Homeಮುಖಪುಟಯೋಗಿ ಆದಿತ್ಯನಾಥ್ ವಿರುದ್ಧದ ಹೋರಾಟವನ್ನು ವಿಶ್ವಸಂಸ್ಥೆಗೆ ಕೊಂಡ್ಯೊಯ್ದ ಡಾ.ಕಫೀಲ್ ಖಾನ್!

ಯೋಗಿ ಆದಿತ್ಯನಾಥ್ ವಿರುದ್ಧದ ಹೋರಾಟವನ್ನು ವಿಶ್ವಸಂಸ್ಥೆಗೆ ಕೊಂಡ್ಯೊಯ್ದ ಡಾ.ಕಫೀಲ್ ಖಾನ್!

ಭಾರತದಲ್ಲಿ ದುರ್ಬಲ ವರ್ಗಗಳ ಪರ ಹೋರಾಟ ಮಾಡುವವರನ್ನು ಗುರಿಮಾಡಿ ಹಿಂಸಿಸಲಾಗುತ್ತಿದೆ. ಅವರ ಮೇಲೆ ಪೊಲೀಸ್ ಬಲ ಬಳಸಲಾಗುತ್ತಿದೆ. ಭಯೋತ್ಪಾದನೆಯಂತಹ ಪ್ರಕರಣಗಳನ್ನು ಹಾಕಿ ಕಟ್ಟಿಹಾಕಲಾಗುತ್ತಿದೆ..

- Advertisement -
- Advertisement -

ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿತರಾಗಿ ಇತ್ತೀಚೆಗೆ ಬಿಡುಗಡೆಯಾಗಿರುವ ಉತ್ತರ ಪ್ರದೇಶದ ವೈದ್ಯ ಡಾ.ಕಫೀಲ್ ಖಾನ್ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧದ ಹೋರಾಟವನ್ನು ವಿಶ್ವಸಂಸ್ಥೆವರೆಗೂ ಕೊಂಡ್ಯೊಯ್ದಿದ್ದಾರೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಗೆ ಪತ್ರ ಬರೆದಿರುವ ಅವರು, ಭಾರತದಲ್ಲಿ ಅಂತರಾಷ್ಟ್ರೀಯ ನಿರ್ಧರಿತ ಮಾನವ ಹಕ್ಕುಗಳ ಮಾನದಂಡಗಳ ಸ್ಪಷ್ಟ ಉಲ್ಲಂಘನೆಯೊಂದಿಗೆ ಭಿನ್ನಮತೀಯರನ್ನು ಹತ್ತಿಕ್ಕಲು ಎನ್‌ಎಸ್‌ಎ ಮತ್ತು ಯುಎಪಿಎಯಂತಹ ಕಠಿಣ ಕಾಯ್ದೆಗಳ ದುರ್ಬಳಕೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಎರಡು ಬಾರಿ ಉತ್ತರ ಪ್ರದೇಶ ಪೊಲೀಸರಿಂದ ಬಂಧಿತರಾಗಿ ಸಾಕ್ಷ್ಯಾಧಾರಗಳ ಕೊರತೆಯಿಂದ ಬಿಡುಗಡೆಗೊಂಡಿರುವ ಮಕ್ಕಳ ವೈದ್ಯ ಡಾ.ಕಫೀಲ್ ಖಾನ್ ತಮ್ಮ ವಿರುದ್ಧ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜಕೀಯ ಹಗೆತನ ಸಾಧಿಸುತ್ತಿದ್ದಾರೆ ಎಂದು ಪತ್ರದಲ್ಲಿ ದೂರಿದ್ದಾರೆ.

ಭಾರತದಲ್ಲಿ ದುರ್ಬಲ ವರ್ಗಗಳ ಪರ ಹೋರಾಟ ಮಾಡುವವರನ್ನು ಗುರಿಮಾಡಿ ಹಿಂಸಿಸಲಾಗುತ್ತಿದೆ. ಅವರ ಮೇಲೆ ಪೊಲೀಸ್ ಬಲ ಬಳಸಲಾಗುತ್ತಿದೆ. ಭಯೋತ್ಪಾದನೆಯಂತಹ ಪ್ರಕರಣಗಳನ್ನು ಹಾಕಿ ಕಟ್ಟಿಹಾಕಲಾಗುತ್ತಿದೆ. ಎಲ್ಲಕ್ಕಿಂತ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗುತ್ತಿದೆ ಎಂದು ತಮ್ಮ ಪತ್ರದಲ್ಲಿ ಖಾನ್ ಪ್ರಸ್ತಾಪಿಸಿದ್ದಾರೆ.

ಜೂನ್ 25ರಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವೇದಿಕೆಯು ಭಾರತ ಸರ್ಕಾರಕ್ಕೆ ಪತ್ರ ಬರೆದು 11 ಜನ ಹೋರಾಟಗಾರರ ಮೇಲಿನ ಪ್ರಭುತ್ವ ಹಿಂಸೆಯನ್ನು ನಿಲ್ಲಿಸುವಂತೆ ಒತ್ತಾಯಿಸಿತ್ತು. ಅದರಲ್ಲಿ ಡಾ.ಕಫೀಲ್ ಖಾನ್ ಮತ್ತು ಶಾರ್ಜಲ್ ಇಮಾಮ್ ಸಹ ಸೇರಿದ್ದರು. ಜೈಲಿನಲ್ಲಿರುವ ಈ ಹೋರಾಟಗಾರರನ್ನು ಹಿಂಸಿಸಲಾಗುತ್ತಿದೆ ಮತ್ತು ಸಮರ್ಪಕ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿಲ್ಲ ಎಂದು ದೂರಿತ್ತು.

