Homeಕರ್ನಾಟಕಇ.ಡಿ. ಮತ್ತು ಪಿಎಂಎಲ್‌ಎ: ಪಂಜರದ ಗಿಣಿ ಮತ್ತು ಕರಾಳ ಕಾಯ್ದೆ

ಇ.ಡಿ. ಮತ್ತು ಪಿಎಂಎಲ್‌ಎ: ಪಂಜರದ ಗಿಣಿ ಮತ್ತು ಕರಾಳ ಕಾಯ್ದೆ

- Advertisement -
- Advertisement -

ಸಂಸ್ಥೆಯ ದುರ್ಬಳಕೆ

1, ಮೇ 1956ರಂದು ಜಾರಿಗೊಂಡ, ಅಕ್ರಮ ಹಣ ವರ್ಗಾವಣೆಯನ್ನು ತನಿಖೆ ಮಾಡಲು ಮತ್ತು ನಿಯಂತ್ರಿಸುವ ಜವಾಬ್ದಾರಿ ಇರುವ ಇ.ಡಿ. (ಜಾರಿ ನಿರ್ದೇಶನಾಲಯ) ಹಣಕಾಸು ಇಲಾಖೆ, ರೆವಿನ್ಯೂ ಇಲಾಖೆ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಈ ಸಂಸ್ಥೆಯು ಪಿಎಂಎಲ್‌ಎ(ಅಕ್ರಮ ಹಣ ವರ್ಗಾವಣೆ ನಿಯಂತ್ರಣ) ಕಾಯ್ದೆ, ಎಫ್‌ಎಂಇಎ(ವಿದೇಶಿ ವಿನಿಮಯ ನಿರ್ವಹಣ) ಕಾಯ್ದೆಗಳ ಮಾನದಂಡಗಳನ್ನು ಆಧರಿಸಿ ತನಿಖೆ ನಡೆಸುತ್ತದೆ. ಪಿಎಂಎಲ್‌ಎ ಕಾಯ್ದೆಯು ವಿಚಾರಣೆಗಾಗಿ ವಿಶೇಷ ಕೋರ್ಟ್‌ಗಳನ್ನು ಸ್ಥಾಪಿಸುತ್ತದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಅಪರಾಧವನ್ನು ದಾಖಲಿಸಿಕೊಂಡ ನಂತರ ಸಂಬಂಧಿತ ಪ್ರಕರಣವು 1 ಕೋಟಿಯನ್ನು ಮೀರಿದರೆ ಅದನ್ನು ಇ.ಡಿ.ಗೆ ವರ್ಗಾಯಿಸಲಾಗುತ್ತದೆ ಅಥವಾ ಅಕ್ರಮ ನಡೆದಿರುವ ಮಾಹಿತಿ ಇ.ಡಿ. ಸಂಸ್ಥೆಯ ಗಮನಕ್ಕೆ ಬಂದರೂ ಸಹ ಅದು ಸ್ವಯಂಪ್ರೇರಿತ ಎಫ್‌ಐಆರ್ ದಾಖಲಿಸಿಕೊಳ್ಳುತ್ತದೆ.

ಪಿಎಂಎಲ್‌ಎ ಕಾಯ್ದೆಯು ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದ ಅವಧಿ 2002ರಲ್ಲಿ ರೂಪುಗೊಂಡರೂ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿ 2005ರಲ್ಲಿ ಜಾರಿಗೊಳಿಸಲಾಯಿತು. ಆದರೆ ಮೋದಿ ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಬಂದನಂತರ 2015- 2019ರಲ್ಲಿ ಪಿಎಂಎಲ್‌ಎ ಕಾಯ್ದೆಗೆ ತಿದ್ದುಪಡಿ ಮಾಡಿ ಅದನ್ನು ಕರಾಳ ಶಾಸನವನ್ನಾಗಿ ರೂಪಿಸಿದೆ. ಕಳೆದ ಹತ್ತು ವರ್ಷಗಳಲ್ಲಿ ಇ.ಡಿ. ಸಂಸ್ಥೆ ಮತ್ತು ಪಿಎಂಎಲ್‌ಎ ಕಾಯ್ದೆಯನ್ನು ರಾಜಕೀಯ ಮತ್ತು ಸಿದ್ಧಾಂತ ವಿರೋಧಿಗಳನ್ನು ಹಣಿಯಲು, ಬಂಧಿಸಲು ಬಳಸಿಕೊಳ್ಳಲಾಗುತ್ತಿದೆ. ಬಿಜೆಪಿ ಸರ್ಕಾರವು ಲೋಕಸಭೆಯಲ್ಲಿ ತನಗಿರುವ ಬಹುಮತವನ್ನು ಬಳಸಿಕೊಂಡು, ರಾಜ್ಯಸಭೆಯಲ್ಲಿ ಹೊಂದಾಣಿಕೆಯ ರಾಜಕಾರಣದ ಮೂಲಕ ತನ್ನ ಈ ದ್ವೇಷ ರಾಜಕಾರಣಕ್ಕೆ ಅನುಕೂಲವಾಗುವಂತೆ ಕಾಯ್ದೆಯನ್ನು ತಿದ್ದುಪಡಿ ಮಾಡಿಕೊಂಡಿದೆ.

6, ಆಗಸ್ಟ್ 2024ರಂದು ಲೋಕಸಭೆಯಲ್ಲಿ ಕೇಂದ್ರ ಗೃಹ ಇಲಾಖೆಯ ರಾಜ್ಯ ಮಂತ್ರಿ ನಿತ್ಯಾನಂದ ರಾಯ್ ಅವರು ಉಲ್ಲೇಖಿಸಿದಂತೆ ’2014-2024ರ ಹತ್ತು ವರ್ಷಗಳ ಅವಧಿಯಲ್ಲಿ ಪಿಎಂಎಲ್‌ಎ ಅಡಿಯಲ್ಲಿ 5297 ಪ್ರಕರಣಗಳು ದಾಖಲಾಗಿವೆ. ಇದರ ಪೈಕಿ 40 ಪ್ರಕರಣಗಳಲ್ಲಿ ಅಪರಾಧ ನಿರ್ಣಯವಾಗಿದೆ, 3 ಪ್ರಕರಣಗಳಲ್ಲಿ ಆರೋಪ ಸಾಬೀತಾಗದೆ ಬಂಧಿತರು ಬಿಡುಗಡೆಯಾಗಿದ್ದಾರೆ’ ಎಂದು ತಿಳಿಸಿದರು. ಅಂದರೆ ಕೇವಲ ಶೇ.0.7ರಷ್ಟು ಮಾತ್ರ ಇತ್ಯರ್ಥವಾಗಿದೆ. ಈ ಹೇಳಿಕೆಯನ್ನು ಆಧರಿಸಿ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ದೀಪಂಕರ್ ದತ್ತ, ಉಜ್ಜಲ್ ಭೂಯನ್ ಒಳಗೊಂಡ ಪೀಠವು ಇ.ಡಿಗೆ ’ತನಿಖೆ ಮತ್ತು ಸಾಕ್ಷಿಗಳ ಗುಣಮಟ್ಟದ ಕಡೆ ಹೆಚ್ಚು ಗಮನ ಕೊಡಿ’ ಎಂದು ಆದೇಶಿಸಿದೆ.

ನಿತ್ಯಾನಂದ ರಾಯ್

2016-24ರ ಅವಧಿಯಲ್ಲಿ 375 ಆರೋಪಿಗಳು ಬಂಧನದಲ್ಲಿದ್ದಾರೆ. ದೆಹಲಿಯಲ್ಲಿ 2024ರಲ್ಲಿ 32, 2023ರಲ್ಲಿ 36 ಪ್ರಕರಣಗಳು ದಾಖಲಾಗಿದ್ದರೆ 2016-20ರಲ್ಲಿ 2 ಪ್ರಕರಣಗಳು, 2021ರಲ್ಲಿ 8, 2022ರಲ್ಲಿ 12 ಪ್ರಕರಣಗಳು ದಾಖಲಾಗಿದೆ. ಅಂದರೆ ಕಳೆದ ಮೂರು ವರ್ಷಗಳಲ್ಲಿ 88 ಪ್ರಕರಣಗಳು ದಾಖಲಾಗಿದೆ. ಆದರೆ ಕೇಂದ್ರಾಡಳಿತ ಪ್ರದೇಶಗಳು, ಬಿಜೆಪಿ ಆಡಳಿತವಿರುವ ರಾಜ್ಯಗಳಾದ ಅರುಣಾಚಲ ಪ್ರದೇಶ, ಅಸ್ಸಾಂ, ಗುಜರಾತ್, ಹಿಮಾಚಲ ಪ್ರದೇಶ, ಮೇಘಾಲಯಗಳಲ್ಲಿ ಇದುವರೆಗೂ ಒಂದು ಪ್ರಕರಣವೂ ದಾಖಲಾಗಿಲ್ಲ; ಯಾರ ಬಂಧನವೂ ಆಗಲಿಲ್ಲ. ಇದನ್ನು ಉದಾಹರಿಸುವ ವಿರೋಧ ಪಕ್ಷಗಳು ’ಇ.ಡಿ. ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ, ವಿರೋಧ ಪಕ್ಷಗಳನ್ನು ಬೆದರಿಸಲು ಮತ್ತು ಹಣಿಯಲು ಈ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ’ ಎಂದು ಆರೋಪಿಸುತ್ತಾರೆ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಹತ್ತು ವರ್ಷಗಳಲ್ಲಿ ಇ.ಡಿ. ಬಂಧನ ನಾಲ್ಕು ಪಟ್ಟು ಹೆಚ್ಚಾಗಿದೆ.

ಕಳೆದ ವರ್ಷ ಮಾರ್ಚ್‌ನಲ್ಲಿ ಇ.ಡಿ. ಸಂಸ್ಥೆಯು ’2005-2023ರ ಅವಧಿಯಲ್ಲಿ 5905 ಪ್ರಕರಣಗಳನ್ನು ದಾಖಲಿಸಲಾಗಿದೆ, ಇದರ ಪೈಕಿ 25 ಪ್ರಕರಣಗಳು ಮಾತ್ರ ಇತ್ಯರ್ಥವಾಗಿವೆ(ಶೇ.0.42)’ ಎಂದು ಹೇಳಿದೆ. ಕೇಂದ್ರ ಸರ್ಕಾರದ ಹೇಳಿಕೆ ಮತ್ತು ಸಂಸ್ಥೆಯ ಹೇಳಿಕೆ ಎರಡನ್ನೂ ಗಮನಿಸಿದಾಗ ಈ ಸಂಸ್ಥೆಯ ಕಾರ್ಯದಕ್ಷತೆ ತುಂಬಾ ಕಳಪೆಯಾಗಿದೆ ಮತ್ತು ಕಳೆದ ಹತ್ತು ವರ್ಷಗಳಲ್ಲಿ ಇ.ಡಿ. ಸಂಸ್ಥೆಯು ಮೋದಿ ನೇತೃತ್ವದ ಸರ್ಕಾರಕ್ಕೆ ಅಡಿಯಾಳಾಗಿ ಕೆಲಸ ಮಾಡಿದೆ ಎಂದು ಸ್ಪಷ್ಟವಾಗುತ್ತದೆ (ಇದೇ ಅವಧಿಯಲ್ಲಿ ಯುಎಪಿಎ ಅಡಿಯಲ್ಲಿ 8719 ಪ್ರಕರಣಗಳು ದಾಖಲಾಗಿದ್ದರೆ, ಆರೋಪ ಸಾಬೀತಾಗದೆ 567 ಆರೋಪಿಗಳು ಬಿಡುಗಡೆಯಾಗಿದ್ದಾರೆ ಮತ್ತು 222 ಆರೋಪಗಳ ದೋಷ ನಿರ್ಣಯವಾಗಿದೆ). ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ 2014 ಸೆಪ್ಟೆಂಬರ್ ಮತ್ತು 2022ರ ಅವಧಿಯಲ್ಲಿ ಇ.ಡಿ.ಯ ತನಿಖೆಯಲ್ಲಿ ಒಳಗಾದ 121 ಮುಖಂಡರ ಪೈಕಿ 115 ಮುಖಂಡರು ವಿರೋಧ ಪಕ್ಷದವರಾಗಿದ್ದಾರೆ.

