ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ‘ಶಕ್ತಿ’ (ಮಹಿಳೆಯರ ಉಚಿತ ಬಸ್ ಪ್ರಯಾಣ) ಯೋಜನೆಯನ್ನು ಮರುಪರಿಶೀಲನೆಗೆ ಒಳಪಡಿಸುವ ಸುಳಿವನ್ನು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಬುಧವಾರ (ಅ.30) ನೀಡಿದ್ದಾರೆ.
ವಿಧಾನಸೌಧದ ಮುಂಭಾಗ ಐರಾವತ ಕ್ಲಬ್ ಕ್ಲಾಸ್ 2.0 ನೂತನ ಬಸ್‌ಗಳನ್ನು ಸಾರ್ವಜನಿಕ ಸೇವೆಗೆ ಅರ್ಪಣೆ ಮಾಡಿದ ಬಳಿಕ ಮಾತನಾಡಿದ ಅವರು “ಶಕ್ತಿ ಯೋಜನೆಯನ್ನು ಮರುಪರಿಶೀಲನೆಗೆ ಒಳಪಡಿಸಬೇಕು ಎಂದು ಹಲವುಯ ಮಹಿಳೆಯರು ಸಾಮಾಜಿಕ ಜಾಲತಾಣ ಎಕ್ಸ್ ಮತ್ತು ಇ-ಮೇಲ್ ಮೂಲಕ ಮನವಿ ಮಾಡಿದ್ದಾರೆ” ಎಂದು ತಿಳಿಸಿದ್ದಾರೆ.
“ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಪ್ರಯಾಣಿಸುವಾಗ ನಾವು ಹಣ ಕೊಡಲು ಮುಂದಾದರೂ ನಿರ್ವಾಹಕರು ತೆಗೆದುಕೊಳ್ಳುವುದಿಲ್ಲ. ಆರ್ಥಿಕವಾಗಿ ಅನುಕೂಲ ಸ್ಥಿತಿಯಲ್ಲಿ ಇರುವ ಕಾರಣ ಟಿಕೆಟ್ ತೆಗೆದುಕೊಳ್ಳುವ ಶಕ್ತಿಯಿದ್ದು, ನಮಗೆ ಉಚಿತ ಪ್ರಯಾಣ ಬೇಡವೆಂದು ಶೇ 5ರಿಂದ 10ರಷ್ಟು ಮಹಿಳೆಯರು ಹೇಳುತ್ತಿದ್ದಾರೆ. ಈ ಕುರಿತು ಪ್ರತ್ಯೇಕ ಸಭೆ ಕರೆದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರ ಜೊತೆ ಚರ್ಚಿಸಲಾಗುವುದು” ಎಂದಿದ್ದಾರೆ.
“ಕೆಎಸ್ಆರ್‌ಟಿಸಿ ಆರಂಭವಾದಾಗ ಕೇವಲ 120 ಬಸ್‌ಗಳಿದ್ದವು. ಇಂದು 24,282 ಬಸ್‌ಗಳಿವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ 6,200 ಬಸ್‌ಗಳ ಖರೀದಿಗೆ ಸಮ್ಮತಿ ನೀಡಿದೆ. ಅವುಗಳಲ್ಲಿ 3,400 ಬಸ್‌ಗಳನ್ನು ಖರೀದಿಸಲಾಗಿದೆ. 1.80 ಕೋಟಿ ಜನರು ಪ್ರಯಾಣಿಸುತ್ತಿದ್ದಾರೆ. ಸುಮಾರು ಒಂಬತ್ತು ಸಾವಿರ ಚಾಲಕರು ಹಾಗೂ ನಿರ್ವಾಹಕರ ನೇಮಕಾತಿಗೂ ಚಾಲನೆ ನೀಡಲಾಗಿದೆ” ಎಂದು ಡಿಕೆಶಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಈ ವೇಳೆ ಉಪಸ್ಥಿತರಿದ್ದರು.
ಇದನ್ನೂ ಓದಿ : ಪಿಚ್ಚಳ್ಳಿ, ಜನ್ನಿ, ವಕೀಲರಾದ ಬಾಲನ್ ಸೇರಿದಂತೆ 69 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ


