Homeಕರ್ನಾಟಕಶುಲ್ಕ ಪಾವತಿಸದ ಮಕ್ಕಳ ಆನ್‌ಲೈನ್‌ ತರಗತಿ ಬಂದ್ ಮಾಡಿದ ಖಾಸಗಿ ಶಾಲೆ: ಪೋಷಕರ ಆಕ್ರೋಶ

ಶುಲ್ಕ ಪಾವತಿಸದ ಮಕ್ಕಳ ಆನ್‌ಲೈನ್‌ ತರಗತಿ ಬಂದ್ ಮಾಡಿದ ಖಾಸಗಿ ಶಾಲೆ: ಪೋಷಕರ ಆಕ್ರೋಶ

- Advertisement -
- Advertisement -

ಕೋವಿಡ್‌ ಕಾರಣದಿಂದ ಕಳೆದೊಂದು ವರ್ಷದಿಂದ ಶಾಲೆಗಳು ತೆರೆದಿಲ್ಲ. ಭೌತಿಕ ತರಗತಿಗಳು ನಿಂತಿವೆ. ಆನ್‌ಲೈನ್‌ ಶಿಕ್ಷಣ ವ್ಯವಸ್ಥೆ ಜಾರಿಯಲ್ಲಿದೆ. ಮಕ್ಕಳು ಆನ್‌ಲೈನ್‌ ಮುಖಾಂತರವೇ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಶಾಲೆಗಳನ್ನು ತೆರೆಯದಿದ್ದರೂ ಸಹ ಶುಲ್ಕ ವಸೂಲಿ ಮಾತ್ರ ನಿಂತಿಲ್ಲ. ಮುಖ್ಯವಾಗಿ ಖಾಸಗಿ ಶಾಲೆಗಳು ಕೋವಿಡ್‌ ಸಮಯದಲ್ಲೂ ಸುಲಿಗೆಯಲ್ಲಿ ತೊಡಗಿವೆ ಎಂಬ ಆರೋಪ ಪೋಷಕರದ್ದು. ವಿದ್ಯಾರ್ಥಿ ಸ್ನೇಹಿ ಎಂದು ಹೇಳಿಕೊಳ್ಳುವ ಪ್ರತಿಷ್ಠಿತ ಕಾರ್ಪೊರೇಟ್‌ ಶಿಕ್ಷಣ ಸಂಸ್ಥೆಯೊಂದು ಶುಲ್ಕ ಪಾವತಿಸದ ಮಕ್ಕಳ ಆನ್‌ಲೈನ್ ತರಗತಿ ಬಂದ್ ಮಾಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

ಸರ್ಕಾರ ಶುಲ್ಕ ನೀಡಲು ತಡವಾದರೂ ಮಕ್ಕಳ ತರಗತಿಗಳನ್ನು ನಿಲ್ಲಿಸುವಂತಿಲ್ಲ ಎಂದು ನಿಯಮಗಳನ್ನು ಹೊರಡಿಸಿದೆ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಬೆಂಗಳೂರಿನ ಎಬೆನೇಜರ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ ಅತಿ ಹೆಚ್ಚಿನ ಶುಲ್ಕವನ್ನು ವಸೂಲಿ ಮಾಡುತ್ತಿದೆ. ಈ ಸಂಬಂಧ ಪೋಷಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಶಾಲಾ ಶುಲ್ಕ ವಿಚಾರ: ಸಮಸ್ಯೆ ಬಗೆಹರಿಸುವಂತೆ ಸಿಎಂ ಯಡಿಯೂರಪ್ಪಗೆ ಸಿದ್ದರಾಮಯ್ಯ ಪತ್ರ

