯ ವಿಷಯಗಳನ್ನು ಪ್ರಕಟಿಸುವುದನ್ನು ನಿಷೇಧಿಸಬೇಕೆಂದು ಕೋರಿದ್ದಾರೆ.
ಟೆಲಿವಿಷನ್ ಚಾನೆಲ್‌ಗಳಾದ ನ್ಯೂಸ್ 18, ಇಂಡಿಯಾ ಟುಡೆ ಮತ್ತು ಟೈಮ್ಸ್ ನೌ ಚಾನೆಲ್‌ಗಳು ಮೂರನೇ ವ್ಯಕ್ತಿಯೊಂದಿಗೆ ತನ್ನ ಖಾಸಗಿ ಚಾಟ್‌ಗಳ ವಿಷಯವನ್ನು ಪ್ರಕಟಿಸಿದ್ದಕ್ಕಾಗಿ ಕೇಬಲ್ ಟಿವಿ ನೆಟ್‌ವರ್ಕ್ ನಿಯಮಗಳನ್ನು ಉಲ್ಲಂಘಿಸಿವೆ ಎಂದು ದಿಶಾ ಆರೋಪಿಸಿದ್ದಾರೆ.
ಇದನ್ನೂ ಓದಿ: ನಿರ್ಲಕ್ಷ್ಯಕ್ಕೆ ಒಳಗಾಗಿದ್ದೇವೆ ಎಂದು ಪ್ರತ್ಯೇಕ ರಾಜ್ಯ ಕೇಳುವುದು ಸರಿಯಲ್ಲ: ಉಪ ಮುಖ್ಯಮಂತ್ರಿ ಸವದಿ
ನ್ಯಾಯಯುತ ವಿಚಾರಣೆಯ ಹಕ್ಕುಗಳು ಮತ್ತು ತನ್ನ ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸುವ ರೀತಿಯಲ್ಲಿ ವರದಿ ಮಾಡಿದ ಮೇಲಿನ ಮೂರು ಚಾನೆಲ್‌ಗಳು ಮತ್ತು ಅಂತಹ ಇತರ ಖಾಸಗಿ ಚಾನೆಲ್‌ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕು ಎಂದು ದಿಶಾ ನ್ಯಾಯಾಲಯವನ್ನು ಕೋರಿದ್ದಾರೆ.
ವಿಚಾರಣೆಯ ಮುಕ್ತಾಯದವರೆಗೂ ತನ್ನ ಯಾವುದೇ ಖಾಸಗಿ ವಾಟ್ಸಾಪ್ ಸಂದೇಶಗಳು ಅಥವಾ ಯಾವುದೇ ಖಾಸಗಿ ಸಂಭಾಷಣೆಗಳನ್ನು ಪ್ರಸಾರ ಮಾಡುವುದನ್ನು ತಡೆಯುವಂತೆ ನಿರ್ದೇಶನ ನೀಡಲು ಅವರು ಕೋರಿದ್ದಾರೆ.
“ತನಿಖಾ ಸಾಮಗ್ರಿಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡುವುದು ಕಾನೂನುಬಾಹಿರವಾಗಿದೆ, ಅದು ಗೌಪ್ಯತೆ ಮತ್ತು ಘನತೆಯ ಹಕ್ಕನ್ನು ಉಲ್ಲಂಘಿಸುತ್ತದೆ ಮತ್ತು ನ್ಯಾಯಯುತ ವಿಚಾರಣೆಯ ಹಕ್ಕನ್ನು ಗಮನಾರ್ಹವಾಗಿ ಪೂರ್ವಾಗ್ರಹಿಸುತ್ತದೆ. ದೆಹಲಿ ಪೊಲೀಸರ ಕ್ರಮಗಳು ಹೀಗೆ ಸಂವಿಧಾನದ 21 ನೇ ವಿಧಿಯನ್ನು ಉಲ್ಲಂಘಿಸುತ್ತವೆ ಎಂದು ಅವರು ಹೇಳಿದ್ದಾರೆ.
