Homeಮುಖಪುಟಡಬ್‌‌ ಸಿನಿಮಾ ‘ಡೊಳ್ಳು’ ಸಿಂಕ್‌ಸೌಂಡ್‌ ವಿಭಾಗದಲ್ಲಿ ಆಯ್ಕೆ: ‘ರಾಷ್ಟ್ರಪ್ರಶಸ್ತಿ ಲಾಬಿ’ ರಾಜಕಾರಣದ ಕಥೆ ಇದು!

ಡಬ್‌‌ ಸಿನಿಮಾ ‘ಡೊಳ್ಳು’ ಸಿಂಕ್‌ಸೌಂಡ್‌ ವಿಭಾಗದಲ್ಲಿ ಆಯ್ಕೆ: ‘ರಾಷ್ಟ್ರಪ್ರಶಸ್ತಿ ಲಾಬಿ’ ರಾಜಕಾರಣದ ಕಥೆ ಇದು!

ಸಿಂಕ್‌ಸೌಂಡ್‌ ಮಾಡದಿದ್ದರೂ ‘ಸೌಂಡ್‌ಸಿಂಕ್‌’ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿಯನ್ನು ಕನ್ನಡದ ‘ಡೊಳ್ಳು’ ಸಿನಿಮಾ ಪಡೆದಿದೆ. ಈ ಕುರಿತು ಕನ್ನಡ ತಂತ್ರಜ್ಞರು, ನಿರ್ದೇಶಕರು ಹೇಳಿದ್ದೇನು?

- Advertisement -
- Advertisement -

“ಸಿನಿಮಾ ಕ್ಷೇತ್ರದ ಪ್ರತಿಭೆಗಳನ್ನು ಗುರುತಿಸಿ ಭಾರತ ಸರ್ಕಾರ ನೀಡುವ ‘ರಾಷ್ಟ್ರಪ್ರಶಸ್ತಿ’ ತನ್ನ ಗೌರವವನ್ನು ಕಾಪಾಡಿಕೊಂಡಿದೆಯೇ?” ಎಂಬ ಪ್ರಶ್ನೆಯನ್ನು ಇಂದು ಕೇಳಿಕೊಳ್ಳಲೇಬೇಕಾದ ತುರ್ತು ಎದುರಾಗಿದೆ. ಕಾರಣ- ‘ಸಿಂಕ್‌ಸೌಂಡ್‌‌’ ಅಲ್ಲದ ಸಿನಿಮಾಕ್ಕೆ ‘ಸಿಂಕ್‌ಸೌಂಡ್‌’ ವಿಭಾಗದಲ್ಲಿ ಪ್ರಶಸ್ತಿಯನ್ನು ಸರ್ಕಾರ ಘೋಷಿಸಿಬಿಟ್ಟಿದೆ!

