ಸಾಮಾಜಿಕ ನ್ಯಾಯ ಮತ್ತು ಸಂವಿಧಾನಾತ್ಮಕ ಮೌಲ್ಯಗಳನ್ನು ಪ್ರತಿಪಾದಿಸುವ ‘ಲ್ಯಾಂಡ್ ಲಾರ್ಡ್’ ಕನ್ನಡ ಸಿನಿಮಾಗೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡುವಂತೆ ಡಿಎಸ್ಎಸ್ ಅಂಬೇಡ್ಕರ್ ವಾದ ಮತ್ತು ದಲಿತ ಹೋರಾಟಗಾರರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ನೀಡಿದರು.
ಫೆಬ್ರವರಿ 3, ಮಂಗಳವಾರದಂದು ಮುಖ್ಯಮಂತ್ರಿಗಳ ಸರ್ಕಾರಿ ನಿವಾಸ ಕಾವೇರಿಯಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ನೀಡಿದ ತಂಡ ಮನವಿ ಪತ್ರ ನೀಡಿತು.
ಪತ್ರದಲ್ಲಿ ಇತ್ತೀಚೆಗೆ ಬಿಡುಗಡೆಯಾದ ನಿರ್ದೇಶಕ ಜಡೆಶ್ ಕೆ. ಹಂಪಿ ಅವರ ದುನಿಯಾವಿಜಯ್ ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಲ್ಯಾಂಡ್ ಲಾರ್ಡ್’ ಕನ್ನಡ ಚಲನಚಿತ್ರವು ಕೇವಲ ಮನರಂಜನೆಯ ಉದ್ದೇಶವಲ್ಲದೆ, ಭೂಮಿ-ಜಾತಿ-ಶ್ರಮ-ಮಾನವ ಗೌರವ ಎಂಬ ಮೂಲಭೂತ ಸಾಮಾಜಿಕ ಪ್ರಶ್ನೆಗಳನ್ನು ಗಂಭೀರವಾಗಿ ಸ್ಪರ್ಶಿಸುವ ಮಹತ್ವದ ಸಾಂಸ್ಕೃತಿಕ ಸಿನಿಮಾವಾಗಿದೆ ಎಂದಿರುವ ಸಂಘಟನೆ ಈ ಚಿತ್ರವು ಜಮೀನ್ದಾರಿ ವ್ಯವಸ್ಥೆಯ ಅವಶೇಷಗಳು, ಭೂಮಿಯಿಲ್ಲದ ಕಾರ್ಮಿಕರ ದೀರ್ಘಕಾಲದ ಹೋರಾಟ, ದಲಿತ-ಅಂಚಿನ ಸಮುದಾಯಗಳ ಬದುಕಿನ ಸಂಕಷ್ಟಗಳು ಮತ್ತು ಸಂವಿಧಾನವು ಪ್ರತಿಪಾದಿಸುವ ಸಮಾನತೆ, ಸ್ವಾತಂತ್ರ್ಯ, ಸಹೋದರತ್ನ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಜನಸಾಮಾನ್ಯರಿಗೆ ಸುಲಭವಾಗಿ ತಲುಪಿಸುವ ಪ್ರಯತ್ನವಾಗಿದೆ. ಇಂತಹ ವಿಷಯಾಧಾರಿತ ಚಿತ್ರಗಳು ಸಮಾಜದಲ್ಲಿ ಸಂವಿಧಾನಾತ್ಮಕ ಜಾಗೃತಿ ಮೂಡಿಸಲು ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಲಪಡಿಸಲು ಅತ್ಯಂತ ಅಗತ್ಯವಾಗಿವೆ ಎಂದು ಹೇಳಿದೆ.
ಮುಖ್ಯವಾಹಿನಿ ಕನ್ನಡ ಸಿನೆಮಾದಲ್ಲಿ ಅಪರೂಪಕ್ಕೆ ಮಾತ್ರ ಕಾಣಿಸುವ ಈ ರೀತಿಯ ಸಾಮಾಜಿಕ ಬದ್ಧತೆ ಹೊಂದಿರುವ ಚಿತ್ರಗಳಿಗೆ ಸರ್ಕಾರದಿಂದ ಪ್ರೋತ್ಸಾಹ ದೊರಕುವುದು ಸೃಜನಶೀಲತೆಗೂ, ಸಾರ್ವಜನಿಕ ಹಿತಾಸಕ್ತಿಗೂ ಅನುಕೂಲಕರವಾಗುತ್ತದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳು, ವಿದ್ಯಾರ್ಥಿಗಳು, ಕಾರ್ಮಿಕ ವರ್ಗ ಹಾಗೂ ಯುವಜನತೆಗೆ ಈ ಚಿತ್ರದ ಸಂದೇಶ ತಲುಪಲು ಸಂಪೂರ್ಣ ಮನರಂಜನಾ ತೆರಿಗೆ ವಿನಾಯಿತಿ ಮಹತ್ವದ ಪಾತ್ರ ವಹಿಸುತ್ತದೆ.
