ಚುನಾವಣಾ ಆಯೋಗ ಯಾವಾಗಲೂ ಮೋದಿ ಸರ್ಕಾರದ ಕೈಗೊಂಬೆಯಾಗಿದೆ ಎಂದು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಆರೋಪಿಸಿದ್ದಾರೆ. ಬಿಹಾರದಲ್ಲಿ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಬಹುಸಂಖ್ಯಾತರ ಸರ್ಕಾರಗಳು ಅಧಿಕಾರದಲ್ಲಿ ಉಳಿಯುವಂತೆ ಮಾಡುವ ಗುರಿಯನ್ನು ಹೊಂದಿರುವ ‘ಅಸಂವಿಧಾನಿಕ’ ಕ್ರಮ ಎಂದು ಅವರು ಟೀಕಿಸಿದ್ದಾರೆ.
“ಪ್ರತಿಯೊಬ್ಬ ಚುನಾವಣಾ ಆಯುಕ್ತರೂ ಸರ್ಕಾರದೊಂದಿಗಿನ ಹೊಂದಾಣಿಕೆಯಲ್ಲಿ ಅವರ ಹಿಂದಿನವರನ್ನು ಮೀರಿಸುತ್ತಾರೆ” ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಸಿಬಲ್ ಹೇಳಿದ್ದಾರೆ.
ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಟೀಕಿಸಿದ ಸಿಬಲ್, “ಚುನಾವಣಾ ಆಯೋಗ ಪೌರತ್ವದ ತಕರಾರುಗಳನ್ನು ನಿರ್ಧರಿಸುವ ಅಧಿಕಾರ ಹೊಂದಿಲ್ಲ”ಎಂದಿದ್ದಾರೆ.
ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ಮೇಲೆ ಪ್ರತಿಪಕ್ಷಗಳು ನಡೆಸುತ್ತಿರುವ ವಾಗ್ವಾಳಿ ಬಗ್ಗೆ ಕೇಳಿದಾಗ “ಈ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಚುನಾವಣಾ ಆಯೋಗ ಅದರ ಕೈಗೊಂಬೆಯಾಗಿದೆ. ಚುನಾವಣಾ ಆಯೋಗದ ನಡವಳಿಕೆ ಬಗ್ಗೆ ಕಡಿಮೆ ಮಾತನಾಡಿದಷ್ಟೂ ಒಳ್ಳೆಯದು” ಎಂದು ಹೇಳಿದ್ದಾರೆ.
“ಮತದಾರರ ಪಟ್ಟಿಯ ಪರಿಷ್ಕರಣೆಯು ಸಂಪೂರ್ಣವಾಗಿ ಸಂವಿಧಾನ ಬಾಹಿರವಾಗಿದೆ. ಚುನಾವಣಾ ಆಯೋಗಕ್ಕೆ, ಅದರಲ್ಲೂ ಒಬ್ಬ ಬ್ಲಾಕ್ ಮಟ್ಟದ ಅಧಿಕಾರಿಗೆ ಪೌರತ್ವದ ತಕರಾರುಗಳನ್ನು ನಿರ್ಧರಿಸುವ ಅಧಿಕಾರ ಇಲ್ಲ. ಅವರು (ಬಿಜೆಪಿ) ಚುನಾವಣೆ ಗೆಲ್ಲಲು ಸಾಧ್ಯವಿರುವ ಎಲ್ಲಾ ವಿಧಾನಗಳನ್ನು ಚುನಾವಣಾ ಆಯೋಗದವರು ಅಳವಡಿಸಿಕೊಳ್ಳುತ್ತಾರೆ. ವಾಸ್ತವವಾಗಿ, ವಿಶೇಷ ತೀವ್ರ ಪರಿಷ್ಕರಣೆಯು ಮುಂಬವರುವ ಎಲ್ಲಾ ಸಮಯದಲ್ಲೂ ಬಹು ಸಂಖ್ಯಾತರ ಸರ್ಕಾರಗಳನ್ನು ಉಳಿಸಿಕೊಳ್ಳುವ ಒಂದು ಪ್ರಕ್ರಿಯೆಯಾಗಿದೆ” ಕಪಿಲ್ ಸಿಬಲ್ ಆರೋಪಿಸಿದ್ದಾರೆ.