ಶುಕ್ರವಾರ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾಗಿವೆ. ಈ ಬಾರಿಯ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ ‘ಡೊಳ್ಳು’ ಚಿತ್ರಕ್ಕೆ ಲಭಿಸಿದೆ. ಚಿತ್ರದಲ್ಲಿನ ಆಡಿಯೋಗ್ರಫಿಗಾಗಿ ಜೋಬಿನ್‌ ಜಯನ್‌ ಅವರಿಗೆ ಅತ್ಯುತ್ತಮ ಆಡಿಯೋಗ್ರಾಫರ್‌ ಪ್ರಶಸ್ತಿ ದೊರೆತಿದೆ. ಆದರೆ, ಜೋಬಿನ್‌ ಅವರಿಗೆ ನೀಡಲಾಗಿರುವ ಪ್ರಶಸ್ತಿಯ ವಿಭಾಗವೇ ತಪ್ಪಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಡೊಳ್ಳು ಸಿನಿಮಾದ ‘ಸೌಂಡ್‌ ಡಿಸೈನರ್‌’ ನಿತಿನ್‌ ಲುಕೊಸೆ ಅವರೇ ರಾಷ್ಟ್ರಪ್ರಶಸ್ತಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವುದು ವಿಶೇಷ. ಈ ಕುರಿತು ಟ್ವೀಟ್ ಮಾಡಿರುವ ನಿತಿನ್‌, “ರಾಷ್ಟ್ರ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯ ವಿಚಾರದಲ್ಲಿ ಪರದೆಯ ಹಿಂದೆ ಏನು ನಡೆದಿದೆ ಎಂಬುದೇ ನನಗೆ ಅರ್ಥವಾಗುತ್ತಿಲ್ಲ. ಡಬ್‌ ಮಾಡಲಾದ ಚಿತ್ರ ಯಾವುದು ಮತ್ತು ʼಸಿಂಕ್‌ ಸೌಂಡ್‌ʼ ಮಾಡಲಾದ ಚಿತ್ರ ಯಾವುದು ಎಂಬುದರ ವ್ಯತ್ಯಾಸ ತಿಳಿಯದವರೆಲ್ಲ ಪರಿಣಿತರು ಎಂದು ಹೇಳಿಕೊಂಡು ಡಬ್‌ ಮಾಡಿದ ಸಿನಿಮಾಗೆ ಅತ್ಯುತ್ತಮ ʼಸೌಂಡ್‌ ಸಿಂಕ್‌ʼ ಪ್ರಶಸ್ತಿ ನೀಡುತ್ತಿರುವುದನ್ನು ಕಂಡರೆ ನನಗೆ ಅಯ್ಯೋ ಪಾಪ ಎನ್ನಿಸುತ್ತಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿರಿ: ‘ಮಾರಿ ಸೆಲ್ವರಾಜ್‌‌’ ಸಿನಿಮಾಗಳಲ್ಲಿನ ರೂಪಕಗಳ ಸುತ್ತ…

ಆಸ್ಕರ್‌ ವಿಜೇತ ಸೌಂಡ್‌ ಡಿಸೈನರ್‌ ರೆಸುಲ್‌ ಪೂಕುಟ್ಟಿ ಅವರೂ ಟ್ವೀಟ್ ಮಾಡಿ, “ಡೊಳ್ಳು ಚಿತ್ರ ಸಿಂಕ್‌ಸೌಂಡ್‌ ಸಿನಿಮಾ ಅಲ್ಲವೇ ಅಲ್ಲ, ಅದೊಂದು ಡಬ್‌ ಮಾಡಲಾಗಿರುವ ಸಿನಿಮಾ. ಡಬ್‌ ಮಾಡಲಾದ ಚಿತ್ರಕ್ಕೆ ಅತ್ಯುತ್ತಮ ಸಿಂಕ್‌ಸೌಂಡ್‌ ರಾಷ್ಟ್ರ ಪ್ರಶಸ್ತಿ ನೀಡಲಾಗಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಸಿಂಕ್‌ಸೌಂಡ್‌’ ಎಂದರೇನು?

ಚಿತ್ರೀಕರಣದ ಸ್ಥಳದಲ್ಲಿಯೇ ದೃಶ್ಯಗಳ ಜೊತೆಗೆ ಆ ಸನ್ನಿವೇಶಗಳ ಶಬ್ದವನ್ನು ನೈಜವಾಗಿ ಸೆರೆ ಹಿಡಿಯುವ ಪ್ರಕ್ರಿಯೆ. ಮುಖ್ಯವಾಗಿ ಸಂಭಾಷಣೆಯ ವಿಚಾರದಲ್ಲಿ ಸೌಂಡ್‌ಸಿಂಕ್‌ ಮಾಡುವುದಕ್ಕೆ ಸಿನಿಮಾ ತಜ್ಞರು ಆದ್ಯತೆ ನೀಡುತ್ತಾ ಬಂದಿದ್ದಾರೆ. ಚಿತ್ರೀಕರಿಸುತ್ತಿರುವ ಸಿನಿಮಾದ ಅಗತ್ಯತೆಯ ಆಧಾರದಲ್ಲಿ ಸಿಂಕ್‌ಸೌಂಡ್‌ಗೆ ಆದ್ಯತೆ ನೀಡಲಾಗುತ್ತದೆ. ಕೆಲವು ಸಿನಿಮಾಗಳಿಗೆ ಡಬ್‌ ಮಾಡುವುದು ಸೂಕ್ತವೆನಿಸಿದರೆ, ಮತ್ತೆ ಕೆಲವು ಸಿನಿಮಾಗಳಿಗೆ ಸಿಂಕ್‌ಸೌಂಡ್‌ ಅಗತ್ಯವಿರುತ್ತದೆ.