ಮೋದಿ-ಶಾ ಅವರ ದ್ವೇಷದ ರಾಜಕಾರಣದ ಫಲವಾಗಿ ವಿರೋಧ ಪಕ್ಷದ ಮುಖಂಡರಾದ ಪಿ.ಚಿದಂಬರಂ, ಡಿ.ಕೆ.ಶಿವಕುಮಾರ್, ಶರದ್ ಪವಾರ್, ಪ್ರಫುಲ್ ಪಟೇಲ್ (ಇವರು ನಂತರ ಬಿಜೆಪಿ ಜೊತೆಗೆ ಸಖ್ಯ ಮಾಡಿದ ನಂತರ ವಿಚಾರಣೆಯೇ ಸ್ಥಗಿತಗೊಂಡಿದೆ), ಅಖಿಲೇಶ್ ಯಾದವ್ ಮುಂತಾದವರ ಮೇಲೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಪಂಚಕುಲಾ ಭೂಮಿ ಪ್ರಕರಣದಲ್ಲಿ ಭೂಪಿಂದರ್ ಹೂಡಾ ಮತ್ತು ಮೋತಿಲಾಲ್ ವೋರಾ ವಿರುದ್ಧ ಇ.ಡಿ. ಕೇಸು ದಾಖಲಿಸಿದೆ. ದೆಹಲಿ ಮುಖ್ಯಮಂತ್ರಿಗಳಾಗಿದ್ದ ಅರವಿಂದ್ ಕೇಜ್ರಿವಾಲ್, ಹೇಮಂತ್ ಸೋರೆನ್ ಅವರನ್ನು ಇ.ಡಿ. ಬಂಧಿಸಿತ್ತು.

2014ರಿಂದ ಕೇಂದ್ರದ ಇ.ಡಿ., ಸಿಬಿಐ ಸಂಸ್ಥೆಗಳಿಂದ ವಿಚಾರಣೆಗೆ ಒಳಗಾಗಿರುವ ಅಂದಾಜು 25 ವಿರೋಧ ಪಕ್ಷದ ಮುಖಂಡರು ಬಿಜೆಪಿ ಸೇರಿಕೊಂಡಿದ್ದಾರೆ. 4, ಏಪ್ರಿಲ್ 2024ರ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ ಕಾಂಗ್ರೆಸ್‌ನಿಂದ 10, ಎನ್‌ಸಿಪಿ ಹಾಗೂ ಶಿವಸೇನೆಯಿಂದ ತಲಾ 4, ಟಿಎಂಸಿಯಿಂದ 3, ಟಿಡಿಪಿಯಿಂದ 2, ಎಸ್‌ಪಿ, ವೈಎಸ್‌ಆರ್‌ಪಿಯಿಂದ ತಲಾ ಒಬ್ಬರು ಬಿಜೆಪಿ ಪಕ್ಷಕ್ಕೆ ಹಾರಿದ್ದಾರೆ. ಇವರ ಪೈಕಿ ಮೂವರ ವಿರುದ್ಧದ ಪ್ರಕರಣಗಳನ್ನು ಮುಚ್ಚಲಾಗಿದೆ. ಇತರೆ 20 ಪಕ್ಷಾಂತರಿಗಳ ವಿರುದ್ಧದ ಪ್ರಕರಣಗಳನ್ನು ಸ್ಥಗಿತಗೊಳಿಸಲಾಗಿದೆ. ಶಿವಸೇನೆಯ ಏಕನಾಥ ಶಿಂಧೆ, ಭಾವನಾ ಗಾವ್ಳಿ, ಯಶವಂತ ಜಾಧವ್, ಯಾಮಿನಿ ಜಾಧವ್, ಪ್ರತಾಪ್ ಸರ್‌ನಾಯಕ್, ಎನ್‌ಸಿಪಿಯ ಅಜಿತ್ ಪವಾರ್, ಛಗನ್ ಭುಜಬಲ್, ಟಿಎಂಸಿಯ ಸುವೇಂಧು ಅಧಿಕಾರಿ, ಕಾಂಗ್ರೆಸ್‌ನ ಅಶೋಕ ಚವ್ಹಾಣ, ನವೀನ್ ಜಿಂದಾಲ್, ಗೀತಾ ಕೋಡಾ, ನಾರಾಯಣ ರಾಣೆ, ಎಸ್‌ಪಿಯ ಸಂಜಯ್ ಸೇಥ್ ಮುಂತಾದ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಮುಖಂಡರು ’ಬಿಜೆಪಿ ವಾಶಿಂಗ್ ಮೆಶಿನ್’ನಲ್ಲಿ ಜಳಕ ಮಾಡಿಕೊಂಡ ನಂತರ ಈಗ ಎಲ್ಲಾ ಬಗೆಯ ತನಿಖೆಗಳಿಂದ ಮುಕ್ತರಾಗಿದ್ದಾರೆ. ಸಾರದಾ ಚಿಟ್ ಫಂಡ್ ಹಗರಣದಲ್ಲಿ ಟಿಎಂಸಿಯಲ್ಲಿದ್ದ ಮುಕುಲ್ ರಾಯ್ ಮತ್ತು ಕಾಂಗ್ರೆಸ್‌ನಲ್ಲಿದ್ದ ಹಿಮಂತ್ ಬಿಸ್ವ ಶರ್ಮ ಅವರನ್ನು ಪ್ರಶ್ನಿಸಲಾಗಿತ್ತು. ಆದರೆ ಅವರು ಬಿಜೆಪಿ ಸೇರಿಕೊಂಡ ನಂತರ ಇದುವರೆಗೂ ಇ.ಡಿ. ಅವರ ವಿರುದ್ಧ ತನಿಖೆ ಮಾಡಲಿಲ್ಲ

ಪಿ.ಚಿದಂಬರಂ

ಬಿಜೆಪಿ ಮುಖಂಡರಾದ ಕರ್ನಾಟಕದ ಯಡಿಯೂರಪ್ಪ, ಅವರ ಮಗ ವಿಜಯೇಂದ್ರ, ಕೆ.ಸುಧಾಕರ್, ಜನಾರ್ದನ ರೆಡ್ಡಿ, ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್, ರಾಜಸ್ಥಾನದ ವಸುಂಧರಾ ರಾಜೆ ಸಿಂಧಿಯಾ, ಮಹಾರಾಷ್ಟ್ರದ ಫಡ್ನವೀಸ್, ರಮೇಶ್ ಪೊಕ್ರಿಯಾಲ್ ನಿಶಾಂಕ್, ಮುಂತಾದವರ ಮೇಲೆ ಅಕ್ರಮ ಹಣ ವರ್ಗಾವಣೆಯ ಗಂಭೀರ ಆರೋಪಗಳಿದ್ದರೂ ಸಹ ಅವರ ವಿರುದ್ಧ ಪ್ರಕರಣ ದಾಖಲಾಗಿಲ್ಲ.

ಆದರೆ ವಿರೋಧ ಪಕ್ಷದ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರನ್ನು 31 ಜನವರಿ 2024ರಂದು ಭೂಹಗರಣದ ಪ್ರಕರಣದಲ್ಲಿ ಇ.ಡಿ. ಅಧಿಕಾರಿಗಳು ಬಂಧಿಸಿದರು. ಆರು ತಿಂಗಳು ಕಾಲ ವಿಶೇಷ ಕೋರ್ಟ್‌ನಲ್ಲಿ ವಿಚಾರಣೆ ನಡೆಸಲಾಯಿತು. ಸೋರೆನ್ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರು. ಕಡೆಗೂ 28 ಜೂನ್ 2024ರಂದು ಅವರಿಗೆ ಜಾಮೀನು ದೊರಕಿತು.

21 ಮಾರ್ಚ್ 2024ರಂದು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರನ್ನು ಅಬಕಾರಿ ನೀತಿ ಪ್ರಕರಣದಲ್ಲಿ ಪಿಎಂಎಲ್‌ಎ ಅಡಿಯಲ್ಲಿ ಬಂಧಿಸಲಾಯಿತು. 20 ಜೂನ್‌ರಂದು ದೆಹಲಿ ಹೈಕೋರ್ಟ್, ಇ.ಡಿ. ಸೂಕ್ತ ಸಾಕ್ಷಿ ಸಲ್ಲಿಸಲಿಲ್ಲ ಎಂದು ಜಾಮೀನು ಕೊಟ್ಟಿತು. ಆದರೆ ಇ.ಡಿ. ಸಂಸ್ಥೆಯ ಎಲ್ಲಾ ದಾಖಲೆಗಳನ್ನು ಪರಿಶೀಲಿಸದೆ ರಜಾ ಸಂದರ್ಭದ ನ್ಯಾಯಮೂರ್ತಿ ಈ ತೀರ್ಪು ಕೊಟ್ಟಿದ್ದಾರೆ ಎಂದು ಸಂಸ್ಥೆ ಮರು ಅರ್ಜಿ ಸಲ್ಲಿಸಿದಾಗ ಕೇಜ್ರೀವಾಲ್ ಜಾಮೀನನ್ನು ತಡೆಹಿಡಿಯಲಾಯಿತು. ಈ ಪ್ರಕರಣ ಸುಪ್ರೀಂಕೋರ್ಟ್ ಮುಂದೆ ಬರುವ ಮೊದಲೇ 26 ಜೂನ್‌ರಂದು ಸಿಬಿಐ ಅವರನ್ನು ಭ್ರಷ್ಟಾಚಾರದ ಪ್ರಕರಣದಲ್ಲಿ ಬಂಧಿಸಿತು. ನ್ಯಾಯಾಂಗದ ವಿಚಾರಣೆಗಳು ಮುಗಿಯುವ ಮೊದಲೇ ವ್ಯಕ್ತಿಯೊಬ್ಬರನ್ನು ಅಪರಾಧಿ ಎಂದು ಕಲ್ಪಿಸಿಕೊಂಡು ಅವರನ್ನು ಗುರಿಯಾಗಿಸಿಕೊಂಡು ಬಂಧಿಸುವುದು ಕೆಟ್ಟ ಮೇಲ್ಪಂಕ್ತಿಯಾಗಿದೆ. ಇ.ಡಿ. ಸಂಸ್ಥೆ ಬಿಜೆಪಿಯ ಇಂತಹ ದ್ವೇಷದ ರಾಜಕಾರಣಕ್ಕೆ ಬಾಣವಾಗಿ ಬಳಕೆಯಾಗುತ್ತಿದೆ. ಮೇಲ್ನೋಟಕ್ಕೆ ಕಂಡುಬರುವ ಇಂತಹ ಸೇಡಿನ ರಾಜಕಾರಣವನ್ನು ಸುಪ್ರೀಂಕೋರ್ಟ್ ತಾತ್ವಿಕವಾಗಿ ಪರಿಗಣಿಸಿ ಬಗೆಹರಿಸಬೇಕಾದ ಸಂದರ್ಭದಲ್ಲಿ ಅದು ರಾಜಕೀಯ ಮೇಲಾಟಗಳಿಗೆ ಭಾಗವಾಗುತ್ತಿರುವುದು ಸಹ ಆತಂಕದ ಸಂಗತಿಯಾಗಿದೆ. ಯಾವುದೇ ಸಂಸ್ಥೆಯು ಸೂಕ್ತವಾದ, ವಿಶ್ವಾಸಾರ್ಹ ಸಾಕ್ಷಿಗಳನ್ನು ಮುಂದಿಡಬೇಕು ಮತ್ತು ನ್ಯಾಯಾಂಗಕ್ಕೆ ನ್ಯಾಯಸಮ್ಮತ ತೀರ್ಪು ಕೊಡುವಂತಹ ವಾತಾವರಣ ಸೃಷ್ಟಿಸಬೇಕು. ಆದರೆ ಕೇಜ್ರಿವಾಲ್ ಪರ ವಕೀಲ ಅಭಿಷೇಕ್ ಸಿಂಗ್ ಸಿಂಗ್ವಿ ’ಅವರು ತಪ್ಪಿತಸ್ಥರಲ್ಲ ಎಂದು ಪುರಸ್ಕರಿಸುವ ದಾಖಲೆಗಳನ್ನು ಇ.ಡಿ. ಕೋರ್ಟ ಮುಂದೆ ಉದ್ದೇಶಪೂರ್ವಕವಾಗಿ ಸಲ್ಲಿಸುತ್ತಿಲ್ಲ ಎಂದು ಆಪಾದಿಸುತ್ತಾರೆ. 13 ಸೆಪ್ಟೆಂಬರ್ 2024ರಂದು ಕೇಜ್ರೀವಾಲ್‌ಗೆ ಜಾಮೀನು ನೀಡಿದ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಸೂರ್ಯಕಾಂತ್ ’ದೀರ್ಘಕಾಲ ಬಂಧನದಲ್ಲಿಡುವುದು ಅಭಿವ್ಯಕ್ತಿ ಸ್ವಾತಂತ್ರದ ಉಲ್ಲಂಘನೆಯಾಗುತ್ತದೆ’ ಎಂದು ಹೇಳಿದರೂ ಸಹ ಬಂಧನವನ್ನು ಸಮರ್ಥಿಸಿದರು, ಮತ್ತೊಬ್ಬ ನ್ಯಾಯಮೂರ್ತಿ ಉಜ್ಜಲ್ ಭೂಯನ್ ’ಈ ಬಂಧನ ಕಾನೂನುಬಾಹಿರ’ ಎಂದು ಹೇಳಿದರು. ಕಡೆಗೂ ಕೇಜ್ರಿವಾಲ್ ಅವರಿಗೆ ಜಾಮೀನು ದೊರಕಿದೆ.

