Homeಸಾಹಿತ್ಯ-ಸಂಸ್ಕೃತಿಕಥೆ'ಎಜುಕೇಟೆಡ್ ಗರ್ಲ್ಸ್' : ಎಡೆಯೂರು ಪಲ್ಲವಿ ಅವರ ಕಥೆ

‘ಎಜುಕೇಟೆಡ್ ಗರ್ಲ್ಸ್’ : ಎಡೆಯೂರು ಪಲ್ಲವಿ ಅವರ ಕಥೆ

ಅವಳು ಮಾತ್ರ ಹೀಗಾ ಅಥವ ಎಲ್ಲ ಹುಡುಗಿಯರು ಹೀಗೇನಾ ಎಂಬ ಗೊಂದಲಗಳು ಶುರುವಾಗಿದ್ದವು. ನನಗಿಂತ ಒಂದಂಕ ಕಡಿಮೆ ಬಂದರೆ ಮಾತಿಗೆ ಬ್ರೇಕ್ ಹಾಕುತ್ತಿದ್ದಳು. ಈಗ ನೆನೆದರೆ ಲೋಕವನ್ನು ಸರಿಯಾಗಿ ಅರ್ಥೈಸಿಕೊಳ್ಳದ ಪೆದ್ದುತನಕ್ಕೆ ಕೋಪ ಉಕ್ಕುತ್ತೆ.

- Advertisement -
- Advertisement -

ಈ ಆಡಿಷನ್ ಬಂದರಂತು ತಲೆ ರೊಚ್ಚಿಗೆದ್ದು ಹರಿಯುವ ತರಂಗಿಣಿಯ ಹಾಗಾಗುತ್ತದೆ. ಆ ಇನ್‍ಕಮಿಂಗ್ ಬಿಲ್ಸ್, ಔಟ್ ಗೋಯಿಂಗ್ ಬಿಲ್ಸ್, ಎಕ್ಸ್‍ಪೆನ್ಸಿವ್, ವೋಚರ್, ವರ್ಥ್ ಜೊತೆಗೆ ಮ್ಯಾನೇಜರ್ ಟಾರ್ಚರ್ ಪ್ಲಸ್ ದಿನದ ಬಡ್ತಿಯ ಹಾಗೆ ಬೈಗುಳಗಳು ತಪ್ಪಿದ್ದಲ್ಲ. ಇವುಗಳು ಬಹುಶಃ ಸಾವಿನೊಂದಿಗೂ ಹಿಂಬಾಲಿಸುತ್ತವೇನೋ ಎಂದು ಭಯವಾಗಿ ಮತ್ತೇ ಛೇ!! ಛೇ!! “ಆಮ್ ಎಜುಕೇಟೆಡ್ ಗರ್ಲ್. ಐ ನಾಟ್ ಹ್ಯಾವ್ ಟು ಬಿ ಥಿಂಕ್ ಲೈಕ್ ದಟ್” ಎಂದುಕೊಂಡು ಆ ಥಾಟಿನ ಜೊತೆಗೆ ನಿಟ್ಟುಸಿರು ಹೊರಗೆ ಬಂತು. ಇವಷ್ಟೂ ಕೆಲಸಗಳನ್ನು ಮುಗಿಸಿ ಸಂಜೆ ಎರಡು ಬಸ್ ಹಿಡಿದು ರೂಂಗೆ ಬರುವಷ್ಟರಲ್ಲಿ ನನಗೆ ನೆಮ್ಮದಿಯ ಬದುಕೆಂದರೆ ಕಾಮನಬಿಲ್ಲಿನ ರಂಗಾಗಿ ಉಳಿಯದೆ ಬಣ್ಣದಲ್ಲಿ ಅದ್ದಿದ ಕರಿ ಕಾಗೆಯಂತೆ ಎನಿಸುತ್ತದೆ. ಕೆ ಆರ್ ಎಮ್ ರಸ್ತೆಯಲ್ಲಿರುವ ಖಾಸಗಿ ಸಂಸ್ಥಯೊಂದರಲ್ಲಿ ಕ್ಲರ್ಕ್ ಆಗಿ ಕಾರ್ಯ ನಿರ್ವಹಿಸಿ ನಲವತ್ತು ಸಾವಿರ ಸಂಬಳ ಬಂದರು ತಿಂಗಳ ಕೊನೆಯಲ್ಲಿ ಇಷ್ಟೆಯಾ ಎಂಬ ಕೊರಗು ಬಿಡಲೊಲ್ಲದು.