ಎಬೆನೆಜರ್ ಇಂಟರ್‌ನ್ಯಾಷನಲ್ ಸ್ಕೂಲ್ ಬೆಂಗಳೂರು(EISB) ರಾಜಧಾನಿಯ ಪ್ರತಿಷ್ಠಿತ ಶಾಲೆಗಳಲ್ಲಿ ಒಂದು. ಅಂತರಾಷ್ಟ್ರೀಯ ಪಠ್ಯಕ್ರಮವನ್ನು ಅಳವಡಿಸಿಕೊಂಡಿರುವ ಈ ಶಾಲೆಯಲ್ಲಿ ಸುಮಾರು 800ಕ್ಕೂ ಅಧಿಕ ವಿದ್ಯಾರ್ಥಿಗಳು ಓದುತ್ತಿದ್ದು ಕಳೆದ ಒಂದು ವರ್ಷದಿಂದ ಆನ್‌ಲೈನ್‌ ಮೂಲಕ ತರಗತಿಗಳನ್ನು ಮತ್ತು ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುತ್ತಿದೆ. ಭೌತಿಕ ತರಗತಿಗಳನ್ನು ನಡೆಸದ ಕಾರಣ ಶಾಲೆಯು ಸ್ವಾಭಾವಿಕವಾಗಿ ಶುಲ್ಕವನ್ನು ಕಡಿತಗೊಳಿಸಬೇಕಿತ್ತು. ಭೋದನಾ ಶುಲ್ಕವನ್ನು ಮಾತ್ರ ವಿದ್ಯಾರ್ಥಿಗಳಿಂದ ಕಟ್ಟಿಸಿಕೊಳ್ಳಬೇಕೆಂಬ ಸರ್ಕಾರದ ನಿಯಮದನುಸಾರ ಶಾಲೆಯ ಶುಲ್ಕ ಕಳೆದ ವರ್ಷಕ್ಕಿಂತ ಈ ವರ್ಷ ಕಡಿಮೆಯಾಗಬೇಕಿತ್ತು. ಆದರೆ ಶಾಲಾ ಅಡಳಿತ ಈ ವರ್ಷ ಕಳೆದ ವರ್ಷಕ್ಕಿಂತ ಶೇ 30% ಶುಲ್ಕವನ್ನು ಹೆಚ್ಚಿಸಿದೆ ಎಂದು ಶಾಲೆಯ ಈ ನಡೆಯಿಂದ ಬೇಸರಗೊಂಡ ಪೋಷಕರು ತಿಳಿಸಿದ್ದಾರೆ.

ಬೊಮ್ಮಸಂದ್ರದ ಅನ್ವಿತಾ (ಹೆಸರು ಬದಲಾಯಿಸಲಾಗಿದೆ) ಎಲೆಕ್ಟ್ರಾನಿಕ್‌ ಸಿಟಿಯ ಎಬೆನೇಜರ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ನಲ್ಲಿ 6 ತರಗತಿಯ ಐಸಿಎಸ್‌ಸಿ ಪಠ್ಯಕ್ರಮದಲ್ಲಿ ಓದುತ್ತಿದ್ದಾರೆ. ಆಕೆಯ ತಮ್ಮ ಅನುಷ್‌ (ಹೆಸರು ಬದಲಾಯಿಸಲಾಗಿದೆ) ಅದೇ ಸ್ಕೂಲ್‌ನಲ್ಲಿ 5 ನೇ ತರಗತಿಯಲ್ಲಿ ಓದುತ್ತಿದ್ದಾನೆ. ಶಾಲೆ ಆಡಳಿತ ಮಂಡಳಿ ಶುಲ್ಕ ಪಾವತಿಸಿಲ್ಲ ಎಂಬ ಕಾರಣದಿಂದ ಜುಲೈ 1 ರಿಂದ ಇವರಿಬ್ಬರ ಆನ್‌ಲೈನ್‌ ತರಗತಿಗಳನ್ನು ನಿಲ್ಲಿಸಿದೆ. ಪೋಷಕರಾದ ಜಗಮೋಹನ್‌ ರೆಡ್ಡಿ (ಹೆಸರು ಬದಲಾಯಿಸಲಾಗಿದೆ) ಸ್ಕೂಲ್ ಆಡಳಿತವನ್ನು ಈ ಕುರಿತು ಸಂಪರ್ಕಿಸಿದರೂ ಸರಿಯಾದ ಸ್ಪಂದನೆ ದೊರೆತಿಲ್ಲ. ಕಳೆದ 12 ದಿನಗಳಿಂದ ಮಕ್ಕಳ ತರಗತಿಗಳು ನಿಂತು ಹೋಗಿವೆ. ತಾಂತ್ರಿಕ ಕಾರಣಗಳದಿಂದ ತರಗತಿ ನಡೆಯುತ್ತಿಲ್ಲವೆಂದು ಶಾಲೆ ಆಡಳಿತ ನಮಗೆ ಹೇಳುತ್ತಿದೆ. ಆದರೆ ನಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ 1,40,000 ರೂ. ಗಳಷ್ಟಿದ್ದ ಶಾಲಾ ಶುಲ್ಕ ಈ ವರ್ಷ 1,70,000 ರೂಗೆ ಹೆಚ್ಚಳವಾಗಿದೆ. ಬೋಧನಾ ಶುಲ್ಕವನ್ನೇ 1,70,000 ಕ್ಕೆ ಹೆಚ್ಚಿಸುವ ಮೂಲಕ ಶಾಲೆ ಆಡಳಿತ ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ಎಬೆನೇಜರ್‌ ಶಾಲೆಯ ಶುಲ್ಕ ವಿವರ