ಇನ್ನು ಚುನಾವಣಾ ಬಾಂಡ್ ಹಗರಣಕ್ಕೂ ಇ.ಡಿ. ತಳುಕು ಹಾಕಿಕೊಂಡಿದೆ. ಇ.ಡಿ. ಸಂಸ್ಥೆ, ಸಿಬಿಐ, ಆದಾಯ ತೆರಿಗೆ ಇಲಾಖೆಗಳ ತನಿಖೆ ಎದುರಿಸುತ್ತಿರುವ 41 ಕಂಪನಿಗಳು 2471 ಕೋಟಿ ಮೊತ್ತದ ಚುನಾವಣಾ ಬಾಂಡ್‌ಗಳನ್ನು ಬಿಜೆಪಿ ಪಕ್ಷಕ್ಕೆ ಕೊಟ್ಟಿವೆ. ಈ ಚುನಾವಣಾ ಬಾಂಡ್ ಅಕ್ರಮ ಹಗರಣದ ಕುರಿತು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿದಾರರ ಪರ ವಾದ ಮಂಡಿಸಿದ ಪ್ರಶಾಂತ ಭೂಷಣ್ ’2023ರ ಆಗಸ್ಟ್‌ನಲ್ಲಿ ಆದಾಯ ತೆರಿಗೆ ದಾಳಿಯ ನಂತರದ ಮೂರು ತಿಂಗಳಲ್ಲಿ ಕಲ್ಪತರು ಉದ್ಯಮವು ಬಿಜಿಪಿಗೆ 5.5 ಕೋಟಿ ಬಾಂಡ್ ಕೊಟ್ಟಿದೆ, ಫ್ಯೂಚುರಾ ಗೇಮಿಂಗ್ ಕಂಪನಿಯು 12 ನವೆಂಬರ್ 2023 ಮತ್ತು ಡಿಸೆಂಬರ್ 2021ರಲ್ಲಿ, ಇ.ಡಿ. ಮತ್ತು ಆದಾಯ ತೆರಿಗೆ ಇಲಾಖೆಗಳು ದಾಳಿ ನಡೆಸಿದ ಮೂರು ತಿಂಗಳ ಅವಧಿಯಲ್ಲಿ ಬಿಜೆಪಿಗೆ 60 ಕೋಟಿ ಕೊಟ್ಟಿದೆ, ಅರಬಿಂದೋ ಫಾರ್ಮ ಕಂಪನಿಯು 10 ನವೆಂಬರ್ 2022ರಲ್ಲಿ ಇ.ಡಿ. ದಾಳಿ ನಡೆದ ಮೂರು ತಿಂಗಳಲ್ಲಿ ಬಿಜೆಪಿ ಪಕ್ಷಕ್ಕೆ 5 ಕೋಟಿ ಕೊಟ್ಟಿದೆ’ ಎಂದು ಹೇಳಿದರು.

ಡಿ.ಕೆ.ಶಿವಕುಮಾರ್

ಇದೇ ಮಾದರಿಯಲ್ಲಿ ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿ., ಹಲ್ದಿಯಾ ಎನರ್ಜಿ ಲಿ., ವೇದಾಂತ ಲಿ., ಯಶೋಧ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಜಿಂದಾಲ್ ಸ್ಟೀಲ್ ಅಂಡ್ ಪವರ್ ಲಿ., ಚೆನ್ನೈ ಗ್ರೀನ್‌ವುಡ್ ಪ್ರೈ.ಲಿ., ಡಾ.ರೆಡ್ಡಿ ಲ್ಯಾಬ್ಸ್ ಲಿ., ಐಎಫ್‌ಬಿ ಅಗ್ರೋ ಲಿ., ಎನ್‌ಸಿಸಿ ಲಿ., ದಿವಿಸ್ ಲ್ಯಾಬೋಟರಿ ಲಿ., ಮುಂತಾದ ಕಂಪನಿಗಳು ಇ.ಡಿ. ಆದಾಯ ತೆರಿಗೆ ಇಲಾಖೆಗಳಿಂದ ತನಿಖೆಗೆ ಒಳಪಟ್ಟಿವೆ. ನಂತರ ಇದೇ ಕಂಪನಿಗಳು ಬಿಜೆಪಿ ಪಕ್ಷಕ್ಕೆ ಕೋಟ್ಯಂತರ ಮೊತ್ತದ ಚುನಾವಣಾ ಬಾಂಡ್‌ಅನ್ನು ಕೊಡುಗೆಯಾಗಿ ಕೊಟ್ಟಿದ್ದಾರೆ. ಒಟ್ಟು 12769 ಕೋಟಿ ಮೊತ್ತದ ಚುನಾವಣಾ ಬಾಂಡ್‌ನಲ್ಲಿ ಬಿಜೆಪಿ ಪಕ್ಷಕ್ಕೆ ಮಾತ್ರವೇ 6060 ಕೋಟಿ(ಶೇ.47) ಮೊತ್ತ ದೊರಕಿದೆ. ಕಂಪನಿಗಳು ಇ.ಡಿ., ಸಿಬಿಐ, ಆದಾಯ ತೆರಿಗೆ ದಾಳಿಯಿಂದ ತಪ್ಪಿಸಿಕೊಳ್ಳಲು ಇಂತಹ ಬೃಹತ್ ಮೊತ್ತದ ಹಣವನ್ನು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪಕ್ಷಕ್ಕೆ ಕಪ್ಪ ಒಪ್ಪಿಸಿದ್ದಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಬಾಂಡ್ ಮೂಲಕ ಲಂಚ ಕೊಟ್ಟ ನಂತರ ಬಹುತೇಕ ಕಂಪನಿಗಳ ವಿರುದ್ಧ ತನಿಖೆಯನ್ನು ಸ್ಥಗಿತಗೊಳಿಸಲಾಗಿದೆ. ಇಂತಹ ಬ್ರಹ್ಮಾಂಡ ಭ್ರಷ್ಟಾಚಾರದ ಕುರಿತು ಸುಪ್ರೀಂಕೋರ್ಟ್ ಆತಂಕ ವ್ಯಕ್ತಪಡಿಸಿ ಚುನಾವಣಾ ಬಾಂಡ್ ವ್ಯವಸ್ಥೆಯನ್ನು ರದ್ದುಗೊಳಿಸಿತು. ಇದು ಸ್ವಾಗತಾರ್ಹ. ಆದರೆ ಜಗತ್ತಿನಲ್ಲಿಯೇ ಅತಿದೊಡ್ಡ ಮಟ್ಟದ ಭ್ರಷ್ಟಾಚಾರದ ಫಲಾನುಭವಿಯಾದ ಬಿಜೆಪಿ ಪಕ್ಷದ ವಿರುದ್ಧ ತನಿಖೆ ನಡೆಸಲು ಅನುಮತಿ ಕೊಡಲು ನಿರಾಕರಿಸಿದೆ. ಇದರಿಂದ ಇಡೀ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸುವ ಅವಕಾಶವೂ ತಪ್ಪಿರುವುದು ವಿಷಾದನೀಯ. ಜೊತೆಗೆ ನಾಗರಿಕ ಸಮಾಜವು ಸಹ ಈ ಹಗರಣದ ಕುರಿತು ಮೌನವಾಗಿರುವುದು ಇಲ್ಲಿನ ದುರಂತ ಎಂದು ಹೇಳಬೇಕಾಗುತ್ತದೆ.

ಪಂಜರದ ಗಿಣಿ ಇ.ಡಿ. ಮತ್ತು ಕರಾಳ ಕಾಯ್ದೆ ಪಿಎಂಎಲ್‌ಎ

ಹಣದ ಅಕ್ರಮ ವರ್ಗಾವಣೆಯನ್ನು ನಿಯಂತ್ರಿಸಲು ಪಿಎಂಎಲ್‌ಎ ಕಾಯ್ದೆ, 2002ಅನ್ನು ತರಲಾಯಿತು. ಕಳ್ಳ ಸಾಗಾಣಿಕೆ, ಡ್ರಗ್ ಅಕ್ರಮ ವ್ಯಾಪಾರ, ಭಯೋತ್ಪಾದನೆಗೆ ಹಣಕಾಸು ನೆರವು ರೀತಿಯ ಅಕ್ರಮಗಳನ್ನು ನಿಯಂತ್ರಿಸಲು ಈ ಕಾಯ್ದೆಯನ್ನು ಬಳಸಿಕೊಂಡು ಇ.ಡಿ. ಸಂಸ್ಥೆ ತನಿಖೆ ನಡೆಸುತ್ತದೆ. ಹಣ ಅಕ್ರಮ ವರ್ಗಾವಣೆಯನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ ಮತ್ತು ಇದು ಸಾಬೀತಾದರೆ ದಂಡ, ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. ಈ ಕಾಯ್ದೆಯ ಪ್ರಕಾರ ಕಾನೂನುಬಾಹಿರ ಹಣವನ್ನು ನ್ಯಾಯಬದ್ಧವಾಗಿ ಪರಿವರ್ತಿಸುವುದನ್ನು ಅಕ್ರಮ ಹಣ ವರ್ಗಾವಣೆ ಎಂದು ಪರಿಗಣಿತವಾಗುತ್ತದೆ. ಇದರ ಆರೋಪ ಸಾಬೀತಾದರೆ ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಆರೋಪಿಗಳ ಅಕ್ರಮ ವ್ಯವಹಾರಗಳ ತನಿಖೆಯ ಮೇಲುಸ್ತುವಾರಿ ನೋಡಿಕೊಳ್ಳಲು ’ನ್ಯಾಯ ನಿರ್ಣಯ ಪ್ರಾಧಿಕಾರ’ವನ್ನು ರಚಿಸಲಾಗುತ್ತದೆ. ಈ ಕಾಯ್ದೆಯ ಸೆಕ್ಷನ್ 25ರ ಪ್ರಕಾರ ’ನ್ಯಾಯ ನಿರ್ಣಯ ಪ್ರಾಧಿಕಾರ’ದ ಆದೇಶಗಳ ವಿರುದ್ಧ ಮೇಲ್ಮನವಿ ಸಲ್ಲಿಸಲು ’ಮೇಲ್ಮನವಿ ನ್ಯಾಯ ಮಂಡಳಿ’ಯನ್ನು ರಚಿಸಲಾಗುತ್ತದೆ.