ಈಗ ಚರ್ಚೆಯಾಗುತ್ತಿರುವ ಸಂಗತಿ- ರಾಷ್ಟ್ರಪ್ರಶಸ್ತಿಗಳನ್ನು ಆಯ್ಕೆ ಮಾಡುವವರಿಗೆ ‘ಸಿಂಕ್‌ಸೌಂಡ್‌’ ಯಾವುದೆಂಬ ಅರಿವಿರಲಿಲ್ಲವೇ?

ಕರ್ನಾಟಕ ಸಿನಿಮಾತಜ್ಞರ ಆಕ್ಷೇಪ

‘ಡೊಳ್ಳು’ ಸಿನಿಮಾಕ್ಕೆ ‘ಸಿಂಕ್‌ಸೌಂಡ್‌’ ಪ್ರಶಸ್ತಿ ಬಂದಿರುವ ಕುರಿತು ಕರ್ನಾಟಕದಲ್ಲಿನ ಸಿನಿಮಾ ತಜ್ಞರು ವಿಷಾದ ವ್ಯಕ್ತಪಡಿಸಿದ್ದಾರೆ. ‘ನಾನುಗೌರಿ.ಕಾಂ’ ಜೊತೆ ಮಾತನಾಡಿರುವ ಸಿಂಕ್‌ಸೌಂಡ್‌ ತಜ್ಞರು, ಸಿನಿಮಾ ನಿರ್ದೇಶಕರು ಅನೇಕ ಸಂಗತಿಗಳನ್ನು ಬಿಚ್ಚಿಟ್ಟಿದ್ದು, ‘ರಾಷ್ಟ್ರಪ್ರಶಸ್ತಿ’ ಹಿಂದಿರುವ ರಾಜಕೀಯದ ಕುರಿತೂ ಬೆಳಕು ಚೆಲ್ಲಿದ್ದಾರೆ.

ತಾವು ಕೆಲಸ ಮಾಡಿದ ಹಲವು ಸಿನಿಮಾಗಳಲ್ಲಿ ‘ಸಿಂಕ್‌ಸೌಂಡ್‌‌’ ಅಳವಡಿಸಿರುವ ಛಾಯಾಗ್ರಾಹಕ, ನಿರ್ದೇಶಕ ಸಂದೀಪ್‌ ಕುಮಾರ್‌ ಪ್ರತಿಕ್ರಿಯೆ ನೀಡಿ, “ಇದು ದೊಡ್ಡ ಪ್ರಮಾದ. ಆದರೆ ಯಾರೂ ಗಂಭೀರವಾಗಿ ಚರ್ಚಿಸುತ್ತಿಲ್ಲ. ರಸೂಲ್‌ ಪೂಕುಟ್ಟಿ ಥರದ ಬಹುದೊಡ್ಡ ಸೌಂಡ್‌‌ ಇಂಜಿನಿಯರ್‌‌ ಬೇಸರ ವ್ಯಕ್ತಪಡಿಸಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದು ಆಶಿಸಿದರು.

