ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ಮೊಟ್ಟೆ, ಜ್ಯೂಸ್ ಮಾರಾಟಗಾರರಿಗೆ ಕೋಟ್ಯಾಂತರ ರೂಪಾಯಿ ಜಿಎಸ್‌ಟಿ ಬಾಕಿ ಇದೆ ಎಂದು ಆದಾಯ ತೆರಿಗೆ (ಐಟಿ) ಇಲಾಖೆ ನೋಟಿಸ್ ನೀಡಿರುವ ಬಗ್ಗೆ ವರದಿಯಾಗಿದೆ.
ತಮ್ಮ ಕುಟುಂಬಗಳಲ್ಲಿ ಏಕೈಕ ಆದಾಯ ಗಳಿಸುವ ವ್ಯಕ್ತಿಗಳಾದ ಈ ಇಬ್ಬರು ಪುರುಷರು, ಐಟಿ ಇಲಾಖೆಯ ನೋಟಿಸ್ ನೋಡಿ ಆಘಾತಕ್ಕೊಳಗಾಗಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಮೊಟ್ಟೆ ಮಾರಾಟಗಾರ ಪ್ರಿನ್ಸ್ ಸುಮನ್ ಅವರಿಗೆ ಸುಮಾರು 50 ಕೋಟಿ ರೂಪಾಯಿಗಳ ವ್ಯವಹಾರಕ್ಕಾಗಿ ನೋಟಿಸ್ ನೀಡಲಾಗಿದೆ. ಸರ್ಕಾರಕ್ಕೆ 6 ಕೋಟಿ ರೂಪಾಯಿ ಜಿಎಸ್‌ಟಿ ಪಾವತಿಸಲು ಬಾಕಿ ಇದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
‘ಪ್ರಿನ್ಸ್ ಎಂಟರ್‌ಪ್ರೈಸಸ್’ ಎಂಬ ಕಂಪನಿಯು 2022ರಲ್ಲಿ ದೆಹಲಿಯ ರಾಜ್ಯ ವಲಯ 3, ವಾರ್ಡ್ 33 ರಲ್ಲಿ ಸುಮನ್ ಅವರ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿದೆ. ಈ ಕಂಪನಿಯು ಚರ್ಮ, ಮರ ಮತ್ತು ಕಬ್ಬಿಣದ ವ್ಯಾಪಾರದಲ್ಲಿ ತೊಡಗಿದ್ದು, ಕಳೆದ ಎರಡು ವರ್ಷಗಳಲ್ಲಿ ಬೃಹತ್ ವಹಿವಾಟುಗಳನ್ನು ನಡೆಸಿದೆ ಎಂದು ಐಟಿ ಇಲಾಖೆಯ ನೋಟಿಸ್‌ನಲ್ಲಿ ಹೇಳಲಾಗಿದೆ ಎಂದು ವರದಿ ತಿಳಿಸಿದೆ.
“ನಾನು ಗಾಡಿಯಲ್ಲಿಟ್ಟು ಮೊಟ್ಟೆ ಮಾರುವವ. ದೆಹಲಿಗೆ ಹೋಗಿಲ್ಲ, ಅಲ್ಲಿ ಕಂಪನಿ ಪ್ರಾರಂಭಿಸುವುದಂತೂ ಸಾಧ್ಯವೇ ಇಲ್ಲ” ಎಂದು ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಪಥಾರಿಯಾ ನಗರದಲ್ಲಿ ವಾಸಿಸುವ ಸುಮನ್ ಹೇಳಿದ್ದಾರೆ.
ಸಣ್ಣ ದಿನಸಿ ಅಂಗಡಿ ನಡೆಸುತ್ತಿರುವ ಸುಮನ್ ಅವರ ತಂದೆ ಅವರ ತಂದೆ ಧರ್ ಸುಮನ್, “ನಮ್ಮಲ್ಲಿ ನಿಜವಾಗಿಯೂ 50 ಕೋಟಿ ರೂಪಾಯಿ ಇದ್ದರೆ ದೈನಂದಿನ ಖರ್ಚುಗಳನ್ನು ಪೂರೈಸಲು ಏಕೆ ಕಷ್ಟಪಡಬೇಕು?” ಎಂದು ಪ್ರಶ್ನಿಸಿದ್ದಾರೆ.