ಪಿಎಂಎಲ್‌ಎ ಕಾಯ್ದೆಗೆ ತಿದ್ದುಪಡಿಯಾಗಿ 2019ರಲ್ಲಿ ರೂಲ್ 3ಎ ಸೇರಿಸಲಾಯಿತು. ಇದರ ಪ್ರಕಾರ ಆರೋಪ ಪಟ್ಟಿ ಸಲ್ಲಿಸಿದ ನಂತರ ಹಕ್ಕುದಾರರು ಮುಟ್ಟುಗೋಲು ಹಾಕಿಕೊಂಡ ತಮ್ಮ ಆಸ್ತಿ, ವಶಪಡಿಸಿಕೊಂಡ ಬ್ಯಾಂಕ್ ಖಾತೆಗಳು ಮುಂತಾದವುಗಳನ್ನು ಮರಳಿ ಪಡೆಯಲು ದಿನಪತ್ರಿಕೆಗಳಲ್ಲಿ ಸುತ್ತೋಲೆಯನ್ನು ಪ್ರಕಟಿಸಬಹುದು.

ಪಿಎಂಎಲ್‌ಎ ತಿದ್ದುಪಡಿ 2023ರ ಪ್ರಕಾರ ಎನ್‌ಜಿಒಗಳು ಹಣಕಾಸು ಸಂಸ್ಥೆಗಳ ಜೊತೆಗಿನ ವ್ಯಾಪಾರಗಳು, ಬ್ಯಾಂಕ್ ಖಾತೆ ವಿವರಗಳನ್ನು ಪ್ರಕಟಿಸಬೇಕಾಗುತ್ತದೆ. ಪ್ರಭುತ್ವದ ನೇತೃತ್ವ ವಹಿಸುವ ಮುಖ್ಯಸ್ಥರು, ಹಿರಿಯ ರಾಜಕಾರಣಿಗಳು, ಸರ್ಕಾರಗಳು, ಸೇನೆ, ನ್ಯಾಯಾಂಗದ ಅಧಿಕಾರಿಗಳು, ರಾಜ್ಯ ನಿಗಮಗಳ ಹಿರಿಯ ಅಧಿಕಾರಿಗಳು, ಮುಖ್ಯ ರಾಜಕೀಯ ಪಕ್ಷಗಳ ಪದಾಧಿಕಾರಿಗಳು ’ರಾಜಕೀಯವಾಗಿ ಬಹಿರಂಗಗೊಂಡ ವ್ಯಕ್ತಿಗಳು’ ಎಂದು ಕರೆಯಲಾಗುತ್ತದೆ.

ಸೆಕ್ಷನ್ 45ರ ಅಡಿಯಲ್ಲಿ ಜಾಮೀನಿಗೆ ಸಂಬಂಧಿಸಿದಂತೆ ಎರಡು ಮುಖ್ಯ ನಿಬಂಧನೆಗಳಿವೆ.

ಮೊದಲನೆಯದಾಗಿ ಜಾಮೀನು ಪಡೆಯಲು ಸ್ವತಃ ಆರೋಪಿಗಳೇ ತಮ್ಮ ನಿರಪರಾಧಿತನವನ್ನು ಸಾಬೀತುಪಡಿಸಬೇಕಾಗುತ್ತದೆ. ವ್ಯಕ್ತಿಗಳನ್ನು ಬಂಧಿಸಿದ ಇ.ಡಿ. ಸಂಸ್ಥೆಗೆ ಆರೋಪ ಸಾಬಿತುಪಡಿಸುವ ಜವಾಬ್ದಾರಿಗಿಂತಲೂ ಬಂಧಿತರು ತಾವು ಆರೋಪಿಗಳಲ್ಲ ಎಂದು ಸಾಬೀತುಪಡಿಸಬೇಕೆನ್ನುವ ಈ ಶಾಸನ ಅತ್ಯಂತ ಕರಾಳವಾಗಿದೆ. ಬಂಧನಕ್ಕೊಳಗಾಗಿರುವ ವ್ಯಕ್ತಿಗಳು ಯಾವ ಬಗೆಯಲ್ಲಿ ತಾವು ನಿರಪರಾಧಿಗಳು ಎಂದು ಸಾಬೀತುಪಡಿಸುತ್ತಾರೆ? ಮತ್ತೊಂದೆಡೆ ಬಹುತೇಕ ಇ.ಡಿ. ದಾಳಿಗಳು ರಾಜಕೀಯ ದುರುದ್ದೇಶದಿಂದ ಕೂಡಿರುವುದರಿಂದ ದೀರ್ಘಕಾಲವಾದರೂ ಆ ಸಂಸ್ಥೆಗೆ ಆರೋಪಪಟ್ಟಿ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದ ಪ್ರಕರಣಗಳು ಇತ್ಯರ್ಥವಾಗುವುದಿಲ್ಲ, ಈ ವಿಳಂಬ ನೀತಿಯಿಂದಾಗಿ ನಿರಪರಾಧಿಗಳು ಅನಗತ್ಯವಾಗಿ ಬಂಧನದಲ್ಲಿರಬೇಕಾಗುತ್ತದೆ.

ಜಾರ್ಖಂಡ್‌‌‌‌ ಸಿಎಂ ಹೇಮಂತ್‌‌ ಸೋರೆನ್‌‌ ಶಾಸಕ ಸ್ಥಾನದಿಂದ ಅನರ್ಹ ಸಾಧ್ಯತೆ; ಉರುಳಲಿದೆಯೆ ಮತ್ತೊಂದು ಸರ್ಕಾರ?
ಹೇಮಂತ್ ಸೋರೆನ್

ಎರಡನೆಯದಾಗಿ ಆರೋಪಿಗಳು ತಾವು ಜಾಮೀನು ಪಡೆದುಕೊಂಡ ನಂತರ ಯಾವುದೇ ಬಗೆಯಲ್ಲಿ ಅಪರಾಧಗಳಲ್ಲಿ ತೊಡಗುವುದಿಲ್ಲ ಎಂದು ನ್ಯಾಯಮೂರ್ತಿಗಳಿಗೆ ಮನದಟ್ಟು ಮಾಡಿಕೊಡಬೇಕಾಗುತ್ತದೆ. ಇದಕ್ಕೆ ಸಾಕ್ಷಿ ಒದಗಿಸುವುದು, ನ್ಯಾಯಮೂರ್ತಿಗಳಿಗೆ ಒಪ್ಪಿಸುವುದು ಎರಡೂ ಅಸಾಧ್ಯದ ಕಾರ್ಯಗಳಾಗಿವೆ. ಯಾವ ಆಧಾರದಲ್ಲಿ ನ್ಯಾಯಮೂರ್ತಿಗಳು ಆರೋಪಿಯ ಈ ವಾದವನ್ನು ಸ್ವೀಕರಿಸುತ್ತಾರೆ? ಈ ಎರಡೂ ನಿಬಂಧನೆಗಳಿಂದಾಗಿ ಪಿಎಂಎಲ್‌ಎ ಅಡಿಯಲ್ಲಿ ಬಂಧಿತರಾದ ಆರೋಪಿಗಳಿಗೆ ಜಾಮೀನು ಸಿಗುವುದು ಅಸಾಧ್ಯವಾಗಿದೆ.

ಈ ಕಾಯ್ದೆಯ ಅಡಿಯಲ್ಲಿ ನ್ಯಾಯಯುತವಾದ ಹಣಕಾಸು ವರ್ಗಾವಣೆಯನ್ನು ’ಅಪರಾಧದ ವರಮಾನ’ ಎಂದು ವ್ಯಾಖ್ಯಾನಿಸುವುದು ಸಮಸ್ಯಾತ್ಮಕವಾಗಿದೆ.

ಮೊದಲನೆಯದಾಗಿ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಮ್ಮ ರಾಜಕೀಯ ವಿರೋಧಿಗಳನ್ನು, ವಿರೋಧ ಪಕ್ಷಗಳ ಮುಖಂಡರನ್ನು ಗುರಿಯಾಗಿಸಿಕೊಂಡು ಅವರ ಎಲ್ಲಾ ಆಸ್ತಿಯನ್ನು ’ಅಪರಾಧದ ವರಮಾನ’ ಎಂದು ಪರಿಗಣಿಸಿ ಕೂಡಲೆ ಬಂಧಿಸುವ ಈ ನಿಯಮ ದುರುದ್ದೇಶಪೂರಿತವಾಗಿದೆ. ಇದನ್ನು ಬಳಸಿಕೊಂಡು ಮೋದಿ ಸರ್ಕಾರ ತಮ್ಮ ಮನಸ್ಸಿಗೆ ತೋಚಿದಂತೆ ಬಂಧನ ಮಾಡಿಸುತ್ತಿದ್ದಾರೆ.

ಎರಡನೆಯದಾಗಿ ಅಕ್ರಮ ಹಣ ವರ್ಗಾವಣೆಯಲ್ಲಿ ನೇರವಾಗಿ ಅಲ್ಲದೇ ಹೋದರೂ ಪರೋಕ್ಷವಾಗಿ ಭಾಗವಹಿಸಿದವರನ್ನೂ (ಉದಾಹರಣೆಗೆ ಆರೋಪಿಯನ್ನು ವಾಹನದಲ್ಲಿ ಕರೆದುಕೊಂಡು ಹೋದರೆ, ಮನೆಯಲ್ಲಿ ವಾಸಿಸಲು ಅವಕಾಶ ಮಾಡಿಕೊಟ್ಟರೆ, ಇತ್ಯಾದಿ) ಸಹ ಆರೋಪಿಗಳೆಂದು ಪರಿಗಣಿಸಲಾಗುತ್ತದೆ. ಇದು ಒಂದು ಬಗೆಯಲ್ಲಿ ಸರ್ವಾಧಿಕಾರಿ ಪ್ರಭುತ್ವಕ್ಕೆ ಉದಾಹರಣೆಯಾಗಿದೆ.

ಮೂರನೆಯದಾಗಿ ತನ್ನ ಮೂಲ ಉದ್ದೇಶವಾದ ಅಕ್ರಮ ಹಣ ವರ್ಗಾವಣೆಯ ಜೊತೆಗೆ ಈ ಪ್ರಕರಣಕ್ಕೆ ಸಂಬಂಧಿಸಿಲ್ಲದ ಇತರೆ ವಹಿವಾಟುಗಳನ್ನು ಸಹ ತನ್ನ ತನಿಖೆಯ ಭಾಗವಾಗಿಸಿಕೊಳ್ಳುವ ಇ.ಡಿ.ಯ ನಡೆ ತುಂಬಾ ಸಮಸ್ಯಾತ್ಮಕವಾಗಿದೆ. ಇದು ವ್ಯಕ್ತಿಗಳನ್ನು ಸಂಪೂರ್ಣವಾಗಿ ಕಾಯ್ದೆಯ ಚಕ್ರವ್ಯೂಹದಲ್ಲಿ ಬಂಧಿಸಿಡುವ ಉದ್ದೇಶವನ್ನು ಹೊಂದಿದೆ. ಇಂತಹ ಕರಾಳ ನಿಯಮಗಳನ್ನು ಬಳಸಿಕೊಂಡು ಮೋದಿ-ಶಾ ತಮ್ಮ ರಾಜಕೀಯ ವಿರೋಧಿಗಳ ವಿರುದ್ಧ ದ್ವೇಷದ ರಾಜಕಾರಣವನ್ನು ಪ್ರಯೋಗಿಸುತ್ತಿದ್ದಾರೆ.