ಮುಂದಿನ ವಾರ ಗೆಳತಿ ಸೌಂದರ್ಯಳ ಮದುವೆಗೆ ತಪ್ಪದೆ ಹೋಗಲೆಬೇಕು. ಹಳೆಯ ಗೆಡ್ಡಾ ಫ್ರೆಂಡ್ಸ್‍ಗಳು, ಭೋಳು ತಲೆಯ ಲೆಕ್ಚರರ್ಸ್ ಸಿಗುತ್ತಾರೆ. ವಾಸ್ತವದ ಓಟದ ಬದುಕಿನಲ್ಲಿ ಹಳೆಯ ದಿನಗಳ ನೆನೆಪಿಗೆ ಲಗ್ಗೆ ಹಾಕಲಿರುವ ಮೆಲುಕಿನ ತಂಗುದಾಣವೇ ಈ ಹಬ್ಬ-ಹರಿದಿನಗಳು, ಮದುವೆಗಳು, ತಿಥಿಗಳು. ಆ ನಾಯಿಯಂತೆ ಸದಾ ಬೊಗಳುವ ಬಾಸ್ ಅದೆಷ್ಟು ನಿಗರಾಡಿದರು ಹೋಗಲೇಬೇಕು ಎಂದುಕೊಂಡು ಸ್ವಲ್ಪ ಚಿಂತೆಗಳ ತರಗೆಲೆಗಳನ್ನ ಪಕ್ಕಕ್ಕಿಟ್ಟವಳೇ ಎಫ್ ಬಿ, ವಾಟ್ಸ್‍ಆಪ್‍ನ ಅಪ್‍ಡೇಟ್ಸ್ ಚೆಕ್ ಮಾಡೋಣವೆಂದು ಮೊಬೈಲ್‍ಗೆ ಎಡತಾಕಿದೆ. ಈ ಸಾಮಾಜಿಕ ಜಾಲತಾಗಳಲ್ಲಿ ಏನಾದರೊಂದನ್ನು ತುರುಕಲಿಲ್ಲವಾದರೆ ನಾವೇ ಔಟ್‍ಡೇಟ್ ಆಗಿಬಿಡುತ್ತೇವಲ್ಲವೆ? ಎನ್ನುವುದು ನನ್ನ ಸ್ವಾನುಭವದ ಪ್ರಶ್ನೆ. ಮತ್ತದು ಭ್ರಮೆಯಾ ಗೊತ್ತಿಲ್ಲ. ಹೀಗೆ ಯೋಚಿಸುತ್ತಾ ಲಾಗ್ ಇನ್ ಆಗಲು ಗೆಳತಿ ಸಾಗರಿಯ ಫೋಟೋ ತಡೆದು ನಿಲ್ಲಿಸಿತು. ಪೀಚ್ ಪಿಂಕ್‍ನ ಗೌನ್ ಸ್ಯಾರಿ, ಆರ್ನೆಟ್ ಪೋನಿಟೇಲ್‍ನೊಂದಿಗೆ ಕಟ್ಟಿದ ಕೇಶ ವಿನ್ಯಾಸವು ಅವಳ ಸೌಂದರ್ಯವನ್ನು ಮತ್ತಷ್ಟು ಮಿಂಚಿಸುತ್ತಿತ್ತು. ಕತ್ತಿನಲ್ಲಿ ಒಂದು ವಜ್ರದ ನೆಕ್ ಪೀಸ್ ವಿಜೃಂಭಿಸುತ್ತಿತ್ತು “ಥಾಂಕ್ಸ್ ಫಾರ್ ದಿಸ್ ಪ್ರೀಶಿಯಸ್ ಗಿಫ್ಟ್ ಬ್ರೊ….” ಎಂಬ ಸ್ಟೇಟಸ್‍ನೊಂದಿಗೆ. ತಕ್ಷಣ ತನ್ನ ಮರೆವಿಗೆ ತನ್ನ ತಾನೇ ಶಪಿಸಿಕೊಳ್ಳುತ್ತಾ ಫೋನಾಯಿಸಿ ಹುಟ್ಟು ಹಬ್ಬದ ಶುಭಾಶಯ ತಿಳಿಸಿದೆ.

ಕಾಲೇಜಿನ ಪ್ರಾಯದಲ್ಲಿ ಎಲ್ಲರು ಸೌಂದರ್ಯವತಿಯರೇ ಅಲ್ಲವೇ? ಅಂತಹ ಅದೆಷ್ಟೋ ಸೌಂದರ್ಯವತಿಯರನ್ನು ಸೈಡಿಗಾಕಿ ಸೌಂದರ್ಯವೇ ತನ್ನ ಆಸ್ತಿಯೆಂಬಷ್ಟು ಸುಂದರವಾಗಿದ್ದವಳು ಸೌಂದರ್ಯ. ತನ್ನ ಬಿಳುಪಿನ ಬಗ್ಗೆ ಎಲ್ಲಿಲ್ಲದ ಹೆಮ್ಮೆ ಅವಳಿಗೆ. ನಾನು, ಸಾಗರಿಕ, ಸೌಂದರ್ಯ ಮೂವರು ಆಪ್ತ ಗೆಳತಿಯರಲ್ಲದಿದ್ದರು ಕಾಲೇಜಿನ ಸೌಹಾರ್ದಯುತ ಅನಿವಾರ್ಯತೆಗೆ ಗಂಟು ಬಿದ್ದಂತೆ ಫ್ರೆಂಡ್‍ಶಿಫ್ ಅನ್ನುವ ಸಾಮಾನ್ಯ ಪದ ನಮ್ಮನ್ನು ಬೆಸೆದಿತ್ತು. ಸಾಗರಿಯ ಬಗ್ಗೆ ಒಂದೆರಡು ಘಟನೆಗಳು ನನಗೆ ಇಂದಿಗೂ ಸಹ ಸ್ಮೃತಿಪಟಲದಲ್ಲಿ ಕಾಡುತ್ತವೆ. ಅಂತಹ ಸೌಂದರ್ಯವತಿಯಲ್ಲದಿದ್ದರು, ಸೊಗಸಾದ ಕಪ್ಪು ಸುಂದರಿಯೆನ್ನಲಡ್ಡಿಯಿಲ್ಲ. ನೋಡಿಯೂ ನೋಡದ ಹಾಗಿರುತ್ತಿದ್ದ ಅವಳ ಕೊಂಕು ನೋಟಕ್ಕೆ ತಲೆ ಕೆಡಿಸಿಕೊಂಢ ಹುಡುಗರೆಷ್ಟೋ?. “ಅವಳ ಎದೆಯನ್ನು ನೋಡಿ ಕೈ ಹಿಸುಕಿಕೊಳ್ಳುತ್ತಿದ್ದರಂತೆ ಹುಡುಗರು” ಹೀಗೆ ಮೆಸೆಂಜರ್‍ನಲ್ಲಿ ಚಾಚ್ ಮಾಡುವಾಗ ಶಶಿಧರ ಹೇಳಿದಾಗ “ಹೌಹಾರಿದ್ದೆ”. “ನಾವೇನು ವಿಶೇಷವಲ್ಲ. ಹುಡುಗಿಯರನ್ನ ನೋಡಿದ ತಕ್ಷಣ ಮೊದಲು ಕಣ್ಣು ಹೋಗುವುದು ಅಲ್ಲಿಗೆಯೇ. ಇನ್ ಫ್ಯಾಕ್ಟ್ ಶಿಸ್ ಲುಕ್ ಸೋ ಸೆಕ್ಸಿ” ಎಂದಾಗ ಹೊಟ್ಟೆಕಿಚ್ಚು ಸಹ ಅಡರಿತ್ತು.