ಬಡವರು, ತಳಮಟ್ಟದ ಜನರು, ಆದಿವಾಸಿಗಳ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಿದರೆ, ಬಹುಸಂಖ್ಯಾತರ ಪಕ್ಷವು ಯಾವಾಗಲೂ ಗೆಲ್ಲುತ್ತದೆ. ಇದು ಉದ್ದೇಶವಾಗಿದೆ. ಆದ್ದರಿಂದ ಇದು ಕಳವಳಕಾರಿಯಾಗಿದೆ ಎಂದು ಸಿಬಲ್ ಹೇಳಿದ್ದಾರೆ.
ಚುನಾವಣಾ ಆಯೋಗದ ಸ್ವಾತಂತ್ರ್ಯದ ಮೇಲೆ ನಾನು ನಂಬಿಕೆ ಇಡುವುದಿಲ್ಲ. ಏಕೆಂದರೆ ಆ ಸಂಸ್ಥೆಯು ನಿರೀಕ್ಷಿಸಿದ ಸ್ವಾತಂತ್ರ್ಯವನ್ನು ಪ್ರತಿಬಿಂಬಿಸಿಲ್ಲ ಎಂದು ಸಿಬಲ್ ಹೇಳಿದ್ದು, ಸುಪ್ರೀಂ ಕೋರ್ಟ್‌ನ ಮಧ್ಯಂತರ ಆದೇಶದ ಬಗ್ಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದ್ದಾರೆ. ಈ ವಿಷಯದಲ್ಲಿ ನಾನು ವಕೀಲ ಎಂದಿದ್ದಾರೆ.
“ನ್ಯಾಯಾಲಯ ಏನು ಹೇಳಿದೆಯೋ ಅದನ್ನು ಚುನಾವಣಾ ಆಯೋಗವೇ ಗಣನೆಗೆ ತೆಗೆದುಕೊಳ್ಳುತ್ತದೆ ಎಂದು ಆಶಿಸುತ್ತೇವೆ. ಆದ್ದರಿಂದ ಈ ವಿವಾದ ಮುಂದುವರಿಯದಂತೆ ನೋಡಿಕೊಳ್ಳೋಣ” ಎಂದು ಸಿಬಲ್ ಪ್ರತಿಕ್ರಿಯಿಸಿದ್ದಾರೆ.
ಸಂಸತ್ತಿನ ಮಳೆಗಾಲದ ಅಧಿವೇಶನ ಬರುತ್ತಿದೆ. ಈ ಅಧಿವೇಶನದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಚರ್ಚಿಸುವುದು ಎಲ್ಲದ್ದಕ್ಕಿಂತ ಹೆಚ್ಚು ಮಹತ್ವದ್ದಾಗಿದೆ. ಬಿಜೆಪಿ ಗೆದ್ದ ಕ್ಷೇತ್ರಗಳಲ್ಲಿ ಮಾತ್ರ ಮತದಾರರು ಹಠಾತ್ತನೆ ಹೇಗೆ ಹೆಚ್ಚಾದರು ಎಂಬುದನ್ನು ಚುನಾವಣಾ ಆಯೋಗ ಇನ್ನೂ ವಿವರಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಮಹಾರಾಷ್ಟ್ರ ವಿಷಯವೂ ಮುಖ್ಯವಾಗಿದೆ ಎಂದಿದ್ದಾರೆ.
ಬಿಹಾರದ ಮತದಾರರ ಪಟ್ಟಿ ಪರಿಷ್ಕರಣೆಗೆ ಮಾನ್ಯ ದಾಖಲೆಯಾಗಿ ಆಧಾರ್ ಕಾರ್ಡ್, ವೋಟರ್ ಐಡಿ ಮತ್ತು ಪಡಿತರ ಚೀಟಿಯನ್ನು ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಸೂಚಿಸಿದ ಬೆನ್ನಲ್ಲೇ ಕಪಿಲ್ ಸಿಬಲ್ ಮೇಲಿನ ಹೇಳಿಕೆ ನೀಡಿದ್ದಾರೆ.
ಸೌಜನ್ಯ : theprint.in