ಶಾಲೆಯ ಆಡಳಿತ ಒಟ್ಟು ಶುಲ್ಕದಲ್ಲಿ ಬೇರೆ ಬೇರೆ ವಿಭಾಗಗಳನ್ನು ಮಾಡದೇ ಬೋಧನಾ ಶುಲ್ಕದ ಹೆಸರಿನಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚು ಫೀಸ್‌ ವಿಧಿಸಿದೆ.

ಇದನ್ನೂ ಓದಿ: ಶಾಲಾ ಶುಲ್ಕ ಮನ್ನಾ ಮಾಡುವ ಪಿಐಎಲ್ ತಿರಸ್ಕರಿಸಿದ ದೆಹಲಿ ಹೈಕೋರ್ಟ್

“ಆನ್‌ಲೈನ್‌ ತರಗತಿಗಳನ್ನು ನಿಲ್ಲಿಸಿರುವುದೇಕೆ? ಎಂಬ ಪ್ರಶ್ನೆಗೆ ಶಾಲೆ ಇದುವರೆಗೆ ಉತ್ತರಿಸುತ್ತಿಲ್ಲ. ಫೀಸ್‌ ಕಟ್ಟದ ಕಾರಣಕ್ಕೇ ತರಗತಿಯನ್ನು ನೀಡುತ್ತಿಲ್ಲವೆ ಎಂಬ ಪ್ರಶ್ನೆಗೆ ಉತ್ತರಿಸಲು ಶಾಲೆ ಸಿದ್ಧವಿಲ್ಲ. ಶಾಲೆಗೆ ಬನ್ನಿ ಮಾತನಾಡೋಣ, ಸಮಸ್ಯೆಯನ್ನು ಬಗೆಹರಿಸಿಕೊಳ್ಳೋಣ ಎಂಬ ಉತ್ತರ ಶಾಲೆ ಕಡೆಯಿಂದ ಪ್ರತಿ ಸಾರಿ ಕೇಳಿ ಬರುತ್ತಿದೆ” ಎಂದು ಪೋಷಕರು ದೂರಿದ್ದಾರೆ.

ಪೋಷಕರ ಆರೋಪದ ಕುರಿತು ಶಾಲೆ ಆಡಳಿತ ಮಂಡಳಿಯ ಪ್ರತಿಕ್ರಿಯೆ ಪಡೆಯಲು ನಾನುಗೌರಿ.ಕಾಂ ಪ್ರಯತ್ನಿಸಿತು. “ನಾವು ಯಾವುದೇ ಮಕ್ಕಳ ಆನ್‌ಲೈನ್ ತರಗತಿಗಳನ್ನು ನಿಲ್ಲಿಸಿಲ್ಲ. ಕೆಲವು ತಾಂತ್ರಿಕ ಕಾರಣಗಳಿಂದ ತರಗತಿಗಳು ಆರಂಭವಾಗಿಲ್ಲ. ಶೀ‍ಘ್ರದಲ್ಲಿ ಸಮಸ್ಯೆ ಬಗೆಹರಿಸಲಾಗುತ್ತದೆ. ಬೋಧನಾ ಶುಲ್ಕದಲ್ಲಿ ಹೆಚ್ಚಳ ಮಾಡಿರುವುದು ಶಾಲಾ ಆಡಳಿತದ ನಿರ್ಧಾರ.” ಎಂದು ಹೇಳಿದ್ದಾರೆ.