ಸೌಂದರ್ಯಳ ಸಪೂರ ದೇಹಕ್ಕೆ ನುಣುಪಾದ ಶ್ವೇತ ವರ್ಣ ಕನ್ನಡಿಯಂತಿತ್ತು. ಸದಾ ಅವಳ ಮುಂಗುರುಳು ಅವಳ ತೋರು ಬೆರಳಿನೊಂದಿಗೆ ಬೆಸೆದು ಆಟವಾಡಿ ಅವಳ ಸೌಂದರ್ಯಕೆ ಮತ್ತಷ್ಟು ಮೆರುಗನ್ನು ಸಹ ನೀಡಿತ್ತು. ಯಾರಿಗೂ ತಿಳಿಯದೇ ಕತ್ತಲಾದ ಮೇಲೆ ವಾರಕ್ಕೆ ಮೂರು ಬಾರಿ ಬ್ಯೂಟಿಪಾರ್ಲರ್‍ನಲ್ಲಿ ಎಡತಾಕುವುದು ಎಲ್ಲರಿಗು ತಿಳಿದ ವಿಷಯವೇ. ಅವಳಪ್ಪ ಸೋರಮಂಗಲಕ್ಕೆ ಎಮ್.ಎಲ್.ಎ. ಅಂದು ಸೀನಿಯರ್ಸರ ಬೀಳ್ಕೋಡುಗೆಯ ಸಮಾರಂಭಕ್ಕೆ ಎಲ್ಲರು ಪೈಪೋಟಿಗೆ ಬಿದ್ದು ಸರ್ವಾಲಂಕೃತರಾಗಿ ಮಿನುಗುತ್ತಿದ್ದರು. ಗಾಢ ನೀಲಿ ಬಣ್ಣದ ಸೆಲ್ವಾರ್‍ನಿಂದ ಅಲಂಕೃತಗೊಂಡ ಅವಳನ್ನು ನೋಡಿದ ನಾನು ದೂರದಿಂದರೆ “ಶಿ ಲುಕಿಂಗ್ ಸೋ ಪ್ರೆಟಿ” ಎಂದು ಉದ್ಗರಿಸಿದ್ದೆ ಸಾಗರಿಯ ಬಳಿ. ಅದಕ್ಕವಳು “ಹಾಗೆಂದು ಅವಳ ಮುಂದೆ ಒದರ ಬೇಡ. ಕೊಬ್ಬಿದ ಮೀನು ಅದು. ಅವಳ ಮುಂದೆ ಹೊಗಳಿದರೆ ಮತ್ತಷ್ಟು ಮೇಲೇರುತ್ತಾಳೆ” ಎಂದು ಮನೆಯ ಅಕ್ಕಳಂತೆ ಹಿತವಚನ ಹೇಳಿದ್ದಳು. ಮಧ್ಯಾಹ್ನ ಪ್ರತಿಯೊಬ್ಬರಿಗೂ ಹೊಟ್ಟೆಗೆ ಗೊಬ್ಬರವಾಕುವ ಸಮಯದಲ್ಲಿ “ತುಂಬಾ ಒಳ್ಳೆ ಸೆಲೆಕ್ಷನ್, ಲುಕಿಂಗ್ ಪ್ರೆಟ್ಟಿ ಡಿಯರ್” ಎಂದವಳ ಕೆನ್ನೆ ಚಿವುಟಿದ್ದನ್ನು ಎವೆಯಿಕ್ಕದೆ ನಾನು ನೋಡಿದೆ. ನಾನು ಆಶ್ಚರ್ಯ ಮಿಳಿತ ಕಂಗಳಲ್ಲಿ ಅವಳನ್ನು ನೋಡಿದರೆ ಸಾಗರಿ ಮಾತ ಯಾವುದಕ್ಕೂ ಸೊಪ್ಪು ಹಾಕದೆ ಸಮಾಧಾನಕರವಾಗಿಯೇ ಇದ್ದಳು. ಮುಗ್ಧತೆಯ ನೆರಳಿನಲ್ಲಿ ಅವಳು ಮಾತ್ರ ಹೀಗಾ ಅಥವ ಎಲ್ಲ ಹುಡುಗಿಯರು ಹೀಗೇನಾ ಎಂಬ ಗೊಂದಲಗಳು ಶುರುವಾಗಿದ್ದವು. ನನಗಿಂತ ಒಂದಂಕ ಕಡಿಮೆ ಬಂದರೆ ಮಾತಿಗೆ ಬ್ರೇಕ್ ಹಾಕುತ್ತಿದ್ದಳು. ಈಗ ನೆನೆದರೆ ಲೋಕವನ್ನು ಸರಿಯಾಗಿ ಅರ್ಥೈಸಿಕೊಳ್ಳದ ಪೆದ್ದುತನಕ್ಕೆ ಕೋಪ ಉಕ್ಕುತ್ತೆ.