“ಸುಮನ್ ಅವರ ವೈಯಕ್ತಿಕ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡಿರಬಹುದು ಎಂದು ಅವರ ಕುಟುಂಬದ ವಕೀಲರು ಶಂಕಿಸಿದ್ದಾರೆ. “ಯಾರೋ ಪ್ರಿನ್ಸ್ ಅವರ ದಾಖಲೆಗಳನ್ನು ವಂಚನೆಯ ಮೂಲಕ ಬಳಸಿಕೊಂಡಿದ್ದಾರೆ. ಪ್ರಕರಣದ ತನಿಖೆಗಾಗಿ ನಾವು ಪೊಲೀಸ್ ಮತ್ತು ತೆರಿಗೆ ಅಧಿಕಾರಿಗಳನ್ನು ಸಂಪರ್ಕಿಸಿದ್ದೇವೆ” ಎಂದು ಅವರು ತಿಳಿಸಿದ್ದಾರೆ.
ಮಾರ್ಚ್ 20ರಂದು ಸುಮನ್ ಅವರಿಗೆ ನೀಡಿದ ನೋಟಿಸ್‌ನಲ್ಲಿ, ಐ-ಟಿ ಇಲಾಖೆಯು ಒಟ್ಟು 49.24 ಕೋಟಿ ರೂಪಾಯಿ ಹಣಕಾಸು ವಹಿವಾಟಿನ ವಿವರವನ್ನು ಕೋರಿದೆ. 2022-23ನೇ ಹಣಕಾಸು ವರ್ಷದ ಬಿಲ್‌ಗಳು, ಖರೀದಿ ವೋಚರ್‌ಗಳು, ಸಾರಿಗೆ ದಾಖಲೆಗಳು ಮತ್ತು ಬ್ಯಾಂಕ್ ಸ್ಟೇಟ್‌ಮೆಂಟ್‌ಗಳಂತಹ ದಾಖಲೆಗಳನ್ನು ಪ್ರಸ್ತುತಪಡಿಸಿವಂತೆ ಸೂಚಿಸಿದೆ.
ಉತ್ತರ ಪ್ರದೇಶದ ಅಲಿಗಢದ ಜ್ಯೂಸ್ ಮಾರಾಟಗಾರ ಎಂ.ಡಿ ರಹೀಸ್ ಎಂಬವರಿಗೂ ಸುಮನ್ ಅವರಂತೆ 7.5 ಕೋಟಿ ರೂಪಾಯಿಗೂ ಹೆಚ್ಚು ಜಿಎಸ್‌ಟಿ ಪಾವತಿಸುವಂತೆ ಐಟಿ ಇಲಾಖೆ ನೋಟಿಸ್ ನೀಡಿದ್ದು, ಇದು ಅವರನ್ನು ಮತ್ತು ಅವರ ಕುಟುಂಬವನ್ನು ಸಂಕಷ್ಟಕ್ಕೆ ದೂಡಿದೆ.
“ಈ ನೋಟಿಸ್ ಏಕೆ ನೀಡಲಾಗಿದೆ ಎಂಬುವುದೇ ನನಗೆ ಗೊತ್ತಿಲ್ಲ. ನಾನು ಜ್ಯೂಸ್ ಮಾತ್ರ ಮಾರಾಟ ಮಾಡುತ್ತೇನೆ. ನಾನು ಇಷ್ಟೊಂದು ಹಣವನ್ನು ಎಂದಿಗೂ ನೋಡಿಲ್ಲ. ಈಗ ನಾನು ಏನು ಮಾಡಬೇಕು?” ರಹೀಸ್ ಪ್ರಶ್ನಿಸಿದ್ದಾರೆ.