ಇದನ್ನೂ ಓದಿ: 30% ಶುಲ್ಕ ಕಡಿತ: ಸರ್ಕಾರದ ವಿರುದ್ಧ ಬೀದಿಗಿಳಿದ ಖಾಸಗಿ ಶಾಲಾ ಶಿಕ್ಷಕರು, ಸಿಬ್ಬಂದಿಗಳು

ಒಂದು ಕಡೆ ಮಕ್ಕಳಿಂದ ಹೆಚ್ಚು ಶುಲ್ಕ ವಸೂಲಿ ಮಾಡುವ ಶಾಲೆ ತನ್ನ ಸಿಬ್ಬಂದಿಗೆ ಮಾತ್ರ ವೇತನ ಕಡಿತಗೊಳಿಸಿ ಶೇ. 50% ಹಣ ನೀಡುತ್ತಿದ್ದಾರೆ ಎಂದು ಹೆಸರು ಹೇಳಲಿಚ್ಚಿಸದ ಸಿಬ್ಬಂದಿಯೊಬ್ಬರು ಎಬೆನೆಜರ್ ಶಾಲೆ ಆಡಳಿತದಿಂದ ವಿರುದ್ಧ ಆರೋಪಿಸಿದ್ದಾರೆ. ಇದನ್ನೂ ಸಹ ಶಾಲೆಯ ಆಡಳಿತಾಧಿಕಾರಿ ನಿರಾಕರಿಸಿದ್ದಾರೆ.

ತದನಂತರ “ಶಾಲೆಯ ಆಡಳಿತ  ತಮ್ಮನ್ನು ಕರೆಸಿ ಮಾತನಾಡಿದ್ದು, ಸಮಸ್ಯೆ ಬಗೆಹರಿಸಿರುವುದಾಗಿ ಭರವಸೆ ನೀಡಿದ್ದು, ಎರಡು ದಿನದಲ್ಲಿ ಆನ್‌ಲೈನ್ ಶಿಕ್ಷಣ ಆರಂಭಿಸಲಾಗುವುದು. ಶುಲ್ಕವನ್ನು ಸಾಧ್ಯವಾದಾಗ ಕಟ್ಟಿ ಎಂದಿದ್ದಾರೆ” ಎಂದು ಪೋಷಕರು ತಿಳಿಸಿದ್ದಾರೆ.

ಬೋಧನಾ ಶುಲ್ಕದ ಹೆಸರಿನಲ್ಲಿ ಖಾಸಗಿ ಶಾಲೆಗಳು ಲಕ್ಷಾಂತರ ಹಣವನ್ನು ವಸೂಲಿ ಮಾಡುತ್ತಿರುವುದು ಇನ್ನೂ ಅನೇಕ ಕಡೆ ಬೆಳಕಿಗೆ ಬಂದಿದೆ. ಮಕ್ಕಳ ಆನ್‌ಲೈನ್‌ ತರಗತಿಗಳನ್ನು ನಿಲ್ಲಿಸುವ ಭಯದಿಂದ ಪೋಷಕರು ದೂರು ನೀಡಲು ಈ ಸಂಬಂಧ ಮುಂದೆ ಬರುತ್ತಿಲ್ಲ. ಸರ್ಕಾರ ಮತ್ತು ಶಿಕ್ಷಣ ಸಚಿವರು ಈ ಸಂಬಂಧ ಗಮನಹರಿಸಿ ಖಾಸಗಿ ಶಾಲೆಗಳ ಸುಲಿಗೆಯಿಂದ ಪೋಷಕರನ್ನು ರಕ್ಷಿಸಬೇಕಿದೆ. ಹಾಗೇ ಖಾಸಗಿ ಶಾಲೆಗಳು ಸಿಬ್ಬಂದಿಗಳಿಗೆ ಸರಿಯಾಗಿ ವೇತನ ನೀಡುವಂತೆ ಎಚ್ಚರಿಕೆ ನೀಡಬೇಕಿದೆ.

-ರಾಜೇಶ್‌ ಹೆಬ್ಬಾರ್‌


ಇದನ್ನೂ ಓದಿ: ಶಾಲಾ ಶುಲ್ಕ ವಿಚಾರ: ಸರ್ಕಾರ ನಿಗದಿಪಡಿಸುವ ಶುಲ್ಕಕ್ಕೆ ಬದ್ಧ ಎಂದ ಆಡಳಿತ ಮಂಡಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...