ಒಂದುವರೆ ವರ್ಷಗಳ ಹಿಂದೆ ಅವಳ ಮದುವೆ ಸಮಾರಂಭದಲ್ಲಿ ಅವಳೊಂದಿಗೆ ಆತ್ಮೀಯತೆಯಿಂದ ಸುತ್ತುದಿದ್ದರಿಂದ ವರನೊಂದಿಗೆ ಲಘು ಪರಿಚಯದ ಸಲುಗೆಯಿತ್ತು. ಸುಖೀ ಸಂಸಾರವೂ ಅವರದಾಗಿತ್ತು. ಆಗೊಮ್ಮೆ ಹೀಗೊಮ್ಮೆ 2-3 ತಿಂಗಳಿಗೆ ಒಮ್ಮೆ ಫೋನಾಯಿಸಿ ಕುಶಲ ಕ್ಷೇಮ ವಿಚಾರಿಸುತ್ತಿದ್ದಳು. ನಾಲ್ಕು ತಿಂಗಳ ಹಿಂದೆ ಸಾಗರಿಗೆ ಅಬಾರ್ಷನ್ ಸಹ ಆಗಿತ್ತು. ಇನ್ನು ಅವರಿಬ್ಬರಿಗೂ ವಯಸ್ಸಿತ್ತೆಂದೂ ಅತ್ತೆ, ಮಾವ ಚಕಾರವೆತ್ತಿರಲಿಲ್ಲ. ನಂತರದ ದಿನಗಳಲ್ಲಿ ಕುಶಲೋಪರಿ ವಿಚಾರಿಸಲು ಕಾಲ್ ಮಾಡಿದಾಗ “ಮದುವೆಯೆಂದರೆ ಮಹಾನ್ ಬೋರ್ ಕಣೆ, ನೀನು ಮಾತ್ರ ಬೇಗ ಮದುವೆಯಾಗಬೇಡ. ಲೈಫ್‍ನ ಆದಷ್ಟು ಮದುವೆಗೆ ಮುಂಚೆಯೇ ಎಂಜಾಯ್ ಮಾಡು” ಎಂದು ಒಂದು ಗಂಟೆ ದಾಂಪತ್ಯದ ಬಗ್ಗೆ ಲೈಫ್ ಬಗ್ಗೆ ಲೆಕ್ಚರರ್ ಕೊಟ್ಟಿದ್ದಳು. ಜೊತೆಗೆ “ನನ್ನ ಬಗ್ಗೆ ಅವರಿಗೆ ತಾತ್ಸರ. ಫಿಸಿಕಲಿ ಅಟ್ರಾಕ್ಷನ್ ಇಲ್ಲ”ವೆಂದ ನೆನಪಾಯಿತು ನನಗೆ. ತಕ್ಷಣ ಏನೋ ಹೊಳೆದಂತಾಗಿ ಅವಳ ಒಂದು ವರ್ಷದ ಸಾಮಾಜಿಕ ಜಾಲತಾಣದ ಪೂರ್ಣ ಪ್ರಮಾಣದ ಪ್ರೋಪೈಲ್, ಸ್ಟೇಟಸ್ ಚೆಕ್ ಮಾಡಿದೆ. ಅವಳ ಯಾವೂಂದೆರಡು ಸ್ಟೇಟಸ್‍ನಲ್ಲಿ ಫೋಟೋವಿನಲ್ಲಿ ಅಪ್ಪ, ಅಮ್ಮ, ಅಣ್ಣ ಎಲ್ಲರೂ ಇದ್ದರು ಅವಳ ಗಂಡನ ಹೊರತಾಗಿ. ಮತ್ತು ಅವಳ ಪತಿರಾಯನದು ತೆಗೆದು ಇಣುಕಿದಾಗ ಅಲ್ಲಿಯೂ ಇದೇ ಪುನರಾವರ್ತನೆ ಆಗಿತ್ತು. ಹೂವಿನಂತೆ ನೋಡಿಕೊಳ್ಳತ್ತೇನೆ ಎಂದು ಪರಸ್ಪರ ನಕ್ಕವರು ಇಷ್ಟು ಬೇಗ ಪರಸ್ಪರ ಸಾಂಸಾರಿಕ ಜೀವನವನ್ನು ಮುಕ್ತಗೊಳಿಸಿದ್ದಾರಾ? ಮರುದಿನ ವಿಚಾರಿಸೋಣ ಎಂದು ಚಿಂತಿಸುತ್ತಿದ್ದ ಹಾಗೆ ನಿದ್ರಾದೇವಿ ಮೆಲ್ಲನೆ ದಣಿದಿದ್ದ ದೇಹಕ್ಕೆ ಮೆಲ್ಲನೆ ಆವರಿಸಿದ್ದಳು. ಹಸಿವು ನಿದ್ರೆಯಲ್ಲಿ ಮರೆಯಾಗಿತ್ತು.