“ಸರ್ಕಾರ ನನಗೆ ಸಹಾಯ ಮಾಡಬೇಕೆಂದು ನಾನು ವಿನಂತಿಸುತ್ತೇನೆ. ನಾನು ಬಡವ. ನನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಬಾರದು” ಎಂದು ಅವರು ಮನವಿ ಮಾಡಿದ್ದಾರೆ.
2020-21ರಲ್ಲಿ ರಹೀಸ್ ಹೆಸರಿನಲ್ಲಿ ಕೋಟ್ಯಂತರ ಮೌಲ್ಯದ ನಕಲಿ ವಹಿವಾಟುಗಳು ನಡೆದಿವೆ ಎಂದು ನೋಟಿಸ್‌ನಲ್ಲಿ ಸೂಚಿಸಲಾಗಿದೆ. ಹೀಗಾಗಿ, ಅವರು ಸರ್ಕಾರಕ್ಕೆ 7,79,02,457 ರೂಪಾಯಿ ಜಿಎಸ್‌ಟಿ ಬಾಕಿ ಉಳಿಸಿಕೊಂಡಿದ್ದಾರೆ ಎನ್ನಲಾಗಿದೆ.
“ನಾವು ಐಟಿ ಅಧಿಕಾರಿಗಳನ್ನು ಸಂಪರ್ಕಿಸಿದ್ದೇವೆ. ಅವರು ನನ್ನ ವೈಯಕ್ತಿಕ ದಾಖಲೆಗಳನ್ನು ಯಾರೊಂದಿಗಾದರೂ ಹಂಚಿಕೊಂಡಿದ್ದೀರಾ? ಎಂದು ಕೇಳಿದ್ದಾರೆ. ನಾನು ಅವುಗಳನ್ನು ಯಾರೊಂದಿಗೂ ಹಂಚಿಕೊಂಡಿಲ್ಲ ಎಂದು ಹೇಳಿದೆ” ಎಂದು ಬನ್ನಾ ದೇವಿ ಪೊಲೀಸ್ ಠಾಣೆ ವ್ಯಾಪ್ತಿಯ ತಾರ್ ವಾಲಿ ಗಲಿಯಲ್ಲಿ ವಾಸಿಸುವ ರಹೀಸ್ ಹೇಳಿದ್ದಾರೆ.
“ನಾವು ನಮ್ಮ ದಿನನಿತ್ಯದ ಊಟಕ್ಕೂ ಕಷ್ಟಪಡುತ್ತಿದ್ದೇವೆ… ನಮ್ಮ ಬಳಿ ಅಷ್ಟೊಂದು ಹಣವಿದ್ದರೆ, ನಮ್ಮ ಮಗ ಏಕೆ ಇಷ್ಟೊಂದು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತಿತ್ತು?” ಎಂದು ರಹೀಸ್ ತಾಯಿ ಪ್ರಶ್ನಿಸಿದ್ದಾರೆ.
2022ರ ಪಂಜಾಬ್ ವಿಧಾನಸಭಾ ಚುನಾವಣೆಗೆ ಕೋಟ್ಯಾಂತರ ರೂಪಾಯಿ ದೇಣಿಗೆ ನೀಡಲು ರಹೀಸ್ ಅವರ ವೈಯಕ್ತಿಕ ದಾಖಲೆಗಳನ್ನು ವಂಚನೆಯಿಂದ ಬಳಸಲಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ವರದಿಗಳು ತಿಳಿಸಿವೆ.
“ರಹೀಸ್ ಕೋಟ್ಯಾಧಿಪತಿಯಾಗಿದ್ದರೆ, ಅವರು ಜ್ಯೂಸ್ ಅಂಗಡಿ ನಡೆಸುತ್ತಿದ್ದರೇ? ಇದು ಖಂಡಿತವಾಗಿಯೂ ವಂಚನೆಯ ಪ್ರಕರಣವಾಗಿದೆ” ಎಂದು ಜ್ಯೂಸ್ ರಹೀಸ್ ಅವರ ಸ್ನೇಹಿತ ಸೊಹೈಲ್ ಹೇಳಿದ್ದಾರೆ. |
ಸೌಜನ್ಯ: ndtv.com


