ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದೆ ಎಂದು ವರದಿಯಾಗಿದೆ.
ದಾಳಿ ನಡೆದಾಗ ಜೈನ್ ತಮ್ಮ ನಾಲ್ಕನೇ ಮಹಡಿಯ ಮನೆಯಲ್ಲಿದ್ದರು. ಇಡಿ ಅಧಿಕಾರಿಗಳು ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಮಧ್ಯಾಹ್ನದ ವೇಳೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜೈನ್ ನಿವಾಸಕ್ಕೆ ಆಗಮಿಸಿದ್ದಾರೆ ಎಂದು telegraphindia.com ವರದಿ ಮಾಡಿದೆ.
ಸಾಲ್ಟ್ ಲೇಕ್‌ನಲ್ಲಿರುವ ಕಟ್ಟಡವೊಂದರ 11ನೇ ಮಹಡಿಯಲ್ಲಿ ಐ -ಪ್ಯಾಕ್ ಕಚೇರಿಯಿದೆ. ಗುರುವಾರ ಬೆಳಗ್ಗಿನ ಜಾವ ಅಲ್ಲಿಗೆ ಇಡಿ ತಂಡ ದಾಳಿ ನಡೆಸಿ ಶೋಧ ಕಾರ್ಯ ಕೈಗೊಂಡಿದೆ. ಲೌಡನ್ ಬೀದಿಯಲ್ಲಿರುವ ಪ್ರತೀಕ್ ಜೈನ್ ಅವರ ಮನೆ ಮತ್ತು ಬುರ್ರಾಬಜಾರ್‌ನ ಪೋಸ್ಟಾದಲ್ಲಿರುವ ಮತ್ತೊಂದು ಕಚೇರಿಯ ಮೇಲೂ ಏಕಕಾಲದಲ್ಲಿ ನಡೆದಿದೆ ಎಂದು ವರದಿ ವಿವರಿಸಿದೆ.
2014ರ ಲೋಕಸಭಾ ಚುನಾವಣೆಗೆ ಮುನ್ನ ಪ್ರಶಾಂತ್ ಕಿಶೋರ್ ಸ್ಥಾಪಿಸಿದ ಐ-ಪ್ಯಾಕ್ ಸಂಸ್ಥೆ, 2019ರ ಲೋಕಸಭಾ ಚುನಾವಣೆಯ ನಂತರ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಂಗಾಳ ಸರ್ಕಾರದೊಂದಿಗೆ ಕೆಲಸ ಮಾಡುತ್ತಿದೆ. 2021ರ ವಿಧಾನಸಭಾ ಚುನಾವಣೆಯಲ್ಲಿ ಮತ್ತು 2024ರ ಲೋಕಸಭಾ ಚುನಾವಣೆಯಲ್ಲಿ ಟಿಎಂಸಿ ಪಕ್ಷವು ಗೆಲುವು ಸಾಧಿಸುವಲ್ಲಿ ಐ-ಪ್ಯಾಕ್ ಪ್ರಮುಖ ಪಾತ್ರವಹಿಸಿದೆ.
ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣಕ್ಕೆ ಹೊಂದಿಕೊಂಡಿರುವ ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಈ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ telegraphindia.com ವರದಿಯಲ್ಲಿ ಉಲ್ಲೇಖಿಸಿದೆ.
ಕಳೆದ ಕೆಲವು ವರ್ಷಗಳಿಂದ ಹಗರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಡೈಮಂಡ್ ಹಾರ್ಬರ್ ಸಂಸದ ಅಭಿಷೇಕ್ ಬ್ಯಾನರ್ಜಿ ಅವರನ್ನು ಕೇಂದ್ರ ಸಂಸ್ಥೆಗಳಾದ ಇಡಿ ಮತ್ತು ಸಿಬಿಐ ಎರಡೂ ಹಲವಾರು ಬಾರಿ ವಿಚಾರಣೆಗೆ ಒಳಪಡಿಸಿವೆ.
ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ ಇಡಿ ದಾಳಿ ನಡೆದಿರುವುದು ಗಮನಾರ್ಹ ಎನ್ನಲಾಗಿದೆ.
ಟಿಎಂಸಿ ಮತ್ತು ಅದರ ನಾಯಕರ ವಿರುದ್ಧ ಕೇಂದ್ರ ತನಿಖಾ ಸಂಸ್ಥೆಗಳು ಏನೇ ಆರೋಪಗಳನ್ನು ಹೊರಿಸಿದರೂ, ಪಕ್ಷ ಸತತ ನಾಲ್ಕನೇ ಅವಧಿಗೆ ಅಧಿಕಾರಕ್ಕೆ ಮರಳುತ್ತದೆ ಎಂದು ಅಭಿಷೇಕ್ ಪದೇ ಪದೇ ಹೇಳಿದ್ದಾರೆ.
ಪ್ರತೀಕ್ ಜೈನ್ ಮನೆಗೆ ಭೇಟಿ ನೀಡಿದ ಮಮತಾ ಬ್ಯಾನರ್ಜಿ!
ಇಡಿ ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ಕೈಗೊಂಡಿರುವ ನಡುವೆಯೇ ಪ್ರತೀಕ್ ಜೈನ್ ಮನೆಗೆ ಸಿಎಂ ಮಮತಾ ಬ್ಯಾನರ್ಜಿ ಆಗಮಿಸಿದ್ದಾರೆ. ಈ ವೇಳೆ ಜೈನ್ ಮನೆ ಬಳಿ ಗೊಂದಲ ವಾತಾವರಣ ನಿರ್ಮಾಣವಾಯಿತು. ಇಡಿ ಅಧಿಕಾರಿಗಳು ಟಿಎಂಸಿ ಚುನಾವಣಾ ಕಾರ್ಯತಂತ್ರವನ್ನು ಕದಿಯಲು ಪ್ರಯತ್ನ ನಡೆಸಿದ್ದಾರೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿರುವುದಾಗಿ ವರದಿಗಳು ಹೇಳಿವೆ.
ಮಮತಾ ಬ್ಯಾನರ್ಜಿ ಸುಮಾರು 20-25 ನಿಮಿಷ ಜೈನ್ ಮನೆ ಬಳಿ ಇದ್ದರು. ಅವರ ಕೈಯಲ್ಲಿ ಫೈಲ್ ಒಂದು ಇತ್ತು. ಅದು ಟಿಎಂಸಿ ಪಕ್ಷದ ದಾಖಲೆಗಳು, ನಾನು ಅದನ್ನು ಪಡೆದುಕೊಂಡಿದ್ದೇನೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಇಡಿ ದಾಳಿಗೆ ಮಮತಾ ಬ್ಯಾನರ್ಜಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದೊಂದು ರಾಜಕೀಯ ಪ್ರೇರಿತ ದಾಳಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಳ್ಳುವುದು ಗೃಹ ಸಚಿವರ ಕೆಲಸವೇ? ಎಂದು ಪ್ರಶ್ನಿಸಿದ್ದಾರೆ.
ಟಿಎಂಸಿಯ ಆಂತರಿಕ ದಾಖಲೆಗಳು, ಹಾರ್ಡ್ ಡಿಸ್ಕ್‌ಗಳು, ಅಭ್ಯರ್ಥಿಗಳ ಪಟ್ಟಿಗಳು, ಚುನಾವಣಾ ತಂತ್ರಗಳು ಮತ್ತು ಪಕ್ಷದ ಡೇಟಾವನ್ನು ವಶಪಡಿಸಿಕೊಳ್ಳಲು ಇಡಿ ಪ್ರಯತ್ನಿಸುತ್ತಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.