ಮರುದಿನ ಕಾಲ್ ಮಾಡಿದಾಗ ಬ್ಯುಸಿ ಎಂದು ಕಟ್ ಮಾಡಿ ಸಂಜೆ ಮಾಡಿದಳು. ಅವರಿಬ್ಬರ ಸಾಂಸಾರಿಕ ಬಿರುಕಿನ ಬಗ್ಗೆ ಕೇಳಿದಾಗ. ಅದೊಂದು ದೊಡ್ಡ ಕಥೆ ಎಂದು ಅವಳ ಬಗ್ಗೆ ಅವಳೇ ಮರುಕ ಪಡುತ್ತಾ ಫೋನಿಟ್ಟಳು. ನಾನು ಹೆಚ್ಚಿಗೆ ಕೇಳಲಿಲ್ಲ. ನನ್ನದೇ ದಂಡಿ ಕೆಲಸಗಳಿರುವಾಗ ಮತ್ತೊಬ್ಬರ ಖಾಸಗಿತಕ್ಕೆ ಯಾಕೆ ಇಣುಕಬೇಕು.

******

ಹೊರಗಡೆ ಸೌಂದರ್ಯ ವೆಡ್ಸ್ ಸೌಹಾರ್ದ್ ಎಂಬ ಮುತ್ತಿನ ಅಕ್ಷರಗಳು ವಿಬ್‍ಗಯಾರ್‍ನಲ್ಲಿ ನಮ್ಮನ್ನು ಸ್ವಾಗತಿಸಿದವು. ಮಿನಿಸ್ಟರ್ರ್‍ಗಳಿಗೆ, ವಿಐಪಿಗಳಿಗೆ ವಿಶೇಷ ಆಮಂತ್ರಣ, ಸೌಲಭ್ಯಗಳು. ಸೌಂದರ್ಯಳಿನ್ನು ಕಾಲೇಜಿನಲ್ಲಿ ಹ್ಯಾಗಿದ್ದಳೋ ಹಾಗೆಯೇ ಇದ್ದಾಳೆ ಭೌದ್ಧಿಕವಾಗಿ, ಮಾನಸಿಕವಾಗಿ. “ದೇವರೇ, ಈ ನವ ಜೋಡಿಗಳ ಸಂಬಂಧವಾದರು ಗಟ್ಟಿಯಾಗಿದ್ದರೆ ಸಾಕೆಂದು” ಮನಸ್ಸಿಲ್ಲೇ ದೇವರಲ್ಲಿ ಮೊರೆಯಿಟ್ಟೆ. ನಮ್ಮೆಲ್ಲಾ ಕ್ಲಾಸ್ ಮೇಟ್ಸ್ ಪಂಕಜ್, ಸಿರಿತ, ಮನ್ವಿತ, ಅಶೋಕ್, ಸುಕೃತ, ದೀಪಕ್ ಎಲ್ಲರೂ ಹಾಜರಿದ್ದರು. ರಾಜೇಶ್ ಮಾತ್ರ ಬಂದಿರಲಿಲ್ಲ. ಕೆಲಸದ ಒತ್ತಡದಿಂದ ತಡವಾಗಿ ಬರುತ್ತಾನಂತೆ ಎಂದಳು ಸುಕೃತ. ವಸಂತ ಋತುವುನಂತೆ ಮತ್ತೆ ಸಿಕ್ಕ ಗೆಳೆಯರೊಂದಿಗೆ ಉಲ್ಲಾಸ ಚಿಗುರಿತ್ತು, ಹಳೆಯ ಬುತ್ತಿಗಳ ತೆರೆದು ಕಂಗಳಲ್ಲಿ ಆಗಾಗ ಪನ್ನಿರು ಬರಲು “ಡೋಂಟ್ ವೀ ಎಮೋಷನಲ್” ಎಂದು ನನಗೆ ನಾನೆ ಹೇಳಿಕೊಂಡು ಸಮಾಧಾನಿಸಿಕೊಳ್ಳುತ್ತಿದ್ದೆ. ಆದರೆ ಯಾರೊಬ್ಬರೂ ಸಹ “ಸಾಗರಿ ಏಕೆ ಬರಲಿಲ್ಲ” ಎಂಬ ನಾಸಿ ಪ್ರಶ್ನೆಗಳನ್ನ ಎಸೆಯಲಿಲ್ಲ. ಎಲ್ಲರಿಗೂ ಅವಳ ಬಗ್ಗೆ ಮೊದಲೇ ತಿಳಿದಂತಿತ್ತು. ನವಜೋಡಿಗಳ ಗಿಫ್ಟ್ ಪ್ರೆಸೆಂಟ್ ಮಾಡಿ ನಂತರ ಎಲ್ಲರೂ ಹರಟೆ ಕೊಚ್ಚಲು ಕುಳಿತರು. ಸಾಗರಿಯ ಮುರಿದು ಬಿದ್ದ ಸಂಸಾರಿಕ ಸಂ¨ಂಧವೇ ಇವರುಗಳ ಬಾಯಿಗೆ ಎಲೆ ಅಡಿಕೆಯಾಗಿತ್ತು. ಫ್ಯಾಸಿಸ್ಟ್‍ಗಳಿಂದ ಬಂದ ತೀರ್ಪಿನಂತೆ

“ಅವಳ ಕಾಲೇಜಿನ ಮಾಜಿ ಪ್ರೇಮಿಯ ವಿಷಯ ತಿಳಿದವನು ದೂರವಿಟ್ಟ”