ತಮ್ಮ ಪತ್ರದಲ್ಲಿ ವಿಶ್ವಸಂಸ್ಥೆಯ ಈ ಕ್ರಮಕ್ಕೆ ಧನ್ಯವಾದ ತಿಳಿಸಿರುವ ಡಾ.ಖಾನ್ ಜೈಲಿನಲ್ಲಿ ತಮಗಾದ ಕಹಿ ಅನುಭವಗಳನ್ನು ಪಟ್ಟಿ ಮಾಡಿದ್ದಾರೆ. ತನ್ನನ್ನು ತುಂಬಿ ತುಳುಕುತ್ತಿದ್ದ ಮಥುರಾ ಜೈಲಿನಲ್ಲಿ ಕೂಡಿಹಾಕಲಾಗಿತ್ತು. ಹಲವು ದಿನಗಳವರೆಗೆ ಊಟ, ನೀರು ಸಹ ನೀಡಲಿಲ್ಲ. ಅಮಾನವೀಯವಾಗಿ ವರ್ತಿಸುತ್ತಿದ್ದ ಜೈಲು ಅಧಿಕಾರಿಗಳು ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದರು. ಒಟ್ಟಿನಲ್ಲಿ 7 ತಿಂಗಳ ಜೈಲುವಾಸದಲ್ಲಿ ಜರ್ಜರಿತಗೊಂಡಿದ್ದೆ ಎಂದು ಖಾನ್ ತಿಳಿಸಿದ್ದಾರೆ.

ಅಲ್ಲದೇ ಆಗಸ್ಟ್ 10, 2017ರ ತಮ್ಮ ಗೋರಕ್‌ಪುರದ ಬಿಆರ್‌ಡಿ ಆಸ್ಪತ್ರೆಯ ಪ್ರಕರಣದ ಬಗ್ಗೆಯೂ ತಮ್ಮ ಪತ್ರದಲ್ಲಿ ಖಾನ್ ಉಲ್ಲೇಖಿಸಿದ್ದಾರೆ. ಸರ್ಕಾರದ ನಿರ್ಲಕ್ಷ್ಯದಿಂದಾಗಿ ಆಮ್ಲಜನಕ ಕೊರತೆ ಉಂಟಾಗಿ ಹಲವು ಮಕ್ಕಳು ಸಾವಿಗೀಡಾದ ಪರಿಸ್ಥಿತಿಯಲ್ಲಿ ತನ್ನನ್ನು ಹೇಗೆ ಆರೋಪಿಯನ್ನಾಗಿ ಮಾಡಲಾಯಿತು ಎಂದು ಅವರು ಬರೆದಿದ್ದಾರೆ. ಜೊತೆಗೆ 2018ರ ಏಪ್ರಿಲ್ 25ರ ಕೋರ್ಟ್ ತೀರ್ಪನ್ನು ಸಹ ಖಾನ್ ಉಲ್ಲೇಖಿಸಿ, “ವೈದ್ಯಕೀಯ ನಿರ್ಲಕ್ಷ್ಯಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ” ಎಂದು ಕೋರ್ಟ್ ಹೇಳಿದೆ. ಆದರೂ ಯುಪಿ ಸರ್ಕಾರ ಮಾತ್ರ ತನ್ನನ್ನು ಗುರಿಯಾಗಿಸಿ ತೊಂದರೆ ನೀಡುವುದು ನಿಂತಿಲ್ಲ ಎಂದು ಖಾನ್ ಹೇಳಿದ್ದಾರೆ.

ಈ ಕುರಿತು ಇದುವರೆಗೂ 8 ಪ್ರತ್ಯೇಕ ತನಿಖೆಗಳು ನಡೆದಿವೆ. ಎಲ್ಲಾ ತನಿಖೆಗಳಲ್ಲಿಯೂ ತಾನು ನಿರ್ದೋಷಿ ಎಂಬುದು ಸಾಬೀತಾಗಿದೆ. ಆದರೆ ಯುಪಿ ಸರ್ಕಾರ ತನ್ನ ಮೇಲೆ ಹೇರಿರುವ ಅಮಾನತ್ತಿನ್ನು ಹಿಂಪಡೆದಿಲ್ಲ. ಇದು ರಾಜಕೀಯ ಹಗೆತನವನ್ನು ತೋರಿಸುತ್ತದೆ. ನಾನು ವೈದ್ಯನಾಗಿ ಸೇವೆಗೆ ಮರಳಲು ಸಿದ್ದನಿದ್ದೇನೆ. ಸರ್ಕಾರ ತನ್ನ ಮೇಲಿನ ಅಮಾನತ್ತು ಹಿಂಪಡೆಯಬೇಕು ಎಂದು ಸದ್ಯ ರಾಜಸ್ಥಾನದಲ್ಲಿ ವಾಸವಿರುವ ಡಾ.ಕಫೀಲ್ ಖಾನ್ ತಿಳಿಸಿದ್ದಾರೆ.


ಇದನ್ನೂ ಓದಿ: ತೋರಿಕೆಯ ದೇಶಭಕ್ತಿಗೂ ನಿಜವಾದ ದೇಶಭಕ್ತಿಗೂ ತುಂಬಾ ವ್ಯತ್ಯಾಸವಿದೆ – ಡಾ.ಕಫೀಲ್ ಖಾನ್ ಸಂದರ್ಶನ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...