ಛತ್ತೀಸ್‌ಗಢದ ರಾಯ್‌ಪುರದಲ್ಲಿ ಭಾನುವಾರ (ಜ.4) ಬಜರಂಗದಳ ಕಾರ್ಯಕರ್ತರು ಎಂಟು ಮಂದಿ ಬಂಗಾಳಿ ಮಾತನಾಡುವ ಮುಸ್ಲಿಂ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದು, ಒಬ್ಬ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ರಾಯ್‌ಪುರ ಜಿಲ್ಲೆಯ ಕಟೋವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಸೂರಜ್‌ಪುರದಲ್ಲಿ ಈ ಘಟನೆ ನಡೆದಿದೆ. ಪಶ್ಚಿಮ ಬಂಗಾಳದ ಪುರುಲಿಯಾದ ಚೆಪ್ರಿ ಗ್ರಾಮದ ವಲಸೆ ಕಾರ್ಮಿಕರು ಸೂರಜ್‌ಪುರದ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಕಾರ್ಮಿಕರು ತಮ್ಮ ವೇತನದ ಬಗ್ಗೆ ಬೇಕರಿಯ ಮಾಲೀಕರೊಂದಿಗೆ ತೀವ್ರ ವಾಗ್ವಾದ ನಡೆಸಿದ್ದರು. ಈ ವೇಳೆ ಭಜರಂಗದಳದ ಕಾರ್ಯಕರ್ತರ ಗುಂಪು ಬಂದು ಕೋಲುಗಳಿಂದ ಹಲ್ಲೆ ನಡೆಸಲು ಪ್ರಾರಂಭಿಸಿದ್ದಾರೆ. ಪರಿಣಾಮ, ವಲಸೆ ಕಾರ್ಮಿಕರಲ್ಲಿ ಒಬ್ಬರ ಬಲಗೈಯಲ್ಲಿ ಮೂಳೆ ಮುರಿತವಾಗಿದೆ ಎಂದು ವರದಿ ಹೇಳಿದೆ.
ಹಲ್ಲೆ ಬಳಿಕ ದುಷ್ಕರ್ಮಿಗಳು ಪುರುಲಿಯಾ ಜಿಲ್ಲಾ ಪೊಲೀಸರಿಗೆ ಕರೆ ಮಾಡಿ ಕಾರ್ಮಿಕರ ದಾಖಲೆಗಳನ್ನು ಪರಿಶೀಲಿಸಲು ಹೇಳಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಹಲ್ಲೆಗೊಳಗಾದವರನ್ನು ರಕ್ಷಿಸಿದ್ದಾರೆ ಎಂದು ವರದಿ ಹೇಳಿದೆ.
“ಸೂರಜ್‌ಪುರದ ಕಟೋವಾಲಿ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಯೊಬ್ಬರು ಘಟನೆಯ ಬಗ್ಗೆ ನನಗೆ ಮಾಹಿತಿ ನೀಡಿ ಎಂಟು ಕಾರ್ಮಿಕರ ಬಗ್ಗೆ ವಿವರಗಳನ್ನು ಕೇಳಿದ್ದು, ನಾವು ಎಂಟು ಮಂದಿ ಅಸಹಾಯಕ ಬಲಿಪಶುಗಳ ಕುಟುಂಬಗಳಿಂದ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿ ಪೊಲೀಸರಿಗೆ ಸಲ್ಲಿಸಿದ್ದೇವೆ” ಎಂದು ಪಶ್ಚಿಮ ಬಂಗಾಳದ ಚೆಪ್ರಿಯ ಟಿಎಂಸಿ ನಾಯಕ ಶೇಖ್ ಇಕ್ಬಾಲ್ ಹೇಳಿದ್ದಾರೆ.
ಭಾನುವಾರ ಒಡಿಶಾದ ಸಂಬಲ್ಪುರದಲ್ಲಿ ಮತ್ತೊಬ್ಬ ಬಂಗಾಳಿ ಮಾತನಾಡುವ ಮುಸ್ಲಿಂ ವಲಸೆ ಕಾರ್ಮಿಕನ ಮೇಲೆ ಹಲ್ಲೆ ನಡೆದಿದ್ದು, ಅವರ ತೋಳಿನ ಮೂಳೆ ಮುರಿತವಾಗಿದೆ ಎಂದು ವರದಿ ಹೇಳಿದೆ.
ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬಂಗಾಳಿ ಮಾತನಾಡುವ ವಲಸೆ ಕಾರ್ಮಿಕರ ಮೇಲೆ ಹೆಚ್ಚುತ್ತಿರುವ ದಾಳಿಯ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಹಿಂದೆ ಕಳವಳ ವ್ಯಕ್ತಪಡಿಸಿದ್ದರು. ಇದನ್ನು ‘ಕ್ರೂರ ದಬ್ಬಾಳಿಕೆ’ ಎಂದು ಅವರು ಹೇಳಿದ್ದಾರೆ. ಕಳೆದ ವರ್ಷದ ಆಗಸ್ಟ್‌ನಲ್ಲಿ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಕೆಲಸ ಮಾಡುತ್ತಿರುವ ಬಂಗಾಳಿ ವಲಸಿಗರು ಪಶ್ಚಿಮ ಬಂಗಾಳಕ್ಕೆ ಹಿಂತಿರುಗಿ ತಮ್ಮದೇ ಆದ ವ್ಯವಹಾರಗಳನ್ನು ಪ್ರಾರಂಭಿಸುವಂತೆ ಮುಖ್ಯಮಂತ್ರಿ ಕರೆ ನೀಡಿದ್ದರು.
ಒಡಿಶಾದಲ್ಲಿ ಬಾಂಗ್ಲಾದೇಶಿ ಪ್ರಜೆ ಎಂಬ ‘ಸಂಶಯ’ದ ಮೇಲೆ ಬಂಗಾಳದ 30 ವರ್ಷದ ಮುಸ್ಲಿಂ ವಲಸೆ ಕಾರ್ಮಿಕ ಜುಯೆಲ್ ಶೇಖ್ ಅವರನ್ನು ಗುಂಪೊಂದು ಹೊಡೆದು ಕೊಂದ ಎರಡು ವಾರಗಳೊಳಗೆ ಇತ್ತೀಚಿನ ದಾಳಿ ನಡೆದಿದೆ.
ಶೇಖ್ ಅವರನ್ನು ತೀವ್ರವಾಗಿ ಥಳಿಸಲಾಗಿತ್ತು, ನಂತರ ಸಂಬಲ್ಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಆರು ಜನರನ್ನು ಬಂಧಿಸಲಾಗಿದೆ.