“ಅವಳಗೆ ಹಾಲಿ ಪ್ರೇಮ ಪ್ರಕರಣ ಶುರುವಾಗಿತ್ತು. ಅದು ಮಹೇಶ್ ತಿಳಿದ ನಂತರ ಹೀಗಾಯಿತು”

“ಆಸ್ತಿ ವಿಷಯಕ್ಕೆ ಮನಸ್ತಾಪ. ಇದಕ್ಕೆ ತಾಯಿಯ ಕುಮ್ಮಕ್ಕೂ ಇತ್ತು. ಇಷ್ಟಕ್ಕೆಲ್ಲ ಅವರೇ ಹೊಣೆ”

“ಮಕ್ಕಳಾಗುವುದಿಲ್ಲವಂತೆ ಅದಕ್ಕೆ ಡೈವೋರ್ಸ್‍ಗೆ ಅಪ್ಲೈ ಮಾಡಿದ್ದಾರೆ”

ಹೀಗೇ ಏನೇನೋ ಅವರ ಊಹೆಗೆ ತಕ್ಕಂತೆ ಊಹಾಪೋಹದವು ರುಚಿಗೆ ಮಸಾಲೆಯ ಹಾಗೆ. ಆದರೆ ಯಾವೊಂದು ವಿಷಯಗಳು ಸಹ ನನ್ನ ತರ್ಕಕ್ಕೆ ನಿಲುಕಲಿಲ್ಲ. ಅದೊಂದನ್ನು ಬಿಟ್ಟು. ಆ ಗುಂಪಿಗೆ ತಡವಾಗಿ ಬಂದರು ಬಿರುಗಾಳಿಯಂತೆ ಬಂದವನು ರಾಜೇಶ್, ಈ ಪ್ರಕರಣಕ್ಕೆ ಹೊಸ ತಿರುವು ನೀಡಿದನಾ? ಅಥವಾ ಹಾದಿ ತಪ್ಪಿಸಲೆತ್ನಿಸಿದನಾ? ಗೊತ್ತಿಲ್ಲ. ತನ್ನ ಟ್ಯಾಬ್ ತೆಗೆದು ಎಫ್‍ಬಿಯ ಮೆಸೆಂಜರ್‍ನಲ್ಲಿ ಅವಳು ಅವನೊಂದಿಗೆ ಚಾಟ್ ಮಾಡಿದ ವಿಷಯಗಳನ್ನು ಹಂಚಿಕೊಂಡು ಅರ್ಥ ವಿವರಣೆ ನೀಡುತ್ತಾ, ಸಂದೇಶಗಳನ್ನು ತೋರಿಸುತ್ತಿದ್ದ. ನಿಮಗಾರಿಗೂ ಗೊತ್ತಿರದ, ನಿಮ್ಮಲ್ಲಿ ಯಾರಿಗೂ ತಿಳಿಯದ ಗುಟ್ಟೊಂದು ನನ್ನಲ್ಲಿ ಉಂಟು ಎಂದು ಬೀಗುವಂತೆ ಚಾಟ್ ತೋರಿಸುತ್ತಿದ್ದ ಅವನನ್ನು ಸಾಯಿಸುವಷ್ಟು ಕೋಪ ಉಕ್ಕಿತು. “ಫಿಸಿಕಲ್ಲಿ ಯು ಆರ್ ಗುಡ್” ಎನ್ನುವುದನ್ನು ಬಾಯಿ ಚಪ್ಪರಿಸುತ್ತಾ ನಿತೀಶ್ ಓದುತ್ತಿದ್ದ್ದುದು ನನ್ನ ಕಿವಿಗು ಬಿದ್ದು ಸಹ್ಯವಾಗದೆ ಎದ್ದು ಒಂದು ಸಬೂಬು ನೀಡಿ ಅಲ್ಲಿಂದ ಹೊರಟುಬಿಟ್ಟೆ. ಅವಳು ಅವನಲ್ಲಿ ನಿಜಾವಾಗಿಯೂ ದೈಹಿಕವಾಗಿ ಅನುರಕ್ತಳಾಗಿದ್ದಳಾ. ಆದರೆ ಇವರ ಪ್ರಕಾರ ಅವಳು ನಡತೆಗೆಟ್ಟವಳಾಗಿ, ಇಷ್ಟೆಲ್ಲಾ ರಾದ್ದಾಂತಕ್ಕಾಗಿ ಕಾರಣನಾಗುತ್ತಿರುವ ರಾಜೇಶ ರಸಿಕನಂತೆ ಕಂಡಿದ್ದನು. ಅಂದು ಹೇಳಿದ ಅವಳ ಮಾತುಗಳು ನೆನಪಾದವು. “ನನ್ನ ಬಗ್ಗೆ ಅವರಿಗೆ ತಾತ್ಸರ. ಫಿಸಿಕಲಿ ಅಟ್ರಾಕ್ಷನ್ ಇಲ್ಲ” ಎಂಬ ಮಾತು. ಅವರಿಬ್ಬರು ದೂರಾಗಲು ಅದೊಂದೆ ಸಕಾರಣ ಇರಲಾರದಾದರು, ದಾಪಂತ್ಯಗಳು ದೂರಾಗಲು ಒಂದು ಸಕಾರಣ ಇರಲೇಬೇಕೆಂದು ಇವರೆಲ್ಲ ಯಾಕೆ ಬಯಸುತ್ತಾರೆ ತಿಳಿಯಲಿಲ್ಲ., ಅದು ಒಂದು ಸಂಬಂಧವೇ ಅಲ್ಲವಾ? ಅಪ್ಪ-ಮಗಳ ಹಾಗೆ, ಸ್ನೇಹಿತ-ಸ್ನೇಹಿತೆಯರ ಹಾಗೆ. ಅಲ್ಲಿ ಬಿರುಕುಂಟಾದಾಗ ಮೌನವಹಿಸುವ ಇವರು ದಾಂಪತ್ಯ ವಿಷಯದಲ್ಲಿ ಯಾಕೆ ಸಾಯಿಸುವಷ್ಟು ಆಳಕ್ಕೆ ಅಗೆಯುತ್ತಾರೆ. ಕೇವಲ ಅವಳು ಆ ಒಂದು ದೈಹಿಕ ತೃಪ್ತಿಗಾಗಿ, ಅದಕ್ಕಾಗಿ ಹಾದಿ ತಪ್ಪಿದಳೆ. ನಾನ್‍ಸೆನ್ಸ್ ಇಂತಹ ದೊಡ್ಡ ಊರಲ್ಲಿ ಇದೆಲ್ಲ ಒಂದು ವಿಷಯವೇ ಅಲ್ಲ. ಕೆಟ್ಟದ್ದು-ಸರಿ ಎಂಬುದು ಇಲ್ಲವೇ ಇಲ್ಲ. ಒಂದು ವೇಳೆ ಅವಳು ಹಾಗೆ ನೇರವಾಗಿ ತನ್ನ ಮನದಿಂಗಿತವನ್ನು ತೋಡಿಕೊಂಡಿದ್ದರು ನಾನ್ಯಾಕೆ ಅವರಲ್ಲಿ ತಪ್ಪು ಹುಡುಕಬೇಕು ಎನಿಸಿತು. ಅದೇ ಅವನು ಹಾಗೆ ನೇರವಾಗಿ ಅವಳಿಗೆ ತಾನು ದೈಹಿಕವಾಗಿ ಬಯಸುತ್ತಿದ್ದೆನೆ ಎಂದು ಹೇಳಿದ್ದರೆ ಬಯಕೆಯಾಗಿರುತ್ತಿತ್ತು ಇವರುಗಳ ಎವಿಲೈಗಳಿಗೆ. ರಾಜೇಶ್ ಹೇಳುತ್ತಿದ್ದ ಪರಿಗೆ ಅವನ ಕಪಾಳಕ್ಕೆ ನಾಲ್ಕುನಹೊಡೆದು ಬರಬೇಕೆನಿಸಿತು. ಅವನು ತೋರಿಸುತ್ತಿದ್ದ ಮೆಸೆಜ್ ನಿಜವೆಂದು ಪುಷ್ಟೀಕರಿಸಿದ್ದರಿಂದ ಬಾಯಿ ಕಟ್ಟಿಸಿತು. ಹೀಗೂ ಯಾಕೆ ಸಾಧ್ಯವಿರಬಾರದು. ಇಂದಿನ ಡಿಜಿಟಲ್ ತಂತ್ರಜ್ಜಾನ ಏನನ್ನಾದರು ಮಾಡಬಹುದಾಗಿತ್ತು. ಇವನ ಕೆಲವು ಮೆಸೆಜ್ ಡಿಲೀಟ್ ಮಾಡಿ ಹಾದಿ ತಪ್ಪಿಸುವ ಸಾಧ್ಯತೆಗಳು ಹೆಚ್ಚಿರುವಾಗ ಇವರುಗಳಿಗೆ ಮಾತ್ರ ಅದರ ಆಲೋಚನೆಯೆಗೂ ಹೋಗುತ್ತಿಲ್ಲ. ಆದರು ರಾಜೇಶ್‍ನಂತಹ ಸಂಬಂಧದ ಆಳ ಅರಿಯದ ತಿರುಬೋಕಿಗಳ ಸಹವಾಸ ಅವಳಿಗೆ ಏಕೆ ಬೇಕಿತ್ತು. ಇಲ್ಲಿ ಸಂಬಂಧಗಳ ಆಯಸ್ಸು ಯಾಕಿಷ್ಟು ಕ್ಷೀಣಿಸಿದೆ? ಮನಸ್ಸುಗಳು ಯಾಕಿಷ್ಟು ಮುರುಟಾಗುತ್ತಿವೆ?. ಅತೀ ಕಡಿಮೆ ಅವಧಿಯಲ್ಲಿ ಅವರ ಸಂಬಂದ ಮುರಿದು ಬಿದ್ದಿತ್ತು. ಪ್ರೀತಿ ಹುಟ್ಟಲು ಕಾರಣ ಬೇಕಿಲ್ಲ, ಮುರಿಯಲು ಅಷ್ಟೇ? ಇಷ್ಟು ಸಲೀಸಿನ ಜೋಡಣೆಯೇ ಅದೆಷ್ಟು ಅನಾಹುತ ಮಾಡುತ್ತದೋ. ಈ ಜೀವನದ ಕಷ್ಟವೇನೆಂದರೆ ಇಲ್ಲಿ ಎಲ್ಲದಕ್ಕೂ ಕಾರಣ ದೊರೆಯುವುದಿಲ್ಲ. ಮರುದಿನ ಅವಳಿಗೆ ಮತ್ತೆ ನಾನೇ ಫೋನಾಯಿಸಿ ರಾಜೇಶ್ ಹೇಳಿದ್ದ ನಿಜವಾ ಎಂದೆ. ಉತ್ತರಿಸದೆ “ಸಾರಿ” ಎಂದು ಫೋನಿಟ್ಟಳು. ಹಾಗೆ ನೇರವಾಗಿ ಕೇಳಿ ತಪ್ಪು ಮಾಡಿದೆ, ಕೇಳಬಾರದಿತ್ತು ಎನಿಸಿತು. ಮೂರು ದಿನ ಬಿಟ್ಟು ಮತ್ತೆ ಕಾಲ್ ಮಾಡಿದಾಗ ಮೋಬೈಲ್ ಸ್ವಿಚ್ಛಾಫ್ ಆಗಿತ್ತು. ಎಲ್ಲರು ಹೀಗೆ ಬಾಯಿಚಟಕ್ಕೆ ಕೇಳಿ ಕೇಳಿ ಮನಸ್ಸಿಗೆ ಘಾಸಿಯಾಗಿ ಹಾಗೆ ಮಾಡಿದ್ದಾಳೆಂದು ಮನಸ್ಸು ತಿಳಿಸಿತು. ದುಡಿಯುವ ರೇಜಿಗೆಯಲ್ಲಿ ಅವಳ ವಿಷಯವು ಪಕ್ಕದಲ್ಲಿ ಮರೆಯಾಯಿತು.

