ಬುಧವಾರ ಮಧ್ಯರಾತ್ರಿ ಲಕ್ನೋ ವಿರುದ್ಧ ಬೆಂಗಳೂರು 14 ರನ್‌ಗಳ ಅಂತರದ ಗೆಲುವು ಸಾಧಿಸುತ್ತಲೇ RCB ಅಭಿಮಾನಿಗಳು ಈ ಸಲ ಕಪ್ ನಮ್ದೆ ಎಂಬ ಘೋಷಣೆ ಶುರು ಮಾಡಿದ್ದಾರೆ. ಆರ್‌ಸಿಬಿ ಸತತ ಇನ್ನೆರೆಡು ಮಹತ್ವದ ಪಂದ್ಯಗಳನ್ನು ಗೆದ್ದಲ್ಲಿ ಆ ಘೋಷಣೆ ನಿಜರೂಪಕ್ಕೆ ಬರಲಿದೆ.
2020ರಲ್ಲಿ ಪ್ಲೇ ಆಫ್ ಪ್ರವೇಶಿಸಿದ್ದ RCB ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲು ಅನುಭವಿಸಿ ಹೊರಬಂದಿತ್ತು. 2021ರ 14ನೇ ಐಪಿಎಲ್ ಸೀಸನ್‌ನಲ್ಲಿಯೂ ಸಹ ಪ್ಲೇ ಆಫ್ ಪ್ರವೇಶಿಸಿದ ಅದು ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಕೋಲ್ಕತ್ತಾ ಎದುರು ಸೋತು ಟೂರ್ನಿಯಿಂದ ನಿರ್ಗಮಿಸಿತ್ತು. ಆ ಮೂಲಕ ಕೋಟ್ಯಾಂತರ ಅಭಿಮಾನಿಗಳ ಈ ಸಲ ಕಪ್ ನಮ್ದೆ ಎನ್ನುವ ಆಸೆಗೆ ತಣ್ಣೀರು ಎರಚಿದ್ದರು. ಆದರೆ 2022ರ 15ನೇ ಆವೃತ್ತಿಯಲ್ಲಿ ಅದೃಷ್ಟದ ಮೂಲಕ ಪ್ಲೇ ಆಫ್ ಪ್ರವೇಶಿಸಿದ ಆರ್‌ಸಿಬಿ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಅದೃಷ್ಟದ ಮೂಲಕವೇ ಮಣಿಸಿ ಮುಂದಿನ ಕ್ವಾಲಿಫೈಯರ್ ಹಂತಕ್ಕೆ ತಲುಪಿದೆ. ಆ ಮೂಲಕ ಕಪ್ ತನ್ನದಾಗಿಸಿಕೊಳ್ಳಲು ಆರ್‌ಸಿಬಿಗೆ ಎರಡು ಹೆಜ್ಜೆ ಮಾತ್ರ ಬಾಕಿ ಇದೆ. ಆದರೆ ಆ ಎರಡು ಹೆಜ್ಜೆಗಳು ತೀವ್ರ ಕಠಿಣವಾಗಿವೆ.
ಬುಧವಾರ ರಾತ್ರಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ ಜಯ ಗಳಿಸಿತು. ಟಾಸ್ ಸೋತ ಕಾರಣ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ರಜತ್ ಪಾಟಿದಾರ್‌ರವರ ಸ್ಪೋಟಕದ ಶತಕದ (54 ಎಸೆತಗಳಲ್ಲಿ 112ರನ್) ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿತು. ಕಡೆಯಲ್ಲಿ ಕ್ರೀಸ್‌ಗಿಳಿಸಿದ ದಿನೇಶ್ ಕಾರ್ತಿಕ್ ಸಹ 23 ಎಸೆತಗಳಲ್ಲಿ 37 ರನ್ ಗಳಿಸಿ 200 ರ ಗಡಿ ದಾಟಲು ನೆರವಾದರು.
ಇದಕ್ಕೆ ಉತ್ತರವಾಗಿ ಬ್ಯಾಟ್ ಮಾಡಿದ ಲಕ್ನೋ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 193 ರನ್ ಗಳಿಸಲಷ್ಟೆ ಸಾಧ್ಯವಾಯಿತು. ಕೆ.ಎಲ್ ರಾಹುಲ್ 79 ರನ್ ಮತ್ತು ದೀಪಕ್ ಹೂಡಾ 45 ರನ್ ಗಳಿಸಿದರೂ ತಂಡ ಗೆಲುವಿನ ಗೆರೆ ದಾಟಲಾಗಲಿಲ್ಲ. ಆರ್‌ಸಿಬಿ ಬೌಲರ್ ಹರ್ಷಲ್ ಪಟೇಲ್ ನಡೆಸಿದ ಬಿಗುವಿನ ದಾಳಿಯೇ ಅದಕ್ಕೆ ಪ್ರಮುಖ ಕಾರಣ. ಅವರು 4 ಓವರ್‌ಗಳಲ್ಲಿ 1 ವಿಕೆಟ್ ಗಳಿಸಿ ಕೇವಲ 25 ರನ್ ನೀಡಿದರು.
ಈ ಗೆಲುವಿನ ಮೂಲಕ ಆರ್‌ಸಿಬಿ ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಗಿಟ್ಟಿಸಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತಿರುವ ರಾಜಸ್ಥಾನ್ ರಾಯಲ್ಸ್ ತಂಡದ ಎದುರು ಮೇ 27ರ ಶುಕ್ರವಾರ ಕಣಕ್ಕಿಳಿಯಲಿದೆ. ಅಲ್ಲಿ ಗೆದ್ದಲ್ಲಿ ಮೇ 29 ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಬೇಕಿದೆ. ಟೂರ್ನಿಯುದ್ದಕ್ಕೂ ಸಂಘಟಿತ ಪ್ರದರ್ಶನ ನೀಡಿರುವ ರಾಜಸ್ಥಾನ ಮತ್ತು ಗುಜರಾತ್ ಎದುರು ಗೆಲ್ಲುವುದು ಸುಲಭದ ಮಾತಲ್ಲ. ಆದರೆ ಆರ್‌ಸಿಬಿಯಲ್ಲಿಯೂ ಪ್ರತಿಭಾವಂತ ಆಟಗಾರರಿದ್ದಾರೆ. ಅವರು ಪ್ರದರ್ಶನ ನೀಡಿದ್ದಲ್ಲಿ ಈ ಬಾರಿ ಆರ್‌ಸಿಬಿ ಚಾಂಪಿಯನ್ ಆಗಬಹುದಾಗಿದೆ.
2009, 2011 ಮತ್ತು 2016ರಲ್ಲಿ ಆರ್‌ಸಿಬಿ ತಂಡ ಫೈನಲ್ ಪ್ರವೇಶಿಸಿದೆ. ಆದರೆ ಒಮ್ಮೆಯೂ ಕಪ್ ಗೆಲ್ಲಲಾಗಿಲ್ಲ. ಈ ಬಾರಿಯಾದರೂ ಗೆದ್ದು ಅಭಿಮಾನಿಗಳ ಮನ ತಣಿಸಲಿದೆಯೆ ಕಾದು ನೋಡಬೇಕಿದೆ.
ಇದನ್ನೂ ಓದಿ: ಪಠ್ಯಪುಸ್ತಕ ಬದಲಿಸಿದವರ ಗುರಿ ’ಕರ್ನಾಟಕ’ವೂ ಆಗಿದೆ!