ಇದನ್ನೂ ಓದಿ: ಇಡಿ ಪ್ರಕರಣದ ಜಾಮೀನು ವಿಫಲಗೊಳಿಸಲು ಕೇಜ್ರಿವಾಲ್ ಅವರನ್ನು ಸಿಬಿಐ ಬಂಧಿಸಿತ್ತು: ನ್ಯಾ. ಭುಯಾನ್

ನಾಲ್ಕನೆಯದಾಗಿ ಇ.ಡಿ. ಸಂಸ್ಥೆಯು ತಾನು ಆರೋಪಿ ಎಂದು ಪರಿಗಣಿಸಿದ ವ್ಯಕ್ತಿಯನ್ನು ಯಾವುದೇ ಸುತ್ತೋಲೆ, ವಾರಂಟ್ ಇಲ್ಲದೆ ಕೇವಲ ಬಾಯಿಮಾತಿನ ಮೂಲಕ ತಿಳಿಸಿ ಬಂಧಿಸಬಹುದು. ಇದು ಬಂಧನಕ್ಕೂ ಮೊದಲು ಸಂಬಂಧಿಸಿದ ವ್ಯಕ್ತಿಗೆ ನಿಯಮಪೂರ್ವಕವಾಗಿ, ಕಾನೂನುಬದ್ಧವಾಗಿ ವಿವರಿಸಬೇಕು ಎನ್ನುವ ಸಂವಿಧಾನದ ಪರಿಚ್ಛೇದ 22(1)ರ ಉಲ್ಲಂಘನೆಯಾಗಿದೆ. ಯಾವುದೇ ಪೂರ್ವಸೂಚನೆ ಇಲ್ಲದೆ ಬಂಧಿಸುವುದು ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವ ಸಂವಿಧಾನದ ಪರಿಚ್ಛೇದ 19(1)ರ ಉಲ್ಲಂಘನೆಯಾಗಿದೆ.

ಐದನೆಯದಾಗಿ ಇ.ಡಿ. ಸಂಸ್ಥೆಯು ಸಂಬಂಧಿತ ವ್ಯಕ್ತಿಯನ್ನು ಬಂಧಿಸುವಾಗ ಅವರ ಮೊಬೈಲ್, ಕಂಪ್ಯೂಟರ್, ಲ್ಯಾಪ್‌ಟಾಪ್‌ಗಳು ಸೇರಿದಂತೆ ಮುಂತಾದ ಉಪಕರಣಗಳನ್ನು ವಶಪಡಿಸಿಕೊಳ್ಳುತ್ತಾರೆ. ವಶಪಡಿಸಿಕೊಂಡ ಉಪಕರಣಗಳಲ್ಲಿ ವ್ಯಕ್ತಿಗಳ ಖಾಸಗಿ ಮಾಹಿತಿಗಳಿರುತ್ತವೆ. ಅದು ಸೋರಿಕೆಯಾಗುತ್ತದೆ. ಇದು ಖಾಸಗಿ ಹಕ್ಕನ್ನು ಕಲ್ಪಿಸುವ ಸಂವಿಧಾನದ ಪರಿಚ್ಛೇದ 19(1)ರ ಉಲ್ಲಂಘನೆಯಾಗಿದೆ. ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಮಾನವ ಹಕ್ಕುಗಳ ಹೋರಾಟಗಾರರು, ನ್ಯಾಯವಾದಿಗಳು, ಚಿಂತಕರನ್ನು ಯುಎಪಿಎ ಅಡಿಯಲ್ಲಿ ಬಂಧಿಸಿದ ಪ್ರಕರಣಗಳಲ್ಲಿ ತನಿಖಾ ಸಂಸ್ಥೆಗಳು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಅವರ ಮೊಬೈಲ್, ಕಂಪ್ಯೂಟರ್‌ಗಳಲ್ಲಿ ನಕಲಿ, ಸುಳ್ಳು ಸಾಕ್ಷಿಗಳನ್ನು ಸೇರಿಸಿದ್ದಾರೆ ಎಂದು ವರದಿಗಳು ಪ್ರಕಟವಾಗಿದೆ. ಇದು ಅತ್ಯಂತ ಹೇಯವಾದ ಕೃತ್ಯ ಮತ್ತು ನಿರಪರಾಧಿಗಳನ್ನು ಶಾಶ್ವತವಾಗಿ ಅಪರಾಧಿಗಳನ್ನಾಗಿಸುತ್ತದೆ. ಈ ವಿಚಾರ ಸುಪ್ರೀಂಕೋರ್ಟನ ಮುಂದಿದೆ. ಆದರೆ ನ್ಯಾಯಾಂಗ ಯಾವ ರೀತಿ ಪ್ರತಿಕ್ರಿಯಿಸುತ್ತಿದೆ?

ನ್ಯಾಯಾಂಗದ ಉತ್ತರದಾಯಿತ್ವ

ನವೆಂಬರ್ 2017ರಲ್ಲಿ ನ್ಯಾಯಮೂರ್ತಿಗಳಾದ ರೋಹಿಂಗ್ಟನ್ ಫಾಲಿ ನಾರಿಮನ್, ಸಂಜಯ್ ಕಿಷನ್ ಕೌಲ್ ಪೀಠವು ನಿಕೇಶ್ ತಾರಕ್‌ಚಂದ ವರ್ಸಸ್ ಕೇಂದ್ರ ಸರ್ಕಾರ ಪ್ರಕರಣದಲ್ಲಿ ’ಜಾಮೀನು ಪಡೆಯಲು ಕಠಿಣ ನಿರ್ಬಂಧನೆಗಳಿರುವ ಸೆಕ್ಷನ್ 45 ಸ್ಪಷ್ಟವಾಗಿ ಸ್ವೇಚ್ಛಾನುಸಾರ(manifestly arbitrary) ಆಗಿರುವುದರಿಂದ ಅದು ಅಸಂವಿಧಾನಿಕ’ ಎಂದು ತೀರ್ಪು ನೀಡಿದರು. ಮುಂದುವರಿದು “ಯಾವುದೇ ವ್ಯಕ್ತಿಯು ಆರೋಪಿ ಎಂದು ಕೇಸು ದಾಖಲಿಸಿದಾಗ ಅವರು ಮುಗ್ಧರು ಎಂದು ಪೂರ್ವಕಲ್ಪನೆಯು ಮೂಲಭೂತ ಹಕ್ಕಾಗಿದೆ.. ಇದನ್ನು ಪಾಲಿಸದಿರುವುದು ಬದುಕುವ ಹಕ್ಕನ್ನು ಪ್ರತಿಪಾದಿಸುವ ಪರಿಚ್ಛೇದ 21ರ ಉಲ್ಲಂಘನೆಯಾಗುತ್ತದೆ.. ಇದು ಪ್ರಭುತ್ವ ಹಿತಾಸಕ್ತಿಯನ್ನು ಉತ್ತೇಜಿಸುತ್ತದೆ.. ಭಯೋತ್ಪಾದನೆ ವಿರೋಧಿ ಸಂದರ್ಭದಲ್ಲಿ ಕಠಿಣ ನಿಯಮಗಳನ್ನು ಅನ್ವಯಿಸಬೇಕು, ಆದರೆ ಅದು ’ಸ್ಪಷ್ಟವಾಗಿ ಸ್ವೇಚ್ಛಾನುಸಾರವಾಗಿರುವಂತಿಲ್ಲ'” ಎಂದು ಅಭಿಪ್ರಾಯಪಡುತ್ತಾರೆ.

ಆದರೆ ಮೇಲಿನ ತೀರ್ಪನ್ನು 2022ರಲ್ಲಿ ಕನ್ವಿಲ್ಕರ್ ನೇತೃತ್ವದ ಪೀಠವು ತಿರಸ್ಕರಿಸಿತು. ಈ ತೀರ್ಪು ನ್ಯಾಯಾಂಗ ಇತಿಹಾಸದಲ್ಲಿ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಬದುಕುವ ಹಕ್ಕಿಗೆ ಸಂಬಂಧಿಸಿದಂತೆ ಒಂದು ಕಪ್ಪುಚುಕ್ಕೆಯಾಗಿದೆ. ಪಿಎಂಎಲ್‌ಎ ಕಾಯ್ದೆಯಲ್ಲಿರುವ ಕರಾಳ ನಿಬಂಧನೆಗಳನ್ನು ಪ್ರಶ್ನಿಸಿ ವಿವಿಧ ಅರ್ಜಿಗಳನ್ನು ಕ್ರೋಢೀಕರಿಸಿದ ’ವಿಜಯ್ ಮದನಲಾಲ್ ಚೌಧರಿ ವರ್ಸಸ್ ಕೇಂದ್ರ ಸರ್ಕಾರ’ ಪ್ರಕರಣದ ವಿಚಾರಣೆಗೆ ಸುಪ್ರೀಂಕೋರ್ಟ್‌ನ ವಿಭಾಗೀಯ ಪೀಠವನ್ನು ರಚಿಸಲಾಯಿತು. ನ್ಯಾಯಮೂರ್ತಿಗಳಾದ ಎ.ಎಂ. ಕನ್ವಿಲ್ಕರ್, ಸಿ.ಟಿ.ರವಿಕುಮಾರ್, ದಿನೇಶ್ ಮಹೇಶ್ವರಿ ಇರುವ ಈ ಪೀಠವು ವಿಚಾರಣೆ ನಡೆಸಿ 27, ಜುಲೈ 2022ರಂದು ನೀಡಿದ ತೀರ್ಪಿನಲ್ಲಿ ಪಿಎಂಎಲ್‌ಎನ ಎಲ್ಲಾ ನಿಬಂಧನೆಗಳನ್ನು ಪುರಸ್ಕರಿಸಿದರು. ಈ ಕಾಯ್ದೆಯನ್ನು ಮಾನ್ಯ ಮಾಡಿದರು. ಅರ್ಜಿದಾರರ ಪ್ರಶ್ನೆಗಳನ್ನು ತಿರಸ್ಕರಿಸಿದರು. ಸುಪ್ರೀಂಕೋರ್ಟ್‌ನ ಈ ತೀರ್ಪು ನ್ಯಾಯಪ್ರಜ್ಞೆ ಮತ್ತು ನ್ಯಾಯ ನಿರ್ಣಯಕ್ಕೆ ಸಂಬಂಧಿಸಿದಂತೆ ದೊಡ್ಡ ಹೊಡೆತ ಕೊಟ್ಟಿದೆ ಮತ್ತು ಕರಾಳ ಶಾಸನಗಳನ್ನು ರೂಪಿಸಿ ತನ್ನ ರಾಜಕೀಯ, ಸೈದ್ಧಾಂತಿಕ ವಿರೋಧಿಗಳನ್ನು ಬಂಧಿಸುವ ಪ್ರಭುತ್ವದ ದ್ವೇಷದ ರಾಜಕಾರಣಕ್ಕೆ ಬೆಂಬಲ ದೊರಕಿದಂತಾಗಿದೆ.

ಈ ವಿಚಾರಣೆಯ ಸಂದರ್ಭದ ಮುಖ್ಯ ವಿವರಗಳು ಇಂತಿವೆ. (ಮಾಹಿತಿ ಕೃಪೆ: ರಂಜನಿ ರಮೇಶ್, ನ್ಯಾಯವಾದಿ)

ಮೊದಲನೆಯದಾಗಿ, ಯಾವುದೇ ವಿವಾದವಿಲ್ಲದ, ಕಳಂಕವಿಲ್ಲದ, ಗುಪ್ತವಾಗಿಲ್ಲದ, ಬೆದರಿಸಿ ಪಡೆದುಕೊಂಡಿಲ್ಲದ ಆಸ್ತಿಯನ್ನು ಪಿಎಂಎಲ್‌ಎ ಕಾಯ್ದೆ ಅಡಿಯಲ್ಲಿ ಅಪರಾಧ ಎಂದು ಕರೆದು ಕೇಸು ದಾಖಲಿಸುವುದು ಸರಿಯೇ?

ವಿಭಾಗೀಯ ಪೀಠ: ಕಳಂಕವಿಲ್ಲದ ಆಸ್ತಿಯ ವಿರುದ್ಧ ಅಪರಾಧ ಎಂದು ಹೇಳಿದರೆ ಅದು ಮಾಹಿತಿಯನ್ನು ಗುಪ್ತವಾಗಿಡಲಾಗಿದೆ, ಬೆದರಿಸಿ ಪಡೆದುಕೊಳ್ಳಲಾಗಿದೆ ಎಂದು ಪರಿಗಣಿಸುವಂತಿಲ್ಲ. ಇದು ಸ್ವತಂತ್ರವಾದ ಅಕ್ರಮ ಹಣ ವರ್ಗಾವಣೆ ಎಂದು ಪರಿಗಣಿಸಬೇಕು. ಪಿಎಂಎಲ್‌ಎ ಅಡಿಯಲ್ಲಿ ಪರಿಗಣಿಸಲಾದ ಇಂತಹ ಪ್ರಕರಣವು ಈ ಮೊದಲು ಆ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಪೊಲೀಸ್ ಠಾಣೆ ಅಥವಾ ಯೋಗ್ಯವಾದ ವೇದಿಕೆಯಲ್ಲಿ ದೂರು ದಾಖಲಾಗಿರಬೇಕು.

ಎರಡನೆಯದಾಗಿ, ದೃಢೀಕರಿಸಲಾದ ಅಪರಾಧವನ್ನು ದಾಖಲಿಸದೆ ಸಂಬಂಧಿತ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಅಪರಾಧ ಎಂದು ಕರೆಯುವುದು ಸರಿಯೇ?

ವಿಭಾಗೀಯ ಪೀಠ: ಇತರೆ ಅಪರಾಧ ಸಂಬಂಧಿತ ದಾವೆಗಳಿಗೆ ಹೋಲಿಸದೆ ಕೇವಲ ಪಿಎಂಎಲ್‌ಎ ಕಾಯ್ದೆ ಅಡಿಯಲ್ಲಿ ತನಿಖೆ ನಡೆಸುವುದಕ್ಕೂ ಮುಂಚೆ ಅದು ಪೂರ್ವಾಪೇಕ್ಷಿತವಾಗಿ ದೃಢೀಕೃತ ಅಪರಾಧ ಎಂದು ದಾಖಲಾಗಿರಬೇಕು, ಆದರೆ ಅಪರಾಧ ಎಂದು ಪರಿಗಣಿಸಿದ ಪ್ರಕರಣದಲ್ಲಿ ವ್ಯಕ್ತಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಪೂರ್ವಾಪೇಕ್ಷಿತ ದೃಢೀಕೃತ ಅಪರಾಧವೆಂದು ದಾಖಲಾಗಿರಬೇಕಿಲ್ಲ ಮತ್ತು ವಿವಾದಕ್ಕೆ ಸಂಬಂಧಿಸಿದ ಆಸ್ತಿಯನ್ನು ಮಾತ್ರ ಮುಟ್ಟುಗೋಲು ಹಾಕಿಕೊಳ್ಳಬೇಕು, ಅವರ ಇತರ ಆಸ್ತಿಯನ್ನು ವಶಪಡಿಸಿಕೊಳ್ಳುವಂತಿಲ್ಲ.

ಮೂರನೆಯದಾಗಿ, ಅಕ್ರಮ ಹಣ ವರ್ಗಾವಣೆ ಆಡಿದ ಆರೋಪ ಎದುರಿಸುತ್ತಿರುವ ವ್ಯಕ್ತಿಯ ಆಸ್ತಿಯನ್ನು ತಾತ್ಕಾಲಿಕವಾಗಿ ವಶಪಡಿಸಿಕೊಳ್ಳಬಹುದೇ? ಅಥವಾ ಬೇರೆಯ ರೀತಿ ಇದೆಯೇ?

ವಿಭಾಗೀಯ ಪೀಠ: ತಾತ್ಕಾಲಿಕವಾಗಿ ವಶಪಡಿಸಿಕೊಳ್ಳುವ ಆದೇಶವನ್ನು ಸ್ಥಿರೀಕರಿಸಿದ ನಂತರ ಮುಟ್ಟುಗೋಲು ಆದೇಶ ಬರುವವರೆಗೂ ಅದನ್ನು ವಶಪಡಿಸಿಕೊಳ್ಳುವಂತಿಲ್ಲ. ಮುಟ್ಟುಗೋಲು ಆದೇಶ ಬರುವುದಕ್ಕೂ ಮುಂಚೆ ಕೇವಲ ತಾತ್ಕಾಲಿಕವಾಗಿ ವಶಪಡಿಸಿಕೊಳ್ಳುವ ಆದೇಶವನ್ನು ಆಧರಿಸಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದು ನಿಯಮವಲ್ಲ, ಆದರೆ ಪ್ರತಿಯೊಂದು ವೈಯಕ್ತಿಕ ಪ್ರಕರಣವನ್ನು ಆಧರಿಸಿ ಅದಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ನಿರ್ಧರಿಸಬೇಕು. (case-to-case basis)

ನಾಲ್ಕನೆಯದಾಗಿ, ದೃಢೀಕೃತ ಅಪರಾಧವನ್ನು ದಾಖಲಿಸಿಕೊಳ್ಳದೆ ಪಿಎಂಎಲ್‌ಎ ಅಡಿಯಲ್ಲಿ ಇ.ಡಿ. ಸಂಸ್ಥೆಯು ವ್ಯಕ್ತಿಯನ್ನು ಶೋಧಿಸುವುದು, ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಅವಕಾಶ ಕೊಟ್ಟಿರುವುದು ಆ ಸಂಸ್ಥೆಯ ಸ್ವೇಚ್ಛಾಚಾರಕ್ಕೆ, ಕಠೋರವಾಗಿ ವರ್ತಿಸುವುದಕ್ಕೆ ದಾರಿ ಮಾಡಿಕೊಟ್ಟಿದೆ.

ವಿಭಾಗೀಯ ಪೀಠ: ಪಿಎಂಎಲ್‌ಎ ಅಡಿಯಲ್ಲಿ ಇ.ಡಿ. ಸಂಸ್ಥೆಯು ವ್ಯಕ್ತಿಯನ್ನು ಶೋಧಿಸುವುದು, ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಅದರ ಅಂತರ್ಗತ ಸುರಕ್ಷತೆಯ ಕ್ರಮವಾಗಿದೆ ಮತ್ತು ಈ ಪ್ರಕ್ರಿಯೆಯು ಪಾರದರ್ಶಕವಾಗಿರಬೇಕು, ನ್ಯಾಯಸಮ್ಮತವಾಗಿರಬೇಕು. ಅಪರಾಧಿ ವಿಧಾನ 1973ರ ಪ್ರಕಾರ ದೃಢೀಕೃತ ಅಪರಾಧ ಎಂದು ಆರೋಪ, ಅನುಮಾನ ಬಂದ ಕೂಡಲೆ ಪೊಲೀಸರು ಕ್ರಮ ತೆಗೆದುಕೊಳ್ಳಲು ಮುಂದಾಗುತ್ತಾರೆ, ಆದರೆ ಈ ಕಾಯ್ದೆಯ ನಿಯಮ ಆ ರೀತಿಯದಲ್ಲ. ವ್ಯಕ್ತಿಯನ್ನು ಶೋಧಿಸುವುದು, ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಕೇವಲ ಅಕ್ರಮ ಹಣ ವರ್ಗಾವಣೆಯನ್ನು ಪತ್ತೆ ಹಚ್ಚುವುದಕ್ಕೆ ಮಾತ್ರವಲ್ಲ, ಅಕ್ರಮ ಹಣ ವರ್ಗಾವಣೆಯನ್ನು ತಡೆಯುವುದಕ್ಕೂ ಅನುಸರಿಸಲಾಗುತ್ತದೆ.

ಐದನೆಯದಾಗಿ ಆರೋಪಿಗಳೇ ತಮ್ಮ ಆರೋಪ ಸಾಬೀತುಪಡಿಸಬೇಕು ಎನ್ನುವ ಹೊರೆ ಕರಾಳವಾಗಿದೆ. ಇದು ’ಆರೋಪಿ ಸಾಬೀತಾಗುವವರೆಗೂ ಅವರು ನಿರಪರಾಧಿ ಎನ್ನುವ ನ್ಯಾಯತತ್ವಕ್ಕೆ ವಿರುದ್ಧವಾಗಿದೆ.

ವಿಭಾಗೀಯ ಪೀಠ: ಪಿಎಂಎಲ್‌ಎ ಅಡಿಯಲ್ಲಿ ಆರೋಪಿಯೇ ತಮ್ಮ ನಿರಪರಾಧ ಸಾಬೀತುಪಡಿಸಬೇಕು ಎನ್ನುವ ಹೊರೆಯು ನ್ಯಾಯನಿರ್ಣಯ ಪ್ರಾಧಿಕಾರವು ಆಸ್ತಿಯನ್ನು ವಶಪಡಿಸಿಕೊಳ್ಳುವುದಕ್ಕೂ ಮುನ್ನ ಮತ್ತು ವಿಶೇಷ ಕೋರ್ಟ್ ಮುಂದೆ ಅಪರಾಧ ವಿಚಾರಣೆ ಪ್ರಕ್ರಿಯೆ ಪ್ರಾರಂಭವಾಗುವುದಕ್ಕೂ ಮೊದಲು ಅನ್ವಯವಾಗುತ್ತದೆ. ಅಪರಾಧಿ ಪ್ರಕರಣದ ದಾವೆಯು ಅಕ್ರಮ ಹಣ ವರ್ಗಾವಣೆಯನ್ನು ಒಳಗೊಂಡಿದೆ ಎನ್ನುವ ವಿಚಾರಕ್ಕಾಗಿ ಪಿಎಂಎಲ್‌ಎ ಅಡಿಯಲ್ಲಿ ತಪ್ಪಿತಸ್ಥ ಎನ್ನುವ ಕಾನೂನಿನ ಪೂರ್ವಕಲ್ಪನೆ ಇರುತ್ತದೆ. ಆದರೆ ಆರೋಪಿಯು ತಮ್ಮ ಬಳಿ ಇರುವ ಸಾಕ್ಷಿಯನ್ನು ಮುಂದಿಟ್ಟು ತಾನು ನಿರಪರಾಧಿ ಎಂದು ಸಾಬೀತುಪಡಿಸಬಹುದು, ಇಂತಹ ಕಾನೂನಾತ್ಮಕ ನ್ಯಾಯನಿರ್ಣಯವು ಪಿಎಂಎಲ್‌ಎನ ಕಾನೂನಿನ್ವಯ ಉದ್ದೇಶದೊಂದಿಗೆ ತಾಳೆಯಾಗುತ್ತದೆ.

ಆರನೆಯದಾಗಿ, ದೃಢೀಕೃತ ಅಪರಾಧ ಎನ್ನುವ ಕಾರಣದಿಂದ ವಿಚಾರಣೆಯನ್ನು ಮ್ಯಾಜಿಸ್ಟ್ರೇಟ್ ಕೋರ್ಟ್‌ನಿಂದ ಪಿಎಂಎಲ್‌ಎ ಅಡಿಯಲ್ಲಿರುವ ವಿಶೇಷ ಕೋರ್ಟ್‌ಗೆ ವರ್ಗಾಯಿಸಲಾಗುತ್ತದೆ. ಇದು ದೃಢೀಕೃತ ಅಪರಾಧ ಎಂದು ಮಾತ್ರ ಆರೋಪಿಸಲಾಗಿದೆ, ಪಿಎಂಎಲ್‌ಎ ಕಾಯ್ದೆ ಅಡಿಯಲ್ಲಿ ಅಲ್ಲ ಎನ್ನುವ ಅಂಶವಿದ್ದರೂ ಸಹ ಸಂಬಂಧಿಸಿದ ವ್ಯಕ್ತಿಗೆ ಪುನರ್ ಪರಿಶೀಲನೆಯ ಅರ್ಜಿಯನ್ನು ಸಲ್ಲಿಸುವ ಹಕ್ಕನ್ನು ಕಸಿದುಕೊಳ್ಳಲಾಗುತ್ತದೆ.