“ಕೆ.ಎಸ್.ಪುಟ್ಟಸ್ವಾಮಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ” ಪ್ರಕರಣದಲ್ಲಿ ಗೌರವಾನ್ವಿತ ಸುಪ್ರೀಂ ಕೋರ್ಟ್‌ನ ಒಂಬತ್ತು ನ್ಯಾಯಾಧೀಶರ ಪೀಠವು, ಫೋನ್‌ನಲ್ಲಿನ ಸಂಭಾಷಣೆಗಳು ನಿಕಟ ಮತ್ತು ಗೌಪ್ಯ ಸ್ವರೂಪದ್ದಾಗಿವೆ ಎಂದು ಗುರುತಿಸಿತ್ತು ಮತ್ತು ಆರ್ಟಿಕಲ್ 21 ಸೂಚಿಸುವಂತೆ, ವ್ಯಕ್ತಿಯ ಗೌಪ್ಯತೆಯನ್ನು ಮೂಲಭೂತ ಹಕ್ಕಿನಡಿಯಲ್ಲಿ ರಕ್ಷಿಸಬೇಕು ಎಂದು ಆದೇಶಿಸಿತ್ತು.
ಇದನ್ನೂ ಓದಿ: ಭರವಸೆಯೇ ಬದುಕು ಎನ್ನುವುದನ್ನು ಮರೆಯದಿರೋಣ: ಅಭಿಮಾನಿಯ ಅಂತ್ಯಕ್ರಿಯೆಯಲ್ಲಿ ಸಿದ್ದರಾಮಯ್ಯ ಭಾಗಿ
ಅದೇ ರೀತಿ, ಗೌರವಾನ್ವಿತ ಸುಪ್ರೀಂ ಕೋರ್ಟ್ “ಸುಬ್ರಮಣ್ಯಂ ಸ್ವಾಮಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ” ಪ್ರಕರಣದಲ್ಲಿ, 21ನೆ ಆರ್ಟಿಕಲ್‌ನ ಮಹತ್ವವನ್ನು ಎತ್ತಿ ಹಿಡಿದಿತ್ತು ಎಂದು ದಿಶಾ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ದಿಶಾ ಪರವಾಗಿ ಹಾಜರಾದ ಹಿರಿಯ ವಕೀಲ ಅಖಿಲ್ ಸಿಬಲ್, ಬಂಧನದ ಒಂದು ದಿನದ ನಂತರ, ಟಿವಿ ಚಾನೆಲ್‌ಗಳು ಆಪಾದಿತ ಚಾಟ್‌ಗಳ ಕುರಿತು ವರದಿ ಮಾಡುತ್ತಿವೆ. “ನಾನು ಚಾನೆಲ್‌ಗಳೊಂದಿಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ ಎಂದು ದಿಶಾ ಹೇಳಿದ್ದಾರೆ” ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ದೆಹಲಿ ಪೊಲೀಸ್ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ದಿಶಾ ಅವರ ಮನವಿಯು ಮಾಧ್ಯಮಗಳ ಗಮನ ಸೆಳೆಯುವ ಉದ್ದೇಶ ಹೊಂದಿದೆ. ಪೊಲೀಸರ ಕಡೆಯಿಂದ ಯಾವುದೇ ಸೋರಿಕೆ ಸಂಭವಿಸಿಲ್ಲ ಎಂದು ಅಫಿಡವಿಟ್ ಸಲ್ಲಿಸುವುದಾಗಿ ಹೇಳಿದ್ದಾರೆ.
ಟೆಲಿವಿಷನ್ ಚಾನೆಲ್‌ಗಳಿಗೆ ನೋಟಿಸ್ ಜಾರಿಗೊಳಿಸಿರುವ ನ್ಯಾಯಾಲಯ, ನಾಳೆ ಈ ವಿಷಯವನ್ನು ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ.
ದಿಶಾ ಅವರನ್ನು ಟೂಲ್‌ಕಿಟ್ ಪ್ರಕರಣದಲ್ಲಿ ಭಾನುವಾರ ಅವರ ಬೆಂಗಳೂರು ಮನೆಯಿಂದ ಬಂಧಿಸಲಾಗಿದ್ದು, ಅಂದಿನಿಂದ ದೆಹಲಿ ಪೊಲೀಸರ ವಶದಲ್ಲಿದ್ದಾರೆ.
ಇದನ್ನೂ ಓದಿ: ‘ಫಾಸ್ಟ್ಯಾಗ್’ ಕೇಂದ್ರ ಸರ್ಕಾರದ ಯೋಜಿತ ಹಗಲು ದರೋಡೆ- ಆಮ್ ಆದ್ಮಿ ಪಕ್ಷ ಆರೋಪ