ಇದನ್ನೂ ಓದಿರಿ: ‘ಚಾರ್ಲಿ’ಗಷ್ಟೇ ಅಲ್ಲ, ಎಲ್ಲ ಸದಭಿರುಚಿಯ ಸಿನಿಮಾಗಳಿಗೂ ಸಿಗಲಿ ತೆರಿಗೆ ವಿನಾಯಿತಿ- ಚಿತ್ರಕರ್ಮಿಗಳ ಒಕ್ಕೊರಲ ಆಗ್ರಹ

“ಜ್ಯೂರಿಗಳು (ತೀರ್ಪುಗಾರರು) ಕೆಲವು ಸಲ ಸಿನಿಮಾಗಳನ್ನೇ ನೋಡುವುದಿಲ್ಲ. ಕರ್ನಾಟಕದಲ್ಲಿ ಎಷ್ಟು ಜನಕ್ಕೆ ಪ್ರಶಸ್ತಿ ನೀಡಬೇಕು, ಕೇರಳದಲ್ಲಿ ಎಷ್ಟು ಜನಕ್ಕೆ ಪ್ರಶಸ್ತಿ ಕೊಡಬೇಕು ಎಂಬ ರೀತಿಯ ಲೆಕ್ಕಾಚಾರದಲ್ಲಿರುತ್ತಾರೆ. ಸಿನಿಮಾ ತಜ್ಞರ ಸೃಜನಶೀಲತೆ ನಂತರದ ವಿಷಯವಾಗಿರುತ್ತದೆ. ಎಲ್ಲ ರಾಜ್ಯ, ಎಲ್ಲ ಭಾಷೆಗಳಿಗೂ ಪ್ರಶಸ್ತಿ ಕೊಡಬೇಕೆಂದು ಆಲೋಚನೆ ಮಾಡುವುದು ತಪ್ಪೇನಲ್ಲ. ಆದರೆ ಈ ರೀತಿಯ ಪ್ರಮಾದವನ್ನು ನೋಡಿದರೆ ಜ್ಯೂರಿಗಳ ಉಡಾಫೆ ಎದ್ದು ಕಾಣುತ್ತಿದೆ. ಈ ಹಿಂದೆಯೂ ಪ್ರಶಸ್ತಿ ನೀಡಿದಾಗಲೂ ಹಲವು ತಪ್ಪುಗಳಾಗಿವೆ. ಆದರೆ ಹೇಳಿದರೆ ತಿದ್ದಿಕೊಳ್ಳುವವರಿದ್ದರು. ಈ ಭಾರಿಯ ಪ್ರಮಾದದಲ್ಲಿ ಸಿಕ್ಕಾಪಟ್ಟೆ ಉಡಾಫೆ ಎದ್ದು ಕಾಣುತ್ತಿದೆ. ತಾನು ಮಾಡಿದ ಕೆಲಸಕ್ಕೆ ಪ್ರಶಸ್ತಿ ಬಂದರೆ ಯಾವುದೇ ತಂತ್ರಜ್ಞರಿಗೆ ಖುಷಿಯಾಗುತ್ತದೆ. ಆದರೆ ತಾನು ಮಾಡದೆ ಇರುವ ಕೆಲಸಕ್ಕೆ ಪ್ರಶಸ್ತಿ ಬಂದರೆ ಸಹಿಸಿಕೊಳ್ಳಲು ಆಗುವುದಿಲ್ಲ. ಇದು ತಂತ್ರಜ್ಞರಿಗೆ ಮಾಡಿದ ಅವಮಾನ” ಎಂದು ಅಭಿಪ್ರಾಯಪಟ್ಟರು.