ವಿಭಾಗೀಯ ಪೀಠ: ಪಿಎಂಎಲ್‌ಎ ಕಾಯ್ದೆಯು ದೃಢೀಕೃತ ಅಪರಾಧ ಕಾನೂನಿನ ಅಡಿಯಲ್ಲಿ ಪ್ರಕ್ರಿಯೆ ಪ್ರಾರಂಭಿಸಲು ವಿಶೇಷ ನ್ಯಾಯಾಲಯಕ್ಕೆ ಸಮ್ಮತಿಸುತ್ತದೆ. ಆದರೆ ಇದು ಅಕ್ರಮ ಹಣ ವರ್ಗಾವಣೆ ಮಾಡಿರುವ ಆರೋಪವಿಲ್ಲದ ವ್ಯಕ್ತಿಯ ಮೇಲಿನ ಶೋಷಣೆಯಾಗುತ್ತದೆ. ಇದು ಸಂಬಂಧಿತ ವ್ಯಕ್ತಿಗೆ ಪುನರ್ ಪರಿಶೀಲನೆಗೆ ಅರ್ಜಿ ಸಲ್ಲಿಸುವ ಹಕ್ಕನ್ನು ಕಸಿದುಕೊಳ್ಳುತ್ತದೆ. ಆದರೆ ಇದನ್ನು ಪರಿಹರಿಸಲು ಸುಪ್ರೀಂಕೋರ್ಟ್‌ನ ಮಧ್ಯಸ್ಥಿಕೆಯ ಅಗತ್ಯವಿಲ್ಲ ಹಾಗೂ ವಿಶೇಷ ಕೋರ್ಟ್‌ಗಳಿಗೆ ಸಂಬಂಧಿಸಿದಂತೆ ಪಿಎಂಎಲ್‌ಎ ಕಾಯ್ದೆಯ ಕಾನೂನುಗಳನ್ನು ಮರು ಪರಿಶೀಲಿಸಿ ಎಂದು ಹೇಳುವ ಅವಶ್ಯಕತೆಯೂ ಇಲ್ಲ, ಇಂತಹ ಪ್ರಕರಣಗಳನ್ನು ವಿಶೇಷ ಕೋರ್ಟ್‌ನಲ್ಲಿ ವ್ಯಕ್ತಿಗತವಾಗಿ case-to-case basis ಆಧರಿಸಿ ಇತ್ಯರ್ಥಗೊಳಿಸಬೇಕು.

ಏಳನೆಯದಾಗಿ, ಜಾಮೀನು ಪಡೆಯಲು ಆರೋಪಿಯು ಎರಡು ನಿಬಂಧನೆಗಳನ್ನು ಪಾಲಿಸಬೇಕು ಎನ್ನುವ ಸೆಕ್ಷನ್ 45 ಅಡಿಯಲ್ಲಿನ ನಿಯಮಗಳು (ಮೇಲೆ ವಿವರಿಸಲಾಗಿದೆ) ಸ್ವೇಚ್ಛಾಚಾರ ಮತ್ತು ಕಾನೂನುಬಾಹಿರವಾಗಿವೆ.

ವಿಭಾಗೀಯ ಪೀಠ: ಈ ನಿಯಮವು ನಿರೀಕ್ಷಣಾ ಜಾಮೀನಿಗೂ ಅನ್ವಯಿಸುತ್ತದೆ. ಈ ನಿಯಮಗಳು ನ್ಯಾಯಸಮ್ಮತವಾಗಿವೆ ಮತ್ತು ಪಿಎಂಎಲ್‌ಎ ಉದ್ದೇಶಗಳಿಗೆ ಪೂರಕವಾಗಿವೆ.

ಎಂಟನೆಯದಾಗಿ, ಅಪರಾಧದ ವಿವರಗಳನ್ನು ಒಳಗೊಂಡ ಇ.ಡಿ. ರಚಿಸುವ ’ಜಾರಿ ಪ್ರಕರಣ ಮಾಹಿತಿ ವರದಿ’(ಇಸಿಐಆರ್) ಕರಡನ್ನು ಅಪರಾಧಿ ಕಾನೂನಿನ ಅಡಿಯಲ್ಲಿನ ಎಫ್‌ಐಆರ್ ರೀತಿ ಆರೋಪಿಗೆ ಕೊಡಬೇಕು, ಇದು ಅವರ ಹಕ್ಕಾಗಿದೆ.

ವಿಭಾಗೀಯ ಪೀಠ: ಎಫ್‌ಐಆರ್ ಎನ್ನುವ ದಾಖಲೆಯ ರೀತಿ ಇಸಿಐಆರ್ ಶಾಸನಬದ್ಧ ದಾಖಲೆಯಲ್ಲ. ಇ.ಡಿ. ಅದನ್ನು ಕೊಡಬೇಕಾಗಿಲ್ಲ. ಬಂಧನದ ಸಮಯದಲ್ಲಿ ಆರೋಪಿಗಳಿಗೆ ಯಾತಕ್ಕೆ ಬಂಧಿಸಲಾಗುತ್ತದೆ ಎಂದು ವಿವರಿಸಿದರೆ ಸಾಕು.

ಒಂಬತ್ತನೆಯದಾಗಿ, ದೃಢೀಕೃತ ಅಪರಾಧಗಳಿಗೆ ವಿಧಿಸುವ ಶಿಕ್ಷೆಗೆ ಹೋಲಿಸಿದರೆ ಪಿಎಂಎಲ್‌ಎ ಅಡಿಯಲ್ಲಿನ ಶಿಕ್ಷೆ ಪ್ರಮಾಣ ತುಂಬಾ ಕಠಿಣವಾಗಿದೆ.

ಮನೀಶ್ ಸಿಸೋಡಿಯಾ

ವಿಭಾಗೀಯ ಪೀಠ: ದೃಢೀಕೃತ ಅಪರಾಧಗಳಿಗೆ ಸಂಬಂಧಿಸಿದಂತೆ ಪಿಎಂಎಲ್‌ಎ ಅಡಿಯಲ್ಲಿನ ಶಿಕ್ಷೆಯನ್ನು ಹೋಲಿಸುವಂತಿಲ್ಲ, ಇದು ಸ್ವತಂತ್ರವಾಗಿದೆ, ಇಲ್ಲಿ ದೃಢೀಕೃತ ಅಪರಾಧಕ್ಕಾಗಿ ಅಲ್ಲ, ಬದಲಿಗೆ ಅಕ್ರಮ ಹಣ ವರ್ಗಾವಣೆಗೆ ಶಿಕ್ಷೆ ವಿಧಿಸಲಾಗುತ್ತದೆ.

ಹತ್ತನೆಯದಾಗಿ, 2015-2019ರ ನಡುವೆ ಪಿಎಂಎಲ್‌ಎ ಕಾಯ್ದೆಯನ್ನು ಹಣಕಾಸು ಮಸೂದೆ (money bills) ಅಡಿಯಲ್ಲಿ ತಿದ್ದುಪಡಿ ಮಾಡಲಾಗಿದೆ. ಇದರಿಂದಾಗಿ ಈ ಹಣಕಾಸು ಮಸೂದೆಯನ್ನು ರಾಜ್ಯಸಭೆಯಲ್ಲಿ ಚರ್ಚೆ ನಡೆಸಿ ಅನುಮೋದನೆ ಪಡೆದುಕೊಳ್ಳುವ ಅಗತ್ಯವಿಲ್ಲ ಎಂದು ಮಾಡಲಾಗಿದೆ. ಬದಲಿಗೆ ಪಿಎಂಎಲ್‌ಎ ಕಾಯ್ದೆಗೆ ತಿದ್ದುಪಡಿಗೆ ಮೊದಲು ಲೋಕಸಭೆ ನಂತರ ರಾಜ್ಯಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳುವ ಕ್ರಮಬದ್ಧ ನಿಯಮವನ್ನು ಅನುಸರಿಸಬೇಕು.

ವಿಭಾಗೀಯ ಪೀಠ: ಈ ಕುರಿತು ರೋಜರ್ ಮ್ಯಾಥ್ಯೂ ವರ್ಸಸ್ ಸೌತ್ ಇಂಡಿಯನ್ ಬ್ಯಾಂಕ್ ಮತ್ತು ಇತರರು ಪ್ರಕರಣದಲ್ಲಿ ವಿಚಾರಣೆ ನಡೆಯುತ್ತಿದೆ. ಈ ಕುರಿತು ಈ ಪೀಠವು ಮಾತನಾಡುವುದಿಲ್ಲ.

ಅಂತಿಮವಾಗಿ ’ಪಿಎಂಎಲ್‌ಎ’ ಕಾಯ್ದೆಯನ್ನು ಎತ್ತಿ ಹಿಡಿದ ಕನ್ವಿಲ್ಕರ್ ನೇತೃತ್ವದ ಸುಪ್ರೀಂಕೋರ್ಟ್ ಪೀಠವು ಅದನ್ನು ಅನುಮೋದಿಸಿದೆ. ಮೇಲಿನ ವಿಚಾರಣೆಯ ವಿವರಗಳನ್ನು ವಿಶ್ಲೇಷಿಸಿದಾಗ ಹೇಗೆ ವಿಭಾಗೀಯ ಪೀಠವು ಪಿಎಂಎಲ್‌ಎ ಕಾಯ್ದೆಯ ಕರಾಳತೆಯ ಕುರಿತು ನಿರ್ಲಕ್ಷ್ಯ ವಹಿಸಿದೆ ಮತ್ತು ಅದನ್ನು ಅನುಮೋದಿಸಿದೆ ಎಂದು ಮನದಟ್ಟಾಗುತ್ತದೆ.

ಪಂಕಜ್ ಬನ್ಸಾಲ್ ವರ್ಸಸ್ ಕೇಂದ್ರ ಸರ್ಕಾರ 2023 ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ಸಂಜಯ ಕುಮಾರ್ ಅವರು ’ಬಂಧನದ ಕುರಿತು ಇ.ಡಿ. ಆರೋಪಿಗಳಿಗೆ ಲಿಖತ ರೂಪದಲ್ಲಿ ವಿವರವಾಗಿ ಬರೆದು ತಿಳಿಸಬೇಕು. ಲಿಖಿತರೂಪದಲ್ಲಿ ತಿಳಿಸದೆ ಬಂಧಿಸಿದರೆ ಅದು ಕಾನೂನುಬಾಹಿರ’ ಎಂದು ಆದೇಶಿಸುತ್ತಾರೆ.

ಸೆಂಥಿಲ್ ಬಾಲಾಜಿ ವರ್ಸಸ್ ಸ್ಟೇಟ್ 2023 ಪ್ರಕರಣದಲ್ಲಿ ’ಪಿಎಂಎಲ್‌ಎನ ಸೆಕ್ಷನ್ 19ರ ಉಲ್ಲಂಘನೆಯು ಬಂಧನವನ್ನು ದುರ್ಬಲಗೊಳಿಸುತ್ತದೆ, ಈ ಸೆಕ್ಷನ್‌ನ ಅಗತ್ಯವನ್ನು ಪಾಲಿಸುವಂತೆ ನೋಡಿಕೊಳ್ಳುವುದು ಮ್ಯಾಜಿಸ್ಟ್ರೇಟ್ ಅವರ ಜವಾಬ್ದಾರಿಯಾಗಿದೆ’ ಎಂದು ಅಭಿಪ್ರಾಯಪಟ್ಟರು. ಸೆಕ್ಷನ್ 19 ಇ.ಡಿ. ಸಂಸ್ಥೆಗೆ ವ್ಯಕ್ತಿಯು ಅಕ್ರಮ ಹಣ ವರ್ಗಾವಣೆ ಮಾಡಿದ ಕುರಿತು ಅನುಮಾನ ಬಂದರೂ ಸಹ ಬಂಧಿಸುವ ಅಧಿಕಾರ ಕೊಡುತ್ತದೆ. ಇಲ್ಲಿ ಇ.ಡಿ.ಗೆ ಅಪರಾಧವನ್ನು ನಂಬಲು ಕಾರಣಗಳು ಬೇಕಾಗುತ್ತದೆ. ಇಂತಹ ಅಕ್ರಮ ಬಂಧನವನ್ನು ಮೇಲಿನ ನ್ಯಾಯಮೂರ್ತಿಗಳು ಪುರಸ್ಕರಿಸಿದ್ದಾರೆ

