ಶುಕ್ರವಾರ ರಾತ್ರಿ ತಾನೇ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಅಸ್ಸಾಂ ಸಚಿವ ಮತ್ತು ಬಿಜೆಪಿಯ ಹಿರಿಯ ಮುಖಂಡ ಹಿಮಂತ ಬಿಸ್ವಾ ಶರ್ಮಾ ಅವರ ಮೇಲೆ 48 ಗಂಟೆಗಳ ಪ್ರಚಾರ ನಿಷೇಧ ಹೇರಿದ್ದ ಚುನಾವಣಾ ಆಯೋಗ ಶನಿವಾರ ಅದನ್ನು ಏಕಾಏಕಿ ಅರ್ಧಕ್ಕೆ ಇಳಿಸಿದೆ. ಹಾಗಾಗಿ ಹಿಮಂತ ಬಿಸ್ವಾ ಶರ್ಮಾ ನಾಳೆ ಪ್ರಚಾರ ನಡೆಸಬಹುದಾಗಿದೆ.
ವಿರೋಧ ಪಕ್ಷದ ನಾಯಕರಾಗಿದ್ದ ಬಿಪಿಎಫ್ ಮುಖ್ಯಸ್ಥ ಹಗ್ರಾಮ ಮೊಹಿಲರಿ ಅವರನ್ನು ಜೈಲಿಗೆ ಕಳುಹಿಸುವುದಾಗಿ ಹಿಮಂತ ಬಿಸ್ವಾ ಶರ್ಮಾ ಬೆದರಿಕೆ ಹಾಕಿದ್ದರು. “ಹಗ್ರಾಮ ಮೊಹಿಲರಿ ಉಗ್ರವಾದ ಚಟುವಟಿಕೆಯಲ್ಲಿ ತೊಡಗಿದರೆ… ಆತ ಜೈಲಿಗೆ ಹೋಗುತ್ತಾನೆ. ಇದು ನೇರವಾದ ಮಾತು… ಈಗಾಗಲೇ ಸಾಕಷ್ಟು ಪುರಾವೆಗಳು ದೊರೆತಿವೆ. ಈ ಪ್ರಕರಣವನ್ನು ಎನ್ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ಗೆ ನೀಡಲಾಗುತ್ತಿದೆ. ಕೊಕ್ರಜಹಾರ್ ನಲ್ಲಿ ಕಾರಿನೊಳಗೆ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡ ಪ್ರಕರಣವನ್ನು ಎನ್ಐಎಗೆ ನೀಡಲಾಗುತ್ತಿದೆ. ಬೋಡೋಲ್ಯಾಂಡ್ ಪ್ರಾದೇಶಿಕ ಪ್ರದೇಶದಲ್ಲಿ ಹಗ್ರಾಮ ಸಹಿತ ಯಾರಿಗೂ ಅಶಾಂತಿ ಸೃಷ್ಟಿಸಲು ಅವಕಾಶ ನೀಡುವುದಿಲ್ಲ” ಎಂದು ಶರ್ಮಾ ಹೇಳಿದ್ದರು.
ಈಗ ಅವರ ನಿಷೇಧವನ್ನು ಕೇವಲ 24 ಗಂಟೆಗಳವರೆಗೆ ಕಡಿಮೆಗೊಳಿಸುವುದರೊಂದಿಗೆ ಶರ್ಮಾ ಅವರು ನಾಳೆ ಪ್ರಚಾರ ಮಾಡಲು ಸಾಧ್ಯವಾಗುತ್ತದೆ. ಅಸ್ಸಾಂನ ಮೂರನೇ ಮತ್ತು ಅಂತಿಮ ಹಂತದ ವಿಧಾನಸಭಾ ಚುನಾವಣೆಯು ಮಂಗಳವಾರ ನಡೆಯಲಿದೆ.
ಶರ್ಮಾ ಅವರಿಗೆ ಬರೆದ ಪತ್ರದಲ್ಲಿ ಚುನಾವಣಾ ಆಯೋಗವು “ನಿಮ್ಮ ಬೇಷರತ್ತಾದ ಕ್ಷಮೆಯಾಚನೆ ಮತ್ತು ಭರವಸೆ/ಜವಾಬ್ದಾರಿಯನ್ನು ಗಮನಿಸಿದೆ ಮತ್ತು ಅದರ ಹಿಂದಿನ ಆದೇಶವನ್ನು ಮಾರ್ಪಡಿಸುತ್ತದೆ. ಮತ್ತು ಚುನಾವಣಾ ಪ್ರಚಾರದಿಂದ ನಿಷೇಧ ಅವಧಿಯನ್ನು 48 ಗಂಟೆಗಳಿಂದ 24 ಗಂಟೆಗಳವರೆಗೆ ಕಡಿಮೆ ಮಾಡುತ್ತದೆ” ಎಂದು ಬರೆದಿದೆ.
ಇನ್ನೊಂದೆಡೆ ತಮಿಳುನಾಡಿನಲ್ಲಿ ಅವಹೇಳನಕಾರಿ ಹೇಳಿಕೆ ನಿಡಿದ ಆರೋಪದಲ್ಲಿ ಡಿಎಂಕೆ ಮುಖಂಡ ಎ.ರಾಜಾ ರವರಿಗೆ ಚುನಾವಣಾ ಆಯೋಗ 48 ಗಂಟೆಗಳ ಕಾಲ ಪ್ರಚಾರದಲ್ಲಿ ಪಾಲ್ಗೊಳ್ಳದಂತೆ ನಿಷೇಧ ಹೇರಿದೆ.
ಇದನ್ನೂ ಓದಿ: ಕಾಂಗ್ರೆಸ್ ಮಿತ್ರಪಕ್ಷಕ್ಕೆ ಬೆದರಿಕೆ: ಬಿಜೆಪಿ ಸಚಿವನಿಗೆ 48 ಗಂಟೆ ಪ್ರಚಾರ ಮಾಡದಂತೆ ನಿಷೇಧ