ಭಾಸ್ಕರ್‌ ಬಲಿಪಶುವಾದರೆ?: ಬಿ.ಎಸ್.ಲಿಂಗದೇವರು

‘ನಾನು ಅವನಲ್ಲ ಅವಳು’ ಸಿನಿಮಾ ನಿರ್ದೇಶಕರಾದ ಬಿ.ಎಸ್‌.ಲಿಂಗದೇವರು ಮಾತನಾಡಿ, “ಜ್ಯೂರಿಗಳ ಕುರಿತು ನಮ್ಮ ಆಕ್ಷೇಪ ವ್ಯಕ್ತವಾಗಲೇಬೇಕು. ಛಾಯಾಗ್ರಹಣ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು ಮಾಡಿದವರಾದ ಜಿ.ಎಸ್.ಭಾಸ್ಕರ್‌ ಅವರು ಜ್ಯೂರಿಯಾಗಿದ್ದರು. ಯಾವುದೇ ಪಕ್ಷ, ಸಿದ್ಧಾಂತದಿಂದ ದೂರ ಉಳಿದ ವ್ಯಕ್ತಿಯವರಾದ ಭಾಸ್ಕರ್‌ ತೀರ್ಪುಗಾರರಾಗಿಯೂ ಈ ರೀತಿಯ ಪ್ರಮಾದವಾಗಿರುವುದು ದುರಂತದ ಸಂಗತಿ. ಅವರು ಈ ವ್ಯವಸ್ಥೆಯ ಬಲಿಪಶುವಾದರಾ ಎಂಬ ಪ್ರಶ್ನೆ ಮೂಡುತ್ತದೆ” ಎಂದು ವಿಷಾದಿಸಿದರು.

ಮಾನವ ಸಹಜ ತಪ್ಪುಗಳಾಗುತ್ತವೆ: ಶೇಷಾದ್ರಿ

‘ಅತಿಥಿ’, ‘ಬೇರು’, ‘ಬೆಟ್ಟದ ಜೀವ’, ‘ಭಾರತ್‌ ಸ್ಟೋರ್‍ಸ್‌’ ಮೊದಲಾದ ಸಿನಿಮಾಗಳ ನಿರ್ದೇಶಕ ಪಿ.ಶೇಷಾದ್ರಿ ಮಾತನಾಡಿ, “ತಪ್ಪುಗಳಾಗಿರುವ ಕುರಿತು ಡೈರೆಕ್ಟರೇಟ್‌ ಆಫ್‌ ಫಿಲ್ಮ್‌ ಫೆಸ್ಟಿವಲ್‌ನವರು ವಿಚಾರ ಮಾಡುತ್ತಿದ್ದಾರೆ. ಅಧಿಕಾರಿಗಳ ಜೊತೆ ಚರ್ಚೆಯಾಗುತ್ತಿದೆ. ನಾನು ಕೂಡ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ” ಎಂದರು.

“ತಪ್ಪುಗಳು ಮನುಷ್ಯ ಸಹಜ ಗುಣ. ಉದ್ದೇಶಪೂರ್ವಕವಾಗಿ ಇಲ್ಲಿ ತಪ್ಪು ಮಾಡಲಾಗಿದೆ ಎಂದು ನಾನು ಹೇಳುವುದಿಲ್ಲ. ಕಣ್ತಪ್ಪಿನಿಂದ ಆಗಿರಬಹುದು. ಆದರೆ ತಪ್ಪು ತಪ್ಪೇ. ಅದನ್ನು ಸರಿಪಡಿಸಿಕೊಳ್ಳಬೇಕಾಗಿದೆ” ಎಂದು ತಿಳಿಸಿದರು.

ಜ್ಯೂರಿಯಾಗಿದ್ದ ಜಿ.ಎಸ್.ಭಾಸ್ಕರ್‌‌ ಹೇಳುವುದೇನು?

