ಸ್ಥಳೀಯ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖಂಡರೊಬ್ಬರ ಮನೆಯಲ್ಲಿ ಪರಿಶೀಲನೆ ನಡೆಸಲು ತೆರಳಿದ್ದ ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳ ತಂಡದ ಮೇಲೆ ನೂರಾರು ಜನರ ಗುಂಪು ದಾಳಿ ನಡೆಸಿರುವ ಘಟನೆ ಶುಕ್ರವಾರ ಬೆಳಿಗ್ಗೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಾಳಿ ಎಂಬಲ್ಲಿ ನಡೆದಿದೆ.
ಘಟನೆಯಲ್ಲಿ ಮೂವರು ಇಡಿ ಅಧಿಕಾರಿಗಳು ಗಾಯಗೊಂಡಿದ್ದಾರೆ. ಬಹುಕೋಟಿ ಪಡಿತರ ಹಗರಣ ಪ್ರಕರಣ ಸಂಬಂಧ ಸ್ಥಳೀಯ ಟಿಎಂಸಿ ಸಂಚಾಲಕ ಷಹಜಹಾನ್ ಶೇಖ್ ಅವರ ಮನೆಯಲ್ಲಿ ಪರಿಶೀಲನೆ ನಡೆಸಲು ಇಡಿ ಅಧಿಕಾರಿಗಳು ತೆರಳಿದ್ದರು. ಈ ವೇಳೆ ಉದ್ರಿಕ್ತಗೊಂಡ ಸ್ಥಳೀಯರು ಕಲ್ಲು, ಇಟ್ಟಿಗೆ, ದೊಣ್ಣೆಗಳಿಂದ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ನೂರಾರು ಜನರ ಗುಂಪು ದಾಳಿ ನಡೆಸಿದ್ದರಿಂದ ಮೂವರು ಅಧಿಕಾರಿಗಳು ಗಾಯಗೊಂಡಿದ್ದಾರೆ. ಜನರು ಹಿಂಸಾತ್ಮಕವಾಗಿ ವರ್ತಿಸಿದ್ದರಿಂದ ಉಳಿದ ಅಧಿಕಾರಿಗಳು ಜೀವ ಉಳಿಸಿಕೊಳ್ಳಲು ಸ್ಥಳದಿಂದ ತಪ್ಪಿಸಿಕೊಂಡಿದ್ದಾರೆ. ಜನರು ಉದ್ರಿಕ್ತಗೊಂಡಿದ್ದರಿಂದ ಅಧಿಕಾರಿಗಳು ಟಿಎಂಸಿ ನಾಯಕನ ಮನೆ ಪರಿಶೀಲನೆ ನಡೆಸಿಲ್ಲ. ಆಕ್ರೋಶಿತ ಗುಂಪು ಅಧಿಕಾರಿಗಳನ್ನು ಕೊಲ್ಲಲು ಮುಂದಾಗಿತ್ತು ಎಂದು ಇಡಿ ಪ್ರಕಟನೆಯಲ್ಲಿ ತಿಳಿಸಿದೆ.
ಸುಮಾರು 800 ರಿಂದ 1000 ಸಾವಿರ ಜನರು ಇಡಿ ಅಧಿಕಾರಿಗಳು ಮತ್ತು 27 ಅರೆಸೇನಾ ಪಡೆ ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದಾರೆ. ಅಧಿಕಾರಿಗಳು ತೆರಳಿದ್ದ ವಾಹನಗಳನ್ನು ಜಖಂಗೊಳಿಸಿದ್ದಾರೆ. ಈ ಸಂಬಂಧ ನಾವು ಕಾನೂನು ಸಲಹೆ ಪಡೆಯುತ್ತಿದ್ದೇವೆ. ಕೇಂದ್ರ ಗೃಹ ಸಚಿವಾಲಯಕ್ಕೂ ಮಾಹಿತಿ ನಿಡಿದ್ದೇವೆ ಎಂದು ಇಡಿ ಹೇಳಿದೆ.
ಪಡಿತರ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯ ಆಹಾರ ಇಲಾಖೆ ಸಚಿವ ಜ್ಯೋತಿಪ್ರಿಯೊ ಮುಲ್ಲಿಕಿನ್ ಅವರನ್ನು ಕಳೆದ ಅಕ್ಟೋಬರ್ ತಿಂಗಳಲ್ಲಿ ಇಡಿ ಬಂಧಿಸಿದೆ. ಷಹಜಹಾನ್ ಶೇಖ್ ಬಂಧಿತ ಸಚಿವನ ಆಪ್ತ ಎನ್ನಲಾಗಿದೆ.