ಆದುದರಿಂದ, ಸಾಮಾಜಿಕ ನ್ಯಾಯ ಮತ್ತು ಸಂವಿಧಾನಾತ್ಮಕ ಚಿಂತನೆಗೆ ಬದ್ಧವಾದ ‘ಲ್ಯಾಂಡ್ ಲಾರ್ಡ್’ ಕನ್ನಡ ಚಲನಚಿತ್ರಕ್ಕೆ ಕರ್ನಾಟಕ ರಾಜ್ಯ ಸರ್ಕಾರವು ಸಂಪೂರ್ಣ ತೆರಿಗೆ ವಿನಾಯಿತಿ ನೀಡಬೇಕೆಂದು ವಿನಮ್ರವಾಗಿ ಮನು ಮಾಡಿಕೊಳ್ಳುತ್ತೇವೆ ಎಂದು ತಿಳಿಸಲಾಗಿತ್ತು.
ಇನ್ನು ಡಿಎಸ್ಎಸ್ ನಾಯಕರು ಮತ್ತು ದಲಿತ ಹೋರಾಟಗಾರರ ಮನವಿಗೆ ಸ್ಪಂದಿಸಿರುವ ಸಿದ್ದರಾಮಯ್ಯ ಸಾಮಾಜಿಕ ಅಸಮಾನತೆ ಮತ್ತು ಜಾತಿಯಾಧಾರಿತ ಶೋಷಣೆ ವಿಷಯಾಧಾರಿತ ದುನಿಯಾ ವಿಜಯ್ ನಾಯಕತ್ವದ “ಲ್ಯಾಂಡ್ ಲಾರ್ಡ್” ಚಲನಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.
ಮೌಲ್ಯಯುತ ಸಂದೇಶವನ್ನು ಜನರಿಗೆ ತಲುಪಿಸಿ, ಸಾರ್ವತ್ರಿಕ ಅಭಿಪ್ರಾಯ ರೂಪಿಸಲು ಹಾಗೂ ಸಾಮಾಜಿಕ ಪರಿವರ್ತನೆಯನ್ನು ಸಾಧಿಸಲು ಸಿನೆಮಾಗಳು ಅತ್ಯಂತ ಪರಿಣಾಮಕಾರಿ ಮಾಧ್ಯಮ ಎನ್ನುವುದು ನನ್ನ ಭಾವನೆ. ಸಾಮಾಜಿಕ ಕಳಕಳಿಯ ಸಿನೆಮಾವನ್ನು ಮಾಡಿದಾಗ ಅಂಥವರ ಜೊತೆ ನಿಂತು ಬೆನ್ನು ತಟ್ಟಬೇಕಿರುವುದು ಕೂಡ ಸರ್ಕಾರವಾಗಿ ನಮ್ಮ ನೈತಿಕ ಹೊಣೆ ಎಂದಿರುವ ಅವರು ಮುಂದಿನ ದಿನಗಳಲ್ಲಿ ಸಾಮಾಜಿಕ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವ ‘ಲ್ಯಾಂಡ್ ಲಾರ್ಡ್’ ನಂತಹ ಇನ್ನಷ್ಟು ಚಿತ್ರಗಳು ಮೂಡಿಬರಲು ನಮ್ಮ ಈ ನಿರ್ಧಾರ ಸ್ಪೂರ್ತಿಯಾಗಲಿದೆ ಎಂದು ನಂಬಿದ್ದೇನೆ’ ಎಂದಿದ್ದಾರೆ.
ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವಾಗ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕರಾದ ಮಾವಳ್ಳಿ ಶಂಕರ್, ಹಿರಿಯ ಕವಿ ಸುಬ್ಬು ಹೊಲೆಯಾರ್, ಗೊಲ್ಲಹಳ್ಳಿ ಶಿವಪ್ರಸಾದ್, ಹುಲಿಕುಂಟೆ ಮೂರ್ತಿ, ಚಂದ್ರು ತರಹುಣಸೆ, ರವಿ ಈಚಲಮರ, ವಿಜಯಕುಮಾರ್ ಸೋನಾರೆ ಉಪಸ್ಥಿತರಿದ್ದರು.