*****

ಭಾನುವಾರ ಸಧ್ಯ ಇಂದಾದರು ಸ್ವಲ್ಪ ರೆಸ್ಟ್ ಮಾಡೋಣವೆಂದು ಮಲಗಿದ ಏಕೋ ಎನೋ ನಿದ್ರೆಯೇ ಸುಳಿಯಲಿಲ್ಲ. ಗಂಟೆ ನೋಡಿದಾಗ ಮಾರಾಯ ಇನ್ನು ಎಂಟರಲ್ಲೇ ಕುಂತಿದ್ದ. ಹಾಗೆ ಹಾಸಿಗೆಯ ಮೇಲೆ ಹೊರಳಾಡಿ ಎಫ್‍ಬಿಗೆ ಲಾಗಿನ್ ಆದವಳು ಶಾಕ್ ಬಡಿದಂತೆ ಧಡಾರನೇ ಎದ್ದು ಕುಳಿತೆ. ನಂಬಲಾಗಲಿಲ್ಲ. “ನಮ್ಮ ಪೀತಿಯ ಗೆಳತಿ ಸಾಗರಿ ಇನ್ನಿಲ್ಲ- RIP” ಹೀಗೆ ಸ್ಟೇಟಸ್ ಗಳು ಹರಿದಾಡುತ್ತಿದ್ದವು. ಸುಕೃತಾಳಿಗೆ ಕಾಲ್ ಮಾಡಿ ವಿಚಾರಿಸಿದಾಗ ತಾನು ನೋಡಿದ ಸ್ಟೇಟಸ್‍ಗಳು ನಿಜವೆಂದೂ ನೆನ್ನೆ ರಾತ್ರಿ ನೂರು ಆಲ್ಪ್ರಾಜೋಲಮ್ ಮಾತ್ರೆ ತೆಗೆದುಕೊಂಡಿದ್ದಳು. ಆಸ್ಪತ್ರೆಗೆ ಸಾಗಿಸುವಲ್ಲೇ ಅಮರವಾದ ನಿದ್ರೆಗೆ ಜಾರಿದಳೆಂದು ತಿಳಿಸಿದಳು. ಅಲ್ಪಾವದಿಯಲ್ಲೇ ನನ್ನ ಗೆಳತಿ ಸಾಗರಿ ಬಾಳ ಪಯಣ ಮುಗಿಸಿ ದಿಗಂತದೆಡೆಗೆ ಸಾಗಿ ಇನ್ನೆಲ್ಲೋ ನೆಮ್ಮದಿ ಕಂಡುಕೊಂಡಿದ್ದಳು. ಅದು ನೆಮ್ಮದಿಯ ಮೋಕ್ಷವಲ್ಲ, ಮೂರ್ಖತನ. ಅವಳ ಮೂರ್ಖತನಕ್ಕೆ ಅಳು ಬಂತು. “ಮೆ ಯು ಗೆಟ್ ಪೀಸ್ ಇನ್ ಹೆವನ್” ಎಂದು ಸ್ಟೇಟಸ್ ಹಾಕಿದ್ದ ರಾಜೇಶ್‍ನ ಪ್ರೊಫೈಲ್ ನೋಡುತ್ತಾ ಹಾಗೆ ಕುಸಿದು ಕುಳಿತೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2023ರಲ್ಲಿ ತೀವ್ರ ಹಸಿವಿನಿಂದ ತತ್ತರಿಸಿದ 282 ಮಿಲಿಯನ್ ಜನರು: ಆಹಾರದ ಅಭಾವಕ್ಕೆ ವಿಶ್ವಸಂಸ್ಥೆ ಉಲ್ಲೇಖಿಸಿದ...

0
ಕಳೆದ ವರ್ಷ ಪ್ರಪಂಚದಾದ್ಯಂತ ಆಹಾರ ಅಭದ್ರತೆ ಸ್ಥಿತಿ ಭಾರೀ ಹದಗೆಟ್ಟಿದೆ, 2023ರಲ್ಲಿ ಸುಮಾರು 282 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ, ಇದರಲ್ಲಿ ವಿಶೇಷವಾಗಿ ಯುದ್ಧಪೀಡಿತ ಗಾಝಾ ಮತ್ತು ಸುಡಾನ್‌ನಲ್ಲಿ ಹೆಚ್ಚಿನ ಜನರು...