ಈ ಭಾರಿಯ ಪ್ರಶಸ್ತಿಗಳ ಆಯ್ಕೆಯಲ್ಲಿ ತೀರ್ಪುಗಾರರಾಗಿದ್ದವರಲ್ಲಿ ಕರ್ನಾಟಕದ ಜಿ.ಎಸ್.ಭಾಸ್ಕರ್‌ ಕೂಡ ಒಬ್ಬರು. ವಿವಾದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ ಅವರು, “ಜ್ಯೂರಿಗಳ ನಿರ್ಧಾರವದು. ಸರಿ ತಪ್ಪು ಎಂಬುದು ಬರುವುದಿಲ್ಲ. ಇದು ಚರ್ಚೆಯ ವಿಷಯವೇ ಅಲ್ಲ. ಜ್ಯೂರಿ ಒಮ್ಮೆ ತೀರ್ಮಾನ ಹೇಳಿದ ಮೇಲೆ ಅದರ ಬಗ್ಗೆ ಚರ್ಚಿಸುವ ಅವಶ್ಯಕತೆ ಇರುವುದಿಲ್ಲ. ಒಂದು ವಿಷಯದ ಕುರಿತು ನಿರ್ಧಾರ ತೆಗೆದುಕೊಳ್ಳಲು ಜ್ಯೂರಿಗಳನ್ನು ನೇಮಿಸಿದ ಮೇಲೆ ಅವರ ತೀರ್ಪನ್ನು ಎಲ್ಲರೂ ಒಪ್ಪಿಕೊಳ್ಳಬೇಕು” ಎಂದು ಹೇಳಿದರು.

ರಾಷ್ಟ್ರಪ್ರಶಸ್ತಿಯ ಹಿಂದೆ ಲಾಬಿ ನಡೆಯುತ್ತದೆಯೇ?

ಸಿನಿಮಾ ಕ್ಷೇತ್ರ ರಾಜಕೀಯವನ್ನು ಬಲ್ಲವರು ಹೇಳುವ ಪ್ರಕಾರ ರಾಷ್ಟ್ರಪ್ರಶಸ್ತಿ ಆಯ್ಕೆಯಲ್ಲಿ ದೊಡ್ಡ ಮಟ್ಟದ ಲಾಬಿ ನಡೆಯುತ್ತದೆ.

ಹೆಸರು ಹೇಳಲಿಚ್ಛಿಸದ ಕನ್ನಡ ಸಿನಿಮಾ ನಿರ್ದೇಶಕರೊಬ್ಬರು ರಾಷ್ಟ್ರಪ್ರಶಸ್ತಿ ಆಯ್ಕೆಯ ಹಿಂದಿನ ರಾಜಕೀಯವನ್ನು ಬಿಚ್ಚಿಟ್ಟರು.

ಸುನಿಲ್‌ ಪುರಾಣಿಕ್ ಅವರು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಚಿವರಾದ ಅನುರಾಗ್‌ ಠಾಕೂರ್‌ ಅವರ ಜೊತೆ ಬಹಳ ಆಪ್ತರಾಗಿದ್ದಾರೆ. ಗೋವಾ ಪನೋರಮಾ ಸಂದರ್ಭದಲ್ಲಂತೂ ಪುರಾಣಿಕ್ ಅವರು ಸಚಿವರೊಂದಿಗೆ ಅಂಟಿಕೊಂಡಿದ್ದರು. ಇದೆಲ್ಲವೂ ಪ್ರಶಸ್ತಿ ಆಯ್ಕೆಯ ಮೇಲೆ ಪ್ರಭಾವ ಬೀರಿರಬಹುದು ಎಂದು ಗುಮಾನಿಗಳು ಇವೆ.

