ಶನಿವಾರ (ಆ.9) ಬೆಳಿಗ್ಗೆ ಸುರಿದ ಭಾರೀ ಮಳೆಗೆ ದೆಹಲಿಯ ಜೈತ್‌ಪುರದ ಹರಿ ನಗರ ಪ್ರದೇಶದಲ್ಲಿ ಗೋಡೆಯ ಒಂದು ಭಾಗ ಕುಸಿದು ಇಬ್ಬರು ಚಿಕ್ಕ ಮಕ್ಕಳು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದಾರೆ.
ಸಾವಿಗೀಡಾದವರು ಹರಿ ನಗರದ ಹಳೆಯ ದೇವಾಲಯದ ಬಳಿ ತಾತ್ಕಾಲಿಕ ಗುಡಿಸಲುಗಳಲ್ಲಿ ವಾಸಿಸುತ್ತಿದ್ದ ಗುಜಿರಿ ವ್ಯಾಪಾರಿಗಳು. ಗೋಡೆ ಕುಸಿದಾಗ ಎಲ್ಲರೂ ಅವಶೇಷಗಳಡಿ ಸಿಲುಕಿಕೊಂಡಿದ್ದರು. ರಕ್ಷಣಾ ತಂಡಗಳು ತಕ್ಷಣ ಅವರನ್ನು ಸಫ್ದರ್‌ಜಂಗ್ ಮತ್ತು ಏಮ್ಸ್ ಆಸ್ಪತ್ರೆಗಳಿಗೆ ಕರೆದೊಯ್ದವು. ಆದರೆ ಚಿಕಿತ್ಸೆಯ ಸಮಯದಲ್ಲಿ ಎಲ್ಲರೂ ಸಾವನ್ನಪ್ಪಿದರು ಎಂದು ವರದಿಗಳು ಹೇಳಿವೆ.
ಮೃತರನ್ನು ಶಬಿಬುಲ್ (30), ರಬಿಬುಲ್ (30), ಮುತ್ತು ಅಲಿ (45), ರುಬಿನಾ (25), ಡಾಲಿ (25), ಹಶಿಬುಲ್ ಮತ್ತು ಮಕ್ಕಳು ರುಖ್ಸಾನಾ (6) ಮತ್ತು ಹಸೀನಾ (7) ಎಂದು ಪೊಲೀಸರು ಗುರುತಿಸಿದ್ದಾರೆ.
ಹೆಚ್ಚಿನ ಅನಾಹುತಗಳನ್ನು ತಪ್ಪಿಸಲು ಅಧಿಕಾರಿಗಳು ದುರಂತ ಪ್ರದೇಶ ಗುಡಿಸಲುಗಳ ಜನರನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಿದ್ದಾರೆ.
“ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ದೇವಾಲಯದ ಬಳಿಯ ಹಳೆಯ ಗೋಡೆ ಕುಸಿದಿದೆ. ಅದರ ಪಕ್ಕದಲ್ಲಿಯೇ ವಾಸ್ತವ್ಯ ಹೂಡಿದ್ದ ಗುಜಿರಿ ವ್ಯಾಪಾರಿಗಳು ಸಾವಿಗೀಡಾಗಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಮುಂಜಾಗೃತ ಕ್ರಮವಾಗಿ ಜನರನ್ನು ನಾವು ಸ್ಥಳಾಂತರಿಸಿದ್ದೇವೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ಐಶ್ವರ್ಯ ಶರ್ಮಾ ಹೇಳಿದ್ದಾರೆ.
ಶುಕ್ರವಾರ ರಾತ್ರಿಯಿಂದ ದೆಹಲಿಯಲ್ಲಿ ನಿರಂತರ ಮಳೆಯಾಗುತ್ತಿದೆ. ಪರಿಣಾಮ ನಗರದ ಹಲವೆಡೆ ಅವಘಡಗಳು ಸಂಭವಿಸಿವೆ. ಹಲವು ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಅಂಡರ್‌ಪಾಸ್‌ಗಳು ಜಲಾವೃತಗೊಂಡಿದ್ದು, ತೀವ್ರ ಸಂಚಾರ ದಟ್ಟಣೆ ಉಂಟಾಗಿದೆ. ಹವಾಮಾನ ಇಲಾಖೆ (ಐಎಂಡಿ) ಶನಿವಾರ ರೆಡ್ ಅಲರ್ಟ್ ನೀಡಿದೆ. ವಾರಾಂತ್ಯ ಮತ್ತು ರಕ್ಷಾ ಬಂಧನ ಕಾರ್ಯಕ್ರಮಗಳ ನಡುವೆ ವ್ಯಾಪಕ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ ಎಂದು ವರದಿಗಳು ಹೇಳಿವೆ.