ಘಟನೆಯನ್ನು ಪಶ್ಚಿಮ ಬಂಗಾಳ ರಾಜ್ಯಪಾಲ ಸಿವಿ ಆನಂದ್ ಬೋಸ್ ತೀವ್ರವಾಗಿ ಖಂಡಿಸಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಬಿಪಿ ಗೋಪಾಲಿಕಾ, ಗೃಹ ಕಾರ್ಯದರ್ಶಿ ನಂದಿನಿ ಚಕ್ರವರ್ತಿ ಮತ್ತು ಪೊಲೀಸ್ ಮಹಾನಿರ್ದೇಶಕ ರಾಜೀವ್ ಕುಮಾರ್ ಅವರಿಂದ ಘಟನೆಯ ಕುರಿತು ವರದಿ ಕೇಳಿದ್ದಾರೆ.
ಘಟನೆಯ ಹೊಣೆಯನ್ನು ಸಂಪೂರ್ಣವಾಗಿ ರಾಜ್ಯ ಸರ್ಕಾರ ಹೊತ್ತುಕೊಳ್ಳಬೇಕು. ಸರ್ಕಾರ ಸರಿಯಾಗಿ ಕೆಲಸ ಮಾಡಡಿದ್ದರೆ ಸಂವಿಧಾನ ಅದರ ಕಾರ್ಯ ನಿರ್ವಹಿಸಲಿದೆ. ಸಂವಿಧಾನದಲ್ಲಿ ನನಗಿರುವ ಎಲ್ಲಾ ಆಯ್ಕೆಗಳನ್ನು ಬಳಸಿಕೊಳ್ಳಲು ಸಿದ್ದನಿದ್ದೇನೆ ಎಂದು ರಾಜ್ಯಪಾಲರು ವಿಡಿಯೋ ಸಂದೇಶದ ಮೂಲಕ ಹೇಳಿದ್ದಾರೆ. ಈ ಮೂಲಕ ರಾಷ್ಟ್ರಪತಿ ಆಳ್ವಿಕೆ ಹೇರುವ ಎಚ್ಚರಿಕೆ ಕೊಟ್ಟಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ಹೇಳಿದೆ. ದೆಹಲಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ವಕ್ತಾರ ಗೌರವ್ ಭಾಟಿಯಾ, ” ಇಡಿ ಅಧಿಕಾರಿಗಳ ಮೇಲೆ ಟಿಎಂಸಿ ಗೂಂಡಾಗಳು ಮತ್ತು ಬಂಗಾಳಕ್ಕೆ ನುಸುಳಿರುವ ರೋಹಿಂಗ್ಯಾಗಳು ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಮೂಗಿನ ನೇರಕ್ಕೆ ಪಶ್ಚಿಮ ಬಂಗಾಳದಲ್ಲಿ ಜಂಗಲ್ ರಾಜ್ ನಡೆಯುತ್ತಿದೆ ಎಂದು ಕಿಡಿಕಾರಿದ್ದಾರೆ.
ಪರಿತರ ಆಹಾರ ಸಾಮಾಗ್ರಿಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿರುವ ಸಂಬಂಧ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 2020 ಮತ್ತು 2022 ರ ನಡುವೆ ಐದು ಎಫ್‌ಐಆರ್‌ಗಳು ದಾಖಲಾಗಿವೆ. ಇದನ್ನು ಆಧರಿಸಿ ಇಡಿ ಏಪ್ರಿಲ್ 2022ರಲ್ಲಿ ಜಾರಿ ಪ್ರಕರಣದ ಮಾಹಿತಿ ವರದಿ (ಇಸಿಐಆರ್) ದಾಖಲಿಸಿದೆ.
ಅಕ್ಟೋಬರ್ 14, 2023 ರಂದು, ಪಡಿತರ ವಿತರಕರಿಗೆ ಸರಬರಾಜು ಮಾಡಲು ಮೀಸಲಿಟ್ಟಿದ್ದ ಅಕ್ಕಿ ಮತ್ತು ಗೋಧಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ ಆರೋಪದ ಮೇಲೆ ಉದ್ಯಮಿ ಬಾಕಿಬುರ್ ರಹಮಾನ್ ಅವರನ್ನು ಇಡಿ ಬಂಧಿಸಿತ್ತು. ಬಾಕಿಬುರ್ ಆರೋಗ್ಯ ಸಚಿವ ಜ್ಯೋತಿಪ್ರಿಯೊ ಮುಲ್ಲಿಕ್ ಜೊತೆ ನಿಕಟ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಅಕ್ಟೋಬರ್ 27ರಂದು ರಾಜ್ಯ ಆಹಾರ ಸಚಿವ ಜ್ಯೋತಿಪ್ರಿಯೊ ಮುಲ್ಲಿಕ್ ಅವರನ್ನು ಇಡಿ ಬಂಧಿಸಿದೆ.
ಇದನ್ನೂ ಓದಿ : ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ ಬಿಜೆಪಿ ಶಾಸಕ