ಇದನ್ನೂ ಓದಿರಿ: ಹಿಪೊಕ್ರಸಿ ಜಗತ್ತಿನಲ್ಲಿ ಮತ್ತೊಂದು ಎದೆಯ ದನಿ ಸಾಯಿ ಪಲ್ಲವಿ

ಜ್ಯೂರಿಗಳು ಸ್ವಜನಪಕ್ಷಪಾತಿಗಳಾಗಿದ್ದಾರೆಯೇ ಎಂಬ ಪ್ರಶ್ನೆಯೂ ಮೂಡಿದೆ. ತಮಿಳಿನ ‘ಸೂರರೈ ಪೋಟ್ರು’ ಸಿನಿಮಾಕ್ಕೆ ಬಂದಿರುವ ಪ್ರಶಸ್ತಿಗಳನ್ನು ನೋಡಿದರೆ ಈ ಅನುಮಾನ ಮೂಡದಿರದು. ತಮಿಳು ನಟ ಸೂರಿಯಾ, ನಟಿ ಜ್ಯೋತಿಕಾ, ನಿರ್ದೇಶಕ ಶಂಕರ್‌ ಅವರಿಗೆಲ್ಲ ಸೆಲೆಬ್ರಟಿ ಮ್ಯಾನೇಜರ್‌ ಆಗಿರುವ ಎಸ್‌.ತಂಗಾದುರೈ ಅವರೂ ಜ್ಯೂರಿಯಾಗಿದ್ದರು. ಹೀಗಾಗಿ ಪ್ರಶಸ್ತಿ ಆಯ್ಕೆಯಲ್ಲಿ ಸೂರಿಯಾ ಅಭಿನಯದ ಸಿನಿಮಾಕ್ಕೆ ಪ್ರಶಸ್ತಿಗಳು ಬಂದಿವೆ ಎಂಬ ಆರೋಪಗಳಿವೆ.

ವರ್ಷದ ಅತ್ಯುತ್ತಮ ಸಿನಿಮಾ ‘ಸೂರರೈ ಪೋಟ್ರು’, ಇದೇ ಸಿನಿಮಾದಲ್ಲಿ ಅಭಿನಯಿಸಿದ್ದ ಸೂರಿಯಾ ಅವರಿಗೆ ‘ಅತ್ಯುತ್ತಮ ನಟ ಪ್ರಶಸ್ತಿ’, ಅಪರ್ಣಾ ಬಾಲಮುರಳಿ ಅವರಿಗೆ ‘ಅತ್ಯುತ್ತಮ ನಟಿ’ ಪ್ರಶಸ್ತಿ ನೀಡಲಾಗಿದೆ. ಈ ಸಿನಿಮಾಕ್ಕೆ ಸೂರಿಯಾ ಹಾಗೂ ಜ್ಯೋತಿಕಾ ನಿರ್ಮಾಪಕರಾಗಿರುವುದು ಗಮನಾರ್ಹ.

“ಯಾವುದೇ ಪ್ರಭಾವವಿಲ್ಲದವರಿಗೆ ಪ್ರಶಸ್ತಿ ಬಂದಿರುವ ಉದಾಹರಣೆಗಳಿವೆ. ಅದನ್ನು ಬಡಪಾಯಿಗಳ ಅದೃಷ್ಟ ಅನ್ನಬಹುದು” ಎನ್ನುತ್ತಾರೆ ಹೆಸರು ಬಹಿರಂಗಪಡಿಸದ ಸಿನಿಮಾ ತಂತ್ರಜ್ಞರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮ್ಯಾನೇಜ್‌ಮೆಂಟ್‌ ಸರ್ಕಾರ| ಆಡಿಯೊ ನನ್ನದೇ, ರಾಜೀನಾಮೆ ಕೇಳಿದರೆ ಕೊಡುವೆ- ಮಾಧುಸ್ವಾಮಿ

0
ರಾಜ್ಯದ ಕಾನೂನು ಸಚಿವ ಮಾಧುಸ್ವಾಮಿ ಅವರ ಆಡಿಯೊವೊಂದು ಸೋರಿಕೆಯಾಗಿರುವ ಪರಿಣಾಮ ಬಿಜೆಪಿ ಸರ್ಕಾರ ತೀವ್ರ ಮುಜುಗರಕ್ಕೊಳಗಾಗಿದ್ದು ಸರ್ಕಾರದೊಳಗೆ ಆಕ್ರೋಶ ಭುಗಿಲೆದ್ದಿದೆ. ಬಿಜೆಪಿ ನಾಯಕರು ಮಾಧುಸ್ವಾಮಿ ಹೇಳಿಕೆಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ಮಾಧುಸ್ವಾಮಿಯವರೂ ಪ್ರಕರಣಕ್ಕೆ ಸಂಬಂಧಿಸಿದಂತೆ...