ತಮಿಳುನಾಡು ಸರ್ಕಾರದ ಮಂತ್ರಿಗಳು ಮತ್ತು ಅಧಿಕಾರಿಗಳ ವಿರುದ್ಧ ಇ.ಡಿ. ಸಂಸ್ಥೆಯು ತನಿಖೆ ನಡೆಸುತ್ತಿದೆ. 14 ಜೂನ್ 2024ರಂದು ತಮಿಳುನಾಡು ಸರ್ಕಾರದ ಮಂತ್ರಿ ಸೆಂಥಿಲ್ ಬಾಲಾಜಿಯನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಿದರು. ತಮಿಳುನಾಡು ಸರ್ಕಾರವು ತಮ್ಮ ರಾಜ್ಯದ ಅಧಿಕಾರಿಗಳು, ಮಂತ್ರಿಗಳು ಮತ್ತು ಇತರರ ವಿರುದ್ಧದ ಎಫ್‌ಐಆರ್ ವಿವರಗಳನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತಿಲ್ಲ ಎಂದು ಇ.ಡಿ. ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. 25, ಜನವರಿ 2024ರಂದು ವಾದ ಅಲಿಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಸೂರ್ಯಕಾಂತ ಮತ್ತು ಕೆ.ವಿ.ವಿಶ್ವನಾಥ್ ಅವರು “ಅಧಿಕಾರಿಗಳು ಮತ್ತು ವಿರೋಧ ಪಕ್ಷಗಳ ಸರ್ಕಾರವಿರುವ ರಾಜ್ಯಗಳಲ್ಲಿ ಇ.ಡಿ. ಮೂಲಕ ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎನ್ನುವುದರ ಕುರಿತು ನಿರ್ಧರಿಸಲು ’ಪ್ಯಾನ್ ಇಂಡಿಯಾ ಕಾರ್ಯಯೋಜನೆ’ ರೂಪಿಸಬೇಕು.. ಕೇಂದ್ರ ಮತ್ತು ರಾಜ್ಯಗಳು ದ್ವೇಷದ ರಾಜಕಾರಣದಲ್ಲಿ ತೊಡಗಿದರೆ ದೇಶದ ಭವಿಷ್ಯವೇನು..” ಎಂದು ಅಭಿಪ್ರಾಯಪಟ್ಟರು. ವಿಶ್ವನಾಥನ್ ಅವರು ’ಇ.ಡಿ. ಮತ್ತು ಸಿಬಿಐ ಕುರಿತು ದೇಶಾದ್ಯಂತ ಅನಾಸಕ್ತಿಯಿದೆ.. ನೀವು ಮಾಡಿದ್ದೀರಿ ಅಂತ ಅವರು, ಅವರು ಮಾಡಿದ್ದಾರೆ ಅಂತ ನೀವು ದ್ವೇಷದ ರಾಜಕಾರಣದಲ್ಲಿ ಮುಳುಗಿದರೆ ಒಕ್ಕೂಟ ವ್ಯವಸ್ಥೆ ಹೇಗೆ ಉಳಿಯುತ್ತದೆ’ ಎಂದು ಪ್ರಶ್ನಿಸಿದ್ದಾರೆ

9, ಆಗಸ್ಟ್ 2024ರಂದು ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ, ಆಪ್ ಪಕ್ಷದ ಮನೀಶ್ ಸಿಸೋಡಿಯಾ ಅವರಿಗೆ ದೆಹಲಿ ಅಬಕಾರಿ ಹಗರಣ ಕುರಿತಾದ ಪಿಎಂಎಲ್‌ಎ ಪ್ರಕರಣದಲ್ಲಿ ಜಾಮೀನು ಕೊಡುತ್ತಾ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರು ’ಆರೋಪಿಗಳು ತಮ್ಮ ನಿರಪರಾಧಿತ್ವವನ್ನು ತಾವೇ ಸಾಬೀತುಪಡಿಸಬೇಕು ಎನ್ನುವ ಹೊರೆ ಹೊರಿಸುವ ಸೆಕ್ಷನ್ 45ರ ನಿಬಂಧನೆಗಳು ಕಾರ್ಯಸಾಧುವಲ್ಲ, ಸಿಸೋಡಿಯಾರಂತಹ ಆರೋಪಿಗಳನ್ನು ಯಾವುದೇ ವಿಚಾರಣೆಯಿಲ್ಲದೆ 17 ತಿಂಗಳುಗಳ ಕಾಲ ಬಂಧನದಲ್ಲಿರಿಸುವುದು ಸಮಂಜಸವಲ್ಲ, ಇಂತಹ ಸಂದರ್ಭದಲ್ಲಿ ಈ ನಿಬಂಧನೆಗಳನ್ನು ಸಡಲಿಸಬೇಕು..’ ಎಂದು ಹೇಳುತ್ತಾರೆ.

27, ಆಗಸ್ಟ್ 2024ರಂದು ಬಿಆರ್‌ಎಸ್ ಪಕ್ಷದ ಕೆ.ಕವಿತಾ ಅವರಿಗೆ ಜಾಮೀನು ನೀಡಿದ ಸುಪ್ರೀಂಕೋರ್ಟ್ ’ಸೆಕ್ಷನ್ 45ರಲ್ಲಿನ ವಿನಾಯಿತಿಯ ಪ್ರಕಾರ ವಿಶೇಷ ಕೋರ್ಟ್ ಮಹಿಳೆಯರಿಗೆ ಜಾಮೀನು ಕೊಡಬೇಕೆಂದು ಆದೇಶಿಸಿದರೆ ಅದನ್ನು ಪಾಲಿಸಬೇಕು..’ ಎಂದು ಹೇಳಿದೆ ಮತ್ತು ಕವಿತಾ ಅವರಿಗೆ ಜಾಮೀನು ನಿರಾಕರಿಸಿದ ದೆಹಲಿ ಹೈಕೋರ್ಟ್‌ನ ಆದೇಶವನ್ನು ಟೀಕಿಸಿದೆ. 28, ಆಗಸ್ಟ್ 2024ರಂದು ಸುಪ್ರೀಂಕೋರ್ಟ್ ’ಪಿಎಂಎಲ್‌ಎನ ಕಠಿಣ ನಿಯಮಗಳು ಜಾಮೀನು ಕೊಡಲು ಅಡ್ಡಿಪಡಿಸುವಂತಿಲ್ಲ’ ಎಂದು ಹೇಳಿದೆ.

ಪಿಎಂಎಲ್‌ಎ ಕಾಯ್ದೆಯ ಕರಾಳ ಶಾಸನಗಳನ್ನು ಮಾನ್ಯ ಮಾಡಿದ 2022ರ ಸುಪ್ರೀಂಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳ ವಿಚಾರಣೆ ಶುರು ಮಾಡಿದ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ಉಜ್ಜಲ್ ಭೂಯನ್, ಸಿ.ಟಿ. ರವಿಕುಮಾರ್ ಅವರ ವಿಶೇಷ ಪೀಠವು ಅಕ್ಟೋಬರ್ 16, 17ರಂದು ವಿಚಾರಣೆ ಮುಂದುವರಿಸಲಿದೆ. ಇ.ಡಿ.ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಅರ್ಜಿದಾರರ ಪರ ಕಪಿಲ್ ಸಿಬಲ್ ವಾದ ಮಂಡಿಸಲಿದ್ದಾರೆ.

ಉಪಸಂಹಾರ ಇ.ಡಿ. ಸಂಸ್ಥೆಯ ದುರ್ಬಳಕೆ ಮತ್ತು ಪಿಎಂಎಲ್‌ಎ ಕಾಯ್ದೆಯ ಕರಾಳತನದ ವಿರೋಧವೆಂದರೆ ಭ್ರಷ್ಟಾಚಾರವನ್ನು ಬೆಂಬಲಿಸಿದಂತೆ ಆಗುವುದಿಲ್ಲ. ಖಂಡಿತವಾಗಿಯೂ ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ಶಿಕ್ಷೆಯಾಗಬೇಕು. ಆದರೆ ಬಿಜೆಪಿ ಪಕ್ಷ ಅನುಸರಿಸುತ್ತಿರುವ ದ್ವೇಷದ ರಾಜಕಾರಣದ ರೀತಿಯಲ್ಲ ಅಲ್ಲ. ಇಲ್ಲಿನ ಕಾನೂನಿಗೆ ಅನುಗುಣವಾಗಿ ವಿಚಾರಣೆಯಾಗಬೇಕು. ಇದು ಸಾಧ್ಯವಾಗಬೇಕಿದ್ದರೆ ಪಿಎಂಎಲ್‌ಎ ಕಾಯ್ದೆಗೆ ಸಂಪೂರ್ಣ ತಿದ್ದುಪಡಿಯಾಗಬೇಕು.

ಅದರಲ್ಲಿನ ’ಅಪರಾಧದ ವರಮಾನ’ ಎನ್ನುವುದನ್ನು ಸ್ಪಷ್ಟಪಡಿಸಿಕೊಳ್ಳಬೇಕು, ಆರೋಪಿಗಳು ತಾವು ನಿರಪರಾಧಿಗಳೆಂದು ಸಾಬೀತುಪಡಿಸುವ ಹೊರೆಯನ್ನು ರದ್ದುಪಡಿಸಬೇಕು. ಈ ಕಾಯ್ದೆಯಲ್ಲಿ ಮತ್ತಷ್ಟು ಸುಧಾರಣೆ ತರಲು ಪಿಎಂಎಲ್‌ಎ ಕಾಯ್ದೆಯ ವಿಚಾರಣೆ ನಡೆಸದ ನಿವೃತ್ತ ನ್ಯಾಯಮೂರ್ತಿಗಳು, ಪರಿಣಿತ ಕಾನೂನು ತಜ್ಞರನ್ನು ಒಳಗೊಂಡ ಉನ್ನತಮಟ್ಟದ ಸಮಿತಿ ರಚಿಸಬೇಕು. ಅದರ ಕರಾಳತೆಯನ್ನು ಗೌಣಗೊಳಿಸಿ ಆರೋಪಿಗಳ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಬದುಕುವ ಹಕ್ಕನ್ನು ರಕ್ಷಿಸುವಂತಹ ತಿದ್ದುಪಡಿಗಳಾಗಬೇಕು ಮತ್ತು ಇ.ಡಿ.ಸಂಸ್ಥೆಯು ದ್ವೇಷದ ರಾಜಕಾರಣಕ್ಕಾಗಿ ಬಳಕೆಯಾಗುವುದು ತಪ್ಪಿಸಬೇಕು. ಇದು ವಿರೋಧ ಪಕ್ಷಗಳ ಒಕ್ಕೂಟವಾದ ’ಇಂಡಿಯಾ ವೇದಿಕೆ’ಯ ಮುಖ್ಯ ಜವಾಬ್ದಾರಿಯಾಗಿದೆ.

ಬಿ. ಶ್ರೀಪಾದ ಭಟ್

ಬಿ. ಶ್ರೀಪಾದ ಭಟ್
ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಬಿ.ಶ್ರೀಪಾದ್ ಭಟ್ ಹಿರಿಯ ಚಿಂತಕ, ಬರಹಗಾರ. ಹಲವು ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಸಮಾಜದ ಆಗುಹೋಗುಗಳಿಗೆ ನಿರಂತರ ಸ್ಪಂದಿಸುವ ಇವರು ಸಮಾನ ಶಿಕ್ಷಣಕ್ಕಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತಮಿಳುನಾಡು| ರಸ್ತೆ ಅಪಘಾತದಲ್ಲಿ ಇಬ್ಬರು ದಲಿತ ಯುವಕರು ಸಾವು; ಜಾತಿ ವೈಷಮ್ಯ ಆರೋಪ

ತಮಿಳುನಾಡಿನ ಧರ್ಮಪುರಿಯಲ್ಲಿ ಬುಧವಾರ ರಾತ್ರಿ ಚಿನ್ನಾರ್ಥಳ್ಳಿ ಕೂಟ್ ರಸ್ತೆಯ ಬಳಿ ಅಪರಿಚಿತ ವಾಹನವೊಂದು ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸೊನ್ನಂಪಟ್ಟಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ ಎಂದು